
ನವದೆಹಲಿ(ಜು.08): ನೂತನ ಯುವಜನ ಮತ್ತು ಕ್ರೀಡಾಸಚಿವರಾಗಿ ಅನುರಾಗ್ ಠಾಕೂರ್ ಬುಧವಾರ(ಜ.07) ಅಧಿಕಾರ ಸ್ವೀಕರಿಸಿದ್ದಾರೆ. ಕ್ರಿಕೆಟಿಗರಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ವಿಸ್ತರಣೆ ವೇಳೆ ಅನುರಾಗ್ ಠಾಕೂರ್ ಕೇಂದ್ರ ಸಂಪುಟ ದರ್ಜೆಗೆ ಭಡ್ತಿ ಪಡೆದಿದ್ದು, ಮಾಹಿತಿ ತಂತ್ರಜ್ಞಾನ ಮತ್ತು ಪ್ರಸಾರ ಖಾತೆ ಜತೆಗೆ ಹೆಚ್ಚುವರಿಯಾಗಿ ಯುವಜನ & ಕ್ರೀಡಾ ಇಲಾಖೆ ಖಾತೆಯನ್ನು ನೀಡಲಾಗಿದೆ. ಅನುರಾಗ್ ಠಾಕೂರ್ ಮೇ 2016ರಿಂದ ಫೆಬ್ರವರಿ 2017ರವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 46 ವರ್ಷದ ಅನುರಾಗ್ ಇದೀಗ ಕ್ರೀಡಾ ಇಲಾಖೆ ಜತೆಗೆ ಮಾಹಿತಿ ಮತ್ತು ಪ್ರಸಾರ ಖಾತೆಯನ್ನು ನಿಭಾಯಿಸಲಿದ್ದಾರೆ.
ಕೇಂದ್ರ ಸಂಪುಟ ಸಚಿವನಾಗಿ ದೇಶದ ಜನರ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ತುಂಬಾ ಗೌರವದ ಸಂಗತಿಯಾಗಿದೆ. ನನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಹಮೀರ್‌ಪುರ್ ಕ್ಷೇತ್ರದ ಸಂಸದರಾಗಿರುವ ಅನುರಾಗ್ ಠಾಕೂರ್, ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಅವರ ಅಡಿಯಲ್ಲಿ ರಾಜ್ಯ ಹಣಕಾಸು ಖಾತೆಯನ್ನು ನಿಭಾಯಿಸುತ್ತಿದ್ದರು. ಅನುರಾಗ್ ಠಾಕೂರ್ ಸಹೋದರ ಅರುಣ್ ಧುಮಾಲ್ ಸದ್ಯ ಬಿಸಿಸಿಐ ಖಚಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನುರಾಗ್ ಠಾಕೂರ್ ಸೇರಿದಂತೆ 6 ಮಂದಿ ಸಂಪುಟ ದರ್ಜೆ ಸಚಿವರಾಗಿ ಭಡ್ತಿಪಡೆದಿದ್ದಾರೆ.
ಮೋದಿ ಬಳಗದಲ್ಲಿ 6 ವೈದ್ಯರು, 13 ವಕೀಲರು, 7 ಐಎಎಸ್‌ಗಳು, 5 ಎಂಜಿನಿಯರ್!
ಒಲಿಂಪಿಕ್ ಬೆಳ್ಳಿ ಪದಕ ವಿಜೇತ ರಾಜ್ಯವರ್ಧನ್ ಸಿಂಗ್ ರಾಥೋಡ್ ನಿಭಾಯಿಸುತ್ತಿದ್ದ ಕ್ರೀಡಾ ಇಲಾಖೆ ಜವಾಬ್ದಾರಿ ಮೇ 2019ರ ಬಳಿಕ ಕಿರಣ್ ರಿಜಿಜು ಹೆಗಲೇರಿತ್ತು. ಕಿರಣ್ ರಿಜಿಜು ಕ್ರೀಡಾ ಇಲಾಖೆಯನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಪ್ರಧಾನಿ ಮೋದಿ ಮನ ಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದರು. ಕಿರಣ್ ರಿಜಿಜು ಅಧಿಕಾರವಧಿಯಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಬಹುಮಾನ ಮೊತ್ತವನ್ನು ಹೆಚ್ಚಿಸಲಾಗಿತ್ತು. ಇದಷ್ಟೇ ಅಲ್ಲದೇ ಕ್ರೀಡಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಮಟ್ಟದವರೆಗೂ ಕ್ರೀಡಾ ಮೂಲಭೂತ ಸೌಕರ್ಯ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ್ದರು.
ಇನ್ನು ಅನುರಾಗ್ ಠಾಕೂರ್ ಕ್ರೀಡಾ ಇಲಾಖೆ ಸಚಿವರಾಗಿ ಆಯ್ಕೆಯಾಗುತ್ತಿದ್ದಂತೆಯೇ ಟೀಂ ಇಂಡಿಯಾ ಕ್ರಿಕೆಟಿಗರಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಸೇರಿದಂತೆ ಹಲವು ಮಂದಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.