
ಅದೆಷ್ಟೋ ಮಂದಿಗೆ ಚಿತ್ರತಾರೆಯರು, ಕ್ರಿಕೆಟಿಗರು ಅಂದರೆ ಅಪ್ಪಟ ಅಭಿಮಾನ. ಕೆಲವರಿಗೆ ಅದೆಷ್ಟು ಅಭಿಮಾನ ಎಂದರೆ ಅವರನ್ನೇ ದೇವರು ಎಂದುಕೊಂಡುಬಿಟ್ಟಿರುತ್ತಾರೆ. ಅವರು ಮಾಡಿದ್ದೆಲ್ಲವನ್ನೂ ಪ್ರಸಾದ ಎಂದು ಸ್ವೀಕರಿಸುವವರೂ ಇದ್ದಾರೆ. ಅವರನ್ನು ನೋಡಲು ಪ್ರಾಣವನ್ನೂ ಪಣಕ್ಕಿಡುವ ಅಂಧಾಭಿಮಾನಿಗಳೂ ಕಡಿಮೆ ಏನಿಲ್ಲ. ಆದರೆ, ಇವರ ಪೈಕಿ ಅದೆಷ್ಟೋ ತಾರೆಯರು, ಜಾಹೀರಾತಿನ ಹೆಸರಿನಲ್ಲಿ, ಅದೇ ಅಭಿಮಾನಿಗಳನ್ನು ಸಾವಿನ ಬಾಯಿಗೆ ನೂಕುತ್ತಿದ್ದಾರೆ ಎನ್ನುವುದು ಬಹುಶಃ ಹಲವರಿಗೆ ತಿಳಿದಿರಲಿಕ್ಕಿಲ್ಲ. ಕೋಟಿ ಕೋಟಿ ರೂಪಾಯಿ ಹಣವನ್ನು ಜಾಹೀರಾತು ಕಂಪೆನಿಗಳಿಂದ ಪಡೆದು ತಮ್ಮದೇ ಅಭಿಮಾನಿಗಳಿಗೆ ವಿಷವನ್ನು ನೀಡುತ್ತಿದ್ದಾರೆ ಕೆಲವರು.
ಕೆಲವು ವಿದೇಶಿ ಪಾನೀಯಗಳ ಜಾಹೀರಾತುಗಳಲ್ಲಿ ನಟಿಸುವ ಚಿತ್ರ ನಟರು, ಕ್ರಿಕೆಟಿಗರನ್ನು ನೋಡಿ ಪ್ರತಿನಿತ್ಯ ವಿಷ ಸೇವನೆ ಮಾಡಿ ಕ್ಯಾನ್ಸರ್ನಂಥ ಮಾರಕ ರೋಗಗಳಿಗೆ ಬಲಿಯಾಗುತ್ತಿರುವವರು ಅದೆಷ್ಟೋ ಮಂದಿ. ಇನ್ನು ದಿನನಿತ್ಯ ಬಳಸುವ ಪಾನೀಯ, ಶ್ಯಾಂಪೂ, ಪಾನ್ ಮಸಾಲಾ, ಎಣ್ಣೆ, ಹಣ್ಣುಗಳ ಜ್ಯೂಸ್, ಚಿಪ್ಸ್, ಟೂಥ್ಪೇಸ್ಟ್... ಹೀಗೆ ಪ್ರತಿಯೊಂದಕ್ಕೂ ಸೆಲೆಬ್ರಿಟಿಗಳನ್ನು ಬಳಸಿಕೊಂಡು, ಅವರಿಗೆ ಕೋಟಿ ಕೋಟಿ ಹಣ ಕೊಟ್ಟು ಜಾಹೀರಾತು ಮಾಡಿ ಜನರನ್ನು ಮರಳು ಮಾಡುವ ತಂತ್ರ ಬಹುದೊಡ್ಡದಿದೆ.
ಪಾನ್ ಮಸಾಲಾ ಆ್ಯಡ್ ಮಾಡುವ ತಾರೆಯರು ಅಸಲಿಗೆ ಅದನ್ನು ಸೇವಿಸುವುದೇ ಇಲ್ಲ. ಈ ಶ್ಯಾಂಪೂ ಬಳಸಿದರೆ, ಕೂದಲು ಹೀಗಾಗುತ್ತದೆ ಎನ್ನುವ ನಟಿಯರು ಆ ಕೂದಲನ್ನು ಅಂದಗೊಳಿಸಲು ಗಂಟೆಗಟ್ಟಲೆ ಹೇಗೆ ಹೇರ್ ಸ್ಟೈಲಿಷ್ ಮುಂದೆ ಕುಳಿತುಕೊಳ್ಳುತ್ತಾರೆ, ಬಿಯರ್ ಜಾಹೀರಾತಿನಲ್ಲಿ ಪೆಟ್ರೋಲ್ ಹೇಗೆ ಬಳಸಲಾಗುತ್ತದೆ, ಚಿಪ್ಸ್ ಜಾಹೀರಾತಿನಲ್ಲಿ ಹೇಗೆ ನಕಲಿ ಚಿಪ್ಸ್ ಬಳಸುತ್ತಾರೆ. ಅಡುಗೆ ಸಾಮಗ್ರಿ ಅಥವಾ ವಿವಿಧ ರೀತಿಯ ಅಡುಗೆ ಪುಡಿಗಳ ಬಳಕೆಯಲ್ಲಿ ಹೇಗೆ ಬೇರೆ ಬಣ್ಣಗಳನ್ನು ಬಳಸಿ ಜನರನ್ನು ಮರಳು ಮಾಡಲಾಗುತ್ತದೆ ಎನ್ನುವ ಬಗ್ಗೆ ಇದಾಗಲೇ ವಿಡಿಯೋ ಕೂಡ ವೈರಲ್ ಆಗಿತ್ತು.
ಕ್ರಿಕೆಟ್ ತಾರೆಯರು, ಸಿನಿಮಾ ಸ್ಟಾರ್ ನಟರು ಬಳಸುವ ವಿದೇಶಿ ಪಾನೀಯಗಳಲ್ಲಿ ಇರುವ ಕ್ರಿಮಿ ನಾಶಕದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಫಾಸ್ಟ್ ಫುಡ್ಗಳಲ್ಲಿ ಬಳಸುವ ಅಪಾಯಕಾರಿ, ಕ್ಯಾನ್ಸರ್ಗೆ ತುತ್ತಾಗುವ ವಿಷದ ಬಗ್ಗೆಯೂ ಸದ್ದು ಮಾಡಿತ್ತು. ಪ್ರಯೋಗಾಲಯಗಳಲ್ಲಿಯೇ ಇದನ್ನು ಸಾಬೀತು ಮಾಡಲಾಗಿತ್ತು. ಪಾನ್ ಮಸಾಲಾ ತಿಂದರೆ ಬಾಯಿಯ ಕ್ಯಾನ್ಸರ್ ಹೇಗೆ ಬರುತ್ತದೆ ಎನ್ನುವ ಸರ್ಕಾರಿ ಜಾಹೀರಾತುಗಳೂ ಬರುತ್ತವೆ, ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಕ್ಯಾನ್ಸರ್ ರೋಗಕ್ಕೆ ಇಂಥ ಜಾಹೀರಾತುಗಳು ಹಾಗೂ ಜಾಹೀರಾತುಗಳಲ್ಲಿ ನಟಿಸುವ ಸೆಲೆಬ್ರಿಟಿಗಳ ಕೊಡುಗೆ ಬಹುದೊಡ್ಡದು ಇದೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿಯೂ ಭಾರಿ ಚರ್ಚೆಯೇ ನಡೆದಿತ್ತು.
ಇದೀಗ ಇಲ್ಲೊಂದು ವಿಡಿಯೋ ವೈರಲ್ ಆಗಿದೆ ನೋಡಿ. ಇದು ಪಾನೀಯದ ಜಾಹೀರಾತು. ಇದರಲ್ಲಿ ಸೆಲೆಬ್ರಿಟಿಯೊಬ್ಬರು ಜಾಹೀರಾತಿನ ಶೂಟಿಂಗ್ ಮಾಡುವಾಗ ಅದನ್ನು ಸೇವಿಸಿ, ಅತ್ತ ಕಟ್ ಎನ್ನುತ್ತಿದ್ದಂತೆಯೇ ಅದನ್ನು ಉಗಿಯುವುದನ್ನು ನೋಡಬಹುದು. ಆದರೆ, ಅದೇ ಜಾಹೀರಾತು ಕಂಪೆನಿಗಳು ಇವರನ್ನು ತೋರಿಸಿ, ಆ ಪಾನೀಯದ ಮೇಲೆ ಅರೆಬರೆ ಡ್ರೆಸ್ ಹಾಕಿರೋ ಇನ್ನೋರ್ವ ನಟಿಯನ್ನು ತೋರಿಸಿ ಆಕೆಯ ಕೈಯಲ್ಲಿ ಅದೇ ಪಾನೀಯದ ಬಾಟಲ್ ಇಟ್ಟಿದೆ. ಇದನ್ನು ನೋಡಿದ ಅಭಿಮಾನಿಗಳು ಅದನ್ನು ಕುಡಿದು ತಾವೂ ಸೆಲೆಬ್ರಿಟಿ ಲೆವಲ್ಗೆ ಹೋಗಿಬಿಟ್ಟೆವು ಎಂದು ಖುಷಿ ಪಡುತ್ತಾರೆ.
ಕೆಲ ದಿನಗಳ ಹಿಂದೆ ಪಾನ್ ಮಸಾಲಾ ಜಾಹೀರಾತಿನಿಂದ ನಟ ಅಕ್ಷಯ್ ಕುಮಾರ್ ಹಿಂದಕ್ಕೆ ಸರಿದಿದ್ದರು. ಆದರೆ ಶಾರುಖ್, ಟೈಗರ್ ಟ್ರಾಫ್ ಸೇರಿದಂತೆ ಇನ್ನೂ ಕೆಲವರು ಇಂಥ ಜಾಹೀರಾತು ಮಾಡುತ್ತಲೇ ಇದ್ದಾರೆ. ಯಾವುದೇ ಕಾರಣಕ್ಕೂ ಸುಲಭದಲ್ಲಿ ಸಿಗುವ ಕೋಟಿ ಕೋಟಿ ಹಣ ಬಿಡಲು ಮನಸ್ಸು ಬರಬೇಕಲ್ಲ! ಸ್ಯಾಂಡಲ್ವುಡ್ ನಟ ಯಶ್ ಕೂಡ ಪಾನ್ ಮಸಾಲಾ ಜಾಹೀರಾತನ್ನು ಒಪ್ಪಿಕೊಂಡಿರಲಿಲ್ಲ. ಈಚೆಗಷ್ಟೇ ಅನಿಲ್ ಕಪೂರ್ 10 ಕೋಟಿ ರೂಪಾಯಿ ಆಫರ್ ರಿಜೆಕ್ಟ್ ಮಾಡಿದ್ದು ಸದ್ದು ಮಾಡಿತ್ತು. ಆದರೆ ಎಲ್ಲಾ ಸೆಲೆಬ್ರಿಟಿಗಳೂ ಹೀಗೆಯೇ ಇರಬೇಕೆಂದೇನೂ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.