ಶಿಸ್ತು, ನಟನೆ, ಗೌರವ: ದಕ್ಷಿಣ ಭಾರತದ ಮೊದಲ ಮಹಿಳಾ ಸೂಪರ್‌ಸ್ಟಾರ್‌ ಸರೋಜಾದೇವಿ

Kannadaprabha News   | Kannada Prabha
Published : Jul 15, 2025, 06:40 AM IST
B Saroja Devi

ಸಾರಾಂಶ

ಪುನೀತ್ ರಾಜ್‌ಕುಮಾರ್ ಅಭಿನಯದ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರವಾಗಿತ್ತು. ಬಿ. ಸರೋಜಾ ದೇವಿ ನೀಡಿದ ಕೊಡುಗೆಗಾಗಿ ಕೇಂದ್ರ ಸರ್ಕಾರವು ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಮೇಕಪ್‌ ಇಲ್ಲದೆ ಯಾವತ್ತೂ ಹೊರಗೆ ಕಾಣಿಸಲಿಲ್ಲ. ಕಲೆಗೆ ಗೌರವ ಕೊಡುವುದನ್ನು ಯಾವತ್ತೂ ಬಿಡಲಿಲ್ಲ. ಅನವಶ್ಯಕ ಹೇಳಿಕೆ ಕೊಡಲಿಲ್ಲ. ಬೇರೆಯವರಿಗೆ ಕುರಿತು ಕೀಳಾಗಿ ಮಾತನಾಡಲಿಲ್ಲ. ಕೊನೆಯವರೆಗೂ ಘನತೆಯಿಂದ ಬಾಳಿದ ದಕ್ಷಿಣ ಭಾರತದ ಮೊದಲ ಮಹಿಳಾ ಸೂಪರ್‌ಸ್ಟಾರ್‌ ಬಿ. ಸರೋಜಾದೇವಿ. ಹುಟ್ಟಿದ್ದು 1938ರ ಜ7ರಂದು. ಊರು ಈಗಿನ ಬೆಂಗಳೂರು. ಪೊಲೀಸ್ ಅಧಿಕಾರಿಯಾಗಿದ್ದ ಭೈರಪ್ಪ ಮತ್ತು ರುದ್ರಮ್ಮ ದಂಪತಿಯ ನಾಲ್ಕನೇ ಸುಪುತ್ರಿ. ಆ ಕಾಲದಲ್ಲಿಯೇ ತಂದೆಯವರ ಪ್ರೋತ್ಸಾಹದಿಂದ 17ನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದ ಸಾಧಕಿ ಇವರು.

ಮೊದಲು ಬಣ್ಣ ಹಚ್ಚಿದ ಚಿತ್ರ ‘ಶ್ರೀರಾಮಪೂಜ’ ಎನ್ನಲಾಗುತ್ತದೆ. ಆದರೆ ಮೊದಲು ಬಿಡುಗಡೆಯಾಗಿ ಜನಮಾನಸದಲ್ಲಿ ಉಳಿದಿದ್ದು 1955ರಲ್ಲಿ ಬಿಡುಗಡೆಯಾದ ಹೊನ್ನಪ್ಪ ಭಾಗವತರ್‌ ನಟಿಸಿ, ನಿರ್ದೇಶಿಸಿದ್ದ ‘ಮಹಾಕವಿ ಕಾಳಿದಾಸ’. ಅವರ ಚಂದಕ್ಕೆ, ಮಾತಿಗೆ, ನಟನೆಗೆ, ನಡವಳಿಕೆ ಕನ್ನಡದ ಮಂದಿ ಮರುಳಾದರು. ಅವರ ಕೀರ್ತಿ ಪಕ್ಕದ ನಾಡಿಗೂ ಹರಡಿತು. 1957ರಲ್ಲಿ ‘ಪಾಂಡುರಂಗ ಮಹಾತ್ಯಂ’ ಮೂಲಕ ತೆಲುಗಿಗೂ, 1958ರಲ್ಲಿ ಎಂಜಿಆರ್‌ ನಾಯಕರಾಗಿ ನಟಿಸಿದ್ದ ‘ನಾಡೋಡಿ ಮನ್ನನ್’ ಮೂಲಕ ತಮಿಳಿಗೆ ಪದಾರ್ಪಣೆ ಮಾಡಿದರು. ‘ನಾಡೋಡಿ ಮನ್ನನ್’ ಅವರನ್ನು ತಮಿಳುನಾಡಿನಾದ್ಯಂತ ಜನಪ್ರಿಯ ನಟಿಯನ್ನಾಗಿ ಮಾಡಿತು.

ಅನಂತರ ಅವರು ಎಂಜಿಆರ್‌ ಜೊತೆಗೆ 26 ಹಿಟ್‌ ಸಿನಿಮಾಗಳಲ್ಲಿ ನಟಿಸಿದರು. ತಮಿಳಿಗರಿಂದ ‘ಕನ್ನಡತು ಪೈಂಗಿಲಿ’ (ಕನ್ನಡದ ಗಿಳಿ) ಎಂದೇ ಪ್ರೀತಿಯಿಂದ ಕರೆಸಿಕೊಂಡಿದ್ದರು. ಕನ್ನಡ, ತಮಿಳು, ತೆಲುಗಿನ ಜನಪ್ರಿಯ ನಟರಾದ ಡಾ. ರಾಜ್‌ಕುಮಾರ್, ಎನ್‍.ಟಿ. ರಾಮರಾವ್,‍ ಎಂ.ಜಿ. ರಾಮಚಂದ್ರನ್‍, ಅಕ್ಕಿನೇನಿ ನಾಗೇಶ್ವರ ರಾವ್‍, ರಾಜೇಂದ್ರ ಕುಮಾರ್, ಜೆಮಿನಿ ಗಣೇಶನ್‍, ಶಮ್ಮಿ ಕಪೂರ್, ಕಲ್ಯಾಣ್‍ ಕುಮಾರ್‌, ಉದಯಕುಮಾರ್, ಸುನೀಲ್‌ ದತ್ ಮುಂತಾದವರ ಜೊತೆಗೂ ನಟಿಸಿದ ಕೀರ್ತಿ ಅವರದು. ನಟನೆ ಮತ್ತು ಸೌಂದರ್ಯ ಎರಡರ ಕಡೆಗೂ ಗಮನ ಹರಿಸುತ್ತಿದ್ದ ಅವರು, ತನ್ನ ನಟನೆಗಾಗಿ ‘ಅಭಿನಯ ಸರಸ್ವತಿ’ ಎಂಬ ಬಿರುದು ಗಳಿಸಿದರು.

ಅವರು 1955ರಿಂದ 1984ರ ಮಧ್ಯೆ 29 ವರ್ಷಗಳಲ್ಲಿ 161 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು ಎಂಬ ಮಾಹಿತಿಯೇ ಅವರ ನಟನಾ ಬದುಕಿನ ಅಗಾಧತೆಗೆ ಸಾಕ್ಷಿಯಾಗಿದೆ. ಚಿಕ್ಕಂದಿನಲ್ಲಿ ಅಮ್ಮ ಹೇಳಿದ ‘ಈಜುಡುಗೆ ಧರಿಸುವಂತಿಲ್ಲ, ತೋಳಿಲ್ಲದ ಬ್ಲೌಸ್‌ ಹಾಕುವಂತಿಲ್ಲ’ ಎಂಬ ಮಾತಿಗೆ ಕೊನೆಯವರೆಗೂ ಬದ್ಧರಾಗಿ ಜೀವಿಸಿದ ಬಿ. ಸರೋಜಾ ದೇವಿ ಛಲಕ್ಕೆ, ಹಠಕ್ಕೆ ಮತ್ತೊಂದು ಹೆಸರಂತೆ ಬದುಕಿದರು. ‘ಕಿತ್ತೂರು ಚೆನ್ನಮ್ಮ’, ‘ಬಬ್ರುವಾಹನ’, ‘ಭಾಗ್ಯವಂತರು’, ‘ಅಣ್ಣ ತಂಗಿ’, ‘ಮಲ್ಲಮ್ಮನ ಪವಾಡ’, ‘ನ್ಯಾಯವೇ ದೇವರು’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’, ‘ಶ್ರೀನಿವಾಸ ಕಲ್ಯಾಣ’, ‘ಅಮರಶಿಲ್ಪಿ ಜಕಣಾಚಾರಿ’, ‘ಶ್ರೀ ರಾಮಪೂಜಾ’, ‘ಸ್ಕೂಲ್‌ ಮಾಸ್ಟರ್’, ‘ಲಕ್ಷ್ಮೀ ಸರಸ್ವತಿ’, ‘ವಿಜಯನಗರದ ವೀರಪುತ್ರ’, ‘ಕಥಾ ಸಂಗಮ’ ಸೇರಿದಂತೆ 200 ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಪಂಚಭಾಷಾ ತಾರೆ ಎಂದೇ ಕರೆಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ಅಭಿನಯದ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರವಾಗಿತ್ತು. ಬಿ. ಸರೋಜಾ ದೇವಿ ನೀಡಿದ ಕೊಡುಗೆಗಾಗಿ ಕೇಂದ್ರ ಸರ್ಕಾರವು ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ಮತ್ತು ಡಾ. ರಾಜ್‌ಕುಮಾರ್ ಪ್ರಶಸ್ತಿ ನೀಡಿದರೆ ಆಂಧ್ರ ಪ್ರದೇಶ ಸರ್ಕಾರ ಎನ್.ಟಿ.ಆರ್. ರಾಷ್ಟ್ರೀಯ ಪ್ರಶಸ್ತಿ, ತಮಿಳುನಾಡು ಸರ್ಕಾರ ಕಲೈಮಾಮಣಿ ಪ್ರಶಸ್ತಿ ನೀಡಿ ಮನ್ನಣೆ ಸಲ್ಲಿಸಿದೆ.

1967ರಲ್ಲಿ ಶ್ರೀಹರ್ಷ ಎಂಬವರನ್ನು ಅವರು ವರಿಸಿದರು. 1986ರಲ್ಲಿ ಪತಿಯನ್ನು ಕಳೆದುಕೊಂಡರು. ಅವರು ಪುತ್ರಿ ಭುವನೇಶ್ವರಿ ಹೆಸರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಇಲ್ಲಿಯವರೆಗೂ ಹಲವಾರು ಸಾಹಿತಿಗಳಿಗೆ ದತ್ತಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪ್ರತೀವರ್ಷ ಭಾರತೀಯ ವಿದ್ಯಾ ಭವನದಲ್ಲಿ ‘ಪದ್ಮಭೂಷಣ ಬಿ. ಸರೋಜಾ ದೇವಿ ರಾಷ್ಟ್ರೀಯ ದತ್ತಿ ಪ್ರಶಸ್ತಿ’ಯನ್ನು ನೀಡುತ್ತಾ ಬಂದಿದ್ದು, ಬಹಳಷ್ಟು ಮಂದಿಗೆ ಈ ಪ್ರಶಸ್ತಿ ನೀಡಿದ್ದಾರೆ. ಕಿರಿಯರಿಗೆ ಸದಾ ಪ್ರೀತಿ ತೋರುತ್ತಿದ್ದ, ಸಿನಿಮಾವನ್ನು ಪ್ರೀತಿಸುತ್ತಿದ್ದ, ಚಿತ್ರರಂಗದ ಸರ್ವರ ಗೌರವಕ್ಕೂ ಪಾತ್ರರಾದ ಘನತೆವೆತ್ತ ಕಲಾವಿದೆ ಗೌರವಪೂರ್ವಕ ವಿದಾಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?