
ಕಾನ್ಪುರ (ಫೆಬ್ರವರಿ 14, 2023): ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಗ್ರಾಮವೊಂದರಲ್ಲಿ ಸೋಮವಾರ ನಡೆದ ಅತಿಕ್ರಮಣ ವಿರೋಧಿ ಅಭಿಯಾನದ ವೇಳೆ 45 ವರ್ಷದ ಮಹಿಳೆ ಮತ್ತು ಆಕೆಯ ಮಗಳು (20) ಬೆಂಕಿಗೆ ಆಹುತಿಯಾಗಿದ್ದಾರೆ. ಗುಡಿಸಲಿಗೆ ಬೆಂಕಿ ಹಚ್ಚಲಾಗಿದ್ದು, ಈ ವೇಳೆ ಮಹಿಳೆಯರು ಗುಡಿಸಲಿನ ಒಳಗೆ ಇದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಇಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ನಿನ್ನೆ ಹೇಳಿದ್ದು, ಆದರೆ ರಾಜ್ಯ ಪೊಲೀಸರು ಈ ಆರೋಪ ಸಂಬಂಧ 13 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಸ್ಟೇಷನ್ ಹೌಸ್ ಆಫೀಸರ್ ಮತ್ತು ಬುಲ್ಡೋಜರ್ ಆಪರೇಟರ್ ಸೇರಿದ್ದಾರೆ. ಇಬ್ಬರು ಮಹಿಳೆಯರ ಮೇಲೆ ಕೊಲೆ ಯತ್ನ ಮತ್ತು ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ ಆರೋಪವನ್ನೂ ಹೊರಿಸಲಾಗಿದೆ. ಕಾನ್ಪುರ ದೇಹತ್ ಜಿಲ್ಲೆಯ ರೂರಾ ಪ್ರದೇಶದ ಮದೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್, ಜಿಲ್ಲಾಡಳಿತ ಮತ್ತು ಕಂದಾಯ ಅಧಿಕಾರಿಗಳು "ಗ್ರಾಮ ಸಮಾಜ" ಅಥವಾ ಸರ್ಕಾರಿ ಜಮೀನಿನ ಒತ್ತುವರಿಯನ್ನು ತೆಗೆದುಹಾಕಲು ತೆರಳಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ಸುಪ್ರೀಂ ಕೋರ್ಟ್ ಖುಲಾಸೆ ಮಾಡಿದ್ದ ಛವ್ಲಾ ಗ್ಯಾಂಗ್‌ರೇಪ್ ಕೇಸ್ ಆರೋಪಿಯಿಂದ ಆಟೋ ಚಾಲಕನ ಕೊಲೆ!
ಅಧಿಕಾರಿಗಳು ಬೆಳಗ್ಗೆ ಬುಲ್ಡೋಜರ್‌ನೊಂದಿಗೆ ಆಗಮಿಸಿದರು ಮತ್ತು ಅವರಿಗೆ ಯಾವುದೇ ಪೂರ್ವ ಸೂಚನೆ ನೀಡಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಅಲ್ಲದೆ, "ಜನರು ಒಳಗೆ ಇರುವಾಗಲೇ ಅವರು ಬೆಂಕಿ ಹಚ್ಚಿದರು. ನಾವು ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಅವರು ನಮ್ಮ ದೇವಸ್ಥಾನವನ್ನು ಸಹ ಒಡೆದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿ ಯಾರೂ ಸಹ ಯಾವ ವಿರೋಧವನ್ನೂ ವ್ಯಕ್ತಪಡಿಸಲಿಲ್ಲ. ಎಲ್ಲರೂ ಓಡಿ ಹೋದರು, ಯಾರೂ ನನ್ನ ತಾಯಿಯನ್ನು ಉಳಿಸಲು ಸಾಧ್ಯವಾಗಲಿಲ್ಲ" ಎಂದು ಶಿವಂ ದೀಕ್ಷಿತ್ ಹೇಳಿದ್ದಾರೆ.
ಪ್ರಮೀಳಾ ದೀಕ್ಷಿತ್ ಮತ್ತು ಅವರ ಮಗಳು ನೇಹಾ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ನಿನ್ನೆ ಹೇಳಿಕೊಂಡಿದ್ದರು. ಆದರೆ, ಸ್ಟೇಷನ್ ಹೌಸ್ ಆಫೀಸರ್ ದಿನೇಶ್ ಗೌತಮ್ ಮತ್ತು ಪ್ರಮೀಳಾ ಅವರ ಪತಿ ಗೆಂಡನ್ ಲಾಲ್ ಸಂತ್ರಸ್ತರನ್ನು ರಕ್ಷಿಸಲು ಪ್ರಯತ್ನಿಸಿದಾಗ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಟಿ ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಯಾರನ್ನೋ ಕೊಲೆ ಮಾಡಿ ತಾನೇ ಸತ್ತಂತೆ ಬಿಂಬಿಸಿದ ಸರ್ಕಾರಿ ಉದ್ಯೋಗಿ..!
ಇನ್ನು, ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಬಿಬಿಜಿಟಿಎಸ್ ಮೂರ್ತಿ, "ನಮಗೆ ತಿಳಿಯುತ್ತಿರುವ ಮಾಹಿತಿಯಿಂದ, ಮಹಿಳೆ ಮತ್ತು ಅವರ ಮಗಳು ಗುಡಿಸಲೊಳಗೆ ಇದ್ದು, ಬೀಗ ಹಾಕಿಕೊಂಡು, ಬೆಂಕಿ ಹಚ್ಚಿಕೊಂಡಿದ್ದಾರೆ. ಇದು ಅವರ ಸಾವಿಗೆ ಕಾರಣವಾಗಿದೆ. ನಾವು ಸ್ಥಳಕ್ಕೆ ತಲುಪಿದ್ದು, ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಸಹ ಇಲ್ಲಿದ್ದಾರೆ. ನಾವು ತನಿಖೆ ನಡೆಸುತ್ತೇವೆ ಮತ್ತು ಯಾವುದೇ ತಪ್ಪಾಗಿದ್ದರೆ, ನಾವು ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಅತಿಕ್ರಮಣ ವಿರೋಧಿ ಡ್ರೈವ್ ವೇಳೆ ವಿಡಿಯೋವನ್ನು ಚಿತ್ರೀಕರಿಸಲಾಗುತ್ತದೆ. ನಾವು ವಿಡಿಯೋ ಕೇಳಿದ್ದೇವೆ ಮತ್ತು ಅದನ್ನು ತನಿಖೆ ನಡೆಸುತ್ತೇವೆ ಎಂದೂ ಎಸ್‌ಪಿ ಬಿಬಿಜಿಟಿಎಸ್ ಮೂರ್ತಿ ಹೇಳಿದರು.
ಈ ಮಧ್ಯೆ, ಮಹಿಳೆಯರಿಬ್ಬರ ಸಾವಿನ ನಂತರ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ಗ್ರಾಮಸ್ಥರು ಪೊಲೀಸರ ಮೇಲೆ ಇಟ್ಟಿಗೆ ಎಸೆದಿದ್ದು, ಪೊಲೀಸರು ಸ್ಥಳದಿಂದ ತೆರಳಿದ್ದಾರೆ. ಆಪಾದಿತ ಕೊಲೆಗೆ ಸಂಬಂಧಿಸಿದಂತೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಮೈತಾ) ಜ್ಞಾನೇಶ್ವರ್ ಪ್ರಸಾದ್, ಲೇಖ್ಪಾಲ್ ಸಿಂಗ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ದೇಶವನ್ನು ಬೆಚ್ಚಿ ಬೀಳಿಸಿದ ಭೀಕರ ಹತ್ಯೆ ಪ್ರಕರಣಗಳು..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ