ಬಾಲ್ಯದಲ್ಲಿ ಸಾವನ್ನೇ ಗೆದ್ದರು, ಹಾರ್ದಿಕ್ ಜೊತೆ ಹೆಸರು, ಕರ್ನಾಟಕದಲ್ಲಿ ಪತ್ರಿಕೋದ್ಯಮ ಪದವಿ .. ಇಶಾ ಗುಪ್ತಾ ಬಗ್ಗೆ ಗೊತ್ತಿರದ ಸಂಗತಿಗಳು

Published : Nov 29, 2026, 09:58 AM IST
Esha gupta

ಸಾರಾಂಶ

Esha Gupta untold life stories: ತಮ್ಮ ಗ್ಲಾಮರಸ್ ಲುಕ್ ಹಾಗೂ ನೇರನುಡಿಯಿಂದಲೇ ಖ್ಯಾತಿ ಪಡೆದಿರುವ ಬಾಲಿವುಡ್ ನಟಿ ಇಶಾ ಗುಪ್ತಾ, ಬಾಲ್ಯದಲ್ಲಿ ಸಾವಿನ ದವಡೆಯಿಂದ ಪಾರಾದ ಘಟನೆ, ಹಾರ್ದಿಕ್ ಪಾಂಡ್ಯ ಜೊತೆಗಿನ ಲಿಂಕ್‌ಅಪ್ ವದಂತಿ ಹಾಗೂ ಚಿತ್ರರಂಗದ ಕರಾಳ ಅನುಭವಗಳ ಕುರಿತ ರೋಚಕ ಕಥೆ ಇಲ್ಲಿದೆ.

ತಮ್ಮ ಗ್ಲಾಮರಸ್ ಹಾಗೂ ನೇರನುಡಿ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ಬಾಲಿವುಡ್ ನಟಿ ಇಶಾ ಗುಪ್ತಾ ನವೆಂಬರ್ 28ರಂದು ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಂಡರು. 1985ರಲ್ಲಿ ನವದೆಹಲಿಯಲ್ಲಿ ಜನಿಸಿದ ಇವರ ಬದುಕಿನಲ್ಲಿ ಸಾವಿನ ದವಡೆಯಿಂದ ಪಾರಾದ ಘಟನೆಯಿಂದ ಹಿಡಿದು ಚಿತ್ರರಂಗದ ಕರಾಳ ಅನುಭವಗಳವರೆಗೆ ಹಲವು ಅಪರಿಚಿತ ಸಂಗತಿಗಳಿವೆ.

ಇಶಾ ಕೇವಲ 5 ವರ್ಷದವರಿದ್ದಾಗ ಸಂಬಂಧಿಕರ ಮನೆಯಲ್ಲಿ ಕ್ಯಾಂಡಿ ಎಂದು ಭಾವಿಸಿ ಮೂರ್ಛೆ ರೋಗದ ಮಾತ್ರೆಗಳ ಇಡೀ ಬಾಟಲಿಯನ್ನು ನುಂಗಿದ್ದರು. ತಕ್ಷಣ ವೈದ್ಯರು ಹೊಟ್ಟೆಯಿಂದ ಔಷಧ ಹೊರತೆಗೆದು ಜೀವ ಉಳಿಸಿದ್ದರು. ಇದನ್ನು ಅವರು ತಮ್ಮ ‘ಎರಡನೇ ಜೀವನ’ ಎನ್ನುತ್ತಾರೆ. 12ನೇ ವಯಸ್ಸಿನಲ್ಲಿ ಶೆಫ್ ಆಗುವ ಕನಸು ಕಂಡಿದ್ದರೂ, ಶುದ್ಧ ಸಸ್ಯಾಹಾರಿಯಾಗಿದ್ದ ಕಾರಣ ಆ ಕನಸು ಕೈಬಿಟ್ಟರು. ನಿವೃತ್ತ ವಾಯುಪಡೆ ಅಧಿಕಾರಿ ಹಾಗೂ ಗೃಹಿಣಿಯ ಪುತ್ರಿಯಾದ ಇವರಿಗೆ ನೇಹಾ ಗುಪ್ತಾ ಎಂಬ ಸಹೋದರಿ ಇದ್ದಾರೆ. ಬಾಲ್ಯವನ್ನು ಡೆಹ್ರಾಡೂನ್, ಹೈದರಾಬಾದ್ ಹಾಗೂ ದೆಹಲಿಯಲ್ಲಿ ಕಳೆದ ಇಶಾ, ದೆಹಲಿಯ ಬ್ಲೂ ಬೆಲ್ಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಓದಿ, ಕರ್ನಾಟಕದ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಮಾಸ್ ಕಮ್ಯುನಿಕೇಷನ್ ಪದವಿ ಹಾಗೂ ಬ್ರಿಟನ್‌ನ ನ್ಯೂಕ್ಯಾಸಲ್ ವಿಶ್ವವಿದ್ಯಾಲಯದಲ್ಲಿ ಎನ್ವಿರಾನ್ಮೆಂಟಲ್ ಲಾ ವ್ಯಾಸಂಗ ಮಾಡಿದ್ದಾರೆ.

ಬಾಲ್ಯದಲ್ಲಿ ಕಪ್ಪು ಬಣ್ಣದ ಕಾರಣಕ್ಕೆ ಟೀಕೆ ಎದುರಿಸಿದ್ದ ಇಶಾ, ಚಿತ್ರರಂಗಕ್ಕೆ ಬಂದಾಗಲೂ ಬಿಳಿ ಬಣ್ಣದ ಇಂಜೆಕ್ಷನ್ ಹಾಗೂ ಮೂಗಿನ ಶಸ್ತ್ರಚಿಕಿತ್ಸೆಗೆ ಒತ್ತಡ ಬಂದರೂ ಮಣಿಯಲಿಲ್ಲ. ಒಮ್ಮೆ ಸೆಟ್‌ನಲ್ಲಿ ನಿರ್ದೇಶಕರೊಬ್ಬರು ಬಟ್ಟೆಯ ವಿಚಾರವಾಗಿ ಅವಾಚ್ಯ ಪದ ಬಳಸಿದಾಗ, ಅದೇ ಭಾಷೆಯಲ್ಲಿ ತಿರುಗೇಟು ನೀಡಿ ನಿರ್ದೇಶಕ-ನಿರ್ಮಾಪಕರು ಕ್ಷಮೆ ಕೇಳುವವರೆಗೂ ಶೂಟಿಂಗ್‌ಗೆ ಮರಳಿರಲಿಲ್ಲ. ಆರಂಭದಲ್ಲಿ ಸಹ-ನಿರ್ಮಾಪಕರೊಬ್ಬರ ತಪ್ಪು ಬೇಡಿಕೆ ನಿರಾಕರಿಸಿದ್ದಕ್ಕೆ ಚಿತ್ರದಿಂದ ತೆಗೆದುಹಾಕುವ ಬೆದರಿಕೆ ಬಂದಿತ್ತು. ಹೀಗಾಗಿ ಹೊರಾಂಗಣ ಶೂಟಿಂಗ್‌ನಲ್ಲಿ ಮೇಕಪ್ ಆರ್ಟಿಸ್ಟ್ ಅವರನ್ನು ತಮ್ಮ ಕೋಣೆಯಲ್ಲೇ ಮಲಗಿಸಿಕೊಳ್ಳುತ್ತಿದ್ದರು. ಇನ್ನು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆಗಿನ ಲಿಂಕ್‌ಅಪ್ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ್ದ ಅವರು, 1-2 ಬಾರಿ ಭೇಟಿಯಾದ ಬಳಿಕ ಇಬ್ಬರ ಆಲೋಚನೆಗಳು ಬೇರೆ ಎಂದು ಅರಿವಾಗಿ ದೂರವಾದೆವು ಎಂದಿದ್ದರು.

2007ರಲ್ಲಿ ‘ಫೆಮಿನಾ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್’ ಕಿರೀಟದ ಜೊತೆ ‘ಮಿಸ್ ಫೋಟೋಜೆನಿಕ್’ ಪ್ರಶಸ್ತಿ ಹಾಗೂ 2010ರಲ್ಲಿ ಕಿಂಗ್‌ಫಿಷರ್ ಕ್ಯಾಲೆಂಡರ್ ಮೂಲಕ ಗಮನ ಸೆಳೆದ ಇಶಾ, 2012ರಲ್ಲಿ ‘ಜನ್ನತ್ 2’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿ ಫಿಲ್ಮ್‌ಫೇರ್ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಬಳಿಕ ‘ರಾಜ್ 3ಡಿ’, ‘ಚಕ್ರವ್ಯೂಹ’, ‘ರುಸ್ತುಂ’, ‘ಕಮಾಂಡೋ 2’, ‘ಬಾದ್‌ಶಾಹೋ’, ‘ಟೋಟಲ್ ಧಮಾಲ್’ ಸಿನಿಮಾಗಳಲ್ಲಿ ಮಿಂಚಿದರು. ‘ಹಮ್‌ಶಕಲ್ಸ್’, ‘ಪಲ್ಟನ್’ ಸೋತರೂ, ‘ಆಶ್ರಮ 3’ ವೆಬ್ ಸರಣಿಯ ‘ಸೋನಿಯಾ’ ಪಾತ್ರದಿಂದ ಅಪಾರ ಜನಪ್ರಿಯತೆ ಗಳಿಸಿದರು. ಶಾಲಾ ದಿನಗಳಲ್ಲಿ ಅಂಡರ್-16 ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯಾಗಿದ್ದ ಇಶಾ, ಯೋಗ, ಪುಸ್ತಕ ಓದು, ‘ಆರ್ಸೆನಲ್’ ಫುಟ್‌ಬಾಲ್ ಕ್ಲಬ್, ಸ್ಕೈಡೈವಿಂಗ್ ಹಾಗೂ ಪರಿಸರ-ಪ್ರಾಣಿ ಕಲ್ಯಾಣ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.

‘ಭಾರತದ ಏಂಜಲೀನಾ ಜೋಲಿ’ ಎಂಬ ಬಿರುದು!

2012ರಲ್ಲಿ ಇಶಾ ಗುಪ್ತಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದಾಗ, ಅವರ ಮುಖದ ಲಕ್ಷಣಗಳು ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಕಂಡು ಮಾಧ್ಯಮಗಳು ಹಾಗೂ ಅಭಿಮಾನಿಗಳು ಅವರನ್ನು ‘ಭಾರತದ ಏಂಜಲೀನಾ ಜೋಲಿ’ (India's Angelina Jolie) ಎಂದು ಕರೆದಿದ್ದರು. ಈ ಹೋಲಿಕೆಯನ್ನು ತಾವು ಮೆಚ್ಚಿಕೊಂಡರೂ, ಚಿತ್ರರಂಗದಲ್ಲಿ ತಮ್ಮದೇ ಆದ ಸ್ವಂತ ಗುರುತು ಮೂಡಿಸಲು ಬಯಸುವುದಾಗಿ ಇಶಾ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ದಕ್ಷಿಣ ಭಾರತದ ಸಿನಿಮಾಗಳಲ್ಲೂ ಇಶಾ ಮಿಂಚು

ಇಶಾ ಗುಪ್ತಾ ಕೇವಲ ಹಿಂದಿ ಚಿತ್ರಗಳಿಗೆ ಸೀಮಿತವಾಗಿಲ್ಲ, ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿದ್ದಾರೆ. 2017ರಲ್ಲಿ ತಮಿಳು-ತೆಲುಗು ದ್ವಿಭಾಷಾ ಚಿತ್ರವಾದ ‘ವೀಡೆವಡು’ (ತಮಿಳಿನಲ್ಲಿ ‘ಯಾರ್ ಇವನ್’) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. 2019ರಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ತೆಲುಗಿನ ‘ವಿನಯ ವಿಧೇಯ ರಾಮ’ ಚಿತ್ರದ ‘ಏಕ್ ಬಾರ್’ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿ ಸೌತ್ ಪ್ರೇಕ್ಷಕರ ಗಮನ ಸೆಳೆದಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

54 ವರ್ಷದ ಬಳಿಕ ಕಲರ್‌ನಲ್ಲಿ ಅಣ್ಣಾವ್ರ ಸಿನಿಮಾ; ಡಾ. ರಾಜ್ ಜೊತೆ ಸಿನಿಮಾ ನೆನೆದು ಭಾವುಕರಾದ ಭಾರತಿ ವಿಷ್ಣುವರ್ಧನ್
ರಾಮಾಯಣದಲ್ಲಿ ನಾನು ಸೀತೆಯಾಗಿ ನಟಿಸಿದ್ದು ತಪ್ಪಾ? ನಟಿ ಸಾಯಿ ಪಲ್ಲವಿ ಖಡಕ್ ತಿರುಗೇಟು