ಗೊತ್ತಿರುವ ಲೆಜೆಂಡ್‌ನ ಗೊತ್ತಿಲ್ಲದ ಕಥೆ ಇದು: ಯಜ್ಞಾ ಶೆಟ್ಟಿ

By Web Desk  |  First Published Mar 18, 2019, 9:54 AM IST

ತೆಲುಗು ಚಿತ್ರರಂಗದಲ್ಲಿ ಬಹು ದೊಡ್ಡ ಚರ್ಚೆ, ವಾದ, ವಿವಾದದ ಕೇಂದ್ರಬಿಂದುವಾಗಿರುವ ‘ಲಕ್ಷ್ಮೀಸ್ ಎನ್‌ಟಿಆರ್’ ಚಿತ್ರದಲ್ಲಿ ಕನ್ನಡ ನಟಿ ಯಜ್ಞಾ ಶೆಟ್ಟಿ ನಾಯಕಿ. ಇಡೀ ದೇಶದ ಗಮನ ಸೆಳೆಯುತ್ತಿರುವ ರಾಮ್‌ಗೋಪಾಲ್ ವರ್ಮಾ ನಿರ್ದೇಶನದ ಈ ಚಿತ್ರದ ಕುರಿತು ಮೊದಲ ಬಾರಿಗೆ ನಟಿ ಯಜ್ಞಾ ಶೆಟ್ಟಿ ಮಾತನಾಡಿದ್ದಾರೆ.


ಆರ್ ಕೇಶವಮೂರ್ತಿ

ಸದ್ಯ ಟಾಲಿವುಡ್‌ನಲ್ಲಿ ನೀವೇ ಸೌಂಡ್ ಮಾಡುತ್ತಿದ್ದೀರಲ್ಲ?

Latest Videos

undefined

ರಾಮ್‌ಗೋಪಾಲ್ ವರ್ಮಾ ಅವರು ನಿರ್ದೇಶನ ಮಾಡಿರುವ ‘ಲಕ್ಷ್ಮೀಸ್ ಎನ್‌ಟಿಆರ್’ ಸಿನಿಮಾ ಸದ್ದು ಮಾಡುತ್ತಿದೆ.

ನೀವು ಕಂಡುಕೊಂಡಂತೆ ಯಾಕೆ ವಿವಾದಗಳಾಗುತ್ತಿವೆ?

ಎಲ್ಲರಿಗೂ ಗೊತ್ತಿರುವಂತೆ ಇದು ಲೆಜೆಂಡ್ ನಟ ಎನ್‌ಟಿಆರ್ ಅವರ ಜೀವನ ಕುರಿತ ಸಿನಿಮಾ. ನೈಜ ಕತೆಗಳನ್ನು ಆಧರಿಸಿಯೇ ಈ ಚಿತ್ರ ಮಾಡಲಾಗಿದೆ.

ಈ ಚಿತ್ರದ ವಿವಾದಗಳು ತೆರೆ ಆಚೆಗೂ ನಿಮ್ಮನ್ನು ತಲುಪಿದುಂಟೆ?

ನಾನು ಲಕ್ಷ್ಮೀ ಪಾರ್ವತಿ ಅವರ ಪಾತ್ರಧಾರಿ ಅಷ್ಟೆ. ನಾನೇ ಲಕ್ಷ್ಮೀ ಅಲ್ಲ. ನಾನು ಕನ್ನಡದ ನಟಿ ಯಜ್ಞಾ ಶೆಟ್ಟಿ. ನಿರ್ದೇಶಕರು ಹೇಳಿದ್ದನ್ನು ನಾನು ಮಾಡಿದ್ದೇನೆ. ಆದರ ಆಚೆಗೆ ನಡೆಯುವ ಯಾವುದೇ ವಿಚಾರಗಳಲ್ಲೂ ನಾನಿಲ್ಲ. ಅದೆಲ್ಲವೂ ನಿರ್ದೇಶಕರಿಗೆ ಸಂಬಂಧಪಟ್ಟಿದ್ದು.

ಲಕ್ಷ್ಮೀ ಪಾರ್ವತಿ ಪಾತ್ರ ಮಾಡುವ ಅವಕಾಶ ಬಂದಾಗ ಮೊದಲ ರಿಯಾಕ್ಷನ್ ಏನಾಗಿತ್ತು?

ಒಬ್ಬ ನಟಿಯಾಗಿ ನನಗೆ ಖುಷಿ ಕೊಟ್ಟ ವಿಚಾರ. ಒಬ್ಬ ದೊಡ್ಡ ನಿರ್ದೇಶಕರು, ಲೆಜೆಂಡ್ ಕಲಾವಿದನ ಜೀವನ ಚರಿತ್ರೆಯನ್ನು ಆಧರಿಸಿ ಸಿನಿಮಾ ಮಾಡುತ್ತಿದ್ದಾರೆ, ಅದರಲ್ಲಿ ನಾನೇ ಲಕ್ಷ್ಮೀ ಪಾರ್ವತಿ ಎಂದಾಗ ಸಂಭ್ರಮದಿಂದಲೇ ಒಪ್ಪಿಕೊಂಡೆ. ಇದೊಂದು ನನ್ನ ವೃತ್ತಿ ಪಯಣದಲ್ಲಿ ಮರೆಯಲಾಗದ ಸಿನಿಮಾ ಆಗಲಿದೆ ಆ ಕ್ಷಣಕ್ಕೆ ಅನಿಸಿತು.

ಹಾಗಾದರೆ ನೀವು ಲಕ್ಷ್ಮೀ ಪಾರ್ವತಿ ಪಾತ್ರಕ್ಕೆ ಆಯ್ಕೆ ಆಗಿದ್ದು ಹೇಗೆ?

ನಿಮಗೇ ಗೊತ್ತಿರುವಂತೆ ನಾನು ಈಗಾಗಲೇ ರಾಮ್‌ಗೋಪಾಲ್ ವರ್ಮಾ ನಿರ್ದೇಶನದ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರದಲ್ಲಿ ನಟಿಸಿದ್ದೆ. ನನ್ನ ಒಬ್ಬ ನಟಿಯಾಗಿ ಅವರು ಹತ್ತಿರದಿಂದ ನೋಡಿದ್ದರು. ಜತೆಗೆ ನನ್ನ ಪ್ರತಿಭೆ ಅವರಿಗೆ ಗೊತ್ತಿತ್ತು. ಈ ಕಾರಣಕ್ಕೆ ನನ್ನ ಅವರೇ ಕರೆದು ‘ಲಕ್ಷ್ಮೀಸ್ ಎನ್ ಟಿಆರ್’ ಚಿತ್ರದಲ್ಲಿ ನಟಿಸುವಂತೆ ಕೇಳಿದರು.

ನಿಮ್ಮ ಪ್ರಕಾರ ಈ ಚಿತ್ರದಲ್ಲಿ ವರ್ಮಾ ಹೇಳುವುದಕ್ಕೆ ಹೊರಟಿರುವುದೇನು?

ಇದು ಗೊತ್ತಿರುವ ವ್ಯಕ್ತಿಗಳ ಬಗ್ಗೆ ಗೊತ್ತಿಲ್ಲದ ಸಂಗತಿಗಳ ಸಿನಿಮಾ. ಎನ್‌ಟಿ ರಾಮಾರಾವ್ ಅವರ ಜೀವನದಲ್ಲಿ ಲಕ್ಷ್ಮೀ ಪಾರ್ವತಿ ಅವರು ಪ್ರವೇಶವಾದ ನಂತರ ಏನೆಲ್ಲ ಘಟನೆಗಳು ಸಂಭವಿಸಿದವು. ಒಬ್ಬ ಲೆಜೆಂಡರಿ ಕಲಾವಿದನ ಕೊನೆಯ ದಿನಗಳು ಹೇಗಿದ್ದವು ಎಂಬುದನ್ನು ಇಲ್ಲಿ ಹೇಳಿದ್ದಾರೆ. 

ಆರ್‌ಜಿವಿ ಚಿತ್ರದಲ್ಲಿ ನಟಿಸಿದ್ದೀರಿ ಅನ್ನುವ ಕಾರಣಕ್ಕೆ ನಾಯಕಿ ಆದ್ರಾ?

ನಾನು ವರ್ಮಾ ಅವರಿಗೆ ಗೊತ್ತಾಗಲಿಕ್ಕೆ ‘ಕಿಲ್ಲಿಂಗ್ ವೀರಪ್ಪನ್’ ಸಿನಿಮಾ ಮೊದಲ ಮೆಟ್ಟಿಲಾಗಿ ಕೆಲಸ ಮಾಡಿತು. ಅದರ ಆಚೆಗೂ ಲಕ್ಷ್ಮೀ ಪಾರ್ವತಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುವವರು ತುಂಬಾ ಸಿಂಪಲ್ಲಾಗಿರಬೇಕು. ಆಡಂಬರದ ಮೇಕಪ್ ಇಲ್ಲದೆ ಸಹಜವಾಗಿ ತೆರೆ ಮೇಲೆ ಕಾಣಿಸಿಕೊಂಡಿರೆ ಈಕೆ ಲಕ್ಷ್ಮೀ ಅನ್ನುತ್ತಿರಬೇಕು.

ಅಷ್ಟಕ್ಕೂ ನಿರ್ದೇಶಕ RGV ಮಚ್ಚು ಹಿಡಿದಿದ್ದೇಕೆ?

ನೀವು ಆ ಪಾತ್ರವಾಗಲೂ ಏನೆಲ್ಲ ತಯಾರಿ ಮಾಡಿಕೊಂಡ್ರಿ?

ಪ್ರತ್ಯೇಕವಾಗಿ ತಯಾರಿ ಅಂತ ನಾನು ಮಾಡಿಕೊಳ್ಳಲಿಲ್ಲ. ತೆರೆ ಮೇಲೆ ರಿಯಲ್ ಪಾತ್ರಗಳನ್ನು ಅನುಸರಿಸಕ್ಕೆ ಆಗಲ್ಲ. ಯಾಕೆಂದರೆ ಇದು ಮಿಮಿಕ್ರಿ ಅಲ್ಲ. ನಿರ್ದೇಶಕರು ಹೇಳಿದಂತೆ ಆ ಕ್ಯಾರೆಕ್ಟರ್ ಮಾಡಿದ್ದೇನೆ. ಆದರೆ, ನನ್ನ ತೆರೆ ಮೇಲೆ ನೋಡಿದಾಗ ನಾನೇ ಲಕ್ಷ್ಮೀ ಅನ್ನುವಷ್ಟು ಕನ್ವಿನ್ಸಿಂಗ್ ಆಗಿರಬೇಕು ಅಂದುಕೊಂಡೆ.

ಕನ್ನಡದಲ್ಲಿ ಎರಡು ಚಿತ್ರಗಳು ಇರಬೇಕಲ್ಲ?

ರಿಷಬ್ ಶೆಟ್ಟಿ ಅವರ ಜತೆಗೆ ‘ಕಥಾಸಂಗಮ’ ಹಾಗೂ ನಿರಂಜನ್ ಒಡೆಯರ್ ನಟನೆಯ ‘ಆಪರೇಷನ್ ನಕ್ಷತ್ರ’ ಚಿತ್ರದಲ್ಲಿ ಕಾಣಿಸಿಕೊಂಡಿರುವೆ. ಕನ್ನಡ ಮತ್ತು ತೆಲುಗಿನಲ್ಲಿ ಬರಲಿರುವ ‘೯ ಡೈರೀಸ್’ ಚಿತ್ರದಲ್ಲೂ ನಟಿಸಿದ್ದೇನೆ. 

ರಿಯಲ್ ಲಕ್ಷ್ಮೀ ಪಾರ್ವತಿ ಅವರು ನಿಮ್ಮನ್ನು ನೋಡಿ ಏನಾದರು ಹೇಳಿದ್ದುಂಟೆ?

ನಾನು ಒಂದು ಸಲ ಮಾತ್ರ ಅವರನ್ನು ಭೇಟಿ ಆಗಿದ್ದು. ತುಂಬಾ ಮಾತನಾಡಲಿಲ್ಲ. ಚಿತ್ರದ ಟ್ರೇಲರ್ ನೋಡಿದರು. ಚಿತ್ರದಲ್ಲಿ ನನ್ನ ದೃಶ್ಯಗಳನ್ನೂ ನೋಡಿದರು. ‘ತುಂಬಾ ಚೆನ್ನಾಗಿದೆ. ಗುಡ್’ ಅಂತಷ್ಟೆ ಹೇಳಿದರು. ಬಹುಶಃ ನನ್ನ ಪಾತ್ರದಲ್ಲಿ ಅವರನ್ನು ನೋಡಿಕೊಂಡಿರಬೇಕು. 

click me!