Mr. ಬೀನ್ ಸಿಕ್ಕರೆ ಜನ ಏನು ಕೇಳ್ತಾರೆ ಗೊತ್ತೆ?

By Suvarna NewsFirst Published Jul 9, 2021, 2:38 PM IST
Highlights

ಮಿಸ್ಟರ್ ಬೀನ್ ಪಾತ್ರ ಮಾಡುವ ರೋವನ್ ಅಟ್ಕಿನ್‌ಸನ್‌ಗೆ ಜನರ ಮುಂದೆ ಅನೇಕ ಮುಜುಗರದ ಪ್ರಸಂಗಗಳು ಎದುರಾಗುತ್ತವೆ. ಅದನ್ನು ಆತ ಇಲ್ಲಿ ಹೇಳಿಕೊಂಡಿದ್ದಾನೆ.

ಇಂಗ್ಲೆಂಡ್‌ ಮೂಲದ ಮಿಸ್ಟರ್ ಬೀನ್ ಹಾಸ್ಯ ಕಾರ್ಯಕ್ರಮವನ್ನು ನೀವು ನೋಡಿಯೇ ಇರುತ್ತೀರಿ. ಇದನ್ನು ಆಧರಿಸಿದ ಆನಿಮೇಶನ್ ವಿಡಿಯೋ ಶೋಗಳು ಕೂಡ ಜನಪ್ರಿಯವಾಗಿವೆ. ನೀವು ಬೀನ್ ಅನ್ನು ಎಷ್ಟು ಸಲ ನೋಡಿದರೂ ಬೋರಾಗುವುದಿಲ್ಲ. ಮತ್ತೆ ಮತ್ತೆ ನೋಡಿದರೂ ನಗು ಉಕ್ಕುತ್ತಲೇ ಇರುತ್ತದೆ. ಈ ಶೋದ ಜೀವಾಳವೇ ಬೀನ್ ಪಾತ್ರ ವಹಿಸಿರುವ ರೋವನ್ ಅಟ್ಕಿನ್‌ಸನ್.

ಅಂದ ಹಾಗೆ, ಇವನು ತನ್ನ ರಜಾದಿನಗಳ ಕತೆಯನ್ನು ತಮಾಷೆಯಾಗಿ ಹೇಳಿಕೊಳ್ಳುತ್ತಾನೆ. ಹೆಚ್ಚಾಗಿ ವೀಕೆಂಡ್ ಯಾತ್ರೆಗೆ ಅವನು ಹೋಗುವುದಿಲ್ಲ. ಹೋದರೆ ಜನ ಗುರುತು ಹಿಡಿಯುತ್ತಾರೆ. ಗುರುತು ಹಿಡಿದು ಮಾತಾಡಿಸಿದರೆ ಪರವಾಗಿಲ್ಲ. ಆದರೆ ಅರ್ಧಂಬರ್ಧ ಗುರುತು ಹಿಡಿದರೆ ಒಳ್ಳೆ ರೇಜಿಗೆಯಾಗುತ್ತದಂತೆ. ಅಂದರೆ ಇವನೇ ಬೀನ್ ಹೌದೋ ಅಲ್ಲವೋ ಎಂಬ ಸಂಶಯದಲ್ಲಿ ಗುರಾಯಿಸುವವರು. ಹೀಗೆ ಗುರಾಯಿಸಿದ ಕೂಡಲೇ, "ಹೌದು, ನಾನೇ ಬೀನ್' ಅಂದುಬಿಡುತ್ತೇನೆ, ಯಾಕೆಂದರೆ ಮುಜುಗರ ತಪ್ಪಿಸಿಕೊಳ್ಳೋಕೆ ಅನ್ನುತ್ತಾನೆ ರೋವನ್. ಇನ್ನೊಂದು ಸಲ ಹೀಗಾಯಿತಂತೆ. ರೋವನ್ ಫೋರ್ಡ್ ಕಾರಿನ ಪಾರ್ಟ್ ಕೊಳ್ಳಲು ಹೋಗಿದ್ದ. ಅಲ್ಲಿ ಯಾರೋ ಒಬ್ಬ ಅನುಮಾನದಿಂದ ಈತನನ್ನು ಗುರಾಯಿಸುತ್ತಿದ್ದ. ಈತ ಮುಂದಿನ ಮುಜುಗರ ತಪ್ಪಿಸಿಕೊಳ್ಳಲು ಅವನೆಡೆಗೆ ನೋಡಿ ನಕ್ಕ. 

ಬಾಡಿ ಶೇಪ್ ಡ್ರೆಸ್‌ನಲ್ಲಿ ಪೋಸ್ ಕೊಟ್ಟ ಬಿಗ್‌ಬಾಸ್ ಚೆಲುವೆ ...

ಆತ ಇವನನ್ನು ನೋಡುತ್ತಾ ''ನೀವು ಮಿಸ್ಟರ್ ಬೀನ್ ಥರಾ ಕಾಣಿಸ್ತೀರಿ ಅಂತ ನಿಮಗೆ ಯಾರಾದ್ರೂ ಇದುವರೆಗೆ ಹೇಳಿದಾರಾ?'' ಅಂತ ಕೇಳಿದ. ಈತ ''ನಾನೇ ಬೀನ್ ಪಾತ್ರ ಮಾಡುವವನು, ರೋವನ್ ಅಟ್ಕಿನ್‌ಸನ್'' ಎಂದ. ಆದರೆ ಆ ಅಪರಿಚಿತ ನಂಬಲೇ ಇಲ್ಲ.

''ನೀವು ತಮಷೆ ಮಾಡ್ತಿದೀರಿ'' ಅಂದ. ಅವನನ್ನು ನಂಬಿಸಲು ರೋವನ್, ಬೀನ್‌ನಂತೆ ಉಗ್ಗುತ್ತಾ ಮಾತನಾಡಿ ಎಷ್ಟೇ ಕೋಡಂಗಿತನ ಮಾಡಿದರೂ ಅವನು ನಂಬಲೇ ಇಲ್ಲ. ಹೇಳಿದ- ''ನೋಡಿ, ನೀವು ಬೀನ್ ಥರಾನೇ ಇದೀರ. ಆ ಪಾತ್ರ ಮಾಡೋರಿಗೆ ಬಾಡಿ ಡಬಲ್ ಆಗಿ ನೀವು ಆಕ್ಟ್ ಮಾಡಬಹುದು. ಆಗ ನೀವು ಹಣದ ರಾಶಿಯ ಮೇಲೇ ಕೂತುಕೋಬಹುದು. ಹೇಗಿದೆ ಐಡಿಯಾ?'' ಎಂದು ರೋವನ್‌ಗೇ ಐಡಿಯಾ ಕೊಟ್ಟನಂತೆ! ಕಡೆಗೂ ರೋವನ್ ಸುಮ್ಮನಾಗಬೇಕಾಯಿತು. ಇಂಥ ಪ್ರಸಂಗಗಳೂ ಆಗುತ್ತವೆ. 

ಸಣ್ಣ ಕುಟುಂಬದಲ್ಲಿ ಹುಟ್ಟಿದ ರೋವನ್, ನಾಲ್ಕು ಸಹೋದರರಲ್ಲಿ ಕೊನೇಯವನು. ಇವನು ಮಾತನಾಡುವಾಗ ಉಗ್ಗುತ್ತಿದ್ದ. ಇವನ ನಗೆ ತರಿಸುವಂಥ ರೂಪ, ಉಗ್ಗುಗಳಿಂದಾಗಿ ಎಲ್ಲರೂ ಇವನನ್ನು ಹೋದಲ್ಲಿ ಬಂದಲ್ಲಿ ತಮಾಷೆ ಮಾಡುತ್ತಿದ್ದರು. ಇವನ ತಂದೆ ರೈತನಾಗಿದ್ದರಿಂದ, ಕುಟುಂಬದ ಅವಶ್ಯಕತೆಗಳನ್ನು ತೀರಿಸಲು ಕಷ್ಟವಾಗುತ್ತಿತ್ತು. ಕಾಲೇಜಿಗೆ ಸೇರಿದಾಗ ರೋವನ್‌ನ ಸ್ಥಿತಿ ಇನ್ನಷ್ಟು ಕಷ್ಟವಾಯಿತು. ಕಾಲೇಜಿನಲ್ಲೂ ಸಹಪಾಠಿಗಳು ಅವನನ್ನು ಚುಡಾಯಿಸುತ್ತಿದ್ದರು.

ಅವನ ಟೀಚರ್ಸ್ ಕೂಡ ಅವನನ್ನು ತಮಾಷೆ ಮಾಡುತ್ತಿದ್ದರಂತೆ. ಒಬ್ಬ ಟೀಚರ್ ಅಂತೂ, ನೀನು ನೋಡೋಕೆ ಅಸಹ್ಯವಾಗಿದೀಯ ಅಂತಲೂ ಹೇಳಿಬಿಟ್ಟಿದ್ದನಂತೆ. ನಾನು ಎಂಜಿನಿಯರ್ ಆಗಬಹುದು ಎಂಬ ನಂಬಿಕೆ ಯಾರಲ್ಲೂ ಇರಲಿಲ್ಲ. ಆದರೆ ನನ್ನ ಅಕಾಡೆಮಿಕ್ ಸಾಧನೆ ಎಲ್ಲರಿಗಿಂತ ಉತ್ತಮವಾಗಿತ್ತು. ಅದು ನನಗೆ ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ಜಾಗ ದೊರಕಿಸಿಕೊಟ್ಟಿತು. ಅಲ್ಲಿ ನಾನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಎಸ್‌ಸಿ ಪದವಿ ಹಾಗೂ ನಂತರ ಪಿಎಚ್‌ಡಿ ಮಾಡಿದೆ. ಆದರೆ ಎಂದೂ ಅಭಿನಯಿಸುವ ಅಭ್ಯಾಸ ಬಿಡಲಿಲ್ಲ. ಎಲ್ಲರ ಮುಂದೆ ಮಾತನಾಡುವಾಗ ಉಗ್ಗುತ್ತಿದ್ದೆ, ಆದರೆ ಸ್ಟೇಜ್ ಹತ್ತಿದಾಗ ಆ ಉಗ್ಗು ಮಾಯವಾಗುತ್ತಿತ್ತು ಎಂದು ಬೀನ್ ಹೇಳಿಕೊಂಡಿದ್ದಾನೆ. 



ನಟನೆಯಲ್ಲೂ ನನ್ನ ಹಾದಿ ಸುಗಮವಾಗಿರಲಿಲ್ಲ. ತುಂಬಾ ಟಿವಿ ಸಿರಿಯಲ್‌ಗಳಿಗೆ ಅವಕಾಶ ಕೇಳಿಕೊಂಡು ಹೋದೆ, ಹೆಚ್ಚಿನ ಕಡೆ ನನ್ನನ್ನು ತಿರಸ್ಕರಿಸಲಾಯಿತು. ಅದಕ್ಕೆ ನನ್ನ ಉಗ್ಗು ಹಾಗೂ ಚಂದವಿಲ್ಲದ ರೂಪಗಳು ಕಾರಣವಾಗಿದ್ದವು. ಬಿಬಿಸಿ ರೇಡಿಯೋದ ಕಾಮಿಡಿ ಶೋಗಳಲ್ಲಿ ಭಾಗವಹಿಸಿದೆ. ಅದರಲ್ಲಿ ದೊರೆತ ಜನಪ್ರಿಯತೆ ನನಗೆ 'ನಾಟ್ ದಿ ನೈನ್ ಒ ಕ್ಲಾಕ್ ಶೋ' ಎಂಬ ಶೋದಲ್ಲಿ ಅವಕಾಶ ನೀಡಿತು.

ಆಮೀರ್ ಖಾನ್‌ ಕಿರಣ್ ರಾವ್ ನೆಟ್‌ ವರ್ತ್‌ ನಡುವಿನ ವ್ಯತ್ಯಾಸ ಎಷ್ಟು ಗೊತ್ತಾ? ...

ನಂತರ ಬ್ಲ್ಯಾಕೇಡರ್ ಎಂಬ ಟಿವಿ ಶೊದಲ್ಲಿ ನಟಿಸಿದೆ. ಅದು ಜಗತ್ತಿನಾದ್ಯಂತ ಜನಪ್ರಿಯವಾಯಿತು. 1980ರಲ್ಲಿ ಇವನನ್ನೇ ಪ್ರಧಾನವಾಗಿ ಹೊಂದಿದ, ಹೆಚ್ಚಿನ ಮಾತಿಲ್ಲದ 'ಮಿ.ಬೀನ್' ಶೋ ರೆಡಿಯಾಯಿತು. ಅದು ಎಷ್ಟು ಜನಪ್ರಿಯ ಆಯಿತೆಂದರೆ, ನನ್ನ ಬದುಕಿನ ಭಾಗವೇ ಆಗಿಬಿಟ್ಟಿತು ಹಾಗೂ ನಾನು ಹೋದಲ್ಲಿ ಕೂಡಾ ನನ್ನನ್ನು ರೋವನ್ ಎಂಬ ಹೆಸರಿಗಿಂತಲೂ ಹೆಚ್ಚಾಗಿ ಮಿಸ್ಟರ್ ಬೀನ್ ಎಂದು ಕರೆಯುವವರೇ ಹೆಚ್ಚಾಗಿಬಿಟ್ಟರು ಎಂದು ರೋವನ್ ಹೇಳಿಕೊಂಡಿದ್ದಾನೆ.

click me!