Bengaluru News; 15000 ಎಂಜಿನಿಯರಿಂಗ್‌ ಸೀಟು ಕೇಳೋರಿಲ್ಲ!

By Kannadaprabha NewsFirst Published Dec 17, 2022, 12:43 AM IST
Highlights
  • 5000 ಎಂಜಿನಿಯರಿಂಗ್‌ ಸೀಟು ಕೇಳೋರಿಲ್ಲ!
  •  ರಾಜ್ಯದ ಎಲ್ಲ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 65000 ಎಂಜಿನಿಯರಿಂಗ್‌ ಸೀಟು
  •  50 ಸಾವಿರ ವಿದ್ಯಾರ್ಥಿಗಳಷ್ಟೆಪ್ರವೇಶ
  • ಸರ್ಕಾರಿ ಕಾಲೇಜಲ್ಲೂ 33% ಸೀಟು ಖಾಲಿ

ಲಿಂಗರಾಜು ಕೋರಾ

ಬೆಂಗಳೂರು (ಡಿ.17) : 2022-23ನೇ ಸಾಲಿನ ಎಂಜಿನಿಯರಿಂಗ್‌ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಲ್ಲ ಸುತ್ತುಗಳ ಕೌನ್ಸೆಲಿಂಗ್‌ ಬಳಿಕವೂ ಎಲ್ಲ ಮಾದರಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ 15 ಸಾವಿರಕ್ಕೂ ಹೆಚ್ಚು ಸೀಟುಗಳು ಭರ್ತಿಯಾಗದೆ ಉಳಿದಿವೆ. ಈ ಪೈಕಿ ಅತಿ ಕಡಿಮೆ ಶುಲ್ಕವಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲೇ 1700ಕ್ಕೂ ಹೆಚ್ಚು ಸೀಟುಗಳನ್ನು ಕೇಳೋರಿಲ್ಲವಾಗಿದೆ.

ರಾಜ್ಯದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಈ ಬಾರಿ ಸಿಇಟಿ ರಾರ‍ಯಂಕಿಂಗ್‌ ವಿದ್ಯಾರ್ಥಿಗಳಿಗೆ 65,358 ಸೀಟುಗಳು ಪ್ರವೇಶಕ್ಕೆ ಲಭ್ಯವಿದ್ದವು. ಈ ಪೈಕಿ ಮೂರನೇ ಸುತ್ತಿನ ಕೌನ್ಸೆಲಿಂಗ್‌ ಬಳಿಕ 50,272 ಸೀಟುಗಳು ಭರ್ತಿಯಾಗಿವೆ. ಇನ್ನೂ 15,086 ಸೀಟುಗಳು(ಶೇ.23) ಭರ್ತಿಯಾಗಿಲ್ಲ. ಇವೆಲ್ಲಾ ಸರ್ಕಾರಿ ಕೋಟಾ ಆಗಿ ಪರಿವರ್ತನೆಯಾಗಿವೆ. ಇನ್ನು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರ ನಡೆಸಿರುವ ಹಲವು ಪ್ರಯತ್ನಗಳ ನಡುವೆಯೂ ಆ ಸೀಟುಗಳನ್ನು ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಲಭ್ಯವಿದ್ದ ಸೀಟುಗಳ ಪೈಕಿ ಶೇ.33ರಷ್ಟುಸೀಟುಗಳು ಭರ್ತಿಯಾಗದೆ ಉಳಿದಿವೆ.

ಕೊನೆಗೂ ಆರಂಭವಾದ ಸರ್ಕಾರಿ ಎಂಜನಿಯರಿಂಗ್‌ ಕಾಲೇಜು!

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಂಕಿ-ಅಂಶಗಳ ಪ್ರಕಾರ, ರಾಜ್ಯದ 19 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಒಟ್ಟು 5,433 ಸೀಟುಗಳು ಈ ಬಾರಿ ಪ್ರವೇಶಕ್ಕೆ ಲಭ್ಯವಿದ್ದವು. ಆದರೆ ಕೆಇಎ ನಡೆಸಿದ ಎಲ್ಲಾ ಸುತ್ತಿನ ಕೌನ್ಸೆಲಿಂಗ್‌ ನಂತರ 1793 ಸೀಟುಗಳು ಖಾಲಿ ಉಳಿದಿವೆ. ಕೆಇಎ ಕೌನ್ಸೆಲಿಂಗ್‌ ಮೂಲಕ 4,036 ಸೀಟುಗಳನ್ನು ಹಂಚಿಕೆ ಮಾಡಿದ್ದರೂ 3,640 ಅಭ್ಯರ್ಥಿಗಳು ಮಾತ್ರ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಆಶ್ಚರ್ಯಕರ ವಿಷಯ ಎಂದರೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಪೈಕಿ ಅತಿ ಬೇಡಿಕೆಯ ಕಾಲೇಜುಗಳಲ್ಲೊಂದಾದ ಬೆಂಗಳೂರಿನ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌(ಯುವಿಸಿಇ)ಯಲ್ಲೂ ಮೆಕಾನಿಕಲ್‌ನಲ್ಲಿ 14, ಸಿವಿಲ್‌ನಲ್ಲಿ 13 ಸೀಟು ಸೇರಿ ವಿವಿಧ ವಿಭಾಗದ 37 ಸೀಟುಗಳು ಖಾಲಿ ಉಳಿದಿವೆ. ಇದಷ್ಟೇ ಅಲ್ಲದೆ ಇನ್ನೂ ಕೆಲ ಪ್ರಮುಖ ಸರ್ಕಾರಿ ಕಾಲೇಜುಗಳಲ್ಲೂ ಇದೇ ರೀತಿಯ ಸ್ಥಿತಿ ಇದೆ.

ಪ್ರತೀ ವರ್ಷದಂತೆ ಈ ಬಾರಿಯೂ ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕಲ್‌ ಮತ್ತು ಮಾಹಿತಿ ವಿಜ್ಞಾನದಂತಹ ಕೋರ್ಸುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಕೆಲವು ಸರ್ಕಾರಿ ಕಾಲೇಜುಗಳು ಈ ಕೋರ್ಸುಗಳಿಗೂ ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿಫಲವಾಗಿವೆ. ಉದಾಹರಣೆಗೆ ಗಂಗಾವತಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ವಿಭಾಗದ 63 ಸೀಟುಗಳ ಪೈಕಿ 18 ಸೀಟುಗಳು ಖಾಲಿ ಇವೆ ಎಂಬ ಮಾಹಿತಿ ಇದೆ.

ತಜ್ಞರ ಪ್ರಕಾರ, ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಗೆ ಆದ್ಯತೆ ನೀಡದಿರಲು ಪ್ರಮುಖ ಕಾರಣವೆಂದರೆ ಉದ್ಯೋಗಾವಕಾಶಗಳ ಕೊರತೆ. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸೀಟು ಆಯ್ಕೆ ಮಾಡುವಾಗ ಆದ್ಯತೆಯ ವಿಷಯವೆಂದರೆ ಪ್ಲೇಸ್‌ಮೆಂಟ್‌ ಮತ್ತು ಕ್ಯಾಂಪಸ್‌ ನೇಮಕಾತಿಗಳ ಮೂಲಕ ವಿದ್ಯಾರ್ಥಿಗಳನ್ನು ಇರಿಸುವಲ್ಲಿ ಸರ್ಕಾರಿ ಕಾಲೇಜುಗಳು ಹಿಂದುಳಿದಿವೆ ಎಂದು ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನ ಹಿರಿಯ ಅಧ್ಯಾಪಕರೊಬ್ಬರು ಹೇಳಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಡವಟ್ಟು, 9 ಸಾವಿರ ವಿದ್ಯಾರ್ಥಿಗಳಿಗೆ ಅನ್ಯಾಯ

ಯಾವ ಕಾಲೇಜು ಎಷ್ಟುಸೀಟು ಉಳಿಕೆ

  • ಕೋರ್ಸು ಒಟ್ಟು ಲಭ್ಯಸೀಟು ಭರ್ತಿಯಾದ ಸೀಟು ಉಳಿಕೆ
  • ಎಂಜಿನಿಯರಿಂಗ್‌ (ಎಲ್ಲ ಕಾಲೇಜು) 65,358 50,272 15,086
  • ಎಂಜಿನಿಯರಿಂಗ್‌ (ಸರ್ಕಾರಿ ಕಾಲೇಜು) 5,433 4,036 1,793
click me!