ಹೈಕೋರ್ಟ್‌ ಮೆಟ್ಟಿಲೇರಿದ ಐಶ್ವರ್ಯಾ ರೈ ಪುತ್ರಿ 11 ವರ್ಷದ ಆರಾಧ್ಯ ಬಚ್ಛನ್‌, ಏನ್‌ ವಿಷ್ಯ?

By Santosh Naik  |  First Published Apr 20, 2023, 1:00 PM IST

ದಿಗ್ಗಜ ನಟ ಅಮಿತಾಬ್‌ ಬಚ್ಛನ್‌ ಅವರ ಮೊಮ್ಮಗಳು, ಐಶ್ವರ್ಯಾ ರೈ ಹಾಗೂ ಅಭಿಷೇಕ್‌ ಬಚ್ಛನ್‌ ಅವರ ಪುತ್ರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಕೋರ್ಟ್‌ ವಿಚಾರಣೆ ನಡೆಸಿ ತೀರ್ಪು ನೀಡಿದೆ.


ನವದೆಹಲಿ (ಏ.20): ಬಾಲಿವುಡ್‌ನ ದಿಗ್ಗಜ ನಟ ಅಮತಾಬ್‌ ಬಚ್ಛನ್‌ ಅವರ ಮೊಮ್ಮಗಳು ಹಾಗೂ ಅಭಿಷೇಕ್‌ ಬಚ್ಚನ್‌-ಐಶ್ವರ್ಯಾ ರೈ ಪುತ್ರಿ 11 ವರ್ಷದ ಆರಾಧ್ಯ ಬಚ್ಛನ್‌ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ತಮ್ಮ ಆರೋಗ್ಯದ ಕುರಿತಾಗಿ ವಿವಿಧ ಯೂಟ್ಯೂಬ್‌ ಚಾನೆಲ್‌ಗಳು ಸುಳ್ಳು ಸುದ್ದಿ ಬಿತ್ತರ ಮಾಡುತ್ತಿದೆ ಈ ಕುರಿತಾಗಿ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇಂತ ವರದಿಗಳನ್ನು ಮಾಡುವುದಕ್ಕೆ ನಿರ್ಬಂಧಕಾಜ್ಞೆ ವಿಧಿಸಬೇಕು ಎಂದು ಆರಾಧ್ಯ ಮನವಿ ಮಾಡಿದ್ದರು. ಅದರಂತೆ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಇಂಥ ವರದಿಗಳನ್ನು ಪ್ರಕಟಿಸುವುದಕ್ಕೆ ನಿರ್ಬಂಧಕಾಜ್ಞೆ ಮಾತ್ರವಲ್ಲದೆ, ಯೂಟ್ಯೂಬ್‌ನಲ್ಲಿ ಇದೇ ವಿಚಾರವಾಗಿ ಬಂದಿರುವ ಎಲ್ಲಾ ಕಂಟೆಂಟ್‌ಗಳನ್ನು ತೆಗೆದುಹಾಕಬೇಕು ಎಂದು ಗುರುವಾರ ಆದೇಶ ನೀಡಿದೆ. ತಮ್ಮ ಆರೋಗ್ಯ ಹಾಗೂ ಜೀವನದ ಕುರಿತಾಗಿ ಯೂಟ್ಯೂಬ್‌ ಚಾನೆಲ್‌ವೊಂದು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿತ್ತು. ಇದರ ವಿಡಿಯೋ ಲಿಂಕ್‌ನೊಂದಿಗೆ ಆರಾಧ್ಯ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಗುರುವಾರ ಇದರ ವಿಚಾರಣೆ ನಡೆಸಿದ ಕೋರ್ಟ್‌, ಯೂಟ್ಯೂಬ್‌ನಿಂದ ಇಂಥ ಕಂಟೆಂಟ್‌ ತೆಗೆದುಹಾಕಬೇಕು ಎಂದು ಹೇಳಿದ್ದಲ್ಲದೆ, ಇದನ್ನು ಪೋಸ್ಟ್‌ ಮಾಡಿದ್ದ ವ್ಯಕ್ತಿಗೆ ಸಮನ್ಸ್‌ ಜಾರಿ ಮಾಡುವಂತೆ ಆದೇಶ ನೀಡಿದೆ.

ಆರಾಧ್ಯ ಬಚ್ಛನ್‌ ತಮ್ಮ ತಂದೆ ಅಭಿಷೇಕ್‌ ಬಚ್ಛನ್‌ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಆರಾಧ್ಯಗೆ ತೀವ್ರತರವಾದ ಅನಾರೋಗ್ಯವಿದೆ ಎಂದು ಹೇಳಲಾಗಿದ್ದು, ಕೆಲವೊಂದು ವಿಡಿಯೋಗಳಲ್ಲಿ ಆರಾಧ್ಯ ಈ ಲೋಕದಲ್ಲಿಯೇ ಇಲ್ಲ. ಅವರ ಸಾವಾಗಿದೆ ಎನ್ನುವ ಸುಳ್ಳು ಸುದ್ದಿಗಳನ್ನೂ ಮಾಡಲಾಗಿದೆ. ಇದರ ಬೆನ್ನಲ್ಲಿಯೇ  ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಅಂತಹ ವಿಷಯವನ್ನು ತಕ್ಷಣವೇ ತೆಗೆದುಹಾಕಲು ಮತ್ತು ಅವುಗಳನ್ನು ತಕ್ಷಣವೇ ನಿರ್ಬಂಧಿಸಲು ಹೈಕೋರ್ಟ್ ನಿರ್ದೇಶಿಸಿದೆ.

ಆರಾಧ್ಯ ಬಚ್ಛನ್‌ ಅವರ ಆರೋಗ್ಯದ ಬಗ್ಗೆ ಕೆಲವು ಯೂಟ್ಯೂಬ್‌ ಚಾನೆಲ್‌ಗಳು ಸುಳ್ಳು ಸುದ್ದಿ ಮಾಡಿದ್ದವು. ಇಡೀ ಕುಟುಂಬ ಈ ಸುದ್ದಿಯನ್ನು ನೋಡಿ ಬಹಳ ಸಿಟ್ಟಾಗಿತ್ತು. ಅದರ ಬೆನ್ನಲ್ಲಿಯೇ ಇಂಥ ಯೂಟ್ಯೂಬ್‌ ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಆ ಬಳಿಕವೇ, ಬಚ್ಛನ್‌ ಕುಟುಂಬದ ಆರಾಧ್ಯ ಅವರ ಹೆಸರಿನಲ್ಲಿಯೇ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದವು.

ಜೀವದ ಗೆಳೆಯ ಅಮಿತಾಭ್ ಸಿಗದಿದ್ರೂ ಸೊಸೆ, ಮೊಮ್ಮಗಳಿಗೆ ಪ್ರೀತಿಯ ಅಪ್ಪುಗೆ ನೀಡಿದ ರೇಖಾ

ಇನ್ನು ಇದೇ ವಿಚಾರವಾಗಿ ಅಭಿಷೇಕ್‌ ಬಚ್ಛನ್‌ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದರು. ತಮ್ಮ 11 ವರ್ಷದ ಪುತ್ರಿಯನ್ನು ಸುಖಾಸುಮ್ಮನೆ ಟ್ರೋಲ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಮಗಳ ಬಗ್ಗೆ ಇಂಥ ಟೀಕೆಗಳನ್ನು ನಾನು ಸಹಿಸೋದಿಲ್ಲ. ಅವರಾಗಿಯೇ ತಪ್ಪುಗಳನ್ನು ತಿದ್ದಿಕೊಂಡರೆ ಒಳ್ಳೆಯದು ಎಂದು ಎಚ್ಚರಿಕೆ ನೀಡಿದ್ದರು. ನಾನು ನಟನಾಗಿರಬಹುದು. ಆದರೆ, ಮಗಳು ಇನ್ನೂ ಚಿಕ್ಕವಳು. ಹಾಗಾಗಿ ಆಕೆಯ ವಿರುದ್ಧ ಏನಾದರೂ ಇಲ್ಲಸಲ್ಲದ ಟೀಕೆ ಮಾಡಿದರೆ, ಅದನ್ನು ನಾನು ಖಂಡಿತವಾಗಿಯೂ ಸಹಿಸಿಕೊಳ್ಳೋದಿಲ್ಲ ಎಂದಿದ್ದರು.

Tap to resize

Latest Videos

60 ಕೋಟಿಯ ಬಂಗಲೆ ಮತ್ತು ಐಷಾರಾಮಿ ಕಾರುಗಳ ಓನರ್‌ ಆರಾಧ್ಯ ಬಚ್ಚನ್!

ಅಭಿಷೇಕ್‌ ಬಚ್ಛನ್‌ ಹಾಗೂ ಐಶ್ವರ್ಯಾ ರೈ 2007ರಲ್ಲಿ ವಿವಾಹವಾಗಿದ್ದರು. ಆ ಬಳಿಕ ಐಶ್ವರ್ಯಾ ರೈ 2011ರ ನವೆಂಬರ್‌ 16 ರಂದು ಮಗಳು ಆರಾಧ್ಯಗೆ ಜನ್ಮ ನೀಡಿದ್ದರು. ಆರಾಧ್ಯ ಇತ್ತೀಚೆಗೆ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಗ್ರ್ಯಾಂಡ್ ಗಾಲಾ ಕಾರ್ಯಕ್ರಮಕ್ಕೆ ತನ್ನ ತಾಯಿಯೊಂದಿಗೆ ಕಾಣಿಸಿಕೊಂಡರು. ಎರಡು ದಿನವೂ ಇಬ್ಬರು ಹಾಜರಾಗಿದ್ದರು.
 

click me!