ಒಳ್ಳೆಯ ಪಾತ್ರಗಳು ಸಿಕ್ಕರೆ ನಟನೆಯಲ್ಲೆ ಬ್ಯುಸಿ ಆಗುವೆ; ನಿಧಿ ಸುಬ್ಬಯ್ಯ

By Web DeskFirst Published Sep 30, 2019, 12:02 PM IST
Highlights

ಪಂಚರಂಗಿ ಚೆಲುವೆ, ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಚಂದನವನಕ್ಕೆ ಮತ್ತೆ ಬಂದಿದ್ದಾರೆ. ಮೂರು ವರ್ಷಗಳ ಗ್ಯಾಪ್ ನಂತರ ಶಿವರಾಜ್ ಕುಮಾರ್ ಅಭಿನಯದ ‘ಆಯುಷ್ಮಾನ್ ಭವ’ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ನಟನೆಯ ಮೂರು ವರ್ಷಗಳ ಗ್ಯಾಪ್ ಹಾಗೂ ಬಾಲಿವುಡ್ ಜರ್ನಿ ಕುರಿತು ನಿಧಿ ಸುಬ್ಬಯ್ಯ ಜತೆಗೆ ಮಾತುಕತೆ.
 

ನಟನೆ ಅಂದ್ರೆ ಬಿಟ್ಟಿರಲಾಗದ ನಂಟು ಅಲ್ವಾ?

ಕಲಾವಿದರ ಬದುಕೇ ಹಾಗೆ. ಒಮ್ಮೆ ಬಣ್ಣ ಹಚ್ಚಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರೆ ಆ ಸೆಳೆತದಿಂದ ದೂರ ಆಗುವುದಕ್ಕೆ ಸಾಧ್ಯವಿಲ್ಲ. ಎಲ್ಲಿಯೇ ಇರಲಿ, ಹೇಗೆಯೇ ಇರಲಿ ನಟನೆಯ ಸೆಳೆತ ಸದಾ ಕಾಡುತ್ತದೆ. ಅದೇ ನನ್ನನ್ನು ಇಲ್ಲಿಗೆ ಮತ್ತೆ ಬರುವಂತೆ ಮಾಡಿದೆ.

‘ಮೇಯರ್ ಮುತ್ತಣ್ಣ’ದಿಂದ ‘ಆಯುಷ್ಮಾನ್ ಭವ’ ಜರ್ನಿ ಕಥೆ ದ್ವಾರಕೀಶ್ ಬ್ಯಾನರ್ ಜೊತೆ!

ನಿಮ್ಮ ಬಾಲಿವುಡ್ ಜರ್ನಿಯ ಕತೆ ಎಲ್ಲಿಗೆ ಬಂತು?

2012 ರಲ್ಲಿ ‘ ಓ ಮೈ ಗಾಡ್’ ಚಿತ್ರದ ಮೂಲಕ ನಾನು ಅಲ್ಲಿಗೆ ಹೋದೆ. ಆದಾದ ನಂತರ ‘ಅಜಬ್ ಗಝಬ್ ಲವ್’ ತದನಂತರ ‘ಡೈರೆಕ್ಟ್ ಇಷ್ಕ್’, ಹಾಗೆಯೇ ‘ಲವ್ ಶಗುನ್’ ಆಯಿತು. ಈಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸಿದ್ದೇನೆ. ಅದಿನ್ನು ರಿಲೀಸ್ ಆಗಬೇಕಿದೆ. ಅದರ ಜತೆಗೆ ಅಲ್ಲಿ ಕೆಲವು ವೆಬ್ ಸಿರೀಸ್‌ನಲ್ಲಿ ಅವಕಾಶ ಸಿಗುತ್ತಿವೆ.

ಹಾಗಿದ್ದರೂ, ಈ ಮೂರು ವರ್ಷದ ಗ್ಯಾಪ್ ಯಾಕೆ?

ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕವು ಅಂತ ಮುಂಬೈಗೆ ಹೋದೆ. ಹಾಗೆಯೇ ನನ್ನದೇ ಬದುಕಲ್ಲಿ ಕೆಲವು ಏರುಪೇರು ಆದವು. ಅವುಗಳ ಒತ್ತಡದಲ್ಲಿ ನಾನು ಸಿನಿಮಾ ಮಾಡುವ, ನಟನೆಗೆ ಹೆಚ್ಚು ಗಮನಕೊಡುವಂತಹ ಪರಿಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಈ ಗ್ಯಾಪ್ ಆಯಿತು ಅಷ್ಟೆ.

ಆಯುಷ್ಮಾನ್ ಭವ’ ಚಿತ್ರಕ್ಕೆ ನೀವು ಬಂದಿದ್ದು ಹೇಗೆ?

ನಿರ್ಮಾಪಕ ಯೋಗೇಶ್ ಅವರು ಇದೇ ಚಿತ್ರದ ಕೆಲಸಕ್ಕೆ ಅಂತ ಒಮ್ಮೆ ಮುಂಬೈಗೆ ಬಂದಿದ್ದರು. ಅದೇ ಸಮಯದಲ್ಲಿ ಅವರು ಭೇಟಿಯಾದಾಗ ಸಿನಿಮಾದ ಬಗ್ಗೆ ಹೇಳಿದ್ದರು. ಒಮ್ಮೆ ನನ್ನ ಪಾತ್ರದ ಬಗ್ಗೆ ಹೇಳಿ, ಆಮೇಲೆ ಡಿಸೈಡ್ ಮಾಡುತ್ತೇನೆ ಅಂತ ತಿಳಿಸಿದ್ದೆ.ನಿರ್ದೇಶಕರಾದ ವಾಸು ಅವರಿಗೂ ವಿಷಯ ತಿಳಿಸಿದ್ದರು. ಅದಾಗಿ ಮೂರ್ನಾಲ್ಕು ದಿನಗಳಲ್ಲೇ ಉತ್ತರ ಬಂತು. ಚಿತ್ರದಲ್ಲಿನ ಪಾತ್ರಕ್ಕೆ ನೀವೇ ಸೆಲೆಕ್ಟ್ ಅಂದ್ರು.

ಒಂದೇ ಹಾಡಿಗೆ 13 ಗೆಟಪ್‌ಗಳು; ಶ್ರೀಮುರಳಿ ಪತ್ನಿ ಕೈವಾಡ!

ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ..

ಚಿಕ್ಕ ಪಾತ್ರ. ಹಾಗಿದ್ದೂ ಆ ಪಾತ್ರಕ್ಕೆ ತುಂಬಾನೆ ಪ್ರಾಮುಖ್ಯತೆ ಇದೆ. ನಿರ್ದೇಶಕ ಪಿ.ವಾಸು ಅವರ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಿಗೂ ಹೇಗೆಲ್ಲ ಮಹತ್ವ ಇರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಮೇಲಾಗಿ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ. ಅವರ ಜತೆಗೂ ಅಭಿನಯಿಸ ಬೇಕೆನ್ನುವ ಕನಸು ಈಗ ಈಡೇರಿದೆ.

ಈಗ ನಿಮ್ಮ ಖಾಯಂ ವಾಸ ಎಲ್ಲಿ?

ನಾನೀಗ ಬೆಂಗಳೂರಿನಲ್ಲೇ ಇದ್ದೇನೆ. ಮುಂಬೈನಲ್ಲಿದ್ದಾಗಲೂ ನಾನು ಬೆಂಗಳೂರು ಬಿಟ್ಟಿರಲಿಲ್ಲ. ಅನಿವಾರ್ಯ ಕಾರಣಗಳಿಂದ ಅಲ್ಲಿಯೇ ಹೆಚ್ಚು ಸಮಯ ಇರಬೇಕಾಗಿತ್ತು ಅಷ್ಟೇ. ಈಗ ಹಾಗಿಲ್ಲ, ಇಲ್ಲಿಯೇ ನಟನೆಗೆ ಹೆಚ್ಚು ಗಮನ ಹರಿಸಿರುವುದರಿಂದ ಇಲ್ಲಿಯೇ ಇರುತ್ತೇನೆ.

‘ಆಯುಷ್ಮಾನ್ ಭವ’ ಮೂಲಕ ನೀಮಗಿರುವ ನಿರೀಕ್ಷೆ ಏನು?

ನಿಜ, ಒಂದಷ್ಟು ಗ್ಯಾಪ್ ಮೂಲಕ ಈ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಪಾತ್ರವೂ ಚೆನ್ನಾಗಿದೆ. ಸಿನಿಮಾ ಗೆಲುತ್ತೆ ಎನ್ನುವ ವಿಶ್ವಾಸವಿದೆ. ಮತ್ತೆ ನಟನೆಯಲ್ಲಿ ಬ್ಯುಸಿ ಆಗಬೇಕೆನ್ನುವ ನನ್ನೊಳಗಿನ ಆಸೆಗೆ ಇದು ಆಸರೆ ಆಗುವ ಭರವಸೆಯಂತೂ ಇದೆ.

'ಮಾಸ್ತಿಗುಡಿ' ದುರಂತದಲ್ಲಿ ಸಾವಿಗೀಡಾದವರನ್ನು ನೆನೆದ ಅಂತಾರಾಷ್ಟ್ರೀಯ ವಾಹಿನಿ!

ಈಗ ಎಂತಹ ಪಾತ್ರಗಳಿಗೆ ಆದ್ಯತೆ ನೀಡುತ್ತೀರಿ?

‘ಪಂಚರಂಗಿ’, ‘ಅಣ್ಣಾ ಬಾಂಡ್’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ ಚಿತ್ರಗಳಲ್ಲಿನ ನನ್ನ ಪಾತ್ರ ನೋಡಿದವರಿಗೆ ಈಗಲೂ ಅಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಆಸೆಯಿದೆ. ಹಾಗಂತ ಅದೇ ತರಹದ ಪಾತ್ರಗಳು ಸಿಗುತ್ತವೆ ಎನ್ನುವ ನಿರೀಕ್ಷೆ ನನಗಿಲ್ಲ. ನನ್ನನ್ನು ನಾನು ಗುರುತಿಸಿಕೊಳ್ಳುವ, ಜನರಿಗೂ ಇಷ್ಟವಾಗುವ ಸವಾಲಿನ ಪಾತ್ರಗಳು ಸಿಕ್ಕರೆ ಸಾಕು.

 

click me!