ಪಾಠ ಮಾಡೋದು ಮಾತ್ರ ಅಲ್ಲ ಮಕ್ಕಳ ಹಲ್ಲೂ ಕೀಳ್ತಾರೆ ಈ ವಂದನಾ ಟೀಚರ್

By Anusha Kb  |  First Published Jul 18, 2023, 3:05 PM IST

ಸಾಮಾಜಿಕ ಜಾಲತಾಣ ಅದರಲ್ಲೂ ಫೇಸ್‌ಬುಕ್ ಜಾಲಾಡುವ ಬಹುತೇಕರಿಗೆ ಈ ವಂದನಾ ಟೀಚರ್ ಚೆನ್ನಾಗಿ ಗೊತ್ತು. ಅವರು ಮಕ್ಕಳಿಗೆ ಪಾಠ ಹೇಳಿ ಕೊಡುವ ರೀತಿ ಅವರನ್ನು ತಿದ್ದುವ ರೀತಿಗೆ ಅನೇಕರು ಫಿದಾ ಆಗಿದ್ದಾರೆ. ಅದೇ ರೀತಿ ಅವರು ಉಪಾಯದಿಂದ ಪುಟ್ಟ ಬಾಲಕಿಯ ಹಲ್ಲು ಕಿತ್ತ ವೀಡಿಯೋವೊಂದು ಈಗ ವೈರಲ್ ಆಗಿದ್ದು, ಲಕ್ಷಾಂತರ ಜನ ಈ ವೀಡಿಯೋ ವೀಕ್ಷಿಸಿದ್ದಾರೆ.


ಕಾರ್ಕಳ: ಸಾಮಾಜಿಕ ಜಾಲತಾಣ ಅದರಲ್ಲೂ ಫೇಸ್‌ಬುಕ್ ಜಾಲಾಡುವ ಬಹುತೇಕರಿಗೆ ಈ ವಂದನಾ ಟೀಚರ್ ಚೆನ್ನಾಗಿ ಗೊತ್ತು. ನಲಿಯುತ್ತಾ ಕುಣಿಯುತ್ತಾ ಮಕ್ಕಳೊಂದಿಗೆ ಮಕ್ಕಳಾಗಿ ಮಕ್ಕಳಿಗೆ ಶಿಕ್ಷಣ ಕಲಿಸುವ ಈ ಶಿಕ್ಷಕಿಯನ್ನು ಕಂಡರೆ ಮಕ್ಕಳಿಗೆ ಮಾತ್ರವಲ್ಲ, ಅನೇಕ ಪುಟ್ಟ ಮಕ್ಕಳಿರುವ ಪೋಷಕರಿಗೂ ಅಚ್ಚುಮೆಚ್ಚು, ಅವರು ಮಕ್ಕಳಿಗೆ ಪಾಠ ಹೇಳಿ ಕೊಡುವ ರೀತಿ ಅವರನ್ನು ತಿದ್ದುವ ರೀತಿಗೆ ಅನೇಕರು ಫಿದಾ ಆಗಿದ್ದಾರೆ. ಅದೇ ರೀತಿ ಅವರು ಉಪಾಯದಿಂದ ಪುಟ್ಟ ಬಾಲಕಿಯ ಹಲ್ಲು ಕಿತ್ತ ವೀಡಿಯೋವೊಂದು ಈಗ ವೈರಲ್ ಆಗಿದ್ದು, ಲಕ್ಷಾಂತರ ಜನ ಈ ವೀಡಿಯೋ ವೀಕ್ಷಿಸಿದ್ದಾರೆ.

ಶಾಲೆಗೆ ಹೋಗು ಪುಟ್ಟ ಮಕ್ಕಳಿಗೆ ಅದು ಹಳೆಯ ಹಾಲು ಹಲ್ಲುಗಳೆಂದು ಕರೆಯುವ ಹಲ್ಲುಗಳು ಉದುರಿ ಹೊಸ ಹಲ್ಲುಗಳು ಬರುವ ಸಮಯ ಆ ಸಮಯದಲ್ಲಿ ಹಲ್ಲನ್ನು ತೆಗೆಯದೇ ಹೋದರೆ ಹಲ್ಲುಗಳು ಅಲ್ಲೇ ಉಳಿದು ಹೊಸ ಹಲ್ಲುಗಳಿಗೆ ಜಾಗವಿಲ್ಲದಂತಾಗುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ಹಲ್ಲು ತೆಗೆಯಲು ಮಕ್ಕಳು ಕೇಳಬೇಕಲ್ಲ? ನೋವು ನೋವು ಎಂದು ಪೋಷಕರನ್ನು ಹಲ್ಲು ಮುಟ್ಟುವುದಕ್ಕೂ ಬಿಡದೇ ದೂರ ಓಡುತ್ತಿರುತ್ತಾರೆ. ಇದರಿಂದ ಪೋಷಕರಿಗೆ ಮಕ್ಕಳ ಹಲ್ಲು ಕೀಳುವುದೇ ಹೇಗೆ ಎಂಬುದು ತಲೆ ನೋವಾಗಿ ಕಾಡುತ್ತದೆ. 

Tap to resize

Latest Videos

undefined

ಹಾಡಿ ನಲಿದು ಕಲಿಸುವ ವಂದನಾ ಟೀಚರ್ ಈಗ ಎಲ್ಲೆಲ್ಲೂ ಫೇಮಸ್

ಆದರೆ ಹೀಗೆ ಪೋಷಕರ ಮುಂದೆ ತುಂಟಾಟವಾಡುವ ಮಕ್ಕಳು, ಹೇಳುವ ಮಾತು ಕೇಳದ ಮಕ್ಕಳು ತಮ್ಮ ನೆಚ್ಚಿನ ಟೀಚರ್‌ಗಾಗಿ ಏನು ಮಾಡಲು ಸಿದ್ಧರಿರುತ್ತಾರೆ. ಹಾಗೆಯೇ ಟೀಚರ್ ಮಾತು ಕೇಳಲು ಸಿದ್ಧರಿರುತ್ತಾರೆ. ಹಾಗೆಯೇ ಇಲ್ಲಿ ಹಲ್ಲು ಉದುರಿ ಹೋಗಲು ಶುರುವಾಗಿದ್ದ ಬಾಲಕಿಗೆ ವಂದನಾ ಟೀಚರ್ ಬಹಳ ನಾಜೂಕಾಗಿ ಹಲ್ಲು ಕಿತ್ತಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವೀಡಿಯೋದಲ್ಲೇನಿದೆ?

ಕ್ಲಾಸಿನ ಕಪ್ಪು ಹಲಗೆ ಮುಂದೆ ಹಲ್ಲು ಅಲುಗುತ್ತಿರುವ ಪುಟ್ಟು ಹುಡುಗಿಯನ್ನು ನಿಲ್ಲಿಸಿಕೊಂಡ ವಂದನಾ ಟೀಚರ್, 'ಅನನ್ಯಾ ಅಂತ ಒಬ್ಲು ಹುಡುಗಿ ಇದ್ಲು, ಯಾವ ಕ್ಲಾಸ್‌ನಲ್ಲಿ ಇದ್ಲು ಅವಳು ಎಂದು ಮಕ್ಕಳನ್ನು ಕೇಳುತ್ತಾರೆ. ಇದಕ್ಕೆ ತರಗತಿಯಲ್ಲಿದ್ದ ಮಕ್ಕಳೆಲ್ಲಾ ಫಸ್ಟ್ ಸ್ಟಾಂಡರ್ಡ್(ಒಂದನೇ ತರಗತಿ) ಎಂದು ಬೊಬ್ಬೆ ಹೊಡೆಯುತ್ತಾರೆ. ಈ ವೇಳೆ ಮಾತು ಮುಂದುವರಿಸಿದ ವಂದನಾ ಟೀಚರ್ ಅವಳಿಗೆ ತುಂಬಾ ಹಲ್ಲುಗಳಿದ್ದವು. ಅದರಲ್ಲಿ ಒಂದು ಹಲ್ಲು ಶೇಕ್ ಆಗ್ತಿತ್ತು, ಹೇಗೆ ಶೇಕ್ ಆಗ್ತಿತ್ತು ಟಕಟಕ ಅಂತ ಶೇಕ್ ಆಗ್ತಿತ್ತು ಎಂದು ಹೇಳಿ ಮೆಲ್ಲನೆ  ಅನನ್ಯಾಳ  ಹಲ್ಲನ್ನು ಕಿತ್ತೇ ಬಿಟ್ಟಿದ್ದಾರೆ. ಬಳಿಕ ಆಕೆಯನ್ನು ಅಲ್ಲಿಂದ ಕರೆದೊಯ್ದಿದ್ದಾರೆ. 

ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ
ಪೋಷಕರಿಂದ ಆಗದ ಈ ಕಾರ್ಯವನ್ನು ಟೀಚರ್ ತುಂಬಾ ಸಲೀಸಾಗಿ ಮಾಡಿರುವುದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೀಡಿಯೋ ನೋಡಿದ ಅನೇಕರು ಇಂತಹ ಶಿಕ್ಷಕರ ಸಂಖ್ಯೆ ಹೆಚ್ಚು ಹೆಚ್ಚಾಗಬೇಕು ಎಂದು ಹೇಳಿದ್ದಾರೆ. ಮಮತೆಯ ಜೊತೆ ನೀವು ನೀಡುವ ಶಿಕ್ಷಣ ಮಕ್ಕಳು ಹಾಗೂ ಪೋಷಕರಿಗೆ ಇಬ್ಬರಿಗೂ ಇಷ್ಟವಾಗುತ್ತದೆ ಎಂದು ನೋಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋವನ್ನು ತಮ್ಮ ಫೇಸ್ಬುಕ್ ಪೇಜ್‌ನಲ್ಲಿ ಸ್ವತಃ ವಂದನಾ ಟೀಚರ್ ಅವರೇ ಶೇರ್ ಮಾಡಿದ್ದು, ಮನೆಯಲ್ಲಿ ಪೋಷಕರಿಗೆ ಮಕ್ಕಳು ಹಲ್ಲು ಕೀಳಲು ಬಿಡದೇ ಇದ್ದಾಗ ಹೀಗೆ ಮಾಡಬಹುದು ಎಂದು ಬರೆದುಕೊಂಡಿದ್ದಾರೆ. 

'ಮೇಡಮ್‌ ನಿಮಗೆ ನಾನು ಜಗದೀಪ್‌, ಉಪರಾಷ್ಟ್ರಪತಿಯಲ್ಲ' 83 ವರ್ಷದ ಶಾಲಾ ಟೀಚರ್‌ಗೆ ಹೇಳಿದ ಜಗದೀಪ್‌ ಧನ್ಕರ್‌!

ಇನ್ನು ಈ ವಂದನಾ ಟೀಚರ್ ಬಗ್ಗೆ ಹೆಚ್ಚು ಹೇಳಬೇಕಿಲ್ಲ, ಮಕ್ಕಳ ಜೊತೆ ಮಕ್ಕಳಂತೆ ಆಡುವ ಅವರನ್ನು ಕಂಡರೆ ಮಕ್ಕಳಿಗೆ ಅಚ್ಚುಮೆಚ್ಚು. ಅವರು ಮಕ್ಕಳಿಗೆ ಮುದ್ದಾಗಿ ಪಾಠ ಮಾಡುವ ಹಲವು ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 
 

click me!