
ಪದ್ಮಭೂಷಣ ಲೇಕಕ ಎಸ್‌ಎಲ್ ಭೈರಪ್ಪ ವಿಧಿವಶ!
ಕನ್ನಡದ ಮೇರು ಸಾಹಿತಿ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪ್ರಶಸ್ತಿ ವಿಜೇತ ಲೇಖಕ ಹಾಗೂ ಕಾದಂಬರಿಕಾರ ಎಸ್‌ಎಲ್ ಭೈರಪ್ಪನವರು (S. L. Bhyrappa) ಇಂದು (24 September 2025) ಇಹಲೋಕ ತ್ಯಜಿಸಿದ್ದಾರೆ. ವಂಶವೃಕ್ಷ, ದಾಟು, ಪರ್ವ ಸೇರಿದಂತೆ ಹಲವಾರು ಜನಪ್ರಿಯ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದ ಸಾಹಿತಿ ಎಸ್‌ಎಲ್ ಭೈರಪ್ಪನವರು ವಿಧಿವಶರಾಗಿದ್ದಾರೆ. ಅವರು ಅಪಾರ ಸಂಖ್ಯೆಯ ಓದುಗರನ್ನು ಸಂಪಾದಿಸಿದ್ದಲ್ಲದೇ, ಯುವ ಓದುಗರನ್ನೂ ಸೆಳೆದಿದ್ದರು. ಅಂಥ ಭೈರಪ್ಪನವರ ಮೇರು ಕೃತಿಯಲ್ಲಿ ಒಂದಾದ 'ವಂಶವೃಕ್ಷ' ಕಾದಂಬರಿ ಸಿನಿಮಾ ಅಗಿ ತೆರೆಗೆ ಬಂದಿತ್ತು. ಅದು ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ (Dr Vishnuvardhan) ನಟನೆಯ ಮೊಟ್ಟಮೊದಲ ಸಿನಿಮಾ.
ಹೌದು, 'ಸರಸ್ವತಿ ಪುತ್ರ' ಎಸ್‌ಎಲ್ ಭೈರಪ್ಪನವರ ಕಾದಂಬರಿ ಆಧಾರಿತವಾಗಿ ವಂಶವೃಕ್ಷ; ಸಿನಿಮಾ 1972ರಲ್ಲಿ ತೆರೆಗೆ ಬಂದಿತ್ತು. ಇದರ ನಿರ್ದೇಶಕರು ಬಿ. ವಿ. ಕಾರಂತ್ ಹಾಗು ಗಿರೀಶ್ ಕಾರ್ನಾಡ್. ಈ ಚಿತ್ರದ ನಿರ್ಮಾಪಕರು ಜಿ ವಿ ಅಯ್ಯರ್. ಈ ಚಿತ್ರದಲ್ಲಿ ಬಿ.ವಿ.ಕಾರಂತ, ಗಿರೀಶ ಕಾರ್ನಾಡ್, ಎಲ್.ವಿ. ಶಾರದಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. ಈಚಿತ್ರವು 1972 ರಲ್ಲಿ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಸಹ ಗೆದ್ದಿದೆ.
ಅಚ್ಚರಿ ಎಂಬಂತೆ, ಕನ್ನಡದ ಮೇರು ನಟ ಹಾಗೂ ಇತ್ತೀಚೆಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪಡೆದ ಕನ್ನಡದ ಮೇರು ನಟ ವಿಷ್ಣುವರ್ಧನ್ ಹಾಗೂ ನಟಿ ಉಮಾ ಶಿವಕುಮಾರ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಈ ಚಿತ್ರವನ್ನು 1980ರಲ್ಲಿ ತೆಲುಗಿಗೆ "ವಂಶ ವೃಕ್ಷಂ" ಹೆಸರಿನಿಂದ ರೀಮೇಕ್ ಮಾಡಲಾಯಿತು. ತೆಲುಗಿನ ಆ ಚಿತ್ರದಲ್ಲಿ ಬಾಲಿವುಡ್‌ನಲ್ಲಿ ಹೆಸರು ಸಂಪಾದಿಸಿದ ನಟ ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಕನ್ನಡದ ಖ್ಯಾತ ಲೇಖಕರಾದ ಎಸ್‌ಎಸ್ ಭೈರಪ್ಪನವರ ಕಾದಂಬರಿ ಸಿನಿಮಾ ಮೂಲಕ ಭಾರತದ ಮೂರು ಭಾಷೆಗಳಿಗೆ ತಲುಪಿದ ಹೆಗ್ಗಳಿಕೆ ಪಡೆದುಕೊಂಡಿದೆ.
ಹೌದು, ನಟ ಡಾ ವಿಷ್ಣುವರ್ಧನ್ ಅವರು ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಸಿನಿಮಾದ ಮೂಲಕ ಸ್ಟಾರ್ ನಟರಾಗಿ ಮೆರೆದರು. ಆದರೆ, ಅವರ ನಟನೆಯ ಮೊಟ್ಟಮೊದಲ ಸಿನಿಮಾ ಭೈರಪ್ಪನವರ ಕಾದಂಬರಿ ಆಧಾರಿತ 'ವಂಶವೃಕ್ಷ' ಸಿನಿಮಾ. ಅಷ್ಟೇ ಅಲ್ಲ, ಎಸ್‌ಎಸ್ ಭೈರಪ್ಪ ಹಾಗೂ ವಿಷ್ಣುವರ್ಧನ್ ಇಬ್ಬರೂ ಮೈಸೂರಿನವರೇ ಆಗಿರುವುದು ಕಾಕತಾಳೀಯ ಎನ್ನಿಸಿದರೂ ಸತ್ಯ ಸಂಗತಿ. ಇಂದು, ತಮ್ಮ 94ನೆಯ ವಯಸ್ಸಿನಲ್ಲಿ ಮೇರು ಸಾಹಿತಿ ಎಸ್‌ಎಲ್ ಭೈರಪ್ಪನವರು ವಿಧಿವಶರಾಗಿದ್ದಾರೆ. ಅವರ ಅಗಲಿಕೆಗೆ ಅಸಂಖ್ಯಾತ ಅಭಿಮಾನಿಗಳು ಕಂಬನಿ ಸುರಿಸುತ್ತಿದ್ದಾರೆ.
ಕನ್ನಡ ಸಾಹಿತ್ಯಿಕ ಸಾಧನೆಯಿಂದಲೇ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸಾಹಿತಿ ಎಸ್.ಎಲ್. ಭೈರಪ್ಪ ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ.
ಮೈಸೂರಿನಲ್ಲಿ ನಿವೃತ್ತಿ ಜೀವನನ್ನು ನಡೆಸುತ್ತಿದ್ದ ಭೈರಪ್ಪ ಅವರು ವಯೋಸಹಜದಿಂದಾಗಿ ಸಣ್ಣ ಪುಟ್ಟ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ, ಕಳೆದೊಂದು ವರ್ಷದಿಂದ ಬೆಂಗಳೂರಿನಲ್ಲಿ ಬಂದು ವಾಸವಾಗಿದ್ದರು. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಇಂದು ಕೊನೆಯುಸಿರೆಳೆದಿದ್ದಾರೆ. ಕನ್ನಡ ಸಾಹಿತ್ಯದ ಸೇವೆಯಲ್ಲಿ ಸದಾ ಮುಂದಿರುತ್ತಿದ್ದ ಭೈರಪ್ಪ ಅವರ ಬರಹಗಳನ್ನು ಓದುವವರ ಸಾಲಿನಲ್ಲಿ ಹೊಸ ಯುಗದ ನವ ಯುವಕರೇ ಹೆಚ್ಚಾಗಿದ್ದರು. ಅವರ ಪ್ರಸಿದ್ಧ ಕೃತಿಗಳು ಈಗಲೂ ಯುವಜನರಿಗೆ ಮೊದಲು ಓಡಬೇಕಾದ ಪಾಠ ಎನ್ನಲಾಗುತ್ತದೆ. ಇದೀಗ ಕನ್ನಡ ಸಾಹಿತ್ಯ ಲೋಕದ ಬರವಣಿಗೆಯಲ್ಲಿ ಭೈರಪ್ಪನವರು ಶಾಶ್ವತ ಪೂರ್ಣ ವಿರಾಮ ಹಾಕಿದ್ದಾರೆ.
ಎಸ್. ಎಲ್. ಭೈರಪ್ಪ ಅವರು ಕನ್ನಡದ ಪ್ರಮುಖ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಚಿಂತಕರಾಗಿದ್ದರು. ಅವರ ಕಾದಂಬರಿಗಳು ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದ್ದು, ವ್ಯಾಪಕ ಜನಪ್ರಿಯತೆ ಗಳಿಸಿವೆ. ಅವರಿಗೆ ಸರಸ್ವತೀ ಸಮ್ಮಾನ್ (2010), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1975), ಪದ್ಮಭೂಷಣ (2023) ಸೇರಿದಂತೆ ಹಲವಾರು ಪ್ರಮುಖ ಪ್ರಶಸ್ತಿಗಳು ಲಭಿಸಿವೆ. ತಮ್ಮ ಹುಟ್ಟೂರಿನ ಅಭಿವೃದ್ಧಿಗಾಗಿ ಮತ್ತು ಸಮಾಜದ ಇತರ ಕಾರ್ಯಗಳಿಗೆ ನೆರವು ನೀಡಲು ಡಾ. ಎಸ್. ಎಲ್. ಭೈರಪ್ಪ ಪ್ರತಿಷ್ಠಾನ (ರಿ) ಸ್ಥಾಪಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.