ತೇಜಸ್ವಿನಿ ಹರಕೆ ಕುರಿ ಆದದ್ದು ಹೀಗೆ...

By Web DeskFirst Published Mar 27, 2019, 11:49 AM IST
Highlights

ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತ್‌ಕುಮಾರ್ ಬದಲು ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದ್ದು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ. ತೇಜಸ್ವಿನಿಗೆ ಟಿಕೆಟ್ ಪಕ್ಕಾ ಎಂದು ಕೊನೆವರೆಗೂ ಹೇಳಲಾಗಿದ್ದು ಅಂತಿಮ ಕ್ಷಣದಲ್ಲಿ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದ್ದು ಯಾಕೆ ಎಂಬ ಕುತೂಹಲಗಳಿಗೆ ಇಲ್ಲಿದೆ ಉತ್ತರ. 

ಬೆಂಗಳೂರು (ಮಾ. 27):  ಅನಂತಕುಮಾರ್ ಪತ್ನಿ ತೇಜಸ್ವಿನಿಗೆ ಕೊನೆಗೂ ಟಿಕೆಟ್ ತಪ್ಪಿದ್ದು, ಇದಕ್ಕೆ ಮುಖ್ಯ ಕಾರಣ ಸ್ಥಳೀಯ ಆರ್‌ಎಸ್‌ಎಸ್ ಎನ್ನುವುದು ವಿಶೇಷ. ರಾಜ್ಯ ಕೋರ್ ಕಮಿಟಿ ಸದಸ್ಯರು ಅಮಿತ್ ಶಾ ಅವರನ್ನು ದಿಲ್ಲಿಯಲ್ಲಿ ಭೇಟಿ ಆದಾಗ ಬೆಂಗಳೂರು ದಕ್ಷಿಣದ ವಿಷಯ ಬಂದಾಗ ರಾಷ್ಟ್ರೀಯ ಅಧ್ಯಕ್ಷರು, ‘ಈ ಕ್ಷೇತ್ರದ ಬಗ್ಗೆ ಚರ್ಚೆ ಬೇಡ, ನಾವು ನಿರ್ಣಯಿಸುತ್ತೇವೆ’ ಎಂದು ಯಾರ ಅಭಿಪ್ರಾಯ ಹೇಳಲೂ ಅವಕಾಶವೇ ನೀಡಲಿಲ್ಲ.

"

ತೇಜಸ್ವಿನಿಗೆ ಟಿಕೆಟ್‌ ತಪ್ಪಿಸಲು ಬಿಜೆಪಿ ವರಿಷ್ಠರ 'ಮೋದಿ' ತಂತ್ರ!

ಅವತ್ತೇ ಮಧ್ಯರಾತ್ರಿ ಕೇಂದ್ರ ಚುನಾವಣಾ ಸಮಿತಿ ಎದುರು ಬಂದಾಗ ಕೂಡ ಶಾ ‘ಇಸ್ ಪರ್ ಚರ್ಚಾ ನಹೀ ಹೋಗಾ, ಹಮ್ ತೈರ್ ಕರೇಂಗೆ’ ಎಂದು ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ರನ್ನು ಸುಮ್ಮನಾಗಿಸಿದರಂತೆ. ಆದರೆ ರಾಜ್ಯ ನಾಯಕರು, ವರಿಷ್ಠರು ಈಗಾಗಲೇ ತೇಜಸ್ವಿನಿ ಹೆಸರನ್ನು ನಿರ್ಧಾರ ಮಾಡಿದ್ದಾರೆ ಅನ್ನಿಸುತ್ತದೆ, ವಿನಾಕಾರಣ ಚರ್ಚೆ ಬೇಡ ಎಂದು ಹೇಳುತ್ತಿದ್ದಾರೆ ಎಂದುಕೊಂಡು ಬೆಂಗಳೂರಿಗೆ ಹೋಗಿದ್ದಾರೆ.

ಆದರೆ ಮಾರ್ಚ್ 21 ರ ಸಂಜೆ ಮೊದಲ ಪಟ್ಟಿಯಲ್ಲಿ ತೇಜಸ್ವಿನಿ ಹೆಸರು ಇರದೇ ಇರುವುದು ಗೊತ್ತಾದಾಗಲೇ ಯಡಿಯೂರಪ್ಪರಿಂದ ಹಿಡಿದು ರಾಜನಾಥ್ ವರೆಗೆ ತಮ್ಮ ಬೆನ್ನ ಹಿಂದೆ ಏನೋ ಪಾಲಿಟಿಕ್ಸ್ ನಡೆದಿದೆ ಎಂದು ಗೊತ್ತಾಗಿದ್ದು.

ಶಿವಭಕ್ತ ರಾಹುಲ್‌ ಆಯ್ತು, ಈಗ ಪ್ರಿಯಾಂಕಾ ರಾಮಭಕ್ತೆ!

ಪಾಲಿಟಿಕ್ಸ್ ಆದರೂ ಏನು?

ಬೆಂಗಳೂರಿನಲ್ಲಿ ತೇಜಸ್ವಿನಿ ಹೆಸರು ಬಿಜೆಪಿ ವಲಯದಲ್ಲಿ ಓಡುತ್ತಿದ್ದ ಸಂದರ್ಭದಲ್ಲಿಯೇ ಆರ್‌ಎಸ್‌ಎಸ್‌ನ ಕರ್ನಾಟಕ ಇನ್‌ಚಾರ್ಜ್ ಸಹ ಕಾರ್ಯವಾಹ ಮುಕುಂದ್ ಮತ್ತು ಬಿಜೆಪಿಯಲ್ಲಿರುವ ಸಂಘ ಪ್ರಚಾರಕ ಸಂತೋಷ್, ತೇಜಸ್ವಿನಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಬೇಡ ಎಂದು ನಿರ್ಧರಿಸಿದ್ದರು. ಮುಕುಂದರನ್ನು ದಿಲ್ಲಿಗೆ ಕರೆದುಕೊಂಡು ಹೋಗಿ ಅಮಿತ್ ಶಾರನ್ನು ಭೇಟಿ ಮಾಡಿದ್ದ ಸಂತೋಷ್, ತೇಜಸ್ವಿನಿಗೆ ಬೇಡ, ಇದು ಸಂಘದ ನಿರ್ಣಯ ಎಂದು ಹೇಳಿಸಿದ್ದರು. ಬದಲಿ ಯಾರು ಎಂದು ಅಮಿತ್ ಶಾ ಕೇಳಿದಾಗ ಮುಕುಂದರು ಹೇಳಿದ ಒಂದೇ ಹೆಸರು, 27 ವರ್ಷದ ತೇಜಸ್ವಿ ಸೂರ್ಯರದ್ದು.

ಇದು ತೆರೆಯ ಹಿಂದೆ ನಡೆದಿದ್ದರೂ ಕೂಡ ಯಾರಿಗೂ ಗೊತ್ತಾಗದ ರೀತಿಯಲ್ಲಿ ರಹಸ್ಯ ಕಾಪಾಡಿಕೊಳ್ಳಲಾಗಿತ್ತು. ರಾಜನಾಥ್ ಸಿಂಗ್, ಶಿವರಾಜ್ ಸಿಂಗ್, ಸುಷ್ಮಾ, ಗಡ್ಕರಿ, ತೇಜಸ್ವಿನಿ ಬಗ್ಗೆ ಅಮಿತ್ ಶಾ ಬಳಿ ಹೋಗಿ ಮಾತನಾಡಿದರೂ ಅವರು ಯಾರ ಬಳಿಯೂ ಟಿಕೆಟ್ ಕೊಡಲ್ಲ ಎಂದು ಹೇಳಲಿಲ್ಲ. ಆದರೆ ಅಮಿತ್ ಶಾ, ಸಂಘದ ಅಭಿಪ್ರಾಯವನ್ನು ಮೋದಿ ಸಾಹೇಬರಿಗೆ ಹೇಳಿ ಆಗಿತ್ತು ಅನ್ನಿಸುತ್ತದೆ. ಹೀಗಾಗಿ ತೇಜಸ್ವಿನಿ ಅವರಿಗೆ ದರ್ಶನ ಭಾಗ್ಯವನ್ನು ಕೂಡ ಅಮಿತ್ ಶಾ
ನೀಡಲಿಲ್ಲ. ತೇಜಸ್ವಿನಿ ಫೋನ್ ಮಾಡಿದಾಗೊಮ್ಮೆ ನೋಡುತ್ತೇನೆ ಎಂದರೇ ಹೊರತು, ‘ಇಲ್ಲ’ ಅನ್ನಲಿಲ್ಲ.

ಮೈಸೂರಲ್ಲಿ ಅತೀ ಹೆಚ್ಚು ನಾಮಪತ್ರ ಸಲ್ಲಿಕೆ

ಕೊನೆಯ ದಿನದ ಆಟ

ತೇಜಸ್ವಿನಿ ಅವರಿಗೆ ಟಿಕೆಟ್ ಬೇಡ ಎಂದು ಸ್ಥಳೀಯ ಸಂಘ ಮತ್ತು ಅಮಿತ್ ಶಾ ಮೊದಲೇ ನಿರ್ಧರಿಸಿ ಆಗಿತ್ತು. ಆದರೆ ಕೊನೆ ದಿನದವರೆಗೂ ಎಲ್ಲಿಯೂ ತೇಜಸ್ವಿನಿ ಅವರಿಗೆ ಕೊಡಲ್ಲ ಎಂದು ಹೇಳಲಿಲ್ಲ. ಇದಕ್ಕೆ ಮೂರು ಕಾರಣಗಳು; ಒಂದು ವೇಳೆ ಮೊದಲೇ ತೇಜಸ್ವಿನಿಗೆ ಇಲ್ಲ ಎಂದರೆ, ಪ್ರಭಾವಿ ಒಕ್ಕಲಿಗ ಆರ್.ಅಶೋಕ್ ತನಗೆ ಅಥವಾ ತನ್ನ ಅಭ್ಯರ್ಥಿಗೆ ಕೊಡಿ ಎಂದು ಎದ್ದು ಕುಳಿತರೆ ಎಂಬ ಭಯ.

2 ನೆಯದು, ತೇಜಸ್ವಿನಿ ಇಲ್ಲ ಎಂದು ಮೊದಲೇ ತಿಳಿದರೆ ಕಾಂಗ್ರೆಸ್ ಎಲ್ಲಿ ರಾಮಲಿಂಗಾ ರೆಡ್ಡಿ ಅವರನ್ನು ಅಭ್ಯರ್ಥಿ ಮಾಡುತ್ತಾರೋ ಎಂಬ ಭಯ. 3 ನೆಯದು, ಎಲ್ಲಿ ತೇಜಸ್ವಿನಿ ಬಂಡಾಯ ಏಳುತ್ತಾರೋ ಎಂಬ ಆತಂಕ. ಹೀಗಾಗಿ ಕೊನೆಯ ದಿನ ಮಧ್ಯರಾತ್ರಿ 1 ಗಂಟೆವರೆಗೂ ತೇಜಸ್ವಿನಿ ಸ್ಪರ್ಧೆಯಲ್ಲಿ ಇದ್ದಾರೆ ಎಂಬಂತೆ ಬಿಂಬಿಸಿ ಕೊನೆಗೆ ಮಧ್ಯರಾತ್ರಿ ಧಿಡೀರನೆ ತೇಜಸ್ವಿ ಸೂರ್ಯರಿಗೆ ಟಿಕೆಟ್ ಘೋಷಿಸಲಾಯಿತು.

ಸುಮಲತಾಗೆ ಸಿಕ್ಕಿತು ಮತ್ತೊಂದು ಸಪೋರ್ಟ್

ಅಲ್ಲಿಯವರೆಗೆ ಬಿಜೆಪಿ ನಾಯಕರು ಬಂಡಾಯ ಏಳದ ಸ್ಥಿತಿಯಲ್ಲಿದ್ದರೆ, ಕಾಂಗ್ರೆಸ್ ಮಾತೆತ್ತಿದ್ದರೆ ಮೋದಿಯನ್ನು ಬಯ್ಯುವ ಹರಿಪ್ರಸಾದರನ್ನು ಟಿಕೆಟ್ ನೀಡಿ ಕಣಕ್ಕೆ ಇಳಿಸಿತ್ತು. ನೇರವಾಗಿ ಹೇಳೋದಾದರೆ ಆರ್‌ಎಸ್ ಎಸ್ ತನ್ನ ಮಾತಿನಿಂದ ಉದ್ಭವ ಆಗಲಿರುವ ಹೊಸ ನಾಯಕನ ರಂಗ ಪ್ರವೇಶಕ್ಕಾಗಿ, 22 ವರ್ಷ ಸಂಸದರಾಗಿದ್ದ, ಹಳೆಯ ನಾಯಕನ, ಏನೂ ರಾಜಕೀಯ ಅರಿಯದ ಪತ್ನಿಯ ಮುಗ್ಧತೆಯನ್ನು ದಾಳವಾಗಿ ಬಳಸಿಕೊಂಡಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

ಸಂತೋಷ್‌ಗೇನು ಲಾಭ?

ಅನಂತ ಕುಮಾರ್ ತೀರಿಕೊಂಡ ಮೇಲೆ ಇವತ್ತು ಅಮಿತ್ ಶಾರಿಗೆ ಮನವರಿಕೆ ಮಾಡಬಲ್ಲ ಶಕ್ತಿ, ಸಾಮೀಪ್ಯ, ವಿಶ್ವಾಸ ಇರೋದು ಯಡಿಯೂರಪ್ಪ ಮತ್ತು ಸಂತೋಷ ಇಬ್ಬರಿಗೆ ಮಾತ್ರ. ಶೋಭಾ ಮತ್ತು ಬಸವರಾಜ್‌ಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಶಕ್ತಿವ್ಯಯ ಮಾಡಿದ್ದರು. ಸಂತೋಷ್ ಆಪ್ತ ನಳಿನ್ ಕಟೀಲು ಟಿಕೆಟ್ ತಪ್ಪಿಸಲು ಯಡಿಯೂರಪ್ಪ ಸಜ್ಜಾಗಿದ್ದರಾದರೂ, ಎಲ್ಲಿ ಶೋಭಾರಿಗೆ ತೊಂದರೆ ಆದೀತು ಎಂದು ಸುಮ್ಮನಾದರು. ಆದರೆ ಹಿಂದೆ ಯಡಿಯೂರಪ್ಪನವರಿಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ತೊಂದರೆ ಕೊಡಲು ಹೋಗಿ ಕೈಸುಟ್ಟು ಕೊಂಡಿದ್ದ ಸಂತೋಷ್, ಈ ಬಾರಿ ಪಕ್ಕಾ ಪ್ಲಾನ್ ಜೊತೆಗೆ ತನ್ನ ಬಹುಕಾಲದ ಆರ್‌ಎಸ್‌ಎಸ್ ಮಿತ್ರ ಮುಕುಂದ್ ಜೊತೆಗೆ ಹೋಗಿ ನಂಬರ್ ೨ ಅಮಿತ್ ಶಾರನ್ನು ಮನವೊಲಿಸಿದ್ದರು.

ರಜೆಯಲ್ಲಿದ್ದರೂ ಮನೆಬಿಟ್ಟು ಸೇನೆ ಸೇರಿಕೊಂಡ ಕಮಾಂಡರ್‌ ಅಭಿನಂದನ್‌

ಹೊರಗಡೆ ಶೋಭಾರಿಗೆ ವಿರೋಧ ಚರ್ಚೆ ಆಯಿತಾದರೂ, ಯಾವುದೇ ಚರ್ಚೆ ಕೂಡ ಆಗದೇ ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಟಿಕೆಟ್ ತಪ್ಪಿಸಲಾಗಿತ್ತು. ರಾಜ್ಯ ಬಿಜೆಪಿಯ ದೊಡ್ಡ ನಾಯಕರಾಗಿದ್ದ ಅನಂತ ಕುಮಾರ್ ಪತ್ನಿಯ ಟಿಕೆಟ್ ತಪ್ಪಿಸಿ ತಮ್ಮ 27 ವರ್ಷದ ಶಿಷ್ಯನಿಗೆ ಕೊಡಿಸಿ, ಸಂತೋಷ್ ದಿಲ್ಲಿಯಲ್ಲಿ ತಮ್ಮ ಪ್ರಭಾವ ಏನು ಎಂದು ರಾಜ್ಯ ಬಿಜೆಪಿಗೆ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ.

ರಾಜ್ಯ ನಾಯಕರಿಗೆ ಕ್ಯಾರೇ ಅನ್ನದೆ ಮೋದಿ ಮತ್ತು ಶಾ ನನ್ನ ಮಾತು ಕೇಳುತ್ತಾರೆ. ಹೀಗಾಗಿ ಮುಂದೆ ಯಡಿಯೂರಪ್ಪರನ್ನು ಅಧ್ಯಕ್ಷ ಸ್ಥಾನ ದಿಂದ ಕೆಳಗಿಳಿಸಿದರೆ ನಡೆಯುವುದು ನನ್ನದೇ ಮಾತು ಎಂದು ಸೂಚ್ಯ ವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ದೊಡ್ಡ ಮಹತ್ವಾಕಾಂಕ್ಷೆಯ ಆಟದಲ್ಲಿ ತೇಜಸ್ವಿ ಸೂರ್ಯ ಅಕಸ್ಮಾತ್ ಲಾಭಾರ್ಥಿ ಆದರೆ ತೇಜಸ್ವಿನಿ ಹರಕೆಯ ಕುರಿ ಅಷ್ಟೇ.

ಚುನಾವಣಾ ಕಣಕ್ಕೆ ಪರ್ರಿಕರ್‌ ಪುತ್ರ ಉತ್ಪಲ್? ತನ್ನ ನಿಯಮ ತಾನೇ ಉಲ್ಲಂಘಿಸುತ್ತಾ BJP?

ಅನಂತ ದುಃಖದ ದಿನಗಳು

ಅನಂತ ಕುಮಾರ್ ಬದುಕಿದ್ದಾಗ ದಿಲ್ಲಿಯಲ್ಲಿ ಪತ್ರಕರ್ತರು ನಿಮ್ಮ ಅತ್ಯಂತ ದುಃಖದ ದಿನಗಳು ಯಾವುವು ಎಂದು ಕೇಳಿದಾಗ, ‘2006 ರ ನಂತರ ಮೂರು ವರ್ಷ ಆರ್‌ಎಸ್‌ಎಸ್ ನನ್ನನ್ನು ಕರ್ನಾಟಕದಲ್ಲಿ ಯಾವುದೇ ಸಭೆಗೆ ಕರೆಯುತ್ತಿರಲಿಲ್ಲ. ನಾನು ಸಂಘ ಪರಿವಾರದ ಕೆಲಸಕ್ಕೆಂದೇ ಮನೆಯಿಂದ ಹೊರಗೆ ಬಿದ್ದವನು. ಆದರೆ ಅವರೇ ದೂರ ಇಟ್ಟಿದ್ದು ಬೇಸರ ಆಗಿತ್ತು’ ಎಂದು ಹೇಳಿಕೊಂಡಿದ್ದರು.

ಗಮನಿಸಲೇಬೇಕಾದ ವಿಷಯ ಏನೆಂದರೆ, ಆಗ ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕ ಆಗಿದ್ದವರು ಮುಕುಂದರಾದರೆ, ಆಗಷ್ಟೇ ಸಂಘದಿಂದ ಬಿಜೆಪಿಗೆ ಬಂದು ಸಂತೋಷ್ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿದ್ದರು. ಆಗ ಅನಂತರನ್ನು ದೂರವಿಟ್ಟ ಇಬ್ಬರು ಪ್ರಚಾರಕರೇ ಈಗ ಅವರ ಪತ್ನಿಗೆ ಟಿಕೆಟ್ ತಪ್ಪಿಸಿರುವುದು ಕಾಕತಾಳೀಯ. 

- ಪ್ರಶಾಂತ್ ನಾತು, ಸುವರ್ಣನ್ಯೂಸ್ ದೆಹಲಿ, ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ  ಕ್ಲಿಕ್ ಮಾಡಿ 

click me!