ಸ್ಯಾಂಡಲ್‌ವುಡ್ ಸಿನಿಮಾಗಳು ಕೋಟಿ ಕ್ಲಬ್ ಸೇರಲು ಕಾರಣಗಳೇನು?

By Web DeskFirst Published Sep 28, 2018, 11:35 AM IST
Highlights

ಕನ್ನಡ ಚಿತ್ರರಂಗದಲ್ಲಿ ಕೋಟಿಗಳ ಕ್ಲಬ್ ಮಾತು ಕೇಳಿ ಬಂದಿದ್ದೇ ಇಲ್ಲ. ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಚಿತ್ರ ಕೂಡ ನೂರು ಕೋಟಿ ದಾಟುತ್ತೇನೆಂದು ಎದೆ ತಟ್ಟಿಕೊಂಡು ಮಾತನಾಡುವಷ್ಟು ಧೈರ್ಯ ಮಾಡಿರಲಿಲ್ಲ. ಈಗ ಎಲ್ಲವೂ ಬದಲಾಗುತ್ತಿದೆ. 

ಬೆಂಗಳೂರು (ಸೆ. 28): ಯಾವುದೇ ವಿಚಾರದಲ್ಲೂ ಕನ್ನಡ ಸಿನಿಮಾಗಳು ಹಿಂದುಳಿದಂತೆ ಕಾಣುತ್ತಿಲ್ಲ. ಹೀಗಾಗಿ ಕನ್ನಡಕ್ಕೂ ನೂರು ಕೋಟಿ ಕ್ಲಬ್ ಮೆನಿಯಾ ಶುರುವಾಗಿದೆ. ಈ ಕ್ಲಬ್ ಪಟ್ಟಿಯಲ್ಲಿರುವ ಕನ್ನಡ ಚಿತ್ರಗಳು ಯಾವುವು? ನೂರು ಕೋಟಿ ಕ್ಲಬ್ ಸೇರುವುದಕ್ಕೆ ಆಯಾ ಚಿತ್ರಗಳಿಗಿರುವ ಕಾರಣಗಳೇನು? ಇಲ್ಲಿದೆ ನೋಡಿ. 

ನಟ ಸಾರ್ವಭೌಮ 

1. ರಣವಿಕ್ರಮ ನಂತರ ಪವನ್ ಒಡೆಯರ್ ಹಾಗೂ ಪುನೀತ್‌ರಾಜ್ ಕುಮಾರ್ ಕಾಂಬಿನೇಷನ್ ಚಿತ್ರವಿದು. ಇಬ್ಬರು ಸಕ್ಸಸ್‌ನಲ್ಲಿರುವ ಜೋಡಿ. ಜತೆಗೆ ರಾಜ ಕುಮಾರ ಚಿತ್ರದ ನಂತರ ಬರಲಿರುವ ಸಿನಿಮಾ ಇದು.

2. ಪುನೀತ್‌ರಾಜ್‌ಕುಮಾರ್ ಎಲ್ಲ ಚಿತ್ರಗಳು ಬೇರೆ ಭಾಷೆಗಳಿಗೂ ಡಬ್ ಆಗುತ್ತವೆ. ಜತೆಗೆ ಟೀವಿ ರೈಟ್ಸ್ ವಿಚಾರದಲ್ಲಿ ಯಾವಾಗಲೂ ಅಪ್ಪು ಚಿತ್ರಗಳು ಬೇಡಿಕೆಯಲ್ಲಿರುತ್ತವೆ.

3.. ಇದು ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರ. ಕನ್ನಡದ ಜತೆಗೆ ಬೇರೆ ಬೇರೆ ಭಾಷೆಗಳಲ್ಲೂ ಚಿತ್ರ ನಿರ್ಮಿಸುತ್ತ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಮಾರುಕಟ್ಟೆ ಹೊಂದಿರುವ ನಿರ್ಮಾಪಕರು.

4. ಮೊದಲ ಬಾರಿಗೆ ಪುನೀತ್ ಹಾರರ್ ಚಿತ್ರ ಮಾಡುತ್ತಿರುವುದು. ಜತೆಗೆ ದೊಡ್ಡ ತಾರಾಗಣ ಚಿತ್ರವಿದು. ಬಹು ಭಾಷಾ ನಟಿ ಅನುಪಮಾ ಪರಮೇಶ್ವರನ್ ಚಿತ್ರದ ನಾಯಕಿಯಾಗಿರುವುದು. ಹಿರಿಯ ನಟಿ ಬಿ  ಸರೋಜದೇವಿ ನಟಿಸಿರುವುದು.

5. ಅದ್ದೂರಿ ನಿರ್ಮಾಣ. ಹೊಸ ರೀತಿಯ ಕತೆ. ಪುನೀತ್ ಅವರ ಇಮೇಜ್‌ಗೆ ಹೊರತಾಗಿರುವ ಭಿನ್ನವಾದ ಸಿನಿಮಾ.

ಅವನೇ ಶ್ರೀ ಮನ್ನಾರಾಯಣ 

1. ಕಿರಿಕ್ ಪಾರ್ಟಿ ಮೂಲಕ ದೊಡ್ಡ ಮಾರುಕಟ್ಟೆಯನ್ನು ಕಂಡ ನಟನ ಚಿತ್ರವಿದು. ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಷನ್‌ನ ಈ ಚಿತ್ರದ ಎಲ್ಲ ರೀತಿಯಬ್ಯುಸಿನೆಸ್ 50 ಕೋಟಿ ಮುಟ್ಟಿತ್ತು.

2. ಈ ಚಿತ್ರದ ಕತೆ ಕೇವಲ ಕನ್ನಡಕ್ಕೆ ಸೀಮಿತವಲ್ಲ. ಚಿತ್ರದ ಟ್ರೇಲರ್, ಲುಕ್ ಹಾಗೂ ಕತೆಯ ಹಿನ್ನೆಲೆ ನೋಡಿದರೆ ಇದು ಉತ್ತರ ಭಾರತವನ್ನೂ ತಟ್ಟುವ ಕತೆಯನ್ನು ಒಳಗೊಂಡಿದೆ.

3. ಓವರ್‌ಸೀಸ್ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ನಟ ರಕ್ಷಿತ್ ಶೆಟ್ಟಿ. ಇವರ ಜತೆಗೆ ಕಾರ್ಪೋರೆಟ್ ಮಾದರಿಯಲ್ಲಿ ಚಿತ್ರಗಳನ್ನು ಮಾರುಕಟ್ಟೆ ಮಾಡುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಜತೆಯಾಗಿರುವುದು.

4. ಹಿಂದಿನ ಚಿತ್ರದ ಗೆಲುವು ಮುಂದಿನ ಚಿತ್ರದ ಮೇಲಿನ ಭರವಸೆ ಹೆಚ್ಚಿಸುತ್ತದೆ. ಅಂಥ ಗೆಲುವಿನ ನಂಬಿಕೆಯನ್ನು ಹೆಚ್ಚು ಹೊತ್ತುಕೊಂಡಿರುವ ಸಿನಿಮಾ.

5. ರಕ್ಷಿತ್ ಪಾತ್ರ. ಪೆಕ್ಯೂಲರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. 

ಕೋಟಿಗೊಬ್ಬ 3

1.ಹಾಲಿವುಡ್ ತಂತ್ರಜ್ಞಾನವನ್ನೂ ಸಹ ಮೀರಿಸುವಂತಹ ಮೇಕಿಂಗ್ ಇರುವ ಸಿನಿಮಾ.

2. ಕೋಟಿಗೊಬ್ಬ  ಎನ್ನುವುದು ತುಂಬಾ ಪ್ರಸಿದ್ಧಿಯಾಗಿರುವ ಟೈಟಲರ್ ಆಗಿರುವುದು. ಈಗಾಗಲೇ ಕೋಟಿಗೊಬ್ಬ 2 ಯಶಸ್ಸು ಆಗಿದೆ. ಅದೇ ಭರವಸೆ ಕೊಂಚ ಹೆಚ್ಚಾಗಿಯೇ ಕೋಟಿಗೊಬ್ಬ 3 ಮೇಲೆ ಇದೆ.

3. ತುಂಬಾ ಗ್ಯಾಪ್ ನಂತರ ಸುದೀಪ್ ಅವರ ಸೋಲೋ ಸಿನಿಮಾ ಬರುತ್ತಿರುವುದು. ಇಂಡಿಯನ್ ನಟ ಎನ್ನುವ ಬ್ರಾಂಡ್ ಸುದೀಪ್ ಅವರ ಮೇಲಿದೆ.

4. ಡಬ್ಬಿಂಗ್, ಟೀವಿ ರೈಟ್ಸ್ ವಿಚಾರದಲ್ಲಿ ಈಗಾಗಲೇ ಕೋಟಿಗೊಬ್ಬ 3 ಚಿತ್ರ 10 ಕೋಟಿಯ ವ್ಯವಹಾರದ ಗಡಿ ದಾಟಿ ಮಾತನಾಡುತ್ತಿರುವುದು.

5. ಹೊಸ ನಿರ್ದೇಶಕನೊಬ್ಬ ಚಿತ್ರ ನಿರ್ದೇಶಿಸಿರುವುದು. ಬೇರೆ ಬೇರೆ ಭಾಷೆಯ ವಿಲನ್ಗಳು ಚಿತ್ರದಲ್ಲಿ ನಟಿಸಿರುವುದು. ಅರ್ಧ ಸಿನಿಮಾ ಪೂರ್ತಿ ಯೂರೋಪ್ನಲ್ಲೇ ಚಿತ್ರೀಕರಣ ಆಗಿರುವುದು. 

ಕೆಜಿಎಫ್ 

1. ಯಶ್ ಅಭಿನಯದಲ್ಲಿ ಬಹು ಭಾಷೆಯಲ್ಲಿ ತೆರೆಗೆ ಕಾಣುತ್ತಿರುವ ಮೊದಲ ಸಿನಿಮಾ ಇದು. ಇದು ತಮಿಳು, ತೆಲುಗು  ಭಾಷೆಯಲ್ಲೂ ಬರುತ್ತಿದ್ದು. ಜತೆಗೆ ನಟ ಯಶ್ ಚಿತ್ರ ತೆರೆಗೆ ಬಂದು ಬದು ದಿನಗಳಾಗಿದ್ದು, ಎಲ್ಲರು ಎದುರು ನೋಡುವಂತಾಗಿದೆ.

2. ಬಹು ದೊಡ್ಡ ಮಾರುಕಟ್ಟೆಯನ್ನು ವ್ಯಾಪಿಸಿರುವ ತಮಿಳು ಚಿತ್ರರಂಗ ಕೆಜಿಎಫ್ ಚಿತ್ರದ ಬಗ್ಗೆ ಹೆಚ್ಚೇ ಕುತೂಹಲದಿಂದ ನೋಡುತ್ತಿದೆ. ಅದಕ್ಕೆ ಕಾರಣ ಈ ಚಿತ್ರದ ಕತೆಯ ಹಿನ್ನೆಲೆ. ತಮಿಳು ಭಾಷೆಯ ಮಾತನಾಡುವವರೇ ಹೆಚ್ಚು ಇರುವ ಕೆಜಿಎಫ್ ಎನ್ನುವ ಊರಿನ ಕತೆ. ಅದನ್ನ ಸಿನಿಮಾದಲ್ಲಿ ಹೇಗೆ ತೋರಿಸುತ್ತಾರೆಂದು ಕಾಯುತ್ತಿದ್ದಾರೆ.

3. ಈ ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದೆ. ಮೊದಲ ಬಾಗ ನವೆಂಬರ್ 16 ಕ್ಕೆ ತೆರೆ ಕಾಣುತ್ತಿದೆ. ಕನ್ನಡದಲ್ಲೇ 300 ಚಿತ್ರಮಂದಿರಗಳನ್ನು ದಾಟಿದರೆ, ಬೇರೆ ಬೇರೆ ಭಾಷೆಯಲ್ಲೂ ಹೆಚ್ಚು ಕಮ್ಮಿ  200 ಕೇಂದ್ರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ ಹೊಂಬಾಳೆ ಫಿಲಮ್ಸ್.

4. ಕಳೆದ ಎರಡು ವರ್ಷಗಳಿಂದ ತಯಾರಾಗುತ್ತಿರುವ ಕನ್ನಡದ ಅತಿ ದೊಡ್ಡ ಬಜೆಟ್‌ನ ಸಿನಿಮಾ. ಹೀಗಾಗಿ ಕೆಜಿಎಫ್‌ನಲ್ಲಿ ಏನಿರುತ್ತದೆ ಎನ್ನುವ ಕುತೂಹಲ ಇದೆ.

5. ಸಿನಿಮಾ ಬಗ್ಗೆ ಪಕ್ಕಾ ಪ್ಲಾನ್ ಮಾಡಿಕೊಂಡು ಕನ್ನಡದ ಆಚೆಗೂ ವಿಸ್ತರಿಸುವಂತೆ ಕತೆ ಕಟ್ಟಿಕೊಡುವ ಪ್ರಶಾಂತ್ ನೀಲ್ ಅವರ ಕನಸಿನ ಚಿತ್ರವಿದು. ಶ್ರೀಮುರಳಿಯಂತವರನ್ನು ತಮ್ಮ ‘ಉಗ್ರಂ’ ಚಿತ್ರದ ಮೂಲಕ ಸ್ಟಾರ್ ಪಟ್ಟ ಕೊಟ್ಟ ನಿರ್ದೇಶಕ ಹಾಗೂ ಯಶಸ್ವಿನ ನಟನ ಕಾಂಬಿನೇಷನ್ ಇರುವ ಸಿನಿಮಾ. 

ಯಜಮಾನ 

1.ಅಪರೂಪದ ಕಾಂಬಿನೇಷನ್ ಚಿತ್ರವಿದು. ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಲಿಂಗ’ ಚಿತ್ರಕ್ಕೆ ಕತೆ ಕೊಟ್ಟವರು. ವಿಷ್ಣುವರ್ಧನ, ಲಲಿತಾ ಚಿತ್ರಗಳ ಮೂಲಕ ಗೆದ್ದ ನಿರ್ದೇಶಕ ಪಿ ಕುಮಾರ್. ಇಂಥ ನಿರ್ದೇಶಕ ದರ್ಶನ್‌ಗೆ ಸಿನಿಮಾ ಮಾಡುತ್ತಿರುವುದರ ಬಗ್ಗೆಯೇ ಕ್ರೇಜ್ ಹೆಚ್ಚಾಗಲು ಕಾರಣ.

2. ಅದ್ದೂರಿ ನಿರ್ಮಾಣದ ಚಿತ್ರ. ಮೀಡಿಯಾ ಹೌಸ್ ಸ್ಟುಡಿಯೋ ಮೂಲಕ ಶೈಲಜ ನಾಗ್ ಹಾಗೂ ಬಿ ಸುರೇಶ್ ಮೊದಲ ಬಾರಿಗೆ ಬಹು ಕೋಟಿ ವೆಚ್ಚದ ಚಿತ್ರವನ್ನು ನಿರ್ಮಿಸಿರುವುದು. 14 ಕ್ಕೂ ಹೆಚ್ಚು ಸೆಟ್‌ಗಳಲ್ಲಿ ಚಿತ್ರೀಕರಣ. ಬೇರೆ ಬೇರೆ ಭಾಷೆಯ ಕಲಾವಿದರು ತೊಡಗಿಸಿಕೊಂಡಿರುವ ಚಿತ್ರ.

3. ಚಿತ್ರದ ಟೈಟಲ್ ಹಾಗೂ ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್‌ನಿಂದಲೇ ಸಿನಿಮಾ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ.

4. ಚಿತ್ರಕ್ಕೆ ಕನ್ನಡೇತರರ ಪ್ರೇಕ್ಷಕರನ್ನೂ ಸೆಳೆಯುವಂತಹ ಕತೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಆಯಿಲ್ ಮಾಫಿಯಾ ಎಂದರೆ ಅದು ಕೇವಲ ರಾಜ್ಯಕ್ಕೆ ಸೀಮಿತವಲ್ಲ. ಅತ್ತ ನಾರ್ತ್ ಇಂಡಿಯಾ ಮಾರುಕಟ್ಟೆಯನ್ನೂ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿದೆ.

5. ತಮಿಳಿನ ನಿರ್ದೇಶಕ, ತೆಲುಗಿನಲ್ಲಿ ಬಹು ಬೇಡಿಕೆಯಲ್ಲಿರುವ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿರುವುದು, ಹಿಂದಿಯ ನಟ ಅನೂಸಿಂಗ್ ಠಾಕೂರ್ ವಿಲನ್ ಪಾತ್ರ ಮಾಡಿರುವುದು. ಕನ್ನಡದ ಹೀರೋ. ಹೀಗೆ ನಾಲ್ಕು ಭಾಷೆಗಳ ಸಂಗಮದಂತಿರುವ ಚಿತ್ರವಿದು. ಟೀವಿ ರೈಟ್ಸ್ ವ್ಯವಹಾರವೇ ಕೋಟಿಗಳ ಗಡಿ ದಾಟುತ್ತಿದೆ.

- ಆರ್.ಕೇಶವಮೂರ್ತಿ 

click me!