ಇನ್ನು, ಈ ಫೋಟೋಗೆ ಪ್ರತಿಕ್ರಿಯಿಸಿದ ವಿಶಾಲ್ ದಾದ್ಲಾನಿ, "ಸುಲಭವಾಗಿ ನನ್ನ ನೆಚ್ಚಿನ # ಆಸ್ಕರ್ ಚಿತ್ರ" ಎಂದು ಕಾಮೆಂಟ್ ಮಾಡಿದ್ದಾರೆ.
ಚೆನ್ನೈ (ಮಾರ್ಚ್ 23, 2023): ಆಸ್ಕರ್ ಪ್ರಶಸ್ತಿ ವಿಜೇತ ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರದಲ್ಲಿ ಆನೆ ಪಾಲಕರಾಗಿ ಕಾಣಿಸಿಕೊಂಡ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಅವರು ಆಸ್ಕರ್ ಟ್ರೋಫಿಯೊಂದಿಗೆ ಮೊದಲ ಬಾರಿ ಪೋಸ್ ನೀಡಿದ್ದು, ಖುಷಿಯಿಂದ ಕುಪ್ಪಳಿಸಿದ್ದಾರೆ. ಗುರುವಾರ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ, ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ದೇಶಕಿ ಕಾರ್ತಿಕಿ ಗೋನ್ಸಾಲ್ವೆಸ್ ಈ ಜೋಡಿಯನ್ನು ಒಳಗೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ. ಕ್ಯಾಮೆರಾಗೆ ಪೋಸ್ ನೀಡುತ್ತಲೇ ಇಬ್ಬರೂ ಪ್ರಶಸ್ತಿಯನ್ನು ಹಿಡಿದಿದ್ದರು. ನಿರೀಕ್ಷೆಯಂತೆ ಈ ಫೋಟೋ ವೈರಲ್ ಆಗಿದೆ.
ಈ ಫೋಟೋವನ್ನು ಶೇರ್ ಮಾಡಿಕೊಂಡ ಕಾರ್ತಿಕಿ ಗೋನ್ಸಾಲ್ವೆಸ್, "ನಾವು (ಚಿತ್ರತಂಡದಿಂದ) ದೂರವಾಗಿ ನಾಲ್ಕು ತಿಂಗಳಾಗಿದೆ ಮತ್ತು ಈಗ ನಾನು ಮನೆಯಲ್ಲಿದ್ದೇನೆ ಎಂದು ಭಾಸವಾಗುತ್ತಿದೆ. @theelephantwhisperers." ಎಂಬ ಕ್ಯಾಪ್ಷನ್ ಅನ್ನು ಆಸ್ಕರ್ ವಿಜೇತ ಸಾಕ್ಷ್ಯಚಿತ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕಿ ಬರೆದುಕೊಂಡಿದ್ದಾರೆ.
ಇದನ್ನು ಓದಿ: Oscars 2023: ಭಾರತಕ್ಕೆ ಮೊದಲ ಗೆಲುವು: ದಿ ಎಲಿಫೆಂಟ್ ವಿಸ್ಪರರ್ಸ್‌ಗೆ ಅತ್ಯುತ್ತಮ ಸಾಕ್ಷ್ಯಚಿತ್ರ ಶಾರ್ಟ್ ಫಿಲ್ಮ್ ಪ್ರಶಸ್ತಿ
ಇನ್ನು, ಈ ಫೋಟೋಗೆ ಪ್ರತಿಕ್ರಿಯಿಸಿದ ವಿಶಾಲ್ ದಾದ್ಲಾನಿ, "ಸುಲಭವಾಗಿ ನನ್ನ ನೆಚ್ಚಿನ # ಆಸ್ಕರ್ ಚಿತ್ರ" ಎಂದು ಕಾಮೆಂಟ್ ಮಾಡಿದ್ದು ಚಪ್ಪಾಳೆ ತಟ್ಟುವ ಎಮೋಜಿಗಳನ್ನು ಬರೆದುಕೊಂಡಿದ್ದಾರೆ. ಅಲ್ಲದೆ, ಬಾಲಿವುಡ್ ನಟಿ ಇಶಾ ಗುಪ್ತಾ ಸಹ ಕೆಂಪು ಹೃದಯದ ಎಮೋಜಿಗಳನ್ನು ಪೋಸ್ಟ್ ಮಾಡಿ ಪ್ರತಿಕ್ರಿಯೆ ನೀಡಿದ್ದರೆ, ನಿಹಾರಿಕಾ ಕೊನಿಡೆಲಾ ಸಹ ಎಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಈ ಮಧ್ಯೆ, ಮಿನಿ ಮಾಥುರ್ ಅವರು, "ಅವರ ನಗುವನ್ನು ಪ್ರೀತಿಸುತ್ತೇನೆ. ಅಪ್ಪುಗೆ ಮತ್ತು ಇನ್ನಷ್ಟು ಅಪ್ಪುಗೆಗಳು." ಎಂದು ಬರೆದುಕೊಂಡಿದ್ದಾರೆ. ಹಾಗೆ, ಅಹಾನಾ ಕುಮ್ರಾ "ಓ ಮೈ ಗಾಡ್" ಎಂದು ಸಾಮಾಜಿಕ ಜಾಲತಾಣದಲ್ಲಿ ಕಾರ್ತಿಕಿ ಗೋನ್ಸಾಲ್ವೆಸ್ ಫೋಟೋಗೆ ಪೋಸ್ಟ್ ಮಾಡಿಕೊಂಡಿದ್ದಾರೆ.
ಇನ್ನು, ಆಸ್ಕರ್ ಪ್ರಶಸ್ತಿ ಬರಲು ಕಾರಣವಾದ ಬೊಮ್ಮನ್ ಹಾಗೂ ಬೆಳ್ಳಿ ದಂಪತಿಗೆ ಆಸ್ಕರ್ ಪ್ರಶಸ್ತಿಗೆ ಪೋಸ್ ನೀಡಲು ಹೇಳಿ ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವುದಕ್ಕೆ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಈ ಕ್ಷಣದಲ್ಲಿ ಪ್ರಕಾಶಮಾನವಾಗಿ ಹೊಳೆಯಲು ಅರ್ಹರಾದವರ ಮೇಲೆ @kartikigonsalves ಸ್ಪಾಟ್‌ಲೈಟ್ ಅನ್ನು ತಿರುಗಿಸುವುದನ್ನು ನೋಡುವುದು ಒಳ್ಳೆಯದು. ಅದು ನಿಮ್ಮನ್ನು ಅಂತಹ ಅದ್ಭುತ ಕಥೆಗಾರನನ್ನಾಗಿ ಮಾಡುತ್ತದೆ, ಕಾರ್ತಿಕಿ! ಇದು ನಿಮಗೆ ಪ್ರಾರಂಭವಾಗಿದೆ ಎಂದು ಭಾವಿಸುತ್ತೇವೆ." ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.
ಇದನ್ನೂ ಓದಿ: ಅನಾಥ ಆನೆ ಮರಿಗಳನ್ನು ಮಕ್ಕಳಂತೆ ಸಾಕಿದ ಬೊಮ್ಮನ್-ಬೆಳ್ಳಿ ದಂಪತಿಯ ಸ್ಫೂರ್ತಿದಾಯಕ ಜೀವನಕ್ಕೆ 'ಆಸ್ಕರ್' ಗರಿ
‘’ಅವರ ಕೈಯಲ್ಲಿ ಆಸ್ಕರ್ ನೋಡಲು ಕಾಯುತ್ತಿದ್ದೆ!" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. "ಇದು ಸಂಭವಿಸುತ್ತದೆ ಎಂದು ಆಶಿಸಿದ್ದೆ. ಅಂತಿಮವಾಗಿ ಅದನ್ನು ಈ ಸುಂದರ ಜನರ ಕೈಯಲ್ಲಿ ಇರಿಸಿದ್ದಕ್ಕಾಗಿ ಧನ್ಯವಾದಗಳು." ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ. ಅದೇ ರೀತಿ, "ರಘು ಮತ್ತು ಅಮ್ಮು ಜೊತೆಗಿನ ಆಸ್ಕರ್‌ನ ಫೋಟೋ ಈಗ ನಮಗೆ ಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ನೀಲಗಿರಿ ಜಿಲ್ಲೆಯ ತೆಪ್ಪಕ್ಕಾಡು ಆನೆ ಶಿಬಿರದಲ್ಲಿ ಕೈಬಿಟ್ಟ ಮರಿಗಳನ್ನು ಸಾಕಿದ ಬೆಳ್ಳಿ ಮತ್ತು ಆಕೆಯ ಪತಿ ಬೊಮ್ಮನ್ ಅವರ ಕಾಳಜಿ ಮತ್ತು ಪ್ರೀತಿಯನ್ನು ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರದಲ್ಲಿ ಚಿತ್ರಿಸಲಾಗಿದೆ. ಈ ಕಿರುಚಿತ್ರವು ಎರಡು ಆನೆ ಮರಿಗಳಾದ ರಘು ಮತ್ತು ಅಮ್ಮು ಹಾಗೂ ಬೆಳ್ಳಿ ಮತ್ತು ಬೊಮ್ಮನ್ ಅವರೊಂದಿಗಿನ ಬಲವಾದ ಬಂಧವನ್ನು ಬೆಸೆದಿದೆ.
ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ಶಾರ್ಟ್ ಸಬ್ಜೆಕ್ಟ್ ವಿಭಾಗದಲ್ಲಿ ಗೆದ್ದ ಮೊದಲ ಭಾರತೀಯ ನಿರ್ಮಾಣ ಚಿತ್ರ ಎನಿಸಿಕೊಳ್ಳುವ ಮೂಲಕ 95 ನೇ ಅಕಾಡೆಮಿ ಪ್ರಶಸ್ಯಲ್ಲಿ ಇತಿಹಾಸ ಸೃಷ್ಟಿಸಿದೆ. ಮಾರ್ಚ್ 15 ರಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ಸನ್ಮಾನಿಸಿದ್ದು, ಅವರಿಗೆ ತಲಾ ₹ 1 ಲಕ್ಷ ಚೆಕ್, ಶೀಲ್ಡ್ ಮತ್ತು ಶಾಲುಗಳನ್ನು ನೀಡಿ ಗೌರವಿಸಿದರು. ಇತ್ತೀಚೆಗಷ್ಟೇ ಎಂ ಕೆ ಸ್ಟಾಲಿನ್ ಅವರು ಕಾರ್ತಿಕಿಗೆ ₹ 1 ಕೋಟಿ ಚೆಕ್ ನೀಡಿ ಅಭಿನಂದಿಸಿದರು.
ಇದನ್ನೂ ಓದಿ: ಸಾಕ್ಷ್ಯಚಿತ್ರದ ಮೂಲಕ ಆನೆ ಪ್ರೀತಿ ಅನಾವರಣ, ಆಸ್ಕರ್ ಪ್ರಶಸ್ತಿ ಕುರಿತು ಅರಣ್ಯಾಧಿಕಾರಿ ಮನದಾಳ!