ಗಂಗೂಬಾಯಿ ಭೇಟಿ ವೇಳೆ ಮನದಿಂಗಿತ ವ್ಯಕ್ತಪಡಿಸಿದ್ದ ಲತಾ
ಲತಾಜಿ ಸ್ಮರಿಸಿದ ಗಂಗೂಬಾಯಿ ಹಾನಗಲ್ ಮೊಮ್ಮಗಳು
ಗಂಗಜ್ಜಿಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದ ಲತಾ ಮಂಗೇಶ್ಕರ್
ಹುಬಳ್ಳಿ(ಫೆ.07): ಮುಂದಿನ ಜನ್ಮದಲ್ಲಿ ಶಾಸ್ತ್ರೀಯ ಸಂಗೀತಗಾರ್ತಿಯಾಗುವ ಬಯಕೆಯಿದೆ..... ಹಿಂದೂಸ್ತಾನಿ ಸಂಗೀತದ ದಂತಕತೆ ಗಂಗೂಬಾಯಿ ಹಾನಗಲ್(gangubai hangal) ಅವರೆದುರು ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್(Lata Mangeshkar) ತಮ್ಮ ಹೆಬ್ಬಯಕೆಯನ್ನು ತೆರೆದಿಟ್ಟಿದ್ದರು. ಇಬ್ಬರು ಸಾಕಷ್ಟುಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಗಂಗೂಬಾಯಿ ಹಾನಗಲ್ ಅವರಿಗೆ 1997ರಲ್ಲಿ ಲತಾ ಮಂಗೇಶ್ಕರ್ ಅವರ ತಂದೆ ಮರಾಠಿ ರಂಗಭೂಮಿ ನಟ, ನಾಟ್ಯ ಸಂಗೀತಗಾರ ಮತ್ತು ಅಸಾಧಾರಣ ಹಿಂದುಸ್ತಾನಿ ಶಾಸ್ತ್ರೀಯ ಗಾಯಕ ದೀನನಾಥ ಮಂಗೇಶ್ಕರ(deenanath mangeshkar) ಅವರ ಹೆಸರಲ್ಲಿ ನೀಡಲಾಗುವ ಪ್ರಶಸ್ತಿ ಪ್ರದಾನವಾಗಿತ್ತು. ಬಳಿಕ ಭೇಟಿಯಾಗಿದ್ದ ಲತಾ ಮಂಗೇಶ್ಕರ್ ಅವರು ಗಂಗಜ್ಜಿಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದರು.
ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳು ವೈಷ್ಣವಿ ಹಾನಗಲ್ ಮಾತನಾಡಿ, ‘ಇಬ್ಬರ ನಡುವೆ ಸಂಗೀತದ ಕುರಿತು ಪ್ರೀತಿಪೂರ್ವಕ ಚರ್ಚೆ ಆಗುತ್ತಿತ್ತು. ತಮ್ಮ ಸಹೋದರ ಸಂಗೀತ ನಿರ್ದೇಶಕ ಹೃದಯನಾಥ ಮಂಗೇಶ್ಕರ್ ಅವರ ಜತೆಗೆ ಹುಬ್ಬಳ್ಳಿಯಲ್ಲೂ ಅಜ್ಜಿಯನ್ನು ಭೇಟಿ ಆಗಿದ್ದರು. ಅವರು ಸಿಕ್ಕಾಗ ‘ನನಗೆ ಮುಂದಿನ ಜನ್ಮ ಎಂದಿದ್ದರೆ ನಿಮ್ಮಂತೆ ಶಾಸ್ತ್ರೀಯ ಸಂಗೀತಗಾರ್ತಿಯಾಗುವೆ ಎಂದು ತಮ್ಮ ಆಸೆ ತೋಡಿಕೊಂಡಿದ್ದರು ಎಂದು ತಿಳಿಸಿದರು.
RIP Lata Mangeshkar ಪಂಚಭೂತಗಳಲ್ಲಿ ಲತಾ ಮಂಗೇಶ್ಕರ್ ಲೀನ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!
ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಗಂಗಜ್ಜಿಯ ಮನೆಯಲ್ಲಿ ಗಂಗೂಬಾಯಿ ಹಾನಗಲ್ ಮ್ಯೂಸಿಯಂನಲ್ಲಿ ಲತಾ ಮಂಗೇಶ್ಕರ್ ಹಾಗೂ ಗಂಗೂಬಾಯಿ ಹಾನಗಲ್ ಅವರು ಒಟ್ಟಿಗಿರುವ ಫೋಟೋವನ್ನು ಜೋಡಿಸಲಾಗಿದೆ. ಭಾನುವಾರ ನಡೆದ ತಿಂಗಳ ಸಂಗೀತ ಕಾರ್ಯಕ್ರಮ ಸ್ವರ ಶ್ರದ್ಧಾಂಜಲಿ ಮೂಲಕ ಲತಾ ಮಂಗೇಶ್ಕರ್ ಅವರಿಗೆ ಗೌರವ ಅರ್ಪಿಸಲಾಯಿತು.
ಸಂಗೀತ ಸಂಪತ್ತೇ ನಮ್ಮ ಬಳಿ ಇದೆ, ಆದರೆ ಅವರೇ ಇಲ್ಲ
ನಾನು ಚಿಕ್ಕವನಿದ್ದಾಗಲೇ ವಿಧಿವಶರಾದ ತಂದೆ (ಆರ್.ಕೆ. ಶೇಖರ್), ತಾವು ಮಲಗುವ ಜಾಗದ ಸಮೀಪ ಲತಾ ಮಂಗೇಶ್ಕರ್ ಅವರ ಫೋಟೋವನ್ನು ತಪ್ಪದೇ ಇಟ್ಟುಕೊಳ್ಳುತ್ತಿದ್ದರು. ಬೆಳಗ್ಗೆ ಎದ್ದಾಗಲೆಲ್ಲಾ ಅವರ ಮುಖ ನೋಡುತ್ತಿದ್ದರು. ಸಂಗೀತ ನಿರ್ದೇಶಕರಾಗಿದ್ದ ಅವರು ರೆಕಾರ್ಡಿಂಗ್‌ಗೆ ಹೋಗಲು ಆ ಫೋಟೋದಿಂದಲೇ ಪ್ರೇರಣೆ ಪಡೆಯುತ್ತಿದ್ದರು. ಅಲ್ಲಿಂದ ಲತಾ ಅವರ ಬಗ್ಗೆ ನನಗೆ ಗೊತ್ತಾಯಿತು. ಲತಾ ಅವರ ಜತೆ ಕೆಲವೊಂದು ಗೀತೆಗಳನ್ನು ಧ್ವನಿಮುದ್ರಿಸುವ, ಹಾಡು ಹಾಡುವ, ಅವರ ಶೋಗಳಲ್ಲಿ ಭಾಗಿಯಾಗುವ ಅವಕಾಶ ನನಗೆ ಸಿಕ್ಕಿತ್ತು. ಅದು ನನ್ನ ಅದೃಷ್ಟ. ಕಾರ್ಯಕ್ರಮದ ವೇದಿಕೆಗಳಲ್ಲಿ ಪ್ರದರ್ಶನ ನೀಡುವ ವಿಚಾರವಾಗಿ ಅತ್ಯಂತ ಮಹತ್ವವಾದುದನ್ನು ಅವರ ಶೋಗಳಿಂದಲೇ ನಾನು ಕಲಿತಿದ್ದೇನೆ ಎಂದು ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಹೇಳಿದ್ದಾರೆ.
RIP Lata Mangeshkar:ಕನ್ನಡ ನಾಡಿನೊಂದಿಗೆ ಲತಾ ಫ್ಯಾಮಿಲಿಯ ಬಾಂಧವ್ಯ, ಹಾಡು ಸ್ಮರಿಸಿದ ಶಿವಣ್ಣ
ಮೊದಲೆಲ್ಲಾ ನಾನು ಹಾಡುಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಿದವನೇ ಅಲ್ಲ. ಸಂಗೀತ ನಿರ್ದೇಶಕ ಹಾಗೂ ಸಂಯೋಜಕನಾಗಿಯೇ ನನ್ನನ್ನು ನಾನು ಕಲ್ಪಿಸಿಕೊಳ್ಳುತ್ತಿದ್ದೆ. ಕೆಲವೊಂದು ಹಾಡುಗಳನ್ನು ಲತಾ ಅವರಿಗಾಗಿ ಸಂಯೋಜಿಸಿದ್ದೇನೆ. ಸಂಜೆ 4ಕ್ಕೆ ರಿಹರ್ಸಲ್ ಮುಗಿದ ಬಳಿಕ ಅವರು ಕೋಣೆಯೊಂದಕ್ಕೆ ತೆರಳಿಬಿಡುತ್ತಿದ್ದರು. ತಮ್ಮ ಸಹಾಯಕನ ಜತೆ ಕುಳಿತು ನಿಧಾನವಾಗಿ ಹಾಡನ್ನು ಹಾಡುತ್ತಿದ್ದರು. ಪ್ರತಿ ಸಾಲನ್ನೂ ಸ್ಪಷ್ಟವಾಗಿ ಹಾಡುತ್ತಿದ್ದರು. ಒಮ್ಮೆ ನಾನು ಆ ಸಂದರ್ಭದಲ್ಲಿ ಒಳಗೆ ಹೋದೆ. ಆ ಒಂದು ಘಟನೆ ನನ್ನ ಜೀವನವನ್ನೇ ಬದಲಿಸಿತು. ಅಂದಿನಿಂದ ಪ್ರತಿ ಶೋಗೆ ಹೋಗುವ ಮುನ್ನ ನಾನು ಅಭ್ಯಾಸ ಮಾಡುತ್ತಿದ್ದೆ. ಪ್ರತಿ ಸಾಲನ್ನೂ ಅಭ್ಯಸಿಸಿ, ಆ ಗೀತೆಯ ಹಿಂದಿನ ಉದ್ದೇಶವನ್ನು ಹುಡುಕಲು ಆರಂಭಿಸಿದೆ ಎಂದು ಎ ಆರ್ ರೆಹಮಾನ್ ಹೇಳಿದ್ದಾರೆ.
ಲತಾ ನಿಧನಕ್ಕೆ ಪಾಕಿಸ್ತಾನದಲ್ಲೂ ಕಂಬನಿ
ಗಾನ ಸರಸ್ವತಿ ಲತಾ ಮಂಗೇಶ್ಕರ್ ನಿಧನಕ್ಕೆ ನೆರೆಯ ದೇಶ ಪಾಕಿಸ್ತಾನವೂ ಸಂತಾಪ ಸೂಚಿಸಿದೆ. ಪ್ರಧಾನಿ ಇಮ್ರಾನ್ ಖಾನ್, ರಾಜಕಾರಣಿಗಳು, ಕ್ರಿಕೆಟಿಗರು ಮತ್ತು ಅನೇಕ ನಾಗರಿಕರು ಲತಾ ಅವರ ನಿಧನಕ್ಕೆ ಕಂಬನಿ ಮಿಡಿದು, ‘ವಿಶ್ವ ಸಂಗೀತದ ಕರಾಳ ದಿನ’ ಎಂದು ಹೇಳಿದ್ದಾರೆ. ಅಲ್ಲದೆ ಲತಾ ಅವರನ್ನು ‘ಉಪಖಂಡದ ಕೋಗಿಲೆ’, ‘ಮೆಲೋಡಿ ಕ್ವೀನ್’ ಎಂದು ವರ್ಣಿಸಿದ್ದಾರೆ. ನಾಲ್ಕು ದಿನಗಳ ಕಾಲ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ಇಮ್ರಾನ್ ಖಾನ್, ‘ಜಗತ್ತಿನ ಶ್ರೇಷ್ಠ ಗಾಯಕಿಯರಲ್ಲಿ ಒಬ್ಬರನ್ನು ಈ ಉಪಖಂಡವು ಕಳೆದುಕೊಂಡಿದೆ. ಅವರ ಹಾಡುಗಳನ್ನು ಕೇಳುವುದು ಪ್ರಪಂಚದಾದ್ಯಂತದ ಅನೇಕರಿಗೆ ಅತೀವ ಸಂತಸ ನೀಡುತ್ತದೆ ’ಎಂದು ಟ್ವೀಟ್ ಮಾಡಿದ್ದಾರೆ.