ನಟ ವಿಜಯ್ ಪುತ್ರಿಯ ಆತ್ಮಹತ್ಯೆ ಇನ್ನೂ ನಿಗೂಢವಾಗಿದ್ದು, ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿ ಮಹತ್ವದ ಮಾಹಿತಿ ನೀಡಿದ್ದಾರೆ.
ನಟ ಮತ್ತು ಸಂಗೀತ ಸಂಯೋಜಕ ವಿಜಯ್ ಆಂಟೋನಿ ಅವರ 16 ವರ್ಷದ ಮಗಳು ಮೀರಾ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಸುದ್ದಿ ತಮಿಳು ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ. ಹಲವಾರು ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸುತ್ತಿದ್ದರೆ, ಅದೇ ಇನ್ನೊಂದೆಡೆ ಹದಿಹರೆಯದವರಲ್ಲಿನ ಖಿನ್ನತೆಯ ಪ್ರಶ್ನೆಯನ್ನು ಎತ್ತಿತೋರಿಸುತ್ತಿದೆ. ಏಕೆಂದರೆ ಮೀರಾ ಖಿನ್ನತೆಯಿಂದ ಬಳಲುತ್ತಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆದ್ದರಿಂದ ಯುವ ಸಮಯದಾಯದಲ್ಲಿನ ಖಿನ್ನತೆ, ಒತ್ತಡದ ಕುರಿತು ಇದೀಗ ಸಾಕಷ್ಟು ಚರ್ಚೆ ಉಂಟು ಮಾಡಿದೆ. ಮೀರಾಗೆ ಯಾವ ರೀತಿಯ ಖಿನ್ನತೆ, ಒತ್ತಡ ಇತ್ತು ಎನ್ನುವ ಬಗ್ಗೆ ಇದುವರೆಗೂ ಸ್ಪಷ್ಟವಾಗಿಲ್ಲ. ಕುಟುಂಬಸ್ಥರು ಕೂಡ ಈ ಬಗ್ಗೆ ಮಾತನಾಡಲಿಲ್ಲ.
ಮೀರಾ ಶಾಲಾ-ಕಾಲೇಜಿನಲ್ಲಿ ತುಂಬಾ ಬುದ್ಧಿವಂತೆಯಾಗಿದ್ದರು ಎನ್ನಲಾಗಿದೆ. ಅವರ ಶಾಲಾ ಶಿಕ್ಷಕಿ ಕೂಡ ಈ ಬಗ್ಗೆ ಹೇಳಿದ್ದಾರೆ. ಆಕೆ ಟಾಪರ್ ಅಲ್ಲ ಆದರೆ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದಳು ಎಂದಿದ್ದಾರೆ. ಮೀರಾ ಇಂತಹ ನಿರ್ಧಾರವನ್ನು ಏಕೆ ತೆಗೆದುಕೊಂಡರು ಎಂದು ಅರ್ಥವಾಗುತ್ತಿಲ್ಲ, ಆಕೆಯ ಆತ್ಮಹತ್ಯೆ ಘಟನೆ ನಮ್ಮನ್ನು ತೀವ್ರವಾಗಿ ವಿಚಲಿತಗೊಳಿಸಿದೆ. ನಮ್ಮ ಶಾಲೆಯಲ್ಲಿ ಮಕ್ಕಳ ಮೇಲೆ ಯಾವುದೇ ಒತ್ತಡವಿಲ್ಲ. ಅಷ್ಟೇ ಅಲ್ಲದೇ ಆಕೆಗೆ ಓದು ಸಮಸ್ಯೆಯೇ ಇಲ್ಲ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮೀರಾ ಮೇಲೆ ಯಾವ ಒತ್ತಡ ಇತ್ತೋ ಗೊತ್ತಿಲ್ಲ. ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಶಾಲೆಯಲ್ಲಾಗಲಿ, ಶಾಲೆಯಿಂದಾಗಲಿ ವಿದ್ಯಾರ್ಥಿಗಳ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ಶಿಕ್ಷಕಿ ಹೇಳಿದ್ದಾರೆ.
ನಟ ವಿಜಯ್ ಪುತ್ರಿ ಆತ್ಮಹತ್ಯೆ ಕಾರಣ ನಿಗೂಢ: ಅಪ್ಪ-ಅಮ್ಮನ ಹಳೆಯ ವಿಡಿಯೋ ವೈರಲ್!
ಮಗಳನ್ನು ನೆನೆದು ಅಮ್ಮ ಫಾತೀಮಾ ವಿಜಯ್ ಕಣ್ಣೀರು ಹಾಕಿದ್ದಾರೆ. ಪಾರ್ಥಿವ ಶರೀರವನ್ನು ಚರ್ಚ್‌ಗೆ ಕೊಂಡೊಯ್ದ ಸಂದರ್ಭದಲ್ಲಿ ಫಾತೀಮಾ ಅವರು, 'ನಾನು ನಿನ್ನನ್ನು ಗರ್ಭದಲ್ಲಿ ಹೊತ್ತುಕೊಂಡೆ... ನೀನು ನನಗೆ ಒಂದು ಮಾತು ಹೇಳಬಹುದಿತ್ತು ಎಂದು ದುಃಖಿಸಿದ್ದಾರೆ. ಇದೇ ವೇಳೆ ಮಗಳ ಸಾವಿನ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯ್ ಆಂಟೋನಿ, ಪ್ರತಿಕ್ರಿಯೆ 'ಆಕೆ ಈಗಲೂ ನನ್ನೊಂದಿಗೆ ಮಾತನಾಡುತ್ತಲೇ ಇದ್ದಾಳೆ. ಅವಳೊಂದಿಗೆ ನಾನೂ ಮೃತನಾಗಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.
ನಿನ್ನೆಯಷ್ಟೇ ಭಾವನಾತ್ಮಕ ಪೋಸ್ಟ್ ಮಾಡಿದ್ದ ವಿಜಯ್ ಅವರು, ಪುತ್ರಿಯನ್ನು ನೆನೆದು ಭಾವುಕರಾಗಿದ್ದರು. 'ಆತ್ಮೀಯ ಹೃದಯಗಳೇ, ನನ್ನ ಮಗಳು ಮೀರಾ ತುಂಬಾ ಪ್ರೀತಿ ತುಂಬಿದ ಹುಡುಗಿ ಮತ್ತು ಧೈರ್ಯಶಾಲಿ. ಅವಳೀಗ ಜಾತಿ, ಧರ್ಮ, ಹಣ, ಹೊಟ್ಟೆ ಕಿಚ್ಚು, ನೋವು, ಬಡತನ, ದ್ವೇಷವಿಲ್ಲದ ಮತ್ತು ಇಹಲೋಕಕ್ಕಿಂತ ಮೇಲು ಎನ್ನುವಂತಹ ಶಾಂತಿಯುತ ಜಾಗಕ್ಕೆ ಹೋಗಿದ್ದಾಳೆ. ಆಕೆ ಈಗಲೂ ನನ್ನೊಂದಿಗೆ ಮಾತನಾಡುತ್ತಲೇ ಇದ್ದಾಳೆ. ಅವಳೊಂದಿಗೆ ನಾನೂ ಮೃತನಾಗಿದ್ದೇನೆ. ನಾನು ಈಗ ಅವಳೊಂದಿಗೆ ಸಮಯ ಕಳೆಯಲು ಪ್ರಾರಂಭಿಸಿದ್ದೇನೆ. ನಾನು ಅವಳ ಹೆಸರಿನಲ್ಲಿ ಮಾಡಲು ಉದ್ದೇಶಿಸಿರುವ ಎಲ್ಲಾ ಒಳ್ಳೆಯ ಕೆಲಸಗಳನ್ನು ಅವಳೇ ಪ್ರಾರಂಭಿಸಲಿದ್ದಾಳೆ..' ಎಂದು ಭಾವುಕರಾಗಿ ಪೋಸ್ಟ್ ಹಂಚಿಕೊಂಡಿದ್ದರು ನಟ ವಿಜಯ್ ಆಂಟೋನಿ.
'ಆಕೆಯೊಂದಿಗೆ ನಾನೂ ಕೂಡ ಸತ್ತಿದ್ದೇನೆ..' ಮಗಳ ಸಾವಿನ ಬಳಿಕ ವಿಜಯ್ ಆಂಟೋನಿ ಮೊದಲ ಪೋಸ್ಟ್!