ಪುಣೆ ಟೆಸ್ಟ್: ಮಯಾಂಕ್ ಶತಕ, ಟೀಂ ಇಂಡಿಯಾಗೆ ಮೊದಲ ದಿನದ ಗೌರವ

By Web DeskFirst Published Oct 10, 2019, 5:13 PM IST
Highlights

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಮಯಾಂಕ್ ಅಗರ್‌ವಾಲ್ ಆಕರ್ಷಕ ಶತಕ, ಪೂಜಾರ ಹಾಗೂ ಕೊಹ್ಲಿ ಅಜೇಯ ಅರ್ಧಶತಕ ಭಾರತಕ್ಕೆ ಮೊದಲ ದಿನದ ಗೌರವ ದಕ್ಕಿಸಿಕೊಟ್ಟಿತು. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಪುಣೆ[ಅ.10]: ಕನ್ನಡಿಗ ಮಯಾಂಕ್ ಅಗರ್‌ವಾಲ್ ಆಕರ್ಷಕ ಶತಕ, ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ 2ನೇ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್ ಕಳೆದುಕೊಂಡು 273 ರನ್ ಬಾರಿಸಿದೆ. ಈ ಮೂಲಕ ಭಾರತ ಮೊದಲ ದಿನದಾಟದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ.

ಸೆಹ್ವಾಗ್ ಹಾದಿಯಲ್ಲಿ ಮಯಾಂಕ್; ಕನ್ನಡಿಗನನ್ನು ಕೊಂಡಾಡಿದ ಟ್ವಿಟರಿಗರು..!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ವೈಜಾಗ್ ಟೆಸ್ಟ್ ಪಂದ್ಯದ 2 ಇನಿಂಗ್ಸ್’ನಲ್ಲಿ ಶತಕ ಬಾರಿಸಿದ್ದ ರೋಹಿತ್ ಶರ್ಮಾ ಕೇವಲ 14 ರನ್ ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ಇನ್ನು ಎರಡನೇ ವಿಕೆಟ್’ಗೆ ಮಯಾಂಕ್ ಅಗರ್‌ವಾಲ್-ಚೇತೇಶ್ವರ್ ಪೂಜಾರ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ 138 ರನ್’ಗಳ ಜತೆಯಾಟವಾಡಿತು. ಕಳೆದ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್’ನಲ್ಲಿ ಅರ್ಧಶತಕ ಬಾರಿಸಿದ್ದ ಪೂಜಾರ, ಪುಣೆ ಟೆಸ್ಟ್ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದರು. ಪೂಜಾರ 112 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿ ಕಗಿಸೋ ರಬಾಡಗೆ ಎರಡನೇ ಬಲಿಯಾದರು. 

INDvSA:ಸತತ 2ನೇ ಶತಕ; ಸೆಹ್ವಾಗ್ ದಾಖಲೆ ಸರಿಗಟ್ಟಿದ ಮಯಾಂಕ್!

ಮಯಾಂಕ್ ಬುಟ್ಟಿಗೆ ಮತ್ತೊಂದು ಶತಕದ ಗೊಂಚಲು: ತವರಿನಲ್ಲಿ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ್ದ ಮಯಾಂಕ್ ಅಗರ್‌ವಾಲ್, ಎರಡನೇ ಟೆಸ್ಟ್ ಪಂದ್ಯದಲ್ಲೂ ಶತಕ ಸಿಡಿಸುವ ಮೂಲಕ ಮಿಂಚಿದರು. ಈ ಮೂಲಕ ಆರಂಭಿಕನಾಗಿ ದಕ್ಷಿಣ ಆಫ್ರಿಕಾ ಎದುರು ಸತತ 2 ಶತಕ ಸಿಡಿಸಿದ ಭಾರತದ ಎರಡನೇ ಬ್ಯಾಟ್ಸ್’ಮನ್ ಎನಿಸಿದರು. ಈ ಮೊದಲು ವಿರೇಂದ್ರ ಸೆಹ್ವಾಗ್ 2009-10ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಆರಂಭಿಕನಾಗಿ 2 ಶತಕ ಬಾರಿಸಿದ್ದರು. ಮಯಾಂಕ್ ಅಗರ್‌ವಾಲ್ 195 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 108  ರನ್ ಬಾರಿಸಿ ರಬಾಡಗೆ ಮೂರನೇ ಬಲಿಯಾದರು.

ಅರ್ಧಶತಕ ಪೂರೈಸಿದ ನಾಯಕ ವಿರಾಟ್ ಕೊಹ್ಲಿ

ನಾಯಕ-ಉಪನಾಯಕರಾಟ: ಮಯಾಂಕ್ ಅಗರ್‌ವಾಲ್ ವಿಕೆಟ್ ಪತನದ ಬಳಿಕ ನಾಯಕ ವಿರಾಟ್ ಕೊಹ್ಲಿ ಕೂಡಿಕೊಂಡ ಉಪನಾಯಕ ಅಜಿಂಕ್ಯ ರಹಾನೆ ಎಚ್ಚರಿಕೆಯ ಆಟಕ್ಕೆ ಮೊರೆಹೋದರು. ಇದೇ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ವೃತ್ತಿಜೀವನದ 23ನೇ ಅರ್ಧಶತಕ ಪೂರೈಸಿದರು. ನಾಲ್ಕನೇ ವಿಕೆಟ್’ಗೆ ಈ ಜೋಡಿ ಮುರಿಯದ 75 ರನ್’ಗಳ ಜತೆಯಾಟ ನಿಭಾಯಿಸಿದೆ. ನಾಯಕ ವಿರಾಟ್ ಕೊಹ್ಲಿ 63 ಹಾಗೂ ಉಪನಾಯಕ ಅಜಿಂಕ್ಯ ರಹಾನೆ 18 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 

ಪುಣೆ ಟೆಸ್ಟ್: ಪೂಜಾರ ವಿಕೆಟ್ ಪತನ, ಶತಕದತ್ತ ಮಯಾಂಕ್

ವಿಕೆಟ್ ಪಡೆಯಲು ಪರದಾಟ: ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ 3 ವಿಕೆಟ್ ಪಡೆಯುವ ಮೂಲಕ ಅತ್ಯಂತ ಯಶಸ್ವಿ ಬೌಲರ್ ಎನಿಸಿದರು. ರಬಾಡ ಹೊರತುಪಡಿಸಿ ಉಳಿದ್ಯಾವ ಬೌಲರ್’ಗಳು ಭಾರತೀಯ ಬ್ಯಾಟ್ಸ್’ಮನ್’ಗಳಿಗೆ ಸವಾಲಾಗಿ ಪರಿಣಮಿಸಲಿಲ್ಲ. ಫಿಲಾಂಡರ್, ನೋರ್ಜೆ, ಕೇಶವ್ ಮಹರಾಜ್, ಮುತ್ತುಸ್ವಾಮಿ. ಎಲ್ಗಾರ್ ವಿಕೆಟ್ ಗಳಿಸಲು ಪರದಾಡಿದರು. ಆದರೆ ಯಶಸ್ಸು ಮಾತ್ರ ದಕ್ಕಲಿಲ್ಲ.

ಸಂಕ್ಷಿಪ್ತ ಸ್ಕೋರ್:

ಭಾರತ: 273/3
ಮಯಾಂಕ್ ಅಗರ್‌ವಾಲ್: 108
ಕಗಿಸೋ ರಬಾಡ: 48/3
[* ಮೊದಲ ದಿನದಾಟ ಮುಕ್ತಾಯಕ್ಕೆ]

click me!