ಬಾಲಿವುಡ್ ನಟಿ ಮಧುಬಾಲಾ ಮತ್ತು ಗಾಯಕ ಕಿಶೋರ್ ಕುಮಾರ್ ಅವರ ಪ್ರೇಮಕಥೆ ಒಂದು ದುರಂತ ಅಧ್ಯಾಯ. ಮಧುಬಾಲಾ ಅವರ ಅನಾರೋಗ್ಯ ಮತ್ತು ಕಿಶೋರ್ ಕುಮಾರ್ ಅವರ ಮತಾಂತರವು ಈ ಸಂಬಂಧದಲ್ಲಿ ತಿರುವುಗಳನ್ನು ತಂದಿತು.
ಆಕೆ ಬಾಲಿವುಡ್ ಚಿತ್ರರಂಗದ ಅಚ್ಚಳಿಯದ ಐಕಾನ್. ಇಂದಿಗೂ ಆಕೆಯ ಮಧುರ ಮುಖ ಚಿತ್ರರಸಿಕರ ನೆನಪಿನಿಂದ ಅಳಿಸಿಹೋಗದು. ಆದರೆ ಆಕೆಯ ಅಂತಿಮ ವರ್ಷಗಳು ಸುಂದರವಾಗಿರಲಿಲ್ಲ. ಆ ಚರಿತ್ರಾರ್ಹ ನಟಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಆಕೆಯ 30ರ ಹರೆಯದಲ್ಲಿ ಆರಂಭವಾದ ಆ ಕಾಯಿಲೆ ಆಕೆಯನ್ನು 36ನೇ ವಯಸ್ಸಿನವರೆಗೂ ಕಾಡಿತು. ಹಾಸಿಗೆಗೆ ಕೆಡವಿತು. ಈಕೆ ಮಧುಬಾಲ. ಮಧುರ, ಚಂದ್ರನಂಥ ಮುಖದ ಸುಂದರಿ.
ಮಧುಬಾಲ ಮತ್ತು ಆಕೆಯ ಸಹನಟ ದಿಲೀಪ್ ಕುಮಾರ್ ಅವರ ಕಹಿ ಪ್ರೇಮಕಥೆಯು ಬಾಲಿವುಡ್‌ನಲ್ಲಿ ಜಗತ್‌ಪ್ರಸಿದ್ಧ. ಅಷ್ಟೇ ನಾಟಕೀಯ. ದಿಲೀಪ್ ಆಕೆಯ ಜೊತೆಗೆ ಕೊನೆಯವರೆಗೆ ಇರಲಿಲ್ಲ. ಆದರೆ ಈ ಕತೆಯ ಇನ್ನೊಂದು ತುದಿಯಲ್ಲಿ ಇರುವವನು ಸೂಪರ್ ಸ್ಟಾರ್ ಗಾಯಕ ಕಿಶೋರ್ ಕುಮಾರ್. ಈತನೇ ಮಧುಬಾಲಾಗಾಗಿ ಮುಸ್ಲಿಂ ಆದಾತ. ಅಂದ ಹಾಗೆ ಮಧುಬಾಲ ಎಂಬ ಹೆಸರು ಹಿಂದೂ ಆದರೂ ಆಕೆ ಇಸ್ಲಾಂ ಧರ್ಮದವಳು. ಆಕೆಯ ಮೂಲ ಹೆಸರು ಮುಮ್ತಾಜ್ ಜೆಹಾನ್ ಬೇಗಂ ದೆಹಲ್ವಿ.
ಕಿಶೋರ್ ಕುಮಾರ್ 1950ರಲ್ಲಿ ರುಮಾ ಘೋಷ್ ಎಂಬಾಕೆಯನ್ನು, ಆತ 21 ವರ್ಷದವನಾಗಿದ್ದಾಗ ವಿವಾಹವಾಗಿದ್ದ. ಆಕೆಗೆ ಆಗ 16 ವರ್ಷ. ದಂಪತಿಗಳು ಎಂಟು ವರ್ಷಗಳ ಕಾಲ ಜೊತೆಗಿದ್ದರು. ಈ ದಾಂಪತ್ಯದ ಕಡೆಕಡೆಗೆ ಕಿಶೋರ್‌ಗೆ ಮಧುಬಾಲಾ ಜೊತೆ ಪ್ರೀತಿ ಬೆಳೆಯಹತ್ತಿತ್ತು. ಕಿಶೋರ್ ರುಮಾಳಿಂದ ವಿಚ್ಛೇದನ ಪಡೆಯುವ ಸಮಯದಲ್ಲಿ ಮತ್ತು ದಿಲೀಪ್ ಕುಮಾರ್ ಜೊತೆ ಮಧುಬಾಲಾಳ ಸಂಬಂಧವೂ ಕಡಿದುಹೋಗಿದ್ದ ಸಮಯದಲ್ಲಿ ಇಬ್ಬರೂ ಚಲ್ತಿ ಕಾ ನಾಮ್ ಗಾಡಿ (1958) ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆಗ ಅವರಿಬ್ಬರ ನಡುವೆ ಪ್ರಣಯ ಮೊಳೆಯಿತು.
ಆದರೆ ಅವರಿಬ್ಬರ ಮದುವೆಯ ಪ್ರಶ್ನೆ ಉದ್ಭವಿಸುತ್ತಿದ್ದಂತೆ, ಮಧುಬಾಲಾಳ ತಂದೆ ಒಂದು ಷರತ್ತು ಮುಂದಿಟ್ಟರು- ಅದೆಂದರೆ ಕಿಶೋರ್ ಕುಮಾರ್ ಹಿಂದೂ ಧರ್ಮ ತೊರೆದು ಧರ್ಮ ಇಸ್ಲಾಂಗೆ ಮತಾಂತರಗೊಳ್ಳಬೇಕು. ಕಿಶೋರ್ ಇದಕ್ಕೊಪ್ಪಿದ. ಬಾಲಿವುಡ್‌ನ ಮಹಾನ್ ಗಾಯಕ ಕಿಶೋರ್ ಮತಾಂತರಗೊಂಡು ತನ್ನ ಹೆಸರನ್ನು ಕರೀಂ ಅಬ್ದುಲ್ ಎಂದು ಬದಲಾಯಿಸಿದ. ಇಬ್ಬರೂ ವಿವಾಹವಾದರು.
ಕೈ ತುಂಬ ಇದ್ದೋನೆ ಯೋಗಿ, ಕಡೆವರೆಗು ಬೇಡೋನೆ ಜೋಗಿ ಸದ್ಯ ಟ್ರೆಂಡಿಂಗ್ ಆಗ್ತಿರೋದು ಯಾಕೆ?
ತನ್ನ ಮೂವತ್ತರ ಹರೆಯದ ಆರಂಭದಿಂದಲೂ ಮಧುಬಾಲಾ ಹೃದಯ ಕುಹರದ ಸೆಪ್ಟಲ್ ದೋಷದಿಂದ ಉಂಟಾದ ಉಸಿರಾಟದ ತೊಂದರೆ ಮತ್ತು ಹೆಮೊಪ್ಟಿಸಿಸ್‌ನ ಪುನರಾವರ್ತಿತ ದಾಳಿಯಿಂದ ಬಳಲುತ್ತಿದ್ದರು. ಇದರಿಂದ ಆಕೆಯ ವೃತ್ತಿಜೀವನದ ಮೇಲೆ ಪರಿಣಾಮ ಬೀರಿತು. ಸ್ವಲ್ಪ ಸಮಯದ ನಂತರ ಆರೋಗ್ಯ ಸಮಸ್ಯೆ ಬಿಗಡಾಯಿಸಿ ನಟನೆಯನ್ನು ತ್ಯಜಿಸಬೇಕಾಯಿತು. ಮಧುಬಾಲಾ ತೀರಾ ಅಸ್ವಸ್ಥಳಾದಾಗ ಕಿಶೋರ್ ಕುಮಾರ್ ಅವಳನ್ನು ನೋಡಿಕೊಳ್ಳಲು ನರ್ಸ್ ಮತ್ತು ಡ್ರೈವರ್ ನೇಮಿಸಿದ. ಆಕೆಯ ಆರೋಗ್ಯದ ಮತ್ತಿತರ ಖರ್ಚುಗಳನ್ನು ಭರಿಸಿದ. ಆದರೆ ಆಕೆಯೊಂದಿಗೆ ದಾಂಪತ್ಯ ಮುಂದುವರಿಸಲಿಲ್ಲ. 1969ರಲ್ಲಿ ಅವಳು ಸಾಯುವವರೆಗೂ ಕಿಶೋರ್ ಆಗಾಗ ಅವಳನ್ನು ಭೇಟಿ ಮಾಡಿದ. ಹೀಗೆ ಬಾಲಿವುಡ್ ಕಂಡ ಕನಸಿನ ರಾಣಿ ಮಧುಬಾಲ ಕೊನೆಗಾಲದಲ್ಲಿ ಒಂಟಿಯಾದಳು.
ಮಧುಬಾಲ ತೀರಿಕೊಂಡ ನಂತರವೂ ಕಿಶೋರ್ ಕುಮಾರ್ ಎರಡು ಮದುವೆಯಾದ. 1976-78ರಲ್ಲಿ ಆತ ನಟಿ ಯೋಗೀತಾ ಬಾಲಿ ಅವರನ್ನು ವಿವಾಹವಾದ. ಮತ್ತೆ 1980ರಲ್ಲಿ ನಟಿ ಲೀನಾ ಚಂದಾವರ್ಕರ್ ಅವರನ್ನು ವಿವಾಹವಾದ. 1987ರ ಹೊತ್ತಿಗೆ, ತನ್ನ 50ರ ಹರೆಯದ ಅಂತ್ಯದಲ್ಲಿದ್ದಾಗ, ಬಾಲಿವುಡ್ ಸಂಗೀತದಲ್ಲಿ ಆಗುತ್ತಿರುವ ಬದಲಾವಣೆಯಿಂದ ಹತಾಶೆಗೊಂಡ ಕಿಶೋರ್ ಗಾಯನದಿಂದ ನಿವೃತ್ತನಾಗಲು ಯೋಚಿಸಿದ. ತನ್ನ ಜನ್ಮಸ್ಥಳವಾದ ಖಾಂಡ್ವಾಕ್ಕೆ ಸ್ಥಳಾಂತರಗೊಳ್ಳಲು ಯೋಜಿಸಿದ. ಆಗಲೇ ಅಕ್ಟೋಬರ್ 13ರಂದು ಆತನಿಗೆ ಹೃದಯಾಘಾತವಾಯಿತು. ಆಗ ಆ ಜನಪ್ರಿಯ ಗಾಯಕನಿಗೆ 58 ವರ್ಷ.