
ದೀಪಿಕಾ ಪಡುಕೋಣೆ ಅವರು ದಿನಕ್ಕೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುತ್ತೇನೆ ಎಂದು ಷರತ್ತು ಹಾಕಿದ್ದರು. ಈ ವಿಚಾರದ ಬಗ್ಗೆ ಇದೀಗ ನಟಿ ಇಶಿತಾ ದತ್ತಾ ಮಾತನಾಡಿದ್ದಾರೆ. ಕೆಲಸದ ಅವಧಿ ಬಗ್ಗೆ ಷರತ್ತು ಹಾಕುವ ನಟಿಯರನ್ನು ದೂಷಿಸುವುದು ತಪ್ಪು ಎಂದು ಅವರು ಹೇಳಿದ್ದಾರೆ. 'ದೃಶ್ಯಂ 3' ನಟಿ ಹಾಗೂ ಇಬ್ಬರು ಮಕ್ಕಳ ತಾಯಿಯಾಗಿರುವ ಇಶಿತಾ, ಈ ವಿಚಾರವನ್ನು ಜನ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ದೀಪಿಕಾ ಬೇಡಿಕೆ ನ್ಯಾಯಸಮ್ಮತ ಎಂದ ಇಶಿತಾ ದತ್ತಾ
ದಿ ಫ್ರೀ ಪ್ರೆಸ್ ಜರ್ನಲ್ ವರದಿ ಪ್ರಕಾರ, ನಟರ ಷರತ್ತುಗಳನ್ನು ಒಪ್ಪಿಕೊಳ್ಳುವುದು ಅಥವಾ ಬಿಡುವುದು ಪ್ರೊಡಕ್ಷನ್ ಹೌಸ್ಗಳಿಗೆ ಬಿಟ್ಟ ವಿಚಾರ ಎಂದು ಇಶಿತಾ ಹೇಳಿದ್ದಾರೆ. ಆದರೆ, ಈ ಷರತ್ತುಗಳನ್ನು ಸಾರ್ವಜನಿಕವಾಗಿ ಟೀಕಿಸುವುದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ. ಕೆಲ ನಟರು ದಿನಕ್ಕೆ 12 ರಿಂದ 15 ಗಂಟೆಗಳ ಕಾಲ ಕೆಲಸ ಮಾಡಲು ಇಷ್ಟಪಡಬಹುದು.
ಹಾಗಂತ ಎಲ್ಲರೂ ಅದೇ ರೀತಿ ಕೆಲಸ ಮಾಡಬೇಕು ಎಂದು ನಿರೀಕ್ಷಿಸುವುದು ತಪ್ಪು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಾಯ್ತನದ ಜವಾಬ್ದಾರಿಗಳ ಬಗ್ಗೆ ಮಾತನಾಡಿದ ಇಶಿತಾ, ಮಕ್ಕಳನ್ನು ಬೆಳೆಸುವ ಕಷ್ಟ ಗೊತ್ತಿಲ್ಲದವರಿಗೆ ಈ ವಿಚಾರ ಅರ್ಥವಾಗುವುದಿಲ್ಲ ಎಂದಿದ್ದಾರೆ. ಒಂದು ವೇಳೆ ತಮಗೂ ಚಿತ್ರರಂಗದಲ್ಲಿ ಅಷ್ಟೊಂದು ಪ್ರಭಾವ ಇದ್ದಿದ್ದರೆ, ತಾವೂ ಕೂಡ ಕೆಲಸದ ಅವಧಿ ಕಡಿಮೆ ಮಾಡುವಂತೆ ಕೇಳಿಕೊಳ್ಳುತ್ತಿದ್ದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
ತಾಯಿಯಾದ ಬಳಿಕ ದೀಪಿಕಾ 8 ಗಂಟೆಗಳ ಕೆಲಸದ ಷರತ್ತು ಹಾಕಿದ್ದರು. ಇದೇ ಕಾರಣಕ್ಕೆ ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಹಾಗೂ 'ಕಲ್ಕಿ 2898 ಎಡಿ' ಸಿನಿಮಾದ ಸೀಕ್ವೆಲ್ನಿಂದ ದೀಪಿಕಾ ಹೊರಬಂದಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಇದರಿಂದ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಅಕ್ಟೋಬರ್ 2025ರಲ್ಲಿ ಸಿಎನ್ಬಿಸಿ-ಟಿವಿ18 (CNBC-TV18) ಗೆ ನೀಡಿದ ಸಂದರ್ಶನದಲ್ಲಿ ದೀಪಿಕಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಚಿತ್ರರಂಗದಲ್ಲಿ ನಟಿಯರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದರು. "ಹಲವು ವರ್ಷಗಳಿಂದ ಅನೇಕ ಸ್ಟಾರ್ ನಟರು ದಿನಕ್ಕೆ ಕೆಲವೇ ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಆಗ ಯಾವ ವಿವಾದವೂ ಆಗಲಿಲ್ಲ. ಆದರೆ ನಟಿಯರ ವಿಚಾರದಲ್ಲಿ ಮಾತ್ರ ಯಾಕೆ ಹೀಗೆ?" ಎಂದು ಅವರು ಪ್ರಶ್ನಿಸಿದ್ದರು. ಇದೀಗ ಇಶಿತಾ ದತ್ತಾ ಕೂಡ ದೀಪಿಕಾ ಪರ ಬ್ಯಾಟ್ ಬೀಸಿದ್ದಾರೆ. ಕೆಲಸದ ಅವಧಿ ನಿಗದಿಪಡಿಸುವುದು ವೃತ್ತಿಪರ ಆಯ್ಕೆಯಾಗಬೇಕೇ ಹೊರತು, ಅದೊಂದು ವಿವಾದ ಆಗಬಾರದು ಎಂಬ ಚರ್ಚೆ ಈಗ ಬಾಲಿವುಡ್ನಲ್ಲಿ ಶುರುವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.