ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್‌ನಲ್ಲಿ ಆದಾರ ಪೂನಾವಾಲಾ ಶೇ.50ರಷ್ಟು ಪಾಲು ಖರೀದಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಧರ್ಮಾ ಪ್ರೊಡಕ್ಷನ್ ನಿರ್ಮಿಸಿದ 10 ಸಿನಿಮಾಗಳಲ್ಲಿ ಒಂದೇ ಒಂದು ಹಿಟ್ ಆಗಿದ್ದು, ಉಳಿದವುಗಳು ಸೋಲು ಅಥವಾ ಸಾಧಾರಣ ಗಳಿಕೆ ಕಂಡಿವೆ.
ಮುಂಬೈ: ಕಳೆದ 15 ದಿನಗಳಿಂದ ಧರ್ಮಾ ಪ್ರೊಡಕ್ಷನ್ ಭಾರೀ ಚರ್ಚೆಯಲ್ಲಿದೆ. ಕರಣ್ ಜೋಹರ್ ಒಡೆತನದ ಬಾಲಿವುಡ್ ಅಂಗಳದಲ್ಲಿ ಹಲವು ಸೂಪರ್ ಹಿಟ್ ಸಿನಿಮ ನೀಡಿದೆ. ಸಿನಿಮಾ ಅಂದ್ರೆ ಹೀಗೂ ಇರುತ್ತೆ ಅಂತ ತೋರಿಸಿಕೊಟ್ಟಿದ್ದು ಕರಣ್ ಜೋಹರ್. ಆದರೆ ಈಗ ಕೊರೊನಾ ವ್ಯಾಕ್ಸಿನ್ ತಯಾರಿಕೆ ಕಂಪನಿ ಮಾಲೀಕ ಆದಾರ ಪೂನಾವಾಲಾ ಅವರು ಧರ್ಮಾ ನಿರ್ಮಾಣ ಸಂಸ್ಥೆಯಲ್ಲಿನ ಶೇ.50ರಷ್ಟು ಪಾಲು ಖರೀದಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಕರಣ್ ಜೋಹರ್ ಅವರೇ ಬಹಿರಂಗಪಡಿಸಿದ್ದಾರೆ.
ಆದಾರ ಪೂನವಾಲಾ ನನ್ನ ಒಳ್ಳೆಯ ಸ್ನೇಹಿತ. ಸ್ಪಷ್ಟ ಗುರಿಯೊಂದಿಗೆ ಕೆಲಸ ಮಾಡುವ ವ್ಯಕ್ತಿಯಾಗಿದ್ದು, ತುಂಬಾನೇ ಇನೋವೇಟಿವ್ ಪರ್ಸನ್. ಮುಂದೆ ಆದಾರ ಪೂನಾವಾಲಾ ತಮ್ಮಲ್ಲಿಯ ಹೊಸ ವಿಚಾರಗಳಿಂದ ಧರ್ಮಾ ಪ್ರೊಡಕ್ಷನ್‌ನಲ್ಲಿ ಹೊಸತನ ತರಲಿದ್ದಾರೆ ಎಂದು ಕರಣ್ ಜೋಹರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಧರ್ಮಾ ನಿರ್ಮಾಣ ಸಂಸ್ಥೆಯ ಪಾಲು ಮಾರಾಟಕ್ಕೆ ಕಳೆದ ಎರಡು ವರ್ಷ ಕಂಡ ಸೋಲು ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲ ಕೇಳಿ ಬಂದಿದೆ.
ಕಳೆದ ಎರಡು ವರ್ಷದಲ್ಲಿ ಅಂದ್ರೆ 2022-2024ರ ಅವಧಿ ನಡುವೆ ಧರ್ಮಾ ಪ್ರೊಡಕ್ಷನ್ 10 ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಆದ್ರೆ 10ರಲ್ಲಿ ಒಂದೇ ಸಿನಿಮಾ ಹಿಟ್ ಆಗಿತ್ತು. ರಣ್‌ವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟನೆಯ 'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ' ಮಾತ್ರ ಬಾಕ್ಸ್ ಆಫಿಸ್‌ನಲ್ಲಿ ಸದ್ದು ಮಾಡಿತ್ತು. 160 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 355.61 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ:ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ, ಮುಸ್ಲಿಂ ಹೀರೋ ಎಂಬ ಕಾರಣಕ್ಕೆ ಥಿಯೇಟರ್‌ಗೆ ಬರಲಿಲ್ಲ ಜನರು...1083 ಕೋಟಿ ಲಾಸ್!
ನಾಲ್ಕು ಸಿನಿಮಾಗಳು ಎವರೇಜ್ ಪ್ರದರ್ಶನ ಕಂಡಿದ್ದವು. ವರುಣ್ ಧವನ್ ಮತ್ತು ಕಿಯಾರಾ ಅಡ್ವಾಣಿ ನಟನೆಯ 'ಜುಗ್ ಜುಗ್ ಜಿಯೋ' ಸಿನಿಮಾ 85 ಕೋಟಿಯಲ್ಲಿ ತಯಾರಾಗಿ, 136.13 ಕೋಟಿ ರೂ. ಗಳಿಸಿತ್ತು. ಬಹುನಿರೀಕ್ಷಿತ ಬ್ರಹ್ಮಾಸ್ತ್ರ ಬರೋಬ್ಬರಿ 410 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದರು 418 ಕೋಟಿ ಹಣ ಹಿಂದಿರುಗಿತ್ತು. ಭಾರೀ ಲಾಭದ ನಿರೀಕ್ಷೆಯಲ್ಲಿದ್ದ ಕರಣ್ ಜೋಹರ್ ಬಾಕ್ಸ್ ಆಫಿಸ್ ಕಲೆಕ್ಷನ್ ಕಂಡು ನಿರಾಸೆಯಾಗಿದ್ದರು. ಇನ್ನು 40 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಕಿಲ್' 47 ಕೋಟಿ ಗಳಿಸಿತ್ತು. ಇನ್ನು ಬ್ಯಾಡ್ ನ್ಯೂಜ್ 80 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಆದ್ರೆ ಇದು ಸಹ 115.74 ಕೋಟಿ ರೂ, ಮಾತ್ರ ಗಳಿಸುವಲ್ಲಿ ಶಕ್ತವಾಯ್ತು.
ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ 'ಯೋದ್ಧಾ' 55 ಕೋಟಿಯಲ್ಲಿ ತಯಾರಿಯಾಗಿ 52 ಕೋಟಿ ಮಾತ್ರ ಗಳಿಸಿತ್ತು. 90 ಕೋಟಿಯಲ್ಲಿ ರೆಡಿಯಾಗಿದ್ದ 'ಜಿಗರಾ' ಸಿನಿಮಾ ಗಳಿಸಿದ್ದು ಕೇವಲ 52.07 ಕೋಟಿ ರೂಪಾಯಿ. ಲೈಗರ್, ಸೆಲ್ಫಿ ಬಾಕ್ಸ್ ಆಫಿಸ್‌ನಲ್ಲಿ ಹೀನಾಯ ಸೋಲು ಕಂಡಿವೆ. ಇದೆಲ್ಲಾ ಲೆಕ್ಕಾಚಾರದಿಂದ ಕರಣ್ ಜೋಹರ್ ತಮ್ಮ ನಿರ್ಮಾಣ ಸಂಸ್ಥೆಯ ಅರ್ಧ ಪಾಲು ಮಾರಾಟ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: 20 ಕೋಟಿ ಗಳಿಸಲು ಸಹ ವಿಫಲವಾದ 200 ಕೋಟಿಯ ಚಿತ್ರ- ದೊಡ್ಡ ದೊಡ್ಡ ಸ್ಟಾರ್‌ಗಳಿದ್ರೂ ಹೀನಾಯ ಸೋಲು!