ತಂದೆ ಕ್ರೈಸ್ತ, ತಾಯಿ ಸಿಖ್, ಅಣ್ಣ ಮುಸ್ಲಿಂ, ಪತ್ನಿ ಹಿಂದೂ... ನಟ ವಿಕ್ರಾಂತ್ ಮೆಸ್ಸಿ ಕುಟುಂಬದ ಕುತೂಹಲದ ಕಥೆ ಕೇಳಿ...
‘ಮಿರ್ಜಾಪುರ್’ ವೆಬ್ ಸರಣಿ, ‘ಟ್ವೆಲ್ತ್ ಫೇಲ್’ ನಂಥ ಬ್ಲಾಕ್ಬಸ್ಟರ್ ಸಿನಿಮಾ ನೀಡಿರುವ ನಟ ವಿಕ್ರಾಂತ್ ಮೆಸ್ಸಿ ಇದೀಗ ‘ದಿ ಸಾಬರಮತಿ ರಿಪೋರ್ಟ್’ ಹೆಸರಿನ ಸಿನಿಮಾಕ್ಕೆ ಕಾಯುತ್ತಿದ್ದಾರೆ. ನಾಳೆ ಅಂದರೆ ನವೆಂಬರ್ 15ರಂದು ಇದು ರಿಲೀಸ್ ಆಗಲಿದೆ. ಭಾರತದ ಇತಿಹಾಸದ ಕ್ರೂರ ಅಧ್ಯಾಯಗಳಲ್ಲಿ ಒಂದಾದ ಗುಜರಾತ್ನ ಗೋಧ್ರಾ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ವಿಕ್ರಾಂತ್ ಮೆಸ್ಸಿ ನಟಿಸುತ್ತಿದ್ದು, ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಈ ಕುರಿತು ನೋವು ತೋಡಿಕೊಂಡಿದ್ದ ನಟ, ನನಗೆ ಇರಲಿ ನನ್ನ 9 ತಿಂಗಳು ಮಗುವನ್ನೂ ಬಿಡುತ್ತಿಲ್ಲ. ಸತತ ಬೆದರಿಕೆಗಳು ಬರುತ್ತಲೇ ಇವೆ. ನಾವು ಕಲಾವಿದರು, ಕತೆ ಹೇಳುವುದಕ್ಕೆ ಬರುತ್ತದೆ ಅಷ್ಟೆ, ಆದರೆ ಬೆದರಿಕೆ ಬರುತ್ತಿದೆ ಎಂದಿದ್ದರು. ಇಷ್ಟೆಲ್ಲಾ ಸುದ್ದಿ ಆಗುತ್ತಿರುವ ನಡುವೆಯೇ ನಟನ ಬಗ್ಗೆ ಕುತೂಲಹದ ವಿಷಯವೊಂದು ಈಗ ತೆಗೆದುಕೊಂಡಿದೆ.
ಅದೇನೆಂದರೆ, ವಿಕ್ರಾಂತ್ ಮೆಸ್ಸಿ ಅವರ ತಂದೆ ಕ್ರೈಸ್ತ ಧರ್ಮಕ್ಕೆ ಸೇರಿದವರು, ತಾಯಿ ಸಿಖ್, ಅಣ್ಣ ಮುಸ್ಲಿಂ ಆಗಿದ್ದಾರೆ. ತಂದೆ ಮತ್ತು ತಾಯಿ ವಿಭಿನ್ನ ಸಂಸ್ಕೃತಿಯಿಂದ ಬಂದಿದ್ದರೂ ಮದುವೆಯಾಗಿದ್ದಾರೆ. ಆದರೆ ಅಣ್ಣ ಮುಸ್ಲಿಂ ಆಗಿರುವುದು ಮಾತ್ರ ಕುತೂಹಲವಾಗಿದೆ. ಇದಕ್ಕೆ ಕಾರಣ, ಅವರ ಅಣ್ಣ ಯುವಕರಾಗಿದ್ದಾಗಲೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇನ್ನು ವಿಕ್ರಾಂತ್ ಅವರ ಪತ್ನಿ ಹಿಂದೂ ಆಗಿದ್ದಾರೆ. ಹೀಗೆ ಇದ್ದರೂ, ಇವರ ಮನೆಯಲ್ಲಿ ಎಲ್ಲಾ ಧರ್ಮದ ಹಬ್ಬಗಳನ್ನು ಎಲ್ಲರೂ ಸೇರಿ ಆಚರಿಸುವುದು ವಿಶೇಷ. ಈ ಬಗ್ಗೆ ಖುದ್ದು ನಟನೇ ಹೇಳಿಕೊಂಡಿದ್ದಾರೆ. ಇನ್ನು ಅಣ್ಣ ವಿಕ್ರಾಂತ್ ಅವರ ಬಗ್ಗೆ ಹೇಳುವುದಾದರೆ, ಮೊದಲೇ ಹೇಳಿದಂತೆ ಅವರು ಮತಾಂತರಗೊಂಡು ಈಗ ಮೊಯಿನ್ ಆಗಿದ್ದಾರೆ. ಇವರು ಮತಾಂತರಗೊಳ್ಳಲು ಕುಟುಂಬ ಕೂಡ ಸಪೋರ್ಟ್ ಮಾಡಿರುವುದು ವಿಶೇಷವಾಗಿದೆ.
undefined
ಅಣ್ಣನ ಬಗ್ಗೆ ಮಾತನಾಡಿರುವ ವಿಕ್ರಾಂತ್, ಆತ 17ನೇ ವಯಸ್ಸಿನಲ್ಲಿ ಮತಾಂತರಗೊಂಡ. ತಂದೆ ಕ್ರಿಶ್ಚಿಯನ್ ಆಗಿರುವ ಕಾರಣಕ್ಕೆ ವಾರಕ್ಕೆ ಎರಡು ಬಾರಿ ಚರ್ಚ್‌ಗೆ ಹೋಗುತ್ತಾರೆ. ಮನೆಯಲ್ಲಿ ಎಲ್ಲರೂ ಎಲ್ಲ ಹಬ್ಬಗಳನ್ನೂ ಆಚರಿಸುತ್ತೇವೆ. ಬಾಲ್ಯದಿಂದಲೂ ಧರ್ಮ, ಅಧ್ಯಾತ್ಮಕ್ಕೆ ಸಂಬಂಧಿಸಿದ ವಾದಗಳನ್ನು ಕೇಳುತ್ತಿದ್ದೆ ಎಂದಿದ್ದಾರೆ. ಇನ್ನು ವಿಕ್ರಾಂತ್ ಕುರಿತು ಹೇಳುವುದಾದರೆ, ಇವರ ಪತ್ನಿ ಶೀತಲ್ ಠಾಕೂರ್ ಹಿಂದೂ. ಆದ್ದರಿಂದ ಈ ದಂಪತಿ ವೈಯಕ್ತಿಕವಾಗಿ ಹಿಂದೂ ಧರ್ಮದ ಆಚರಣೆ ಮಾಡುತ್ತಾರೆ. ದೀಪಾವಳಿಯನ್ನು ಎಲ್ಲರೂ ಒಟ್ಟಿಗೇ ಆಚರಿಸುತ್ತೇವೆ. ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಸಂಪತ್ತು ಬರುತ್ತದೆ ಎಂಬ ನಂಬಿಕೆ ಏನೂ ಇಲ್ಲ, ಆದರೂ ಬಾಲ್ಯದಿಂದಲೂ ಲಕ್ಷ್ಮಿಯನ್ನು ಆರಾಧಿಸುತ್ತಿದ್ದೇವೆ. ತಂದೆಯೊಂದಿಗೆ ವಾರಕ್ಕೆ ಎರಡು ಬಾರಿ ಚರ್ಚ್‌ಗೆ ಹೋಗುತ್ತೇನೆ ಮತ್ತು ತಾಯಿ ಮತ್ತು ಪತ್ನಿ ಜೊತೆ ಪೂಜೆ ಮಾಡುತ್ತೇನೆ ಎಂದಿದ್ದಾರೆ ವಿಕ್ರಾಂತ್.
ಇನ್ನು ನಾಳೆ ಬಿಡುಗಡೆಯಾಗಿರುವ ಸಿನಿಮಾದ ಕುರಿತು ಅವರು, ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು. ಸಿನಿಮಾದಲ್ಲಿ ಗೋಧ್ರಾ ಹತ್ಯಾಕಾಂಡಕ್ಕೆ ಮಾಧ್ಯಮದವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಆಧಾರವಾಗಿಟ್ಟುಕೊಂಡು ಆ ಕತೆಯನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಈ ಚಿತ್ರವೂ ಪೂರ್ಣಪ್ರಮಾಣದಲ್ಲಿ ನೈಜ ಘಟನೆಗಳ ಮೇಲೆ ಆಧರಿತವಾಗಿದೆ. ಸಿನಿಮಾವನ್ನು ಪ್ರೇಕ್ಷಕರು ನೋಡಿಲ್ಲ, ಈಗಲೇ ಸಿನಿಮಾದಲ್ಲಿ ಹಾಗೆ ಇರಬಹುದು, ಇಂಥಹವರನ್ನು ತಪ್ಪಿತಸ್ಥರನ್ನಾಗಿ ತೋರಿಸಿರಬಹುದು ಎಂದೆಲ್ಲ ಊಹಿಸಬೇಡಿ, ಸಿನಿಮಾ ನೋಡಿದರೆ ನಿಮಗೇ ಅದೆಲ್ಲ ಅರ್ಥವಾಗಲಿದೆ ಎಂದಿದ್ದಾರೆ.