ಎನ್‌ಡಿಎ ಒಪ್ಪಂದ ಮಾಡಿದ ನಂತರವೂ ಕೆಲ ಸೆಲೆಬ್ರಿಟಿಗಳು ತಮ್ಮ ಮದ್ವೆ ವೀಡಿಯೋ ಲೀಕ್ ಮಾಡುವಂತೆ ಕೇಳಿದ್ರಂತೆ ಹೀಗಂತಾ ಹೇಳಿದ್ದಾರೆ ಸೆಲೆಬ್ರಿಟಿಗಳ ಮದುವೆ ವಿಡಿಯೋಗ್ರಾಫರ್ ಆಗಿರುವ ವಿಶಾಲ್ ಪಂಜಾಬಿ. ತಮ್ಮ ಮದುವೆ ವೀಡಿಯೋಗಳನ್ನು ಎಲ್ಲಿಯೂ ಸೋರಿಕೆ ಮಾಡಬಾರದು ಎಂದು ಎನ್‌ಡಿಎ ಒಪ್ಪಂದ ಮಾಡಿಕೊಂಡ ನಂತರವೂ ಈ ಜೋಡಿಗಳು ನಂತರದಲ್ಲಿ ವೀಡಿಯೋಗ್ರಾಫರ್‌ಗಳ ಬಳಿ ಅವರೇ ಹೋಗಿ ತಮ್ಮ ಮದುವೆ ವೀಡಿಯೋವನ್ನು ಲೀಕ್ ಮಾಡುವಂತೆ ಕೇಳಿದ್ದರಂತೆ. ಇದನ್ನ ಸ್ವತಃ ವಿಶಾಲ್ ಪಂಜಾಬಿಯವರೇ 'ಆಫ್ಟರ್ ಅವರ್ಸ್'ನ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ದೇಶದ ಸೆಲೆಬ್ರಿಟಿ ಜೋಡಿಗಳಾದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ: ರಣ್‌ವೀರ್ ಸಿಂಗ್ ಅವರ ಮದುವೆಗಳು ಯಾವುದೇ ಫೇರಿಟೇಲ್ ಮದುವೆಗಿಂತ ಕಡಿಮೆ ಏನಿರಲಿಲ್ಲ, ಈ ಎರಡೂ ಜೋಡಿಗಳು ತಮ್ಮ ಪ್ರೀತಪಾತ್ರರ ಸಮ್ಮುಖದಲ್ಲಿ ಇಟಲಿಯಲ್ಲಿ ಮದುವೆಯಾಗಿದ್ದರು. ಇವರ ಮದುವೆಯ ವೀಡಿಯೋಗ್ರಾಫಿಯನ್ನು ವಿಶಾಲ್ ಪಂಜಾಬಿ ಅಲಿಯಾಸ್ 'ದಿ ವೆಡ್ಡಿಂಗ್ ಫಿಲ್ಮರ್' ಮಾಡಿದ್ದರು. ಇಂತಹ ಸೆಲೆಬ್ರಿಟಿ ವಿಡಿಯಗ್ರಾಪರ್ ಆಗಿರುವ ವಿಶಾಲ್ ಈಗ ಸೆಲೆಬ್ರಿಟಿಗಳ ಮದುವೆ ಬಗೆಗಿನ ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ತೆರೆದಿಟ್ಟಿದ್ದಾರೆ.
ಸೆಲೆಬ್ರಿಟಿಗಳು ಮದುವೆ ವಿಡಿಯೋದ ಕಂಟ್ರಾಕ್ಟ್ ನೀಡುವ ವೇಳೆ ಎನ್‌ಡಿಎ (non-disclosure agreement)ಗೆ ಸಹಿ ಹಾಕಿಸಿಕೊಳ್ಳುತ್ತಿದ್ದರು. ಸೆಲೆಬ್ರಿಟಿ ವಿವಾಹಗಳು, ಹೈ ಪ್ರೊಫೈಲ್ ವಿವಾಹಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವ ಸಲುವಾಗಿ ಫೋಟೋಗ್ರಾಫರ್‌ಗಳು ಈ ಫೋಟೋ ವಿಡಿಯೋಗಳನ್ನು ಬಹಿರಂಗಪಡಿಸುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ. ಅದೇ ರೀತಿ ನನ್ನ ವಿಚಾರದಲ್ಲೂ ನಡೆಯಿತು ಹಲವು ಸೆಲೆಬ್ರಿಟಿ ದಂಪತಿಗಳು ಎನ್‌ಡಿಎಗೆ ಸಹಿ ಹಾಕಿಸಿಕೊಂಡರು ಆದರೆ ಇದಾದ ನಂತರ ಪ್ರಮೋಷನ್‌ಗಾಗಿ ಅವರೇ ನನಗೆ ಅವರ ಮದುವೆ ವೀಡಿಯೋಗಳನ್ನು ಲೀಕ್ ಮಾಡುವಂತೆ ಹೇಳಿದ್ದರು ಎಂಬ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಸೆಲೆಬ್ರಿಟಿ ವೆಡ್ಡಿಂಗ್ ಅಂದ್ರೆ ಎಷ್ಟು ದುಡ್ಡು ಖಾಲಿಯಾಗುತ್ತೆ, ಇವರು ಹೇಳ್ತಾರೆ ಕೇಳಿ!
ಇಂತಹ ಕೋರಿಕೆಗಳು ನಮಗೆ ಅಚ್ಚರಿಯುಂಟು ಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಎನ್‌ಡಿಎ ರೂಲ್ಸ್‌ಗಳು ಸಾಕಷ್ಟು ಕಟ್ಟುನಿಟ್ಟಾಗಿರುವುದರಿಂದ ಈ ರೀತಿಯ ವಿನಂತಿಗಳು ನಮ್ಮನ್ನು ಇಕ್ಕಟ್ಟಿನಲ್ಲಿ ಸಿಲುಕಿಸುತ್ತವೆ. ಇದನ್ನೇ ಅವರಿಗೆ ಹೇಳಿದರೆ ಫೋನ್‌ನಲ್ಲಿ ರೆಕಾರ್ಡ್ ಮಾಡಿದಂತೆ ಕಾಣುವಂತೆ ವೀಡಿಯೋ ಕ್ಲಿಪ್ ಮಾಡಿ ಲೀಕ್ ಮಾಡುವಂತೆ ಕೇಳುತ್ತಾರೆ ಎಂದು ವಿಶಾಲ್ ಹೇಳಿದ್ದಾರೆ ಆದರೆ ಯಾರು ಆ ರೀತಿ ವಿನಂತಿ ಮಾಡಿದರು ಎಂಬ ವಿಚಾರವನ್ನು ವಿಶಾಲ್ ಬಹಿರಂಗಪಡಿಸಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಹೋದಲ್ಲಿ ಬಂದಲ್ಲಿ ಬಿಡದೇ ಹಿಂಬಾಲಿಸಿ ಫೋಟೋ ವೀಡಿಯೋ ಮಾಡಿ ಹಾಕುವ ಪಪಾರಾಜಿಗಳಿಗೆ ಬಹುತೇಕ ನೆಟ್ಟಿಗರು ಇವರಿಗೆ ಬೇರೆ ಕೆಲಸ ಇಲ್ವೆ ಎಂದು ಬೈದು ಕಾಮೆಂಟ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಈ ವಿಚಾರದ ಬಗ್ಗೆಯೂ ಮಾತನಾಡಿದ ವಿಶಾಲ್, ಸೆಲೆಬ್ರಿಟಿಗಳೇ ತಾವು ಡೆಸ್ಟಿನೇಷನ್ ವೆಡ್ಡಿಂಗ್‌ಗಳಿಗೆ ಹೋಗುವ ಅಥವಾ ಏರ್‌ಪೋರ್ಟ್ ದೃಶ್ಯಗಳನ್ನು ಸೆರೆ ಹಿಡಿಯುವಂತೆ ಪಪಾರಾಜಿಗಳನ್ನು ಕರೆಯುತ್ತಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸೆಲೆಬ್ರಿಟಿಗಳು ಒಂದೆಡೆ ತಮ್ಮ ಖಾಸಗಿ ಬದುಕನ್ನು ಗೌರವಿಸುವಂತೆ ಹೇಳುತ್ತಾರೆ ಅದರ ಜೊತೆಗೆ ತಮ್ಮನ್ನು ವೀಡಿಯೋ ಮಾಡುವಂತೆ ಅವರೇ ಪಪಾರಾಜಿಗಳನ್ನು ಕರೆಯುತ್ತಾರೆ ಎಂದು ವಿಶಾಲ್ ಶಾಕಿಂಗ್ ವಿಚಾರಗಳನ್ನ ರಿವೀಲ್ ಮಾಡಿದ್ದಾರೆ.
ಸೆಲೆಬ್ರಿಟಿ ವೆಡ್ಡಿಂಗ್ ಸ್ಟೈಲಿಶ್ಟ್ ಸಭ್ಯಸಾಚಿಗೆ ಬೇಡಿಕೆ ಕಡಿಮೆ ಆಯ್ತಾ ?
ವಿಶಾಲ್ ಪಂಜಾಬಿ ಯಾರು?
ವಿಶಾಲ್ ಪಂಜಾಬಿ ಬಾಲಿವುಡ್‌ನಲ್ಲಿ ಚಿರಪರಿಚಿತ ಹೆಸರಾಗಿದ್ದು, ಮುಂಬೈ ಚಲನಚಿತ್ರ ನಿರ್ಮಾಣ ಕಂಪನಿಯಾದ ದಿ ವೆಡ್ಡಿಂಗ್ ಫಿಲ್ಮರ್‌ನ ಸಿಇಒ ಆಗಿದ್ದಾರೆ. ಅವರು ಈ ಮೊದಲು ಶಾರುಖ್ ಖಾನ್ ಅವರ ಪ್ರೊಡಕ್ಷನ್ ಹೌಸ್ 'ರೆಡ್ ಚಿಲ್ಲಿಸ್' ಎಂಟರ್ಟೈನ್ಮೆಂಟ್‌ನಲ್ಲಿ ಮೊದಲು ಕೆಲಸ ಮಾಡಿದರು. 'ದಿ ವೆಡ್ಡಿಂಗ್ ಫಿಲ್ಮರ್'ಗಾಗಿ ಅವರು 53 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಣವೀರ್-ದೀಪಿಕಾ, ವಿರಾಟ್-ಅನುಷ್ಕಾ, ಸಿದ್ಧಾರ್ಥ್-ಕಿಯಾರಾ ಮತ್ತು ಇತರ ಸೆಲೆಬ್ರಿಟಿ ವಿವಾಹಗಳದಲ್ಲಿ ಕ್ಯಾಮರಾ ಹಿಂದಿನ ಕಾಣದ ವ್ಯಕ್ತಿ ಇವರೇ ಆಗಿದ್ದಾರೆ. ವಿಶಾಲ್ ಪಂಜಾಬಿ ರಿವೀಲ್ ಮಾಡಿದ ಈ ಶಾಕಿಂಗ್ ವಿಚಾರಗಳ ಬಗ್ಗೆ ನೀವೇನಂತಿರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.