ಪುರುಷರು ವಿಷಕಾರಿಗಳೆ? ಇಂದಿನ ಸಿನಿಮಾ, ರಿಯಾಲಿಟಿ ಷೋಗಳಲ್ಲಿ ಹೀಗೇಕೆ ತೋರಿಸಲಾಗುತ್ತಿದೆ? ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಏನಿದು?
ಬಾಲಿವುಡ್ ಪುರುಷ ಪ್ರಧಾನವಾಗಿದ್ದು, ಮಹಿಳೆಯರು ಇಲ್ಲಿ ಬಟ್ಟೆ ಬಿಚ್ಚಲು ಅಷ್ಟೇ ಸೀಮಿತರು ಎನ್ನುವ ಮಾತು ಬಹಳ ವರ್ಷಗಳಿಂದಲೂ ರೂಢಿಯಲ್ಲಿದೆ. ಅದಕ್ಕೆ ತಕ್ಕನಾಗಿ ಇಂದಿನ ನಟಿಯರೂ ಹಿಂದೆ ಬಿದ್ದಿಲ್ಲ. ಪೈಪೋಟಿಗೆ ಬಿದ್ದವರಂತೆಯೇ ಬಟ್ಟೆ ಬಿಚ್ಚುತ್ತಿದ್ದಾರೆ. ಅನಿಮಲ್ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣನ ಹಸಿಬಿಸಿ ದೃಶ್ಯ ಹಾಗೂ ತೃಪ್ತಿ ಡಿಮ್ರಿ ಅವರು ಸಂಪೂರ್ಣ ಬೆತ್ತಲಾದ ಮೇಲಂತೂ ಇಂದು ಬಾಲಿವುಡ್ ಇಂಡಸ್ಟ್ರಿಯಲ್ಲಿ ನಟಿಯರಿಗೆ ಇರುವ ಸ್ಥಾನದ ಬಗ್ಗೆ ಪರಿಪೂರ್ಣವಾಗಿ ತೋರಿಸಲಾಗಿದೆ. ಈ ಚಿತ್ರ ಭರ್ಜರಿ ಯಶಸ್ಸು ಕಂಡು ಹಲವಾರು ಚಿತ್ರಗಳ ದಾಖಲೆಗಳನ್ನು ಉಡೀಸ್ ಮಾಡಿರುವುದನ್ನು ನೋಡಿದರೆ ಪ್ರೇಕ್ಷಕರ ಅಭಿರುಚಿ ಯಾವ ಮಟ್ಟಿಗೆ ಹೋಗಿದೆ ಎನ್ನುವುದೂ ಅರ್ಥವಾಗುತ್ತದೆ. ಮಹಿಳೆಯರ ಮೇಲೆ ಮಿತಿಮೀರಿದ ದೌರ್ಜನ್ಯ, ಮೂರು ಪತ್ನಿಯರ ಮೇಲೆ ನಡೆಸುವ ಅತ್ಯಾಚಾರ, ಮಹಿಳೆಯನ್ನು ಕಾಮದ ವಸ್ತು ಎಂದು ಅಂದುಕೊಳ್ಳುವುದು... ಇವೆಲ್ಲವನ್ನೂ ಪ್ರೇಕ್ಷಕರು ತುಂಬು ಮನಸ್ಸಿನಿಂದ ಸ್ವಾಗತಿಸಿ ಅನಿಮಲ್ ಚಿತ್ರಕ್ಕೆ ಭರ್ಜರಿ ಯಶಸ್ಸು ತಂದುಕೊಟ್ಟಿದ್ದಾರೆ.
ಅದೇ ಇನ್ನೊಂದೆಡೆ, ಅನಿಮಲ್ ಚಿತ್ರದ ಬಳಿಕ ಪುರುಷರು ವಿಷಕಾರಿಗಳೇ ಎನ್ನುವ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಸಿನಿಮಾ ಮಾತ್ರವಲ್ಲದೇ ರಿಯಾಲಿಟಿ ಷೋಗಳಲ್ಲಿಯೂ ಪುರುಷರನ್ನು ವಿಷಕಾರಿ ವಸ್ತುಗಳಂತೆ ಬಳಸುತ್ತಿರುವುದು ಏಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅನಿಮಲ್ ಚಿತ್ರವನ್ನೇ ತೆಗೆದುಕೊಳ್ಳುವುದಾದರೆ ಇದರಲ್ಲಿ ನಾಯಕ ರಣಬೀರ್ ಕಪೂರ್, ಪತ್ನಿ ರಶ್ಮಿಕಾ ಮೇಲೆ ದೌರ್ಜನ್ಯ ಎಸಗುತ್ತಾನೆ. ಇನ್ನು ವಿಲನ್ ಪಾತ್ರಧಾರಿಯಾಗಿರುವ ಬಾಬಿ ಡಿಯೋಲ್ ತನ್ನ ಮೂವರು ಪತ್ನಿಯರ ಮೇಲೆ ಇನ್ನಿಲ್ಲದ ಅತ್ಯಾಚಾರ ಮಾಡುತ್ತಾನೆ. ತಮ್ಮ ಪಾತ್ರದ ಬಗ್ಗೆ ಸಮರ್ಥನೆಯನ್ನೂ ನೀಡಿರುವ ಬಾಬಿ ಡಿಯೋಲ್, ಇಲ್ಲಿ ವಿಲನ್ ಕ್ರೂರಿಯಲ್ಲ ಬದಲಿಗೆ ಮೂವರು ಪತ್ನಿಯರನ್ನು ಹೊಂದಿರುವ ರಸಿಕ ಎಂದು ಹೇಳಿಕೊಂಡಿದ್ದಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಜೊತೆಗೆ ಇದರ ನಿರ್ದೇಶಕ ಸಂದೀಪ್ ವಂಗಾ ಕೂಡ ತಮ್ಮ ಚಿತ್ರದಲ್ಲಿ ಯಾವುದೇ ಕ್ರೂರತೆ ಇಲ್ಲ ಎಂದು ಹೇಳಿದ್ದಷ್ಟೇ ಅಲ್ಲದೇ, ಹೆಣ್ಣು ಇಂಥದ್ದಕ್ಕೆ ಮಾತ್ರ ಸೀಮಿತಳು ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ.
ಇದು ಒಂದೆಡೆಯಾದರೆ, ಬಿಗ್ಬಾಸ್ ಹಿಂದಿಯಲ್ಲಿ ವಿಕ್ಕಿ ಜೈನ್ ಮತ್ತು ಅಂಕಿತಾ ಲೋಖಂಡೆ ನಡುವಿನ ಜಗಳದಲ್ಲಿಯೂ ಪುರುಷನನ್ನು ವಿಷಕಾರಿ ಎನ್ನುವಂತೆ ಪ್ರತಿಬಿಂಬಿಸಲಾಗಿದೆ. ಅಂಕಿತಾ ಕೆನ್ನೆಗೆ ಹೊಡೆದು ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. ಇನ್ನು ಕೆಲವು ಚಿತ್ರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಯಥೇಚ್ಛವಾಗಿ ತೋರಿಸಿ ನಂತರ ಗಂಡಸರು ಗಂಡಸರೇ (boys will be boys) ಎಂದು ಹಾರಿಕೆ ಅಥವಾ ತಮಾಷೆಯಾಗಿ ಹೇಳಿ ಗಂಡಸರು ಎಂದರೆ ಹೀಗೇನೇ ಎಂದು ತೋರಿಸಲಾಗುತ್ತದೆ. ಇನ್ನುಕೆಲವು ಚಿತ್ರಗಳಲ್ಲಿ ಹೆಣ್ಣುಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳದೇ ಹೋದರೆ ಅದೇನೂ ದೊಡ್ಡ ವಿಷಯವಲ್ಲ ಎನ್ನುವ ರೀತಿಯಲ್ಲಿ ಪ್ರತಿಬಿಂಬಿಸಲಾಗುತ್ತದೆ.
ಈ ರೀತಿಯ ಮನಸ್ಥಿತಿಗಳನ್ನು ಚಲನಚಿತ್ರ ಹಾಗೂ ರಿಯಾಲಿಟಿ ಷೋಗಳಲ್ಲಿ ತೋರಿಸುವ ಮೂಲಕ ಇವರೆಲ್ಲರೂ ಸಮಾಜಕ್ಕೆ ಏನು ಸಂದೇಶ ನೀಡಲು ಹೊರಟಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಪುರುಷರು ವಿಷಕಾರಿಗಳು ಎಂದೇ ಎಲ್ಲವೂ ಸೂಚಿಸುತ್ತದೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡುವುದೇ ಪುರುಷತ್ವ ಎಂದು ಸಾಬೀತು ಮಾಡುವಂತೆ ಕಾಣಿಸುತ್ತಿದೆ ಎಂದು ಆಕ್ರೋಶ ಹೊರಹಾಕಲಾಗುತ್ತಿದೆ. ಇಂಥ ಚಿತ್ರಗಳು ಹಾಗೂ ರಿಯಾಲಿಟಿ ಷೋಗಳು ಸಮಾಜಕ್ಕೆ ಮಾರಕ ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇಂಥ ಚಿತ್ರಗಳನ್ನು ಒಪ್ಪಿಕೊಳ್ಳುವ ಹೆಣ್ಣುಮಕ್ಕಳ ಮನಸ್ಥಿತಿಯ ಬಗ್ಗೆಯೂ ಯೋಚಿಸಬೇಕಾದ ಅಗತ್ಯವಿದೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಮಹಿಳೆ ಎಂದರೆ ದೌರ್ಜನ್ಯ ಸಹಿಸಿಕೊಳ್ಳಲು ಇರುವಾಕೆ, ಬಟ್ಟೆ ಬಿಚ್ಚಲು ಇರುವಾಕೆ ಎಂದು ಎಲ್ಲಿಯವರೆಗೆ ಅಂದುಕೊಳ್ಳುತ್ತಾಳೋ, ದುಡ್ಡಿಗಾಗಿ ಇಂಥ ಪಾತ್ರ, ನಟನೆ ಮಾಡಲು ಒಪ್ಪಿಕೊಳ್ಳುತ್ತಾಳೋ ಅಲ್ಲಿಯವರೆಗೆ ಪುರುಷರಿಗೆ ದೂರಿ ಏನು ಪ್ರಯೋಜನ ಎಂದು ಪುರುಷವಾದಿಗಳು ಪ್ರಶ್ನಿಸುತ್ತಿದ್ದಾರೆ.
ಅರೆನಗ್ನ ನಟಿಯರನ್ನೆಲ್ಲಾ ಹಿಂದಿಕ್ಕಿದ 'ಅನಿಮಲ್' ಬೆತ್ತಲೆ ರಾಣಿ ತೃಪ್ತಿಗೆ ಸಿಕ್ತು ಇನ್ನೊಂದು ಪ್ರತಿಷ್ಠಿತ ಸ್ಥಾನ!