
ಸಮುದ್ರ ತೀರದಲ್ಲಿ ದೊಡ್ಡದೊಂದು ತಾತ್ಕಾಲಿಕ ಥಿಯೇಟರ್ ಸಿದ್ಧಗೊಂಡಿರುತ್ತದೆ. ಸಾಗರದ ಮೇಲಿನಿಂದ ಹಾದು ಬಂದ ಗಾಳಿ ಸೋಕಿಸುತ್ತಾ ಸಿನಿಮಾ ನೋಡುತ್ತಾರೆ. ಮಾರುಕಟ್ಟೆ ಪ್ರದೇಶದ ಸಮುದ್ರ ತೀರದಲ್ಲಿ ಅಡ್ಡಾಡುವ ದಾರಿಹೋಕರ ಬಗಲಲ್ಲಿ ಬಟ್ಟೆಯ ಬ್ಯಾಗುಗಳು ನೇತಾಡುತ್ತಿರುತ್ತವೆ. ಬಸ್ಸು, ರಿಕ್ಷಾಗಳು ಇಫಿಗಾ ಬನ್ನಿ ಬನ್ನಿ ಎಂದು ಎಂದು ಆಹ್ವಾನಿಸುತ್ತಿರುವಂತೆ ಭಾಸವಾಗುತ್ತದೆ. ಇಡೀ ಊರಿಗೆ ಊರೇ ಒಂದು ಚಿತ್ರನಗರಿಯಾಗಿ ಬದಲಾಗುವ ಅಪೂರ್ವ ಮಾಂತ್ರಿಕ ದೃಶ್ಯಾವಳಿಗಳು ಚಿತ್ರೋತ್ಸವದ ಸಂದರ್ಭದಲ್ಲಿ ಪಣಜಿಯುದ್ದಕ್ಕೂ ಕಾಣಸಿಗುತ್ತದೆ.
ಗೋವಾದ ಪಣಜಿ ಹಳೆಯ ಕಾಲಘಟ್ಟವನ್ನು ತನ್ನ ಬಣ್ಣಗಳ ಮೂಲಕ, ಕತೆಗಳ ಮೂಲಕ ಧರಿಸಿ ನಿಂತಿರುವ ಊರು. ಯಾವಾಗ ಬಂದರೂ ಈ ಊರು ವಿಶಿಷ್ಟವಾಗಿಯೇ ಕಾಣಿಸುತ್ತದೆ. ಆದರೆ ಚಿತ್ರೋತ್ಸವದ ಸಂದರ್ಭದಲ್ಲಿ ಬಂದರೆ ಈ ಊರು ಕಳೆಗಟ್ಟಿರುತ್ತದೆ. ಹಾಗಾಗಿಯೇ ದೇಶ ವಿದೇಶಗಳಿಂದ ಪ್ರತೀ ವರ್ಷ ಸಾವಿರಾರು ಮಂದಿ ಬರುತ್ತಾರೆ. ಕಾದು ಕುಳಿತು ಪಾಸ್ ಪಡೆದು, ಹುಮ್ಮಸ್ಸಿನಿಂದ ಬಂದು, ದೇಶ ವಿದೇಶಗಳ ವಿಭಿನ್ನ ಒಳನೋಟಗಳನ್ನು ದಾಟಿಸುವ ಸಿನಿಮಾಗಳನ್ನು ನೋಡುತ್ತಾರೆ. ಚರ್ಚಿಸುತ್ತಾರೆ. ಗಲಗಲನೆ ಓಡಾಡುತ್ತಾರೆ. ಈ ಲವಲವಿಕೆಗೆ ವಯಸ್ಸಿನ ಹಂಗಿಲ್ಲ. 32-35 ವರ್ಷಗಳಿಂದ ಭಾರತೀಯ ಚಲಚಿತ್ರೋತ್ಸವಗಳಲ್ಲಿ ಸತತವಾಗಿ ಭಾಗವಹಿಸುವವರಿಂದ ಹಿಡಿದು ದಶಕಗಳಿಂದ ಒಂದೂ ಸಲವೂ ತಪ್ಪಿಸದ ಉತ್ಸಾಹಿಗಳು ಇಲ್ಲಿ ಬರುತ್ತಾರೆ. ಅದರಲ್ಲಿ ಬಹುತೇಕರು ಸಿನಿಮಾವನ್ನೇ ಜೀವಿಸುವವರು. ಅವರು ಮನರಂಜನೆಗಾಗಿ ಸಿನಿಮಾ ನೋಡುವುದಿಲ್ಲ. ಬದುಕಿನ ಅರ್ಥ ಕಂಡುಕೊಳ್ಳಲು ಸಿನಿಮಾ ನೋಡುತ್ತಾರೆ. ಅಂಥದ್ದೊಂದು ವಿಭಿನ್ನ ಸಿನಿಮಾ ಸಂಸ್ಕೃತಿಯನ್ನು ಗೋವಾದ ಪಣಜಿ ಜೀವಿಸುತ್ತಿದೆ. ಸಿನಿಮಾ ಸಂಸ್ಕೃತಿ ಯಾಕೆ ಎಲ್ಲಾ ಊರಿನ ಭಾಗವಾಗಬೇಕು ಎಂಬುದರ ಅರಿವು ಮೂಡಿಸುವುದಕ್ಕೆ ಭಾರತೀಯ ಚಿತ್ರೋತ್ಸವ ನಿಜಕ್ಕೂ ಅತ್ಯುತ್ತಮ ಸ್ಫೂರ್ತಿ ಮತ್ತು ನಿದರ್ಶನ.
2005ರಿಂದ ಪ್ರತೀ ವರ್ಷ ಗೋವಾದ ಪಣಜಿಯಲ್ಲಿಯೇ ಈ ಚಿತ್ರೋತ್ಸವ ನಡೆಯುತ್ತದೆ. ಇಲ್ಲಿಗೆ ದೇಶ- ವಿದೇಶಗಳ ಅತ್ಯಂತ ಖ್ಯಾತನಾಮ ಕಲಾವಿದರು, ತಂತ್ರಜ್ಞರು ಬರುತ್ತಾರೆ. ವಿದೇಶಗಳ ಬಹುತೇಕ ಸಿನಿಮಾಗಳಲ್ಲಿ ಮನಸಿನ ರಾಜಕೀಯದಿಂದ ಹಿಡಿದು, ರಾಜಕೀಯ ಕಾರಣಗಳಿಂದ ಛಿದ್ರಗೊಂಡಿರುವ ಬದುಕುಗಳನ್ನು ಚರ್ಚಿಸಲಾಗುತ್ತದೆ. ಪ್ರತೀ ಮನುಷ್ಯನಿಗೆ ತನ್ನನ್ನು ಪ್ರಕಟಿಸಿಕೊಳ್ಳಲು, ತನ್ನ ನೋವನ್ನು ಅಭಿವ್ಯಕ್ತಿಸಲು ವೇದಿಕೆಯೊಂದು ಬೇಕಾಗುತ್ತದೆ. ಅಂಥಾ ವೇದಿಕೆಯನ್ನು ಈ ಚಿತ್ರೋತ್ಸವ ಕಲ್ಪಿಸುತ್ತದೆ. ಪ್ರತೀ ಸಿನಿಮಾ ನಿರ್ದೇಶಕರು ತಾವು ಯಾಕೆ ಈ ಸಿನಿಮಾ ಮಾಡಿದ್ದೇವೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ಹೇಳುತ್ತಾರೆ. ಅವರವರ ಕಾರಣಗಳು ಬೇರೆ ಇರಬಹುದು. ಆದರೆ ಪ್ರತಿಯೊಂದು ದನಿಯ ಹಿಂದೆಯೂ ಇರುವ ಒಂದು ನಿಟ್ಟುಸಿರು ಕೇಳುಗರನ್ನು ತಾಕುತ್ತದೆ. ಆ ನಿಟ್ಟುಸಿರು ಒಬ್ಬಿಬ್ಬರನ್ನಾದರೂ ಮತ್ತಷ್ಟು ವಿನಯವಂತರನ್ನಾಗಿ ಮಾಡಿದರೆ ಅಷ್ಟು ಆ ವರ್ಷದ ಸಾರ್ಥಕತೆ.
ಈ ಚಿತ್ರೋತ್ಸವಕ್ಕೆ ನಾನಾ ಭಾಗದ ಜನರು ಬರುತ್ತಾರೆ. ದಕ್ಷಿಣದಿಂದ ಕೇರಳ, ತಮಿಳುನಾಡಿನಿಂದ ಅತಿಹೆಚ್ಚು ಜನ ಬಂದರೆ, ಮೂರನೇ ಸ್ಥಾನದಲ್ಲಿ ಕರ್ನಾಟಕ ಇರುತ್ತದೆ. ನಂತರ ಆಂಧ್ರಕ್ಕೆ ನೀಡಬಹುದೇನೋ. ಬಹಳಷ್ಟು ಕಡೆಗಳಿಂದ ಸಿನಿಮಾ ವಿದ್ಯಾರ್ಥಿಗಳು ಬರುತ್ತಾರೆ. ಅತ್ಯಂತ ಕುತೂಹಲದಿಂದ ಸಿನಿಮಾ ಕಲಿಯುವ ಪ್ರಯತ್ನದಲ್ಲಿರುತ್ತಾರೆ. ಮಾಸ್ಟರ್ಕ್ಲಾಸ್ಗಳಲ್ಲಿ ಭಾಗವಹಿಸಿ ಕಕ್ಕುಲಾತಿಯಿಂದ ಪ್ರಶ್ನೆ ಕೇಳುತ್ತಾರೆ. ಉತ್ತರವನ್ನು ಧ್ಯಾನಿಸುತ್ತಾರೆ. ಒಂದು ತಪಸ್ಸಿನಿಂದ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವವರನ್ನು ನೋಡಿದಾಗ ಮನಸ್ಸು ತುಂಬುತ್ತದೆ.
ಈ ಚಿತ್ರೋತ್ಸವದಲ್ಲಿ ಕನ್ನಡದ ಪ್ರಾತಿನಿಧ್ಯ ಏನು ಎಂಬುದರ ಬಗ್ಗೆ ಯೋಚಿಸುವುದು ಕೂಡ ಮುಖ್ಯ. ಈ ಬಾರಿ ನಮ್ಮ ಕನ್ನಡ ಭಾಷೆಯ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ 1’, ಪಿ. ಶೇಷಾದ್ರಿಯವರ ‘ರೂಬಿ ಕ್ಯೂಬ್’, ಅನುಪಮಾ ಶರಧಿಯವರ ತುಳು ಸಿನಿಮಾ ‘ಪಿಲಿಚನ್ನೆ’, ಅಭಿಷೇಕ್ ನಿರ್ದೇಶನದ ಕಿರುಚಿತ್ರ ‘ಉಳಿದಿದ್ದು ಸಂಪಿಗೆ ಮಾತ್ರ’, ಪ್ರದೀಪ್ ಕೆಂಚನೂರು ನಿರ್ದೇಶನದ ಸಾಕ್ಷ್ಯಚಿತ್ರ ‘ಹಗ್ ಆಫ್ ಎಂಪ್ಟಿನೆಸ್’ ಪ್ರದರ್ಶನ ಕಂಡಿದೆ. ಗಿರೀಶ್ ಕಾಸರವಳ್ಳಿಯವರ 50 ವರ್ಷದ ಸಿನಿ ಪಯಣದ ನೆನಪಿಗಾಗಿ ಸಂವಾದ ನಡೆದಿದೆ. ಈ ಸಂವಾದದಲ್ಲಿ ಚಿತ್ರೋತ್ಸವದ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಕಾಲಿಗೆ ಬಿದ್ದು ನಮಸ್ಕರಿಸಿ ಗೌರವಿಸಿದ್ದು ಅವರ ಸಿನಿ ಪಯಣಕ್ಕೆ ಸಂದ ಗೌರವ.
ಕಾಸರವಳ್ಳಿಯವರು ನಿಜಕ್ಕೂ ಈ ಚಿತ್ರೋತ್ಸವಗಳಲ್ಲಿ ಕನ್ನಡದ ಸಿನಿ ಪ್ರತಿಷ್ಠೆಯನ್ನು ಅತಿ ಎತ್ತರಕ್ಕೆ ತಲುಪಿಸಿದವರು. ಮನರಂಜನೆ ಹೊರತಾದ ಆರ್ಟ್ ಸಿನಿಮಾ ವಿಭಾಗದಲ್ಲಿ ಒಂದು ಮಹೋನ್ನತ ಅಸ್ಮಿತೆಯನ್ನು ಕೊಟ್ಟವರು. ಅದೇ ಥರ ಪಿ. ಶೇಷಾದ್ರಿ ಸೇರಿದಂತೆ ಕೆಲವು ಹೆಸರುಗಳನ್ನು ಗಮನಿಸಬಹುದು. ಈ ಪರಂಪರೆಯ ಮುಂದುವರಿಕೆ ಹೇಗೆ ಎಂಬುದನ್ನು ಕನ್ನಡದ ಮಂದಿ ಈಗ ಆಲೋಚಿಸಬೇಕಾಗಿದೆ.
ಚಿತ್ರೋತ್ಸವಗಳ ಜಗತ್ತು ವಿಭಿನ್ನವಾದುದು. ಅಲ್ಲಿಯ ರಾಜಕೀಯ ಕೂಡ ಬೇರೆ ತೆರನಾದದ್ದು. ಅವೆಲ್ಲದರ ಆಚೆಗಿನ ಒಂದು ಶುದ್ಧ ಸಿನಿಮಾ ಪ್ರೀತಿ ಸಿನಿಮಾ ಪ್ರೇಮಿಗಳ ಮನಸ್ಸನ್ನು ಅರಳಿಸುತ್ತದೆ. ಆ ಮೂಲಕ ಸಿನಿಮಾ ಸಂಸ್ಕೃತಿ ಬೆಳಗುತ್ತಿರುತ್ತದೆ. ಕನ್ನಡ ಭಾಷೆ ಹಿನ್ನೆಲೆಯಲ್ಲಿಯೂ ಇಂಥದ್ದೊಂದು ಅಪರೂಪದ ಸಂಸ್ಕೃತಿಯನ್ನು ಮತ್ತಷ್ಟು ಗಾಢಗೊಳಿಸುವ, ಹೊಸ ಪ್ರತಿಭೆಗಳಿಗೆ ಮಾರ್ಗದರ್ಶನ ಮತ್ತು ಉತ್ತಮ ವೇದಿಕೆ ದೊರಕಿಸುವ ಯತ್ನಕ್ಕೆ ಮತ್ತಷ್ಟು ತೀವ್ರತೆ ಒದಗಲಿ ಎಂಬುದು ಈ ಹೊತ್ತಿನ ಆಶಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.