
ಮಹಾಕಾವ್ಯದಲ್ಲಿ 'ಬೇಡರ ದಿಣ್ಣ' ಮುಂದೆ ಶಿವನ ಪರಮಭಕ್ತ ಕಣ್ಣಪ್ಪನಾಗಿ (Kannappa) ಬದಲಾದ ಕಥೆ ಬಹಳಷ್ಟು ಜನರಿಗೆ ಗೊತ್ತಿದೆ. ಮಹಾಕಾವ್ಯಗಳಲ್ಲಿ ಸಾಕಷ್ಟು ದಂತ ಕಥೆಗಳು ಹಾಗೂ ಉಪಕಥೆಗಳು ಸೇರಿಕೊಂಡಿದೆ. ಈ ಬಗ್ಗೆ ಜನಪದ ಕಥೆಗಳಲ್ಲಿ ಬೇರೆ ಬೇರೆ ರೀತಿಯ ವಿಶ್ಲೇಷಣೆ ಸಹ ಇದೆ. ಹಿಂದೆ ಕಾವ್ಯಗಳಲ್ಲಿ ಇದ್ದ ಕಥೆಯನ್ನು ಸೇರಿಸಿಕೊಂಡು ಬಳಿಕ ನಾಟಕಗಳಾಗಿ ಪ್ರದರ್ಶಿಸಲಾಗುತ್ತಿತ್ತು. ಬಳಿಕ, ಅದು ಸಿನಿಮಾ ರೂಪದಲ್ಲಿ ತೆರೆಗೆ ಬಂದಿತ್ತು.
ಮೊದಲು ನಾಸ್ತಿಕನಾಗಿದ್ದ ಬೇಡರ ದಿಣ್ಣ ಕೊನೆಗೆ ಆಸ್ತಿಕನಾಗಿ, ಪರಮ ಭಕ್ತನಾಗಿ ತನ್ನ ಕಣ್ಣುಗಳನ್ನೇ ಶಿವನಿಗೆ ಅರ್ಪಿಸಿ 'ಕಣ್ಣಪ್ಪ' ಎಂದೇ ಹೆಸರಾಗಿದ್ದನು. ಇದೇ ಕಥೆಯನ್ನು ಹಲವು ಕವಿಗಳು ಬೇರೆ ಬೇರೆ ರೀತಿಯಲ್ಲಿ ಚಿತ್ರಿಸಿದ್ದಾರೆ. ಸದ್ಯ ಈಗ ತೆರೆಗೆ ಬಂದಿರುವ ತೆಲುಗಿನ 'ಕಣ್ಣಪ್ಪ' ಚಿತ್ರದಲ್ಲಿ ಇದಕ್ಕೆ ಒಂದಷ್ಟು ಹೊಸ ಉಪಕಥೆಗಳನ್ನು ಸೇರಿಸಲಾಗಿದೆ. ಮಂಚು ವಿಷ್ಣು ನಟನೆಯ 'ಕಣ್ಣಪ್ಪ' ಸಿನಿಮಾಗೂ ಡಾ ರಾಜ್‌ಕುಮಾರ್ ನಟನೆಯ ಕನ್ನಡದ 'ಬೇಡರ ಕಣ್ಣಪ್ಪ' ಸಿನಿಮಾಗೂ ಸಾಕಷ್ಟು ವ್ಯತ್ಯಾಸವಿದೆ.
ಈಗಿನ ವಿಷ್ಣು ಮಂಚು ನಟನೆಯ 'ಕಣ್ಣಪ್ಪ' ಚಿತ್ರವು ಶಿವರಾಜ್‌ಕುಮಾರ್ ನಟನೆಯ ಕನ್ನಡದ 'ಶಿವ ಮೆಚ್ಚಿನ ಕಣ್ಣಪ್ಪ' ಕಥೆಗೆ ಹೆಚ್ಚು ಹತ್ತಿರ ಎನ್ನುವಂತಿದೆ. ಆದರೆ, ಡಾ ರಾಜ್‌ಕುಮಾರ್ ನಟನೆಯ 'ಬೇಡರ ಕಣ್ಣಪ್ಪ' ಚಿತ್ರಕ್ಕೆ ಹೋಲಿಕೆಯಲ್ಲಿ ಸಾಕಷ್ಟು ವಿಭಿನ್ನತೆಯಿದೆ. ಅಣ್ಣಾವ್ರ 'ಬೇಡರ ಕಣ್ಣಪ್ಪ' ಕಥೆಯನ್ನು ಇಟ್ಟುಕೊಂಡು 'ಶಿವ ಮೆಚ್ಚಿನ ಕಣ್ಣಪ್ಪ' ಚಿತ್ರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಲಾಗಿತ್ತು.
ಅಣ್ಣಾವ್ರ ಚಿತ್ರಕ್ಕೂ ತೆಲುಗಿನಲ್ಲಿ ಕೃಷ್ಣಂರಾಜು ನಟಿಸಿದ್ದ 'ಕನ್ನಪ್ಪ' ಚಿತ್ರಕ್ಕೂ ಸಾಮ್ಯತೆ ಇತ್ತು. ಮುತ್ತುರಾಜ್ ಆಗಿ ಡಾ ರಾಜ್ ಅವರು ರಂಗಭೂಮಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದಾಗ 'ಬೇಡರ ಕಣ್ಣಪ್ಪ' ನಾಟಕ ಸಹ ಮಾಡುತ್ತಿದ್ದರು. ಅದೇ ಕಥೆಯನ್ನು ಸಿನಿಮಾ ರೂಪದಲ್ಲಿ ತಂದು ಅಂದು ತೋರಿಸಲಾಗಿತ್ತು. ಅದರಲ್ಲಿ ಅಂದಿನ ಕಾಲದಲ್ಲಿ ಲಭ್ಯವಿದ್ದ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿತ್ತು.
ವೀರಶೈವರು ಆರಾಧಿಸುವ 63 ಪವಿತ್ರ ಶೈವ ಸಂತರಲ್ಲಿಈ ಕಣ್ಣಪ್ಪ ಸಹ ಒಬ್ಬರು. ಕೆಲವೊಂದು ಪುರಾಣದ ಕಥೆಗಳ ಜೊತೆಗೆ ಭಕ್ತ ಕಣ್ಣಪ್ಪನ ಕಥೆ ಕೂಡ ತಳುಕು ಹಾಕಿಕೊಂಡಿದೆ. 13ನೇ ಶತಮಾನ ಬಸವ ಪುರಾಣ ಹಾಗೂ ಮಹಾಕವಿ ದೂರ್ಜಟಿ ಬರೆದ ಶ್ರೀಕಾಳಹಸ್ತಿ ಮಹಾತ್ಮೆ ಕಾವ್ಯಗಳನ್ನು ಆಧರಿಸಿ ತಾವೀಗ 'ಕಣ್ಣಪ್ಪ' ಸಿನಿಮಾ ಮಾಡಿರುವುದಾಗಿ ಮೋಹನ್ ಬಾಬು ಹೇಳಿದ್ದಾರೆ. ಕನ್ನಡದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದ 'ಶಿವ ಮೆಚ್ಚಿನ ಕಣ್ಣಪ್ಪ' ಚಿತ್ರಕ್ಕೂ ಈಗ ಚಿತ್ರಮಂದಿರಗಳಲ್ಲಿ ಇರುವ 'ಕಣ್ಣಪ್ಪ' ಚಿತ್ರಕ್ಕೂ ಸಾಕಷ್ಟು ಹೋಲಿಕೆ ಇದೆ.
ಸಾಮಾನ್ಯ ಬೇಡನ ಕಥೆಯನ್ನು ಮಹಾನ್ ಸಾಹಸಿಯ ಕಥೆ ಎನ್ನುವಂತೆ 'ಕಣ್ಣಪ್ಪ' ಚಿತ್ರದಲ್ಲಿ ವಿಷ್ಣು ಚಿತ್ರಿಸಿಕೊಂಡಿದ್ದಾರೆ. ದ್ವಾಪರಯುಗದ ಕಥೆಯಲ್ಲಿ ಶಿವನೇ ಕಿರಾತನಾಗಿ ಬಂದು ಅರ್ಜುನನನ ಗರ್ವ ಇಳಿಸುತ್ತಾನೆ. ಕಿತಾತನ ಪಾತ್ರವನ್ನು ಮೋಹನ್ ಲಾಲ್ ಮಾಡಿದ್ದಾರೆ. ದಿಣ್ಣನನ್ನು ಕಣ್ಣಪ್ಪ ಆಗಿ ಬದಲಾಗಲು ದಾರಿ ತೋರಿಸುವ ಶಿವನ ಅಂಶ ರುದ್ರನಾಗಿ ಪ್ರಭಾಸ್ ಅಬ್ಬರಿಸಿದ್ದಾರೆ. ಅವರ ಅಭಿನಯದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
'ಬೇಡರ ಕಣ್ಣಪ್ಪ' ಚಿತ್ರದಲ್ಲಿ ದಿಣ್ಣನಾಗಿ ನಟಿಸಿದ್ದ ಡಾ. ರಾಜ್‌ಕುಮಾರ್ 'ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ಶಿವನ ಪಾತ್ರಕ್ಕೆ ಜೀವ ತುಂಬಿದ್ದರು. ಆ ಶಿವನೇ ಕಿರಾತನಾಗಿ ಮಾರು ವೇಷದಲ್ಲಿ ಅಂದರೆ ಅಣ್ಣಾವ್ರು ಬರುವಂತೆ ತೋರಿಸಲಾಗಿತ್ತು. ದಿಣ್ಣನಿಗೆ ಕಾಡಿನಲ್ಲಿ ಬೇಟೆ ಸಿಗದೇ ಪರಿತಪಿಸುತ್ತಿದ್ದಾಗ ಶಿವನ ಮೊರೆ ಹೋಗುವಂತೆ ಹೇಳಲು ಬರುವ ವೃದ್ಧನ ಪಾತ್ರದಲ್ಲಿ ಕೂಡ ಅಣ್ಣಾವ್ರು ಮಿಂಚಿದ್ದರು. ಅದೇ ಪಾತ್ರವನ್ನು ರುದ್ರನ ಪಾತ್ರವಾಗಿ ಚಿತ್ರಿಸಿ ಪ್ರಭಾಸ್ ನಟಿಸುವಂತಾಗಿದೆ.
ಮಂಚು ವಿಷ್ಣು ತಮ್ಮ ನಟನೆಯ 'ಕಣ್ಣಪ್ಪ' ಸಿನಿಮಾದಲ್ಲಿ ಸಾಕಷ್ಟು ಉಪಕಥೆಗಳನ್ನು ಸೇರಿಸಿ ಬೇರೆಯದ್ದೇ ರೂಪ ಕೊಟ್ಟಿದ್ದಾರೆ. ಮಂಚು ವಿಷ್ಣು ಚಿತ್ರದಲ್ಲಿ ಟೈಟಲ್ ರೋಲ್ ನಲ್ಲಿ ನಟಿಸಿದ್ದಾರೆ. ಸ್ವತಃ ಅವರೇ ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಆದರೆ, ಅದು ಪ್ರೇಕ್ಷಕರಿಗೆ ಅಷ್ಟಾಗಿ ಹತ್ತಿರವಾಗುವುದಿಲ್ಲ. ಹಳೇ ಸಿನಿಮಾಗಳಲ್ಲಿ ಇದ್ದ ನೈಜತೆ ಈ ಚಿತ್ರದಲ್ಲಿ ಇಲ್ಲ ಎನ್ನಬಹುದೇನೋ. ಇದರಲ್ಲಿ ಗ್ರಾಫಿಕ್ಸ್ ಅಬ್ಬರ ಜೋರಾಗಿದ್ದರೆ ಅವುಗಳಲ್ಲಿ ಶೂಟಿಂಗ್ ಸ್ಥಳಗಳಲ್ಲೇ ಒಂದು ರೀತಿಯ ನೈಜತೆ ಕಂಡುಬರುತ್ತಿತ್ತು.
ವಿಷ್ಣು ಮಂಚು ಕಣ್ಣಪ್ಪ ಚಿತ್ರದಲ್ಲಿ ನ್ಯೂಜಿಲೆಂಡ್ ಕಾಡಿನಲ್ಲಿ ಕಥೆ ಕಟ್ಟಿಕೊಟ್ಟಿರುವ ಕಾರಣಕ್ಕೆ ಪ್ರೇಕ್ಷಕರಿಗೆ ಅಷ್ಟಾಗಿ ಕನೆಕ್ಟ್ ಆಗುವುದಿಲ್ಲ. ಈ ಹಿಂದಿನ ಸಿನಿಮಾಗಳಲ್ಲಿ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ದಿಣ್ಣ ಪೂಜೆ ಮಾಡುವಂತೆ ತೋರಿಸಲಾಗಿತ್ತು. ಆದರೆ ಈಗಿನ 'ಕಣ್ಣಪ್ಪ' ಚಿತ್ರದಲ್ಲಿ ಬೆಟ್ಟದ ಮೇಲೆ ಬಯಲೊಂದರಲ್ಲಿ ವಾಯುಲಿಂಗ ಇರುವಂತೆ ಚಿತ್ರಿಸಲಾಗಿದೆ. ಕೊನೆಯ 30 ನಿಮಿಷ ಕಥೆ ಅಲ್ಲೇ ಸಾಗುತ್ತದೆ. ಒಟ್ಟಿನಲ್ಲಿ ಹೇಳಬೇಕು ಎಂದರೆ, ಇದು ಕಥೆಗಿಂತ ತಂತ್ರಜ್ಞಾನಕ್ಕೆ ಒತ್ತುಕೊಟ್ಟಿರುವ ಸಿನಿಮಾ, ಹಳೆಯದು ಕಥೆ ಆಧಾರಿತವಷ್ಟೇ ಆಗಿತ್ತು ಎನ್ನಬಹುದೇನೋ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.