ಕೆಲ ತಿಂಗಳ ಹಿಂದಷ್ಟೇ ಮದುವೆಯಾಗಿ ಸಂಸಾರ ಆರಂಭಿಸಿರುವ ನಟಿ ಅದಿತಿ ಪ್ರಭುದೇವ ಅವರು ಹತ್ತೇ ನಿಮಿಷದಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಮಾಡಿದ್ದಾರೆ. ಅದು ಹೇಗೆ?
ದಾವಣಗೆರೆಯ ಬೆಡಗಿ ಅದಿತಿ ಪ್ರಭುದೇವ್ (Aditi Prabhudeva) ಅವರು ಇತ್ತೀಚಿಗಷ್ಟೇ ಮದುವೆಯಾಗಿ ಗೃಹಿಣಿಯಾಗಿದ್ದಾರೆ. 2022ರ ನವೆಂಬರ್ 28ರಂದು ಉದ್ಯಮಿ ಯಶಸ್ (ಯಶಸ್ವಿ) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ನಟಿ ಸದ್ಯ ಪತಿ ಮತ್ತು ಕುಟುಂಬದ ಜೊತೆ ಫುಲ್ ಬಿಜಿ. ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿರೋ ನಟಿ ಅದಿತಿ ಅವರು ಮೊದಲು ಕಿರುತೆರೆ ಕಲಾವಿದೆಯಾಗಿ, ನಂತರ ಬೆಳ್ಳಿತೆರೆಯ ಮೇಲೆ ಸಾಕಷ್ಟು ಛಾಪು ಮೂಡಿಸಿದವರು. 'ಗುಂಡ್ಯಾನ ಹೆಂಡತಿ' ಎಂಬ ಕಿರುತೆರೆ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಇವರು, ನಾಗಕನ್ನಿಕೆ ಧಾರಾವಾಹಿಯಲ್ಲಿ ಶಿವಾನಿ ಪಾತ್ರದಲ್ಲಿ ಮನೆಮಾತಾದವರು. ನಂತರ ಅಜಯ್ ರಾವ್ ಅವರ `ಧೈರ್ಯಂ' ಚಿತ್ರದಿಂದ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟು, ಸಿಂಗ, ಬ್ರಹ್ಮಚಾರಿ, ಓಲ್ಡ್ ಮಾಂಕ್, ರಂಗನಾಯಕಿ (Ranganayaki), ಬಜಾರ್, ತೋತಾಪುರಿ, ಕುಸ್ತಿ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 'ಈ ವರ್ಷ ಮದುವೆ ಆಗಿರುವುದರಿಂದ ಫ್ಯಾಮಿಲಿ ದೊಡ್ಡದಾಗಿದೆ, ಅಪ್ಪ ಅಮ್ಮ ರೀತಿ ಇರುವ ಅತ್ತೆ ಮಾವ ಸಿಕ್ಕಿದ್ದಾರೆ ಫ್ರೆಂಡ್ ಇರುವ ಗಂಡ ಸಿಕ್ಕಿದ್ದಾರೆ. ಒಟ್ಟಾರೆ ಫ್ಯಾಮಿಲಿ ದೊಡ್ಡದಾಗಿರುವುದಕ್ಕೆ ಖುಷಿ ಇದೆ. ಬೆಸ್ಟ್ ಫ್ರೆಂಡ್ ನನ್ನ ಪತಿಯಾಗಿರುವುದು ಇನ್ನೂ ಖುಷಿ ಇದೆ. ನನ್ನ ಪತಿ ಜೊತೆಗಿರುವ ದಿನಗಳೆಲ್ಲಾ ನನಗೆ ಹಬ್ಬನೇ. ಎಲ್ಲರು ಅಂದುಕೊಳ್ಳುತ್ತಾರೆ ಹೊಸದಾಗಿ ಮದುವೆ ಆಗಿದ್ದಾರೆ ಅದಕ್ಕೆ ಈ ಡೈಲಾಗ್ ಹೊಡೆಯುತ್ತಿದ್ದಾರೆ ಎಂದು. ಇಲ್ಲ ಇಲ್ಲ ಒಂದೂವರೆ ವರ್ಷದಿಂದ ಯಶಸ್ ಅವರ ಜೊತೆ ಪ್ರಯಾಣ ಮಾಡಿರುವೆ. ಇನ್ನೂ ಜಾಸ್ತಿ ಖುಷಿ ಇದೆ ಈ ವರ್ಷ' ಎಂದು ಅದಿತಿ ಹೇಳಿಕೊಂಡಿದ್ದಾರೆ.
Aditi Prabhudeva ಎನ್ನುವ ಯೂಟ್ಯೂಬ್ ಚಾನೆಲ್ ಕೂಡ ಹೊಂದಿರುವ ನಟಿ, ಇದೀಗ ಬಾಯಲ್ಲಿ ನೀರೂರುವಂಥ ಮಾವಿನಕಾಯಿ ಉಪ್ಪಿನಕಾಯಿ ರೆಸಿಪಿ ಮಾಡಿ ತೋರಿಸಿದ್ದಾರೆ. ನಿಮ್ಮ ಅಮ್ಮ ಅಡುಗೆ ಬರಲ್ಲ ಎಂದು ಬೈತಾ ಇದ್ರೆ, ಇದನ್ನು ಮಾಡಿ ತೋರಿಸಿ ಶಹಬ್ಬಾಸ್ಗಿರಿ ಗಿಟ್ಟಿಸಿಕೊಳ್ಳಿ ಎನ್ನುತ್ತಲೇ ತೋತಾಪುರಿ ಮಾವಿನ ಕಾಯಿಯ ಉಪ್ಪಿನಕಾಯಿಯನ್ನು ಮಾಡಿ ತೋರಿಸಿದ್ದಾರೆ. ಹತ್ತೇ ನಿಮಿಷದಲ್ಲಿ ರೆಡಿ ಆಗಬಹುದಾದ ಈ ಮಾವಿನ ಕಾಯಿ ಉಪ್ಪಿನಕಾಯಿ ಮಾಡುವಾಗ ಖುದ್ದು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ. ತಾವು ಅಡುಗೆ ಮಾಡಲು 2-3 ಮೊಬೈಲ್ಗಳನ್ನು ಹೇಗೆಲ್ಲಾ ಇಟ್ಟುಕೊಳ್ಳುತ್ತೇನೆ ಎನ್ನುವ ಬಗ್ಗೆಯೂ ನಟಿ ಈ ವಿಡಿಯೋದಲ್ಲಿ ಹೇಳಿದ್ದಾರೆ. ಒಂದು ಷಾರ್ಟ್ ಆ್ಯಂಗಲ್, ಇನ್ನೊಂದು ಲಾಂಗ್ ಆ್ಯಂಗಲ್ ಹಾಗೂ ಮತ್ತೊಂದನ್ನು ವಿಡಿಯೋಗೆ ಅನುಕೂಲ ಆಗುವ ರೀತಿಯಲ್ಲಿ ಇಟ್ಟುಕೊಳ್ಳುವುದಾಗಿ ಅದಿತಿ ಹೇಳಿದ್ದಾರೆ. ತಾವು ಚಿಕ್ಕವರಿರುವಾಗ ಅಜ್ಜಿ ಮಾಡಿಟ್ಟ ಮಾವಿನಕಾಯಿ ಉಪ್ಪಿನಕಾಯಿಯನ್ನು (Mango Pickle) ಕದ್ದು ತಿನ್ನುವ ಬಗ್ಗೆ ಹೇಳಿದ ನಟಿ, ಅಜ್ಜಿಯಿಂದ ಬೈಸಿಕೊಳ್ಳುತ್ತಿರುವ ಬಗ್ಗೆಯೂ ಪ್ರಸ್ತಾಪಿಸುತ್ತಲೇ ಹಾಗೂ ದೇವರು ಒಳ್ಳೆಯ ಮೂಡಿನಲ್ಲಿದ್ದಾಗ ಮಾವಿನಕಾಯಿಯನ್ನು ಸೃಷ್ಟಿ ಮಾಡಿದ್ದಾನೆ ಅನ್ನಿಸುತ್ತೆ ಎನ್ನುವ ಚಟಾಕಿ ಹಾರಿಸುತ್ತ ತೋತಾಪುರಿ ಮಾವಿನಕಾಯಿಯಿಂದ ಉಪ್ಪಿನಕಾಯಿ ಮಾಡುವ ಬಗೆಯನ್ನು ಹೇಳಿದ್ದಾರೆ. ಇದನ್ನು ಒಂದು ವಾರದವರೆಗೆ ಮಾಡಿಟ್ಟುಕೊಳ್ಳಬಹುದು ಎನ್ನುವುದು ಅವರ ಮಾತು.
undefined
Health Tips: ಆಗಾಗ ಆರೋಗ್ಯ ಹದಗೆಡ್ತಿದ್ಯಾ? ಅಡುಗೆಗೆ ಬಳಸೋ ಎಣ್ಣೆ ಸರಿಯಿದ್ಯಾ ಚೆಕ್ ಮಾಡ್ಕೊಳ್ಳಿ
ಅವರು ಹೇಳಿರುವ ರೆಸಿಪಿ ಹೀಗಿದೆ:
ತೋತಾಪುರಿಯಿಂದ ಮಾವಿನಕಾಯಿ ಮಾಡಲು ಬೇಕಾಗಿರುವ ಸಾಮಗ್ರಿಗಳು:
* ಎರಡು ತೋತಾಪುರಿ ಮಾವಿನಕಾಯಿ,
* ಒಂದು ಚಮಚದಷ್ಟು ಮೆಂತ್ಯ,
* ಸಾಸಿವೆ,
* ಅರಿಶಿಣದ ಪುಡಿ,
* ಖಾರದ ಪುಡಿ,
* ಸ್ವಲ್ಪ ಕರಿಬೇವಿನ ಸೊಪ್ಪು,
* 1-2 ಒಣಮೆಣಸಿನಕಾಯಿ,
* ಸ್ವಲ್ಪ ಇಂಗು
* ರುಚಿಗೆ ತಕ್ಕಷ್ಟು ಉಪ್ಪು.
ಮೊದಲಿಗೆ ಮಾವಿನಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಒರೆಸಿಕೊಳ್ಳಬೇಕು. ಸ್ವಲ್ಪವೂ ನೀರಿನ ಅಂಶ ಇರಬಾರದು. ಅದನ್ನು ಚಿಕ್ಕಚಿಕ್ಕತುಂಡುಗಳನ್ನಾಗಿ ಮಾಡಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಮೆಂತ್ಯ, ಸಾಸಿವೆಯನ್ನು (Seasame) ಹುರಿದುಕೊಳ್ಳಬೇಕು. ಅದು ಕೆಂಪಗಾದ ಮೇಲೆ ತಣ್ಣಗಾಗಲು ಬಿಡಬೇಕು. ಅದನ್ನು ಚಿಟಿಕೆ ಅರಿಶಿಣದ ಜೊತೆಗೆ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ಮಾವಿನಕಾಯಿ ಮೇಲೆ ಹಾಕಿ ಕಲಸಿಕೊಳ್ಳಬೇಕು. ಅದಕ್ಕೆ ಉಪ್ಪು ಮತ್ತು ಖಾರ ಹಾಕಿ ಮತ್ತೊಂದು ಸ್ವಲ್ಪ ಅರಿಶಿಣದ ಪುಡಿ (Turmeric) ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು.
ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ ಅದು ಕಾದ ನಂತರ, ಸಾಸಿವೆ, ಕರಿಬೇವು ಹಾಕಿ ಚಿಟಗುಡಿಸಬೇಕು. ಅದಕ್ಕೆ ಸ್ವಲ್ಪ ಇಂಗು ಹಾಕಬೇಕು. ಉಪ್ಪಿನ ಕಾಯಿ ಹೆಚ್ಚಿಗೆ ದಿನ ಬಾಳಿಕೆ ಬರಬೇಕು ಎಂದರೆ ಎಣ್ಣೆ ಹೆಚ್ಚಿಗೆ ಹಾಕಬೇಕು. ಇಲ್ಲದಿದ್ದರೆ ಸ್ವಲ್ಪ ಎಣ್ಣೆ ಸಾಕು. ಈ ಒಗ್ಗರಣೆಯನ್ನು ಕಲಸಿಟ್ಟುಕೊಂಡ ಮಾವಿನ ಕಾಯಿಗೆ ಮಿಕ್ಸ್ ಮಾಡಿದರೆ ಘಮಘಮಿಸುವ, ಬಾಯಲ್ಲಿ ನೀರೂರುವ ತೋತಾಪುರಿ ಮಾವಿನಕಾಯಿ ಉಪ್ಪಿನಕಾಯಿ ರೆಡಿ. ಇದನ್ನು ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಹಾಕದೇ ಗಾಜಿನ ಅಥವಾ ಸೆರಾಮಿಕ್ನಲ್ಲಿ ಡಬ್ಬದಲ್ಲಿ ಹಾಕಿದರೆ ಜಾಸ್ತಿ ದಿನ ಬರುತ್ತದೆ.
Ugadi 2023: ಹಬ್ಬಕ್ಕೆ ಮಾವಿನ ಕಾಯಿ ಚಿತ್ರಾನ್ನ ಮಾಡೋದನ್ನು ಮರೀಬೇಡಿ, ಇಲ್ಲಿದೆ ರೆಸಿಪಿ