Fast And Furious ಸಿನಿಮಾ ನೋಡುವವರಿಗೆ ವೆಬ್‌ಸೈಟ್‌ನ ಬಿಗ್ ಆಫರ್

By Anusha KbFirst Published May 8, 2023, 11:30 AM IST
Highlights

ಫಾಸ್ಟ್ & ಫ್ಯೂರಿಯಸ್ ಸಿರೀಸ್‌ನಡಿ ಬಂದ ಎಲ್ಲಾ ಸಿನಿಮಾಗಳನ್ನು ವೀಕ್ಷಿಸುವವರಿಗೆ ವೆಬ್‌ಸೈಟೊಂದು ಬಿಗ್ ಆಫರ್ ನೀಡಿದ್ದು, ಈ ಎಲ್ಲಾ ಸಿನಿಮಾವನ್ನು ವೀಕ್ಷಿಸುವವರಿಗೆ 1 ಸಾವಿರ ಡಾಲರ್ ನೀಡುವುದಾಗಿ ಹೇಳಿದೆ.

ನ್ಯೂಯಾರ್ಕ್‌: ಫಾಸ್ಟ್ & ಫ್ಯೂರಿಯಸ್ ಸಿರೀಸ್‌ನಡಿ ಬಂದ ಎಲ್ಲಾ ಸಿನಿಮಾಗಳನ್ನು ವೀಕ್ಷಿಸುವವರಿಗೆ ವೆಬ್‌ಸೈಟೊಂದು ಬಿಗ್ ಆಫರ್ ನೀಡಿದ್ದು, ಈ ಎಲ್ಲಾ ಸಿನಿಮಾವನ್ನು ವೀಕ್ಷಿಸುವವರಿಗೆ 1 ಸಾವಿರ ಡಾಲರ್ ನೀಡುವುದಾಗಿ ಹೇಳಿದೆ. ಹಾಗಂತ ಸುಮ್ಮನೇ ಸಿನಿಮಾ ನೋಡುವುದಲ್ಲ, ಸಿನಿಮಾ ನೋಡುವವರಿಗೆ ವೆಬ್‌ಸೈಟ್‌ ಒಂದು ಟಾಸ್ಕ್ ನೀಡಿದ್ದು,  ಸಿನಿಮಾ ನೋಡುವವರು, ಈ ಸಿನಿಮಾದಲ್ಲಿ ಆಗುವ ಕಾರು ಅಪಘಾತಗಳು, ಹಾನಿಯ ಪ್ರಮಾಣ ಹಾಗೂ ಯಾವ ಕಾರನ್ನು ಬಳಸಲಾಗಿದೆ ಎಂಬ ಪ್ರತಿಯೊಂದು ಅಂಶವನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. 

'ಫಾಸ್ಟ್ ಅಂಡ್ ಫ್ಯೂರಿಯಸ್' ಫ್ರ್ಯಾಂಚೈಸ್‌ನ ಎಲ್ಲಾ ಚಲನಚಿತ್ರಗಳನ್ನು ವೀಕ್ಷಿಸಲು ಸಿದ್ಧರಾಗಿರುವ ಯಾರಿಗಾದರೂ ಹಣಕಾಸಿನ ವೆಬ್‌ಸೈಟೊಂದು  1,000 ಡಾಲರ್ ನೀಡಲಿದೆ ಎಂದು CNN ವರದಿ ಮಾಡಿದೆ.  ಫೈನಾನ್ಸ್‌ಬಝ್ (FinanceBuzz) ಹೆಸರಿನ ಈ ಹಣಕಾಸಿಗೆ ಸಂಬಂಧಿಸಿದ ವೆಬ್‌ಸೈಟ್‌ ಈ ಆಫರ್ ನೀಡಿದ್ದು, ಇದು, ಹಣ ಸಂಬಂಧಿತ ಸಲಹೆಗಳು ಮತ್ತು ಶಿಫಾರಸುಗಳನ್ನು ನೀಡುವ ಮಾಹಿತಿಯ ಸೈಟ್ ಆಗಿದೆ. ಹಾಲಿವುಡ್ ನಟ ವಿನ್ ಡೀಸೆಲ್ ನಟಿಸಿದ ಜಾಗತಿಕ ಆಕ್ಷನ್ ಸಿನಿಮಾದ  ಎಲ್ಲಾ 10 ಚಲನಚಿತ್ರಗಳನ್ನು ವೀಕ್ಷಿಸಲು ಬಯಸುವವರಿಗೆ ಈ ಸಂಸ್ಥೆ ಟಾಸ್ಕ್ ಜೊತೆ 1000 ಡಾಲರ್  ಹಣ ನೀಡುವ ಘೋಷಣೆ ಮಾಡಿದೆ. 

Latest Videos

ಅಗಲಿದ ಸಹನಟ, ಗೆಳೆಯನ ಮಗಳಿಗೆ ತಂದೆ ಸ್ಥಾನ ತುಂಬಿದ Fast and Furious ನಟ

ಪ್ರತಿ ಸಿನಿಮಾದಲ್ಲಿ ಸಂಭವಿಸುವ ಪ್ರತಿ ಕಾರು ಅಪಘಾತದಿಂದ ಆದ ಹಾನಿಯನ್ನು ಪತ್ತೆಹಚ್ಚುವುದು ಇದರ ಹಿಂದಿನ ಉದ್ದೇಶವಾಗಿದೆ. ವೆಬ್‌ಸೈಟ್ ನೀಡಿರುವ ಆಫರ್ ಪ್ರಕಾರ, ಸ್ಪರ್ಧೆಯ ವಿಜೇತರು ಪ್ರತಿ ಕಾರ್ ಅಪಘಾತವನ್ನು ಎಚ್ಚರಿಕೆಯಿಂದ ಗಮನಿಸಬೇಕು, ಜೊತೆಗೆ ಅದು ಉಂಟು ಮಾಡಿದ ಹಾನಿಯ ಪ್ರಮಾಣವನ್ನು ತಿಳಿಸಬೇಕು ಹಾಗೂ ಯಾವ ಕಾರು ಅಪಘಾತಕ್ಕೊಳಗಾಗಿದೆ ಎಂಬುದನ್ನು ತಿಳಿಸಬೇಕು. 

ವೆಬ್‌ಸೈಟ್‌ ಪ್ರಕಟಿಸಿರುವ ಮಾಹಿತಿ ಪ್ರಕಾರ, ಮೇ 19 ರಂದು ಮುಂಬರುವ 'ಫಾಸ್ಟ್ ಎಕ್ಸ್' ಬಿಡುಗಡೆಗೆ ಮುಂಚಿತವಾಗಿ, ನಾವು ಫಾಸ್ಟ್ & ಫ್ಯೂರಿಯಸ್ ಫ್ರ್ಯಾಂಚೈಸ್‌ನಲ್ಲಿ ಎಲ್ಲಾ 10 ಚಲನಚಿತ್ರಗಳನ್ನು ವೀಕ್ಷಿಸಲು ಯಾರನ್ನಾದರೂ ಹುಡುಕುತ್ತಿದ್ದೇವೆ. ಇದು Nitrous oxide ಇಂಧನ ಇರುವ ಕಾರು ರೇಸ್‌ಗೆ ಸಂಬಂಧಿಸಿದ ಕತೆ ಆಗಿದ್ದು, 20 ಗಂಟೆಗಳಿಗಿಂತ ಹೆಚ್ಚು, ಇರುವ ಈ ಸಿನಿಮಾಗಳ ವೀಕ್ಷಣೆ  ಸಮಯದಲ್ಲಿ ನೀವು ಎಲ್ಲಾ ಕಾರ್ ಕ್ರ್ಯಾಶ್‌ಗಳು ಹಾಗೂ ಹಾನಿಯನ್ನು ಟ್ರ್ಯಾಕ್ ಮಾಡಬೇಕು. ಫ್ರ್ಯಾಂಚೈಸ್‌ನ ಅಜಾಗರೂಕ ಚಾಲನೆಯಿಂದ ತಗಲುವ ವಿಮಾ ವೆಚ್ಚವನ್ನು  ಅಂದಾಜು ಮಾಡಲು ನಮ್ಮ ತಂಡವು ನಿಮ್ಮ ಸಂಶೋಧನೆಗಳನ್ನು ಬಳಸುತ್ತದೆ ಎಂದು ವೆಬ್‌ಸೈಟ್ ಹೇಳಿಕೊಂಡಿದೆ. 

ಫಾಸ್ಟ್ ಆ್ಯಂಡ್‌ ಫ್ಯೂರಿಯಸ್‌ ಜಬರ್‌ದಸ್ತ್‌ ಟ್ರೈಲರ್‌ ಇಲ್ಲಿದೆ

ಇದರ ಜೊತೆಗೆ ಸ್ಟ್ರೀಮಿಂಗ್ ಶುಲ್ಕಗಳು, ಚಲನಚಿತ್ರ ಟಿಕೆಟ್‌ಗಳು ಮತ್ತು ತಿಂಡಿಯ ವೆಚ್ಚವನ್ನು ಸರಿದೂಗಿಸಲು ನಾವು ನಮ್ಮ ಫಾಸ್ಟ್ ಮತ್ತು ಫ್ಯೂರಿಯಸ್ ಕ್ಲೈಮ್‌ಗಳ ಅಡ್ಜಸ್ಟರ್‌ಗೆ $1,000 ಮತ್ತು $100 ಹೆಚ್ಚುವರಿ ಹಣ ಪಾವತಿಸುತ್ತೇವೆ. ಜೊತೆಗೆ ಬೋನಸ್ ಆಗಿ, ನೀವು ಕುಟುಂಬ ಮೌಲ್ಯದ ಬಗ್ಗೆ ಆರೋಗ್ಯಕರ ಶಿಕ್ಷಣವನ್ನು ಪಡೆಯುತ್ತೀರಿ. ಅಲ್ಲದೇ ಈ ವೆಬ್‌ಸೈಟ್‌, ಫಾಸ್ಟ್ & ಫ್ಯೂರಿಯಸ್‌ ಸೀರಿಸ್‌ ಇತಿಹಾಸದಲ್ಲಿ ಈ ಚಲನಚಿತ್ರಗಳಲ್ಲಿ ಧ್ವಂಸಗಳ (ಹಾನಿ) ಸಂಖ್ಯೆ ಹೆಚ್ಚಿದೆಯೇ ಅಥವಾ ಕಡಿಮೆಯಾಗಿದೆಯೇ ಎಂಬುದನ್ನು ಕಂಡುಹಿಡಿಯುವುದಕ್ಕೂ ಒಬ್ಬರನ್ನು ನಿಯೋಜಿಸಲಿದೆ. 

ಈ ಉದ್ಯೋಗ ವಿವರದ ಪ್ರಕಾರ, ಜಾಗತಿಕ ಬಿಲಿಯನ್-ಡಾಲರ್ ಫ್ರ್ಯಾಂಚೈಸ್‌ನ ಅಜಾಗರೂಕ ಚಾಲನೆಯ ವಿಮಾ ಪ್ರಭಾವವನ್ನು ಅಂದಾಜು ಮಾಡಲು ಕ್ಲೈಮ್‌ಗಳ ಹೊಂದಾಣಿಕೆದಾರರ ಸಂಶೋಧನೆಗಳನ್ನು ಬಳಸಲಾಗುತ್ತದೆ. ಮುಂಬರುವ ಕಥೆಗಾಗಿ ವಿಜೇತರ ಟಿಪ್ಪಣಿಗಳನ್ನು ಸಹ ಇದು ಒಳಗೊಂಡಿರುತ್ತದೆ ಎಂದು ಕಂಪನಿ ಹೇಳುತ್ತದೆ. ಇದಕ್ಕಾಗಿ ಅಮೆರಿಕಾ ಮೂಲದ ಅರ್ಜಿದಾರರು ಮೇ 19ರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗಿದೆ.  ಮೇ 26ಕ್ಕೆ ವಿಜೇತರ ಘೋಷಣೆ ಆಗಲಿದೆ. ವಿಜೇತರಿಗೆ ಸಿನಿಮಾ ವೀಕ್ಷಣೆಗೆ ಎರಡು ವಾರಗಳ ಕಾಲಾವಕಾಶ ನೀಡಲಾಗುತ್ತದೆ. 

ಗಮನಾರ್ಹವಾಗಿ, 'ಫಾಸ್ಟ್ & ಫ್ಯೂರಿಯಸ್ 10' ಅನ್ನು 'ಫಾಸ್ಟ್ ಎಕ್ಸ್' ಎಂದು ಹೆಸರಿಡಲಾಗಿದ್ದು. ಮೇ 19, ರಂದು ಬಿಡುಗಡೆಯಾಗಲಿದೆ. ಲೂಯಿಸ್ ಲೆಟೆರಿಯರ್ ನಿರ್ದೇಶಿಸಿದ ಈ ಚಲನಚಿತ್ರವು ಡೊಮ್ ಟೊರೆಟ್ಟೊ (ವಿನ್ ಡೀಸೆಲ್) ತನ್ನ ಕುಟುಂಬವನ್ನು ಡಾಂಟೆ ರೆಯೆಸ್ (ಜೇಸನ್ ಮೊಮೊವಾ)ನಿಂದ ರಕ್ಷಿಸಲು ಪ್ರಯತ್ನಿಸುವ ಕತೆ ಹೊಂದಿದೆ. ಈ ಚಿತ್ರದಲ್ಲಿ ಜೇಸನ್ ಸ್ಟಾಥಮ್, ಜಾನ್ ಸೆನಾ (John Cena), ಬ್ರೀ ಲಾರ್ಸನ್ (Brie Larson), ಟೈರೆಸ್ ಗಿಬ್ಸನ್ (Tyrese Gibson), ಲುಡಾಕ್ರಿಸ್, ಜೋರ್ಡಾನಾ ಬ್ರೂಸ್ಟರ್ (Jordana Brewster), ನಥಾಲಿ ಇಮ್ಯಾನುಯೆಲ್ (Nathalie Emmanuel), ಸಂಗ್ ಕಾಂಗ್, ಸ್ಕಾಟ್ ಈಸ್ಟ್‌ವುಡ್, ಮೈಕೆಲ್ ರೂಕರ್ (Michael Rooker), ಡೇನಿಯಲಾ ಮೆಲ್ಚಿಯರ್, ಅಲನ್ ರಿಚ್ಸನ್, ಹೆಲೆನ್ ಮಿರೆನ್ (Helen Mirren) ಮತ್ತು ಕಾರ್ಡಿ ಬಿ ಇದ್ದಾರೆ. 

click me!