ಸುಮಲತಾಗೆ ಸಿಕ್ಕಿತು ಮತ್ತೊಂದು ಸಪೋರ್ಟ್

By Web DeskFirst Published Mar 27, 2019, 11:23 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದ್ದು, ಇದೀಗ ಸುಮಲತಾಗೆ ಬಿಜೆಪಿ ಬೆಂಬಲ ಬೆನ್ನಲ್ಲೇ ಕರ್ನಾಟಕ ರೈತ ಸಂಘವೂ ಕೂಡ ಬೆಂಬಲ ನೀಡಿದೆ. 

ಮಂಡ್ಯ :  ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಬಿಜೆಪಿ ಆಯ್ತು, ಈಗ ರೈತ ಸಂಘ ಕೂಡ ಬೆಂಬಲ ಘೋಷಿಸಿದೆ. ಸ್ವಾಭಿಮಾನ ಮಂಡ್ಯದ ಉಳಿವಿಗಾಗಿ ಹೊರಗಿನವರು ಬೇಡ ಎಂಬುದು ನಮ್ಮ ವಾದ. ಈ ಕಾರಣಕ್ಕಾಗಿ ಮಂಡ್ಯದ ಸೊಸೆ ಸುಮಲತಾ ಅವರಿಗೆ ರೈತಸಂಘದ ಬೆಂಬಲ ನೀಡಿದ್ದೇವೆ. ಆಕೆ ನಮ್ಮೂರಿನ ಸೊಸೆ ಎಂಬ ಹೆಮ್ಮೆಯೊಂದಿಗೆ ಕಣಕ್ಕೆ ಇಳಿಸಿದ್ದೇವೆ ಎಂದು ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುಮಲತಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಕಟಿಸಿದ ಸುನೀತಾ ಪುಟ್ಟಣ್ಣಯ್ಯ, ಸುಮಲತಾ ಅವರಿಗೆ ರೈತ ಸಂಘ ಬೆಂಬಲ ನೀಡಿರುವುದಕ್ಕೆ ದಾಖಲೆಯಾಗಿ ಬೆಂಬಲ ಪತ್ರ ನೀಡಿದ್ದೇನೆ. ಮಂಡ್ಯ ಜಿಲ್ಲೆಯಲ್ಲಿ ಕೆ.ವಿ.ಶಂಕರಗೌಡ, ಜಿ.ಮಾದೇಗೌಡ, ಎಚ್‌.ಡಿ.ಚೌಡಯ್ಯ ಅವರಂಥ ಸಾಕಷ್ಟು ನಾಯಕರು ಜನ, ಜಿಲ್ಲೆಗಾಗಿ ದುಡಿದಿದ್ದಾರೆ. ಇಂಥವರ ನಡುವೆ ಹೊರಗಿನವರ ಅವಶ್ಯಕತೆ ಮಂಡ್ಯಕ್ಕಿಲ್ಲ ಎಂದು ಹೇಳಿದರು.

ಚುನಾವಣೆ ಬಂದಾಗಲಷ್ಟೇ ರಾಜಕಾರಣಿಗಳು ಸಾಲಮನ್ನಾ ಬಗ್ಗೆ ಮಾತನಾಡುತ್ತಾರೆ. ರೈತರ ಬಗ್ಗೆ ಅತೀವ ಕಾಳಜಿ ತೋರಿಸುತ್ತಾರೆ. ಆದರೆ, ಅಧಿಕಾರಕ್ಕೆ ಬಂದಾಗ ಏನೂ ಮಾಡುವುದಿಲ್ಲ. ರೈತರ ದಾರಿತಪ್ಪಿಸುವ ಕೆಲಸವನ್ನು ನಿಯತ್ತಾಗಿ ಮಾಡುತ್ತಾರೆ. ಎಲ್ಲ ಪಕ್ಷಗಳಲ್ಲೂ ರೈತರಿದ್ದಾರೆ ಹೀಗಿದ್ದರೂ ರಾಜಕೀಯ ಪಕ್ಷಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಮ್ಯಾಗೂ ಬೆಂಬಲ ನೀಡಿತ್ತು:  ಪುಟ್ಟಣ್ಣಯ್ಯ ಅವರು ಇದ್ದಾಗ ರೈತ ಸಂಘವು ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಮ್ಯಾ ಅವರಿಗೂ ಬೆಂಬಲ ನೀಡಿತ್ತು.  ಸುಮಲತಾ ಅಂಬರೀಶ್ ಅವರಿಗೆ ರೈತ ಸಂಘದ ಮುಖಂಡರಾದ ಸುನೀತಾ ಪುಟ್ಟಣ್ಣಯ್ಯ ಬೆಂಬಲ ಘೋಷಿಸಿದರು.

click me!