
ಬೆಂಗಳೂರು (ಜು. 18): ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಲಾಂಚ್ ಆಗುತ್ತಿರುವ ‘ಅಮರ್’ ಚಿತ್ರಕ್ಕೆ ಕಳೆದ ಒಂದು ವಾರದಿಂದ ಬೆಂಗಳೂರಿನ ಅಚಾರ್ಯ ಕಾಲೇಜಿನ ಕ್ಯಾಂಪಸ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ತಾನ್ಯಾ ಹೋಪ್ ಈ ಚಿತ್ರದಲ್ಲಿ ಮಾಡುತ್ತಿರುವ ಪಾತ್ರ ಯಾವುದು ಎಂಬ ಕುತೂಹಲಕ್ಕೆ ಈಗ ಸಿಕ್ಕಿರುವ ಉತ್ತರ ಬೈಕ್ ರೇಸರ್.
ಈ ಚಿತ್ರದಲ್ಲಿ ನಾಯಕ ಅಭಿಷೇಕ್ ಅಂಬರೀಶ್ ಮತ್ತು ನಾಯಕಿ ತಾನ್ಯಾ ಹೋಪ್ ಇಬ್ಬರೂ ಬೈಕ್ ರೇಸರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಈ ಚಿತ್ರದಲ್ಲಿ ಸುಮಾರು 15 ಲಕ್ಷ ಬೆಲೆಯ ಡುಕಾಟಿ 959 ಬೈಕ್ ಓಡಿಸುತ್ತಿದ್ದಾರೆ. ತನ್ನ ಸ್ನೇಹಿತರ ಸಹಾಯದಿಂದ ಈಗಷ್ಟೇ ಡುಕಾಟಿ ಓಡಿಸಲು ಕಲಿತಿರುವ ತಾನ್ಯಾ, ಇದೀಗ ಡುಕಾಟಿ ಬೈಕನ್ನು ಪಳಗಿಸಿಕೊಂಡಿದ್ದಾರೆ.
ಈ ಬಗ್ಗೆ ನಿರ್ದೇಶಕ ನಾಗಶೇಖರ್ ಹೇಳುವುದೇನು?
‘ನಮ್ಮ ಚಿತ್ರದ ನಾಯಕ ಮತ್ತು ನಾಯಕಿ ಇಬ್ಬರು ಬೈಕ್ ರೇಸರ್‌ಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ತಾನ್ಯಾ ಅವರಿಗೆ ಬೈಕ್ ರೇಸಿಂಗ್ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ಕಳೆದ ಒಂದು ವಾರದಿಂದ ಚಿತ್ರೀಕರಣ ನಡೆಯುತ್ತಿದೆ. ದೊಡ್ಡ ಸ್ಟಾರ್ ನಟನ ಪುತ್ರನನ್ನು ಲಾಂಚ್ ಮಾಡುತ್ತಿದ್ದೇನೆಂಬ ಒತ್ತಡ ನನ್ನ ಮೇಲಿಲ್ಲ. ಯಾಕೆಂದರೆ ಅಭಿಷೇಕ್ ಎಲ್ಲಾ ರೀತಿಯಲ್ಲೂ ತಯಾರಿ ನಡೆಸಿಯೇ ಬಂದಿದ್ದಾರೆ. ಹೀಗಾಗಿ ಅವರು ಪಾತ್ರ ಮತ್ತು ನಾನು ಹೇಳುವ ದೃಶ್ಯಗಳನ್ನು ಬೇಗ ಅರ್ಥಮಾಡಿಕೊಂಡು ನಟಿಸುತ್ತಿದ್ದಾರೆ.
ತಾನ್ಯಾ ಕೂಡ ಬೈಕ್ ರೇಸಿಂಗ್ ಕಲಿಯಬೇಕು ಎಂದಾಗ ಮರು ಮಾತನಾಡದೆ ಬೈಕ್ ರೈಡಿಂಗ್ ಕಲಿತಿದ್ದಾರೆ. ಪಾತ್ರಕ್ಕೆ ಎಷ್ಟು ಬೇಕೋ ಅಷ್ಟನ್ನು ಕಲಿತು ಕ್ಯಾಮೆರಾ ಮುಂದೆ ಬಂದಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ನಾಗಶೇಖರ್. ಪಾತ್ರಗಳಿಗೆ ಬೇಕಾದಂತೆ ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಮಾಡುವುದು, ಸಾಹಸಗಳನ್ನು ಕಲಿಯುವುದು ಕೇವಲ ನಟರಿಗೆ ಮಾತ್ರ ಈಗ ಸೀಮಿತವಾಗಿಲ್ಲ. ನಟಿಯರು ಕೂಡ ಈ ವಿಚಾರದಲ್ಲಿ ನಾಯಕ ನಟರಷ್ಟೆ ಶ್ರಮ ಹಾಕುತ್ತಿದ್ದಾರೆ ಅನ್ನುವುದನ್ನು ಈ ಕತೆ ಸಾಬೀತು ಮಾಡಿದೆ.
ಇತ್ತೀಚೆಗೆ ಶಾನ್ವಿ ಶ್ರೀವಾಸ್ತವ ಕುದುರೆ ಸವಾರಿ ಕಲಿತಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು. ಸದ್ಯ ತಾನ್ಯಾ ಹೋಪ್ ಎರಡು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಒಂದು ಕಡೆ ‘ಅಮರ್’ ಚಿತ್ರದಲ್ಲಿ ಪಾತ್ರ ಮಾಡುತ್ತಿರುವಾಗಲೇ ಮತ್ತೊಂದಡೆ ನಟ ದರ್ಶನ್ ಅವರೊಂದಿಗೆ ‘ಯಜಮಾನ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಪಿ ಕುಮಾರ್ ನಿರ್ದೇಶನದ, ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಮಾಣದ ಈ ಚಿತ್ರಕ್ಕೆ ಆಗಾಗಲೇ ಶೇ.70 ಭಾಗ ಚಿತ್ರೀಕರಣ ಮುಗಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.