* ಯುವತಿ ಮೇಲೆ ನಾಗೇಶ್ ಆ್ಯಸಿಡ್ ದಾಳಿ ಮಾಡಿದಾಗ ಆತನ ಕೈಗೂ ಬಿದ್ದಿದ್ದ ಆ್ಯಸಿಡ್
* ಆತನ ಕೈ ಮೇಲೆ ಗಾಯ ಇದನ್ನು ನೋಡಿದ್ದ ಭಕ್ತರಿಗೆ ಆತನ ಮೇಲೆ ಅನುಮಾನ
* ಪೊಲೀಸರು ಹಂಚಿದ್ದ ಕರಪತ್ರದ ಚಿತ್ರ ಹೋಲಿಕೆ, ಭಕ್ತರಿಂದ ಸುಳಿವು
ಬೆಂಗಳೂರು(ಮೇ.14): ನಗರವನ್ನೇ ಬೆಚ್ಚಿ ಬೀಳಿಸಿದ್ದ ಯುವತಿ ಮೇಲಿನ ಆ್ಯಸಿಡ್ ದಾಳಿಯ(Acid Attack) ಆರೋಪಿಯನ್ನು ಪೊಲೀಸರು(Police) ಬಂಧಿಸಲು ಆತನ ಕೈ ಮೇಲಿನ ಗಾಯ ಸುಳಿವು ನೀಡಿತ್ತು ಎಂಬ ವಿಷಯ ಬಹಿರಂಗವಾಗಿದೆ.
ಆರೋಪಿ(Accused) ನಾಗೇಶ್ ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡುವಾಗ ಆತನ ಬಲಗೈ ಮೇಲೂ ಆ್ಯಸಿಡ್ ಬಿದ್ದು ಗಾಯವಾಗಿತ್ತು. ಆರೋಪಿಯು ರಮಣ ಆಶ್ರಮದಲ್ಲಿ ಸ್ವಾಮೀಜಿ ಸೋಗಿನಲ್ಲಿ ಧ್ಯಾನ, ಜಪ-ತಪ ಮಾಡುವಾಗ ಹೆಗಲ ಮೇಲೆ ಖಾವಿ ಬಟ್ಟೆ ಹಾಕಿಕೊಳ್ಳುತ್ತಿದ್ದ. ಈ ವೇಳೆ ಆತನ ಕೈ ಮೇಲಿನ ಗಾಯ ಕಾಣುತಿತ್ತು. ಇದನ್ನು ಗಮನಿಸಿದ್ದ ಸ್ಥಳೀಯ ಭಕ್ತರು, ಕರಪತ್ರದಲ್ಲಿದ್ದ ಭಾವಚಿತ್ರವನ್ನು ನೋಡಿ ಅನುಮಾನಗೊಂಡಿದ್ದರು. ಕರಪತ್ರದಲ್ಲಿದ್ದ ಪೊಲೀಸರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದ ಪಾಗಲ್ ಪ್ರೇಮಿ, ಯುವತಿಯ ಪ್ರಾಣ ತೆಗೆಯಲು ಮುಂದಾದ..!
ಆ್ಯಸಿಡ್ ದಾಳಿ ಬಳಿಕ ತಲೆಮರೆಸಿಕೊಂಡಿದ್ದ ನಾಗೇಶ್ ಬಂಧನಕ್ಕೆ ಪೊಲೀಸರ 10 ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು. ಆರೋಪಿಯ ಬಗ್ಗೆ ಸಣ್ಣ ಸುಳಿವು ಸಿಗದ ಪರಿಣಾಮ ಕನ್ನಡ, ತೆಲುಗು, ತಮಿಳು, ಇಂಗ್ಲಿಷ್ ಭಾಷೆಯಲ್ಲಿ ಆರೋಪಿಯ ಭಾವಚಿತ್ರ ಸಹಿತ ಕರಪತ್ರ ಮುದ್ರಿಸಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಸಾರ್ವಜನಿಕ ಸ್ಥಳಗಳು, ದೇವಸ್ಥಾನಗಳು, ಆಶ್ರಯಮಗಳು, ಮಠಗಳು ಸೇರಿದಂತೆ ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳಲ್ಲಿ ಹಂಚಲಾಗಿತ್ತು.
ಈತ ನೆರೆಯ ತಮಿಳುನಾಡಿನ ತಿರುವಣ್ಣಾಮಲೈನ ಶಿವನ ದೇವಾಲಯವಿರುವ ರಮಣ ಆಶ್ರಮದಲ್ಲಿ ಸ್ವಾಮೀಜಿ ಸೋಗಿನಲ್ಲಿ ಧ್ಯಾನ ಮಾಡುವಾಗಲೇ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಪೊಲೀಸರು ಆರೋಪಿಯನ್ನು ಶುಕ್ರವಾರ ರಾತ್ರಿ ಬೆಂಗಳೂರಿಗೆ(Bengaluru) ಕರೆತಂದಿದ್ದಾರೆ.
ಭಕ್ತರ ಸೋಗಿನಲ್ಲಿ ಆರೋಪಿಗೆ ಬಲೆ:
ಪೊಲೀಸರ ಒಂದು ತಂಡ ಗುರುವಾರ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಶಿವನ ದೇವಾಲಯವಿರುವ ರಮಣ ಆಶ್ರಮದಲ್ಲಿಯೂ ಕರಪತ್ರ ಹಂಚಿತ್ತು. ಈ ಕರಪತ್ರದಲ್ಲಿ ಮುದ್ರಿತವಾಗಿದ್ದ ಭಾವಚಿತ್ರ ಗಮನಿಸಿದ್ದ ಸ್ಥಳೀಯರು ಕೆಲ ದಿನಗಳಿಂದ ಆಶ್ರಮದಲ್ಲಿ ಕಾವಿಧಾರಿಯಾಗಿ ಇರುವ ನಾಗೇಶ್‌ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಮಾಹಿತಿ ಆಧರಿಸಿ ಪೊಲೀಸರು ಶುಕ್ರವಾರ ಸಂಜೆ ಭಕ್ತರ ಸೋಗಿನಲ್ಲಿ ಆಶ್ರಮಕ್ಕೆ ತೆರಳಿ ಕಾವಿಧಾರಿಯಾಗಿದ್ದ ನಾಗೇಶ್‌ನ ಚಲನವಲನದ ಮೇಲೆ ನಿಗಾವಹಿಸಿದ್ದರು. ಬಳಿಕ ಆಶ್ರಮದ ಮೇಲ್ವಿಚಾರಕರನ್ನು ಸಂಪರ್ಕಿಸಿ ನಾಗೇಶ್‌ನ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ಕಾವಿಬಟ್ಟೆ ಕಳಚಿಸಿ ವಿಚಾರಣೆ ಮಾಡಿದಾಗ ನಾಗೇಶನ್ ನಿಜ ಸ್ವರೂಪ ಬೆಳಕಿಗೆ ಬಂದಿದೆ.
ಏ.28ರಂದು ಆ್ಯಸಿಡ್ ದಾಳಿ:
ಹೆಗ್ಗನಹಳ್ಳಿ ನಿವಾಸಿಯಾಗಿರುವ ಆರೋಪಿ ನಾಗೇಶ್ ತನ್ನನ್ನು ಪ್ರೀತಿಸುವಂತೆ 25 ವರ್ಷದ ಯುವತಿ ಹಿಂದೆ ಬಂದಿದ್ದ. ಪ್ರೀತಿ ನಿರಾಕರಿಸಿದ್ದ ಯುವತಿ ತನ್ನಪಾಡಿಗೆ ತಾನು ಇದ್ದಳು. ಎಂಕಾಂ ಪದವಿಧರೆಯಾದ ಯುವತಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಏ.28ರಂದು ಬೆಳಗ್ಗೆ ಸುಂಕದಕಟ್ಟೆಯಲ್ಲಿರುವ ಕಂಪನಿಯ ಕಚೇರಿ ಬಳಿ ಬಂದಿದ್ದಳು. ಈ ವೇಳೆ ಆ್ಯಸಿಡ್ ತುಂಬಿದ ಬಾಟಲಿಯೊಂದಿಗೆ ಪ್ರತ್ಯಕ್ಷನಾದ ಕಿಡಿಗೇಡಿ ನಾಗೇಶ್, ಏಕಾಏಕಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರು: ಆ್ಯಸಿಡ್ ಸಂತ್ರಸ್ತೆಗೆ 1 ಲಕ್ಷ ರೂ ನೆರವು, ಸಚಿವ ಹಾಲಪ್ಪ ಆಚಾರ್ ಘೋಷಣೆ
ಆರೋಪಿ ನಾಗೇಶ್ ಆ್ಯಸಿಡ್ ದಾಳಿ ಬಳಿಕ ಕೆಲ ವಕೀಲರನ್ನು ಸಂಪರ್ಕಿಸಿ ತನ್ನ ಪರ ವಕಾಲತ್ತು ವಹಿಸುವಂತೆ ದುಂಬಾಲು ಬಿದ್ದಿದ್ದ. ಆದರೆ, ಇದು ಗಂಭೀರ ಪ್ರಕರಣವಾಗಿದ್ದರಿಂದ ವಕೀಲರು ವಕಾಲತ್ತು ವಹಿಸಲು ಹಿಂದೇಟು ಹಾಕಿದ್ದರು. ಈ ವೇಳೆ ಆರೋಪಿ ಮೆಜೆಸ್ಟಿಕ್‌ನಲ್ಲಿ ದ್ವಿಚಕ್ರ ವಾಹನ ಬಿಟ್ಟು ಮೊಬೈಲ್ ಸ್ವಿಚ್‌್ಡ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಮತ್ತೊಂದು ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದ್ದರು. 15 ದಿನ ಕಳೆದರೂ ಆರೋಪಿಯ ಸುಳಿವು ಪತ್ತೆಯಾಗಿರಲಿಲ್ಲ. 16ನೇ ದಿನ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ದೈವಭಕ್ತ ಕಿಡಿಗೇಡಿ!
ಆರೋಪಿ ನಾಗೇಶ್ ಅಪ್ಪಟ ದೈವ ಭಕ್ತನಾಗಿದ್ದ. ಬೆಂಗಳೂರಿನಲ್ಲಿ ಇರುವಾಗಲೂ ಮಠ, ದೇವಸ್ಥಾನ, ಧಾರ್ಮಿಕ ಸ್ಥಳಗಳಿಗೆ ಹೋಗುತ್ತಿದ್ದ. ಮನೆಯಲ್ಲೂ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮುಜುಗರದ ಸ್ವಭಾವ ಹೊಂದಿದ್ದ. ಆ್ಯಸಿಡ್ ದಾಳಿ ಬಳಿಕ ಆರೋಪಿ ಸ್ವಾಮೀಜಿ ವೇಷತೊಟ್ಟು ತಲೆಮರೆಸಿಕೊಂಡಿದ್ದ. ಆರೋಪಿಯು ತಿರುವಣ್ಣಾಮಲೈನ ಶಿವನ ದೇವಾಲಯವಿರುವ ರಮಣ ಆಶ್ರಮದಲ್ಲಿ ಖಾವಿಧಾರಿಯಾಗಿ ಧಾನ್ಯ, ಜಪ-ತಪ ಮಾಡಿಕೊಂಡಿದ್ದ. ಆಶ್ರಮದಲ್ಲಿ ಉಚಿತ ಊಟ, ವಸತಿ ಸೌಲಭ್ಯ ಇದ್ದಿದ್ದರಿಂದ ಆರೋಪಿಯು ಕಾವಿಧಾರಿಯಾಗಿ ತನ್ನ ಗುರುತು ಮರೆಮಾಚಿಕೊಂಡು ಕಾಲ ಕಳೆಯುತ್ತಿದ್ದ. ಅಲ್ಲಿಗೆ ಬರುವ ಭಕ್ತರಿಗೆ ತಾನು ಸ್ವಾಮೀಜಿ ಎಂದು ನಂಬಿಸಿದ್ದ.
ಸಂತ್ರಸ್ತೆ ಚೇತರಿಕೆ
ಆ್ಯಸಿಡ್ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತೆಗೆ ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಲವು ಶಸ್ತ್ರ ಚಿಕಿತ್ಸೆ ಬಳಿಕ ಕೊಂಚ ಚೇತರಿಸಿಕೊಂಡಿರುವ ಸಂತ್ರಸ್ತೆಯನ್ನು ಐಸಿಯ ಘಟಕದಿಂದ ಸುಟ್ಟು ಗಾಯಾಗಳ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಇದೀಗ ಯುವತಿ ಕೊಂಚ ಮಾತನಾಡಲು ಆರಂಭಿಸಿದ್ದಾಳೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.