
ಶಾರುಖ್ ಖಾನ್ ಹಾಗೂ ಗೌರಿ ಖಾನ್ ಕಿರಿಯ ಪುತ್ರ ಅಬ್ರಾಮ್ ಹಾಗೂ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ರೈ ಬಚ್ಚನ್ ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಅವರ ವೀಡಿಯೋವೊಂದು ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಈ ಇಬ್ಬರೂ ಅಂಬಾನಿ ಒಡೆತನದ ಧೀರುಭಾಯ್ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿದ್ದು, ಇತ್ತೀಚೆಗೆ ಶಾಲೆಯ ವಾರ್ಷಿಕೋತ್ಸವದ ವೇಳೆ ಇಬ್ಬರೂ ಕೂಡ ಸ್ಟೇಜ್ ಮೇಲೆ ನಾಟಕ ಪ್ರದರ್ಶನ ಮಾಡಿ ಭೇಷ್ ಎನಿಸಿಕೊಂಡಿದ್ದರು. ಆರಾಧ್ಯಾ ಬಚ್ಚನ್ ನಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಶ್ಲಾಘನೆ ವ್ಯಕ್ತವಾಗಿತ್ತು.
ಈಗ ಇದೇ ಕಾರ್ಯಕ್ರಮದಲ್ಲಿ ಆರಾಧ್ಯಾ ಬಚ್ಚನ್ ಶಾರುಖ್ ಖಾನ್ ಕಿರಿಯ ಮಗ ಅಬ್‌ರಾಮ್‌ನನ್ನು ತನ್ನ ಸ್ವಂತ ತಮ್ಮನಂತೆ ತಬ್ಬಿಕೊಂಡು ಮುದ್ದು ಮಾಡುವ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಕುತೂಹಲಕಾರಿಯಾಗಿ ಈ ವೀಡಿಯೋ ಅಭಿಮಾನಿಗಳಿಗೆ ಐಶ್ವರ್ಯಾ ರೈ ಹಾಗೂ ಶಾರುಖ್ ಖಾನ್ ಒಡಹುಟ್ಟಿದವರಾಗಿ ನಟಿಸಿದ್ದ ಜೋಶ್ ಸಿನಿಮಾವನ್ನು ನೆನಪು ಮಾಡಿದೆ.
ಐಶ್ವರ್ಯಾ ರೈಗೆ ಅರ್ಪಿಸಲ್ಪಟ್ಟಿರುವ ಫ್ಯಾನ್ ಪೇಜೊಂದು ಈಗ ಅಬ್ ರಾಮ್ ಆರಾಧ್ಯ ಅವರ ಈ ಹೊಸ ವೀಡಿಯೋ ಜೊತೆ ಶಾರುಖ್ ಹಾಗೂ ಐಶ್ವರ್ಯಾ ನಟಿಸಿದ್ದ ಜೋಶ್ ಸಿನಿಮಾದ ತುಣುಕೊಂದನ್ನು ಸಂಯೋಜಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಇದರಲ್ಲಿ ಒಂದು ಭಾಗದಲ್ಲಿ ಅಬ್ರಾಮ್ ಆರಾಧ್ಯ ಅವರ ವೀಡಿಯೋ ತುಣುಕಿದ್ದರೆ, ಮತ್ತೊಂದು ವೀಡಿಯೋದಲ್ಲಿ ಶಾರುಖ್ ಐಶ್ವರ್ಯಾ ಅವರ ಸಿನಿಮಾದ ತುಣುಕಿದೆ.
ಇನ್ನು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರು ಹಾಗೂ ಪುತ್ರಿ ಸುಹಾನಾ ಖಾನ್ ಅತ್ತೆ ಸವಿತಾ ಚಿಬ್ಬಿರ್ ಅವರು ಕೂಡ ಈ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಮಗನ ಪ್ರದರ್ಶನಕ್ಕೆ ಎಲ್ಲಾ ಪೋಷಕರಂತೆ ತಾವು ಕೂಡ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತಿದೆ. ಮತ್ತೊಂದು ವೀಡಿಯೋದಲ್ಲಿ ಐಶ್ವರ್ಯಾ ರೈ ಕೂಡ ತಮ್ಮ ಪುತ್ರಿ ನಟನೆ ಮಾಡುತ್ತಿರುವ ದೃಶ್ಯವನ್ನು ಫೋನ್‌ನಲ್ಲಿ ಸೆರೆ ಹಿಡಿಯುತ್ತಾ ಮಗಳ ಬಗ್ಗೆ ಹೆಮ್ಮೆಯಿಂದ ಖುಷಿ ಪಡುತ್ತಿರುವುದನ್ನು ಇನ್ನೊಂದು ವೀಡಿಯೋದಲ್ಲಿ ಕಾಣಬಹುದಾಗಿದೆ.
ಐಶ್ವರ್ಯಾ ಪುತ್ರಿ ನಟಿಸುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಅನೇಕರು ಆಕೆಯ ನಟನೆಯನ್ನು ಕೊಂಡಾಡಿ ಆರ್ಕಿಸ್ ಸಿನಿಮಾದಲ್ಲಿ ನಟಿಸಿದ್ದ ಸ್ಟಾರ್ ಕಿಡ್‌ಗಳನ್ನು ಖಂಡಿಸಿದ್ದರು. ಜೊತೆಗೆ ಅಮಿತಾಭ್ ಬಚ್ಚನ್ ಕೂಡ ತಮ್ಮ ಪ್ರೀತಿಯ ಮೊಮ್ಮಗಳ ನಟನೆಗೆ ಹೆಮ್ಮೆ ವ್ಯಕ್ತಪಡಿಸಿ ಆಕೆ ತುಂಬಾ ಸಹಜವಾಗಿ ನಟಿಸಿದ್ದಾಳೆ ಎಂದು ಕೊಂಡಾಡಿದ್ದರು. .
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.