ಸರ್ಕಾರಿ ಕನ್ನಡ ಶಾಲೆಯ ತಾಕತ್ತನ್ನು ಹಾಡಿನಲ್ಲಿ ಕಟ್ಟಿದ ಹಾವೇರಿಯ ಬಾಲಕಿ

By Web DeskFirst Published Mar 17, 2019, 5:10 PM IST
Highlights

ಎಷ್ಟು ಚಂದ ಐತೆ, ಎಂತ ಅಂದ ಐತೆ ನಮ್ಮೂರ ಶಾಲೆ| ಜ್ಞಾನದ ಗುಡಿಯೂ ನಮ್ಮೀ ಶಾಲೆ, ಅಜ್ಞಾನವ ಕಳೆವ ಜ್ಯೋತಿಯ ಮಾಲೆ| ಆರಾಧಿಸಿ ಆಲಾಪಿಸಿ ಶಾಲೆಗೆ ನಾ ಬರುವೆ| ಪಾಠದಲೂ ನೋಡು, ಆಟದಲೂ ನೋಡು ಎಂದೂ ಸೋಲದು ಸೋತು ತಲೆಯ ಬಾಗದು

ಬೆಂಗಳೂರು[ಮಾ.17]: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು, ಅದರಲ್ಲೂ ಇತ್ತೀಚೆಗೆ ಆಂಗ್ಲ ಮಾಧ್ಯಮದ ಪ್ರಭಾವವೇ ಹೆಚ್ಚು. ಹೀಗಾಗಿ ಕನ್ನಡ ಮಾಧ್ಯಮ ಶಾಲೆಗಳೆಡೆ ತಿರುಗಿ ನೋಡುವವರು ಕೆಲವರಷ್ಟೇ. ಹೀಗಿರುವಾಗ ಇಲ್ಲೊಬ್ಬ 'ಕನ್ನಡತಿ' ತನ್ನ ಶಾಲೆ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ಯಾವ ಆಂಗ್ಲ ಮಾಧ್ಯಮ ಶಾಲೆಗಿಂತಲೂ ಕಡಿಮೆ ಇಲ್ಲ ಎಂಬುವುದನ್ನು ಸಾರಿ ಹೇಳಿದ್ದಾಳೆ.

ಹೌದು ಕನ್ನಡದ ಪ್ರಖ್ಯಾತ ಸಂಗೀತ ರಿಯಾಲಿಟಿ ಶೋಗಳಲ್ಲೊಂದಾದ 'ಸರಿಗಮಪ ಲಿಟ್ಲ್ ಚಾಂಪ್ಸ್ ಸೀಜನ್ 16' ಆರಂಭವಾಗಿದೆ. ಇಲ್ಲಿ ಹಳ್ಳಿ ಸೊಗಡಿನಲ್ಲಿ ಹಾಡುವ ಅಪ್ಪಟ ಪ್ರತಿಭೆ ರುಬೀನಾ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಈಗಾಗಲೇ ತೀರ್ಪುಗಾರರ ಮೆಚ್ಚುಗೆಗೆ ಪಾತ್ರಳಾಗಿರುವ ರವಿನಾ 'ಬೊಂಬೆ ಹೇಳುತೈತೆ' ಹಾಡಿನ ಸಂಗೀತಕ್ಕೆ ತಾನೇ ಸಾಹಿತ್ಯ ಬರೆದು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಮಹತ್ವವನ್ನು ಸಾರಿ ಹೇಳಿದ್ದಾಳೆ.

ತನ್ನ ಕನ್ನಡ ಶಾಲೆಯ ಪ್ರೇಮವನ್ನು ರುಬೀನಾ ವ್ಯಕ್ತಪಡಿಸಿದ್ದು ಹೀಗೆ

ಎಷ್ಟು ಚಂದ ಐತೆ, ಎಂತ ಅಂದ ಐತೆ ನಮ್ಮೂರ ಶಾಲೆ
ಜ್ಞಾನದ ಗುಡಿಯೂ ನಮ್ಮೀ ಶಾಲೆ, ಅಜ್ಞಾನವ ಕಳೆವ ಜ್ಯೋತಿಯ ಮಾಲೆ
ಆರಾಧಿಸಿ ಆಲಾಪಿಸಿ ಶಾಲೆಗೆ ನಾ ಬರುವೆ
ಪಾಠದಲೂ ನೋಡು, ಆಟದಲೂ ನೋಡು ಎಂದೂ ಸೋಲದು ಸೋತು ತಲೆಯ ಬಾಗದು

'ಎಷ್ಟು ಚಂದ ಐತೆ, ಎಂತ ಅಂದ ಐತೆ ನಮ್ಮೂರ ಶಾಲೆ' ಎಂದು ಆರಂಭವಾಗುವ ಈ ಹಾಡು ಅದೆಷ್ಟು ಅರ್ಥಗರ್ಭಿತವಾಗಿತ್ತು ಎಂದರೆ ಕುಳಿತುಕೊಂಡಿದ್ದ ತೀರ್ಪುಗಾರರೂ ಎದ್ದು ವೇದಿಕೆಗೆ ಆಗಮಿಸಿ ಶಹಬ್ಬಾಸ್ ಎಂದಿದ್ದಾರೆ. ಹಾಡು ಹಾಡಲು ವಿದ್ಯಾರ್ಥಿನಿ ರುಬೀನಾ ತನ್ನ ಶಾಲೆಯ ಸಮವಸ್ತ್ರದಲ್ಲೇ ಆಗಮಿಸಿದ್ದು, ಶಾಲೆ ಎಂದರೆ ತನಗೆಷ್ಟು ಇಷ್ಟ ಎಂದು ತೋರಿಸಿಕೊಟ್ಟಿದ್ದಾಳೆ. ಅಲ್ಲದೇ ಈ ಹಾಡಿನ ಸಾಹಿತ್ಯದ ಮೂಲಕ ತನ್ನ ಸರ್ಕಾರಿ ಶಾಲೆ, ಕನ್ನಡ ಮಾಧ್ಯಮ ಶಾಲೆ ಎಷ್ಟು ಪ್ರೀತಿಸುತ್ತಿದ್ದಾಳೆ ಎಂಬುವುದನ್ನೂ ತಿಳಿಸಿಕೊಟ್ಟಿದ್ದಾಳೆ.

 ಸದ್ಯ ಈ ಹಾಡಿನ ವಿಡಿಯೋ ವೈರಲ್ ಆಗುತ್ತಿದ್ದು, ಅಪಾರ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ಕನ್ನಡಿಗರಾಗಿ ಸರ್ಕಾರಿ ಶಾಲೆ, ಕನ್ನಡ ಮಾಧ್ಯಮ ಎಂದು ಕೀಳಾಗಿ ನೋಡುವವರಿಗೆ ತಕ್ಕ ಉತ್ತರ ನೀಡಿದಂತಿದೆ.

click me!