*ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆ ವಾಪಸ್ ಕರೆ ತರಲು ವಿಶಿಷ್ಟ ಯೋಜನೆ ರೂಪಿಸಿದ ತಮಿಳುನಾಡು
*ಮಕ್ಕಳನ್ನು ಗುರುತಿಸಲು ಮನೆ ಮನೆ ಸಮೀಕ್ಷೆ ನಡೆಸಲಿದೆ ಸರ್ಕಾರ, ಬಳಿಕ ಯೋಜನೆ ಅನುಷ್ಠಾನ
*ಈ ಕಾರ್ಯಕ್ಕೆ ಎನ್‌ಜಿಒಗಳು, ಸ್ವಸಹಾಯ ಗುಂಪುಗಳ ನೆರವು ಪಡೆದುಕೊಂಡಿರುವ ಸರ್ಕಾರ
ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ (Free Education) ಕೊಡುವುದು ಸರ್ಕಾರಗಳ ಕರ್ತವ್ಯ. ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರಗಳಾಗಲಿ ಈ ನಿಟ್ಟಿನಲ್ಲಿ ಅತ್ಯಗತ್ಯ ಕ್ರಮಗಳನ್ನ ಕೈಗೊಳ್ಳುತ್ತವೆ. ಮಕ್ಕಳನ್ನು ಶಾಲೆಯೆಡೆಗೆ ಆಕರ್ಷಿಸಲು ವಿಭಿನ್ನ, ವಿನೂತನ, ವಿಶೇಷ ಯೋಜನೆಗಳನ್ನು ಜಾರಿ ಮಾಡುತ್ತವೆ. ಒಂದು ವೇಳೆ ಮಕ್ಕಳನ್ನ ಕೂಲಿಗೋ, ದುಡಿಮೆಗೋ ಬಳಸಿಕೊಂಡರೆ ಅದನ್ನ ತಪ್ಪಿಸಲು ಕೂಡ ಸರ್ಕಾರಗಳು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸುತ್ತವೆ. ಒಟ್ಟಿನಲ್ಲಿ ಓದುವ ವಯಸ್ಸಲ್ಲಿ ಓದು ಮಾತ್ರ ಅನ್ನೋದನ್ನ ಮಕ್ಕಳಿಗೆ, ಬಡ ಪೋಷಕರಿಗೆ ಮನದಟ್ಟು ಮಾಡುವುದೇ ಸರ್ಕಾರದ ಉದ್ದೇಶವಾಗಿರುತ್ತದೆ. ಒಂದು ವೇಳೆ ಶಾಲೆ ಕಲಿಯುವ ಹಂತದಲ್ಲೇ ಮಕ್ಕಳು ಶಾಲೆ ತೊರೆದರೆ ಅವರನ್ನ ಮರಳಿ ಕರೆತರಲು ಸಾಕಷ್ಟು ಕ್ರಮಗಳನ್ನ ರೂಪಿಸಲು ಕೂಡ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ. ಇದೇ ನಿಟ್ಟಿನಲ್ಲಿ ಈಗ ಶಾಲೆ ಬಿಟ್ಟ ಮಕ್ಕಳಿಗಾಗಿ ತಮಿಳುನಾಡು ಸರ್ಕಾರ (Tamil Nadu Government) ಹೊಸ ಪ್ಲಾನ್ ರೂಪಿಸಿದೆ.
ತಮಿಳುನಾಡಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು, 6 ರಿಂದ 18 ವರ್ಷದೊಳಗಿನ ಶಾಲೆ ಬಿಟ್ಟ ಮಕ್ಕಳಿಗೆ ಅವಕಾಶ ಕಲ್ಪಿಸುವುದಕ್ಕಾಗಿ ವಿಶೇಷ ತರಬೇತಿ ಕೇಂದ್ರಗಳನ್ನ (Special Training Centers) ತೆರೆಯಲು ಮುಂದಾಗಿದೆ . ಈ ತರಬೇತಿ ಕೇಂದ್ರಗಳನ್ನು ಸಮಗ್ರ ಶಾಲಾ ಶಿಕ್ಷಣ ಇಲಾಖೆ ನಿರ್ವಹಿಸಲಿದೆ. 6 ರಿಂದ 18 ವರ್ಷದೊಳಗಿನ ಶಾಲೆ ಬಿಟ್ಟ ಮಕ್ಕಳ ಪತ್ತೆಗಾಗಿ ಇಲಾಖೆಯು, ಡಿಸೆಂಬರ್ 19ರಿಂದ ಜನವರಿ 11 ರವರೆಗೆ ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಲಿದೆ. ಶಾಲಾ ಶಿಕ್ಷಣ ಇಲಾಖೆಯ ಇತ್ತೀಚಿನ ಅಧ್ಯಯನದ ಪ್ರಕಾರ, ರಾಜ್ಯದ ಶಾಲೆಗಳಲ್ಲಿ ಸುಮಾರು 80,000 ಶಾಲೆ ಬಿಟ್ಟ ಮಕ್ಕಳಿದ್ದಾರೆ. ಸಮೀಕ್ಷೆ ನಡೆಸಲು ಶಾಲಾ ಶಿಕ್ಷಣ ಇಲಾಖೆಯು ಬ್ಲಾಕ್ ಸಂಪನ್ಮೂಲ ಶಿಕ್ಷಕರು, ವಿಶೇಷ ಶಿಕ್ಷಕರು, ಕಾರ್ಯಕರ್ತೆಯರು, ಫಿಸಿಯೋಥೆರಪಿಸ್ಟ್‌ಗಳು, ಅಂಗನವಾಡಿ ಶಿಕ್ಷಕರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಲಿದೆ. ಮಕ್ಕಳ ನಡುವೆ ಕೆಲಸ ಮಾಡುವ ಎನ್‌ಜಿಒಗಳು ಮತ್ತು ಸ್ವಸಹಾಯ ಗುಂಪುಗಳನ್ನು ಸಹ ಸಮೀಕ್ಷೆ ನಡೆಸಲು ಬಳಸಿಕೊಳ್ಳಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಿದ ಕೇರಳದ ಈ ಕಾರ್ಮಿಕ ಎಲ್ಲರಿಗೂ ಸ್ಫೂರ್ತಿ!
ತಮಿಳುನಾಡಿನಲ್ಲಿ, 2017 ರ ಸರ್ಕಾರಿ ಆದೇಶದ ಪ್ರಕಾರ, 30 ಕೆಲಸದ ದಿನಗಳವರೆಗೆ ನಿರಂತರವಾಗಿ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳನ್ನು ಡ್ರಾಪ್ಔಟ್ ಎಂದು ಪರಿಗಣಿಸಲಾಗುತ್ತದೆ. ಶಾಲೆಗೆ ಅನಿಯಮಿತವಾಗಿ ಹಾಜರಿ ಹೊಂದಿರುವವರನ್ನು ಸಂಭಾವ್ಯ ಡ್ರಾಪ್ಔಟ್ ಎಂದು ಪರಿಗಣಿಸಲಾಗುತ್ತದೆ. 15 ದಿನಗಳ ಕಾಲ ನಿರಂತರವಾಗಿ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳನ್ನು ಸಹ ಸಂಭಾವ್ಯ ಡ್ರಾಪ್ಔಟ್ ಎಂದು ಪರಿಗಣಿಸಲಾಗಿದೆ ಇಂಥ ವಿದ್ಯಾರ್ಥಿಗಳು ಹಾಗೂ ಕಂಪ್ಲೀಟ್ ಆಗಿ ಶಾಲೆ ಬಿಟ್ಟಿರುವ ವಿದ್ಯಾರ್ಥಿಗಳಿಗೆ ಇಲಾಖೆಯು, ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿದೆ.
ಸರಿಯಾದ ಸಮೀಕ್ಷೆಯನ್ನು ನಡೆಸಿದ ನಂತರ, ಸಮಸ್ಯೆಯ ಬಗ್ಗೆ ವಿಶಾಲವಾದ ಕಲ್ಪನೆಯನ್ನು ತಲುಪಲಾಗುವುದು. ಶಾಲೆಯನ್ನು ಬಿಟ್ಟ ಮಕ್ಕಳನ್ನು ಪತ್ತೆಹಚ್ಚಿದ ನಂತರ, ಅವರು ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುವ ವಿಶೇಷ ತರಬೇತಿ ಕಾರ್ಯಕ್ರಮಗಳನ್ನ ರೂಪಿಸಲಾಗುವುದು. ಜೊತೆಗೆ ಈ ವರ್ಷ ಶಾಲೆ ಬಿಡುವ ಮಕ್ಕಳ ಮೇಲೆ ಹೆಚ್ಚು ಗಮನ ಹರಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಯುಪಿಯಲ್ಲಿ ವಿದ್ಯಾರ್ಥಿನಿಯರಿಗೆ ರಾಣಿ ಲಕ್ಷ್ಮೀ ಬಾಯಿ ಸ್ವಯಂ ರಕ್ಷಣಾ ತರಬೇತಿ!
ಒಟ್ಟಾರೆಯಾಗಿ ಶಾಲೆ ಬಿಟ್ಟ ಮಕ್ಕಳನ್ನ ಮರಳಿ ಕರೆತರುವ ಈ ವಿಶೇಷ ಯೋಜನೆಗೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಇತರ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಲು ತಮಿಳುನಾಡು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಕಾರ್ಯಕ್ರಮವನ್ನು ಉತ್ತಮಗೊಳಿಸಲು ಆಯಾ ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳ ಪೂರ್ವ ಸಮೀಕ್ಷೆಯ ಸಭೆಯನ್ನು ನಡೆಸಲಿದ್ದಾರೆ. ಇನ್ನು ಸಮೀಕ್ಷೆಯ ಬಗ್ಗೆ ಸ್ಥಳೀಯರಲ್ಲಿ ಕೂಡ ಅರಿವು ಮೂಡಿಸಲಾಗುತ್ತದೆ.