ನಟ ಯಶ್‌ಗೇ ಕನ್ನಡ ಕಲಿಸಿದರಾ ತೆಲುಗು ಗಾಯಕಿ ಮಂಗ್ಲಿ!

By Suvarna NewsFirst Published Mar 15, 2021, 2:04 PM IST
Highlights

ತೆಲುಗಿನ ಗಾಯಕಿ ಮಂಗ್ಲಿ ಕನ್ನಡದ ನಟ ಯಶ್‌ಗೆ ಕನ್ನಡದ ದಾಸರ ಬಗ್ಗೆ ಪಾಠ ಮಾಡಿದ ಈ ವಿಡಿಯೋ ವೈರಲ್ ಆಗಿದೆ.

ತೆಲುಗಿನ ಇತ್ತೀಚಿನ ಪಾಪ್ಯುಲರ್ ಗಾಯಕಿ ಮಂಗ್ಲಿ. ಈಕೆ ಇತ್ತೀಚೆಗೆ ಒಂದು ತೆಲುಗು ಟಿವಿ ಶೋದಲ್ಲಿ, ಕನ್ನಡದ ನಟ ಐಶ್ ಅವರನ್ನು ಮಾತಾಡಿಸ್ತಾ ಆಡಿದ ಕೆಲವು ಮಾತುಗಳು ಈಗ ವೈರಲ್ ಆಗಿವೆ.
ಕೆಜಿಎಫ್- 2 ಫಿಲಂ ಪ್ರಮೋಶನ್‌ಗೆ ಸಂಬಂಧಿಸಿದ ಇಂಟರ್‌ವ್ಯೂನಲ್ಲಿ ಮಂಗ್ಲಿ ಕೂಡ ಇದ್ದಾಳೆ. ಈಕೆ ಯಶ್‌ಗೆ 'ನಿಮ್ಗೆ ಪುರಂದರದಾಸರು ಗೊತ್ತಾ?' ಅಂತ ಕೇಳ್ತಾಳೆ. ಆಗ ಯಶ್ 'ಏನು ಗೊತ್ತಿಲ್ಲದೆ? ಅವರು ದಾಸರುಗಳಲ್ಲಿ ಒಬ್ಬರು' ಅಂತ ಹೇಳಿದ್ದಾರೆ. ಅವರ ಬಗ್ಗೆ ಹೆಚ್ಚು ಹೇಳೋಕೆ ಯಶ್‌ಗೆ ನೆನಪಾಗಿಲ್ಲವೋ ಏನೋ. ಆಗ ಮಂಗ್ಲಿ ನಕ್ಕಿದ್ದಾಳೆ. ಆಗ ಯಶ್, ತಾವು ಫಿಲಂಗೆ ಬರುವುದಕ್ಕೂ ಮುನ್ನ ಕನ್ನಡದ 'ಸತ್ತವರ ನೆರಳು' ನಾಟಕದಲ್ಲಿ ನಟಿಸಿದ್ದನ್ನೂ, ಅಲ್ಲಿ 'ಆಚಾರವಿಲ್ಲದ ನಾಲಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಗೆ' ಎಂಬ ಹಾಡು ಇತ್ತೆಂದೂ ಹಾಡಿ ತೋರಿಸಿದ್ದಾರೆ. ಅದು ಪುರಂದರದಾಸರದೋ ಅಲ್ಲವೋ ಎಂಬ ಗೊಂದಲ ಇರುವುದಾಗಿಯೂ ಹೇಳಿದ್ದಾರೆ. ಆಗ ಮಂಗ್ಲಿ 'ಪುರಂದರದಾಸರು ಕರ್ನಾಟಕ ಸಂಗೀತದ ಮೂವರು ತ್ರಿಮೂರ್ತಿಗಳಲ್ಲಿ ಒಬ್ಬರು. ಸಂಗೀತದ ಸರಿಗಮಪದನಿ ಹಾಕಿಕೊಟ್ಟಿದ್ದು ಅವರು. ಅವರ ಕೀರ್ತನೆಗಳನ್ನು ಕಲಿತಿದ್ದೇನೆ' ಎನ್ನುತ್ತಾರೆ. 'ದಯ ಮಾಡೋ ರಂಗಾ ದಯ ಮಾಡೋ' ಎಂಬ ಕೀರ್ತನೆಯ ಸೊಲ್ಲನ್ನು ಸುಶ್ರಾವ್ಯವಾಗಿ ಹಾಡಿ ತೋರಿಸುತ್ತಾರೆ. ಯಶ್ ಚಕಿತರಾಗುತ್ತಾರೆ. ಈ ದೃಶ್ಯಾವಳಿ ಮಂಗ್ಲಿಯ ಕೀರ್ತನ ಪರಿಣತೆಯನ್ನು ಕೂಡ ತೋರಿಸುತ್ತೆ.

ಮಂಗ್ಲಿ ಅಂತಾನೇ ಫೇಮಸ್ ಆಗಿರೋ ಈ ಸಿಂಗರ್ ಒರಿಜನಲ್ ಹೆಸರು ಸತ್ಯವತಿ ರಾಥೋಡ್ ಚೌಹಾಣ್ ಅಂತ್ಲೂ ಹೇಳೋರು ಇದಾರೆ. ಆದರೆ ಮಾಟಗಾತಿ ಮಂಗ್ಲಿ ಅಂತ್ಲೇ ಜನಪ್ರಿಯ. ಯಾಕಂದ್ರೆ ಮಾಟಗಾತಿ ಅನ್ನುವ ಟಿವಿ ಶೋದಲ್ಲಿ ಭಾಗವಹಿಸಿ ಸಾಕಷ್ಟು ಪಾಪ್ಯುಲರ್ ಆದವಳು. ಅದಕ್ಕೂ ಮುನ್ನದ ಈಕೆಯ ಕತೆ ತುಂಬಾ ಚೆನ್ನಾಗಿದೆ, ಸ್ಫೂರ್ತಿಯುತವಾಗಿದೆ.

ಈಕೆ ಬಂಜಾರಾ ಸಮುದಾಯದವಳು, ಇವರಿಗೆ ಮನೆಗಳಿಲ್ಲ. ಊರೂರು ತಿರುಗಾಡುವ ಹಕ್ಕಿಪಿಕ್ಕಿ, ಲಂಬಾಣಿಗಳನ್ನು ನೀವು ನೋಡಿರಬಹುದು. ಹಾಗೇ ಇವರೂ ಕೂಡ ಊರೂರಿಗೆ ಹೋಗಿ ಟೆಂಟ್ ಹಾಕಿ ಬದುಕಿ ಸಾಗಿಸುವ ಜನ. ಇತ್ತೀಚೆಗೆ ಕೆಲವು ಕಡೆ ತಾಂಡಾಗಳನ್ನು ಮಾಡಿಕೊಂಡು ಬದುಕುತ್ತಿದ್ದಾರೆ. ಇವು ಮನೆಗಳಲ್ಲ, ಗುಡಿಸಲುಗಳು. ಇಲ್ಲಿ ಸರಿಯಾಧ ಬಾತ್‌ರೂಮ್ ಕೂಡ ಇಲ್ಲ. ತಮಗೆ ಬಾಲ್ಯದಲ್ಲಿ ಸರಿಯಾದ ಬಾತ್ರೂಮ್, ಟಾಯ್ಲೆಟ್ ಕೂಡ ಇರಲಿಲ್ಲ ಎಂದು ಮಂಗ್ಲಿ ನೆನೆಪು ಮಾಡಿಕೊಳ್ಳುತ್ತಾರೆ. ಹೀಗೆ ಹುಟ್ಟಿ ಬೆಳೆದು ಬಂದ ಬಂಜಾರಾ ಕಮ್ಯುನಿಟಿಯ ಹೆಣ್ಣು ಮಕ್ಕಳನ್ನು ಸಾಮಾನ್ಯವಾಗಿ ಹನ್ನೆರಡು- ಹದಿಮೂರು ವರ್ಷಕ್ಕೆಲ್ಲಾ ಮದುವೆ ಮಾಡಿ ಬಿಡುತ್ತಾರೆ. ಬದುಕು ಹೇಗೋ ಸಾಗುತ್ತದೆ.

 

ಆದರೆ ಮಂಗ್ಲಿಯ ಅಪ್ಪ ಮಾತ್ರ ಬುದ್ಧಿವಂತರು. ಶಿಕ್ಷಣದ ಮಹತ್ವ ಅರಿತ ಅವರು ಮಂಗ್ಲಿಯನ್ನು ಓದಿಸಿದರು. ಹೀಗೆ ಓದಿದ ಮಂಗ್ಲಿ ತನ್ನ ಇಚ್ಛೆಯಂತೆಯೇ ಕರ್ನಾಟಕ ಸಂಗೀತದಲ್ಲಿ ಡಿಪ್ಲೊಮಾ ಮಾಡಿದಳು. ಹಾಗಾಗಿಯೇ ಆಕೆಗೆ ಕರ್ನಾಟಕ ಸಂಗೀತದ ತಲೆಬುಡಗಳೆಲ್ಲಾ ಗೊತ್ತು. ಪುರಂದರದಾಸ, ಕನಕದಾಸರ ಹಾಡುಗಳನ್ನು ಚೆನ್ನಾಗಿ ಹಾಡುತ್ತಾರೆ. 

ಇಂಡಸ್ಟ್ರಿಗೆ ಬಂದು 16 ವರ್ಷ: ಹೇಗಿದ್ದೋರು ಹೇಗಾದ್ರು ನೋಡಿ ...

ತಮ್ಮ ಪ್ರತಿಭೆಯಿಂದಾಗಿಯೇ ಮಿಂಚತೊಡಗಿದ ಮಂಗ್ಲಿಯ ಮಾತೃಭಾಷೆ ಬಂಜಾರಾ ಆಗಿದ್ದರೂ ಬಂಜಾರಾ ಭಾಷೆಗೆ ಲಿಪಿ ಇಲ್ಲ. ಹೀಗಾಗಿ ಆಕೆ ತೆಲುಗನ್ನು ಕಲಿತಳು. ಅದರಲ್ಲೂ ತೆಲಂಗಾಣದ ಜನಪದ ಆಡುನುಡಿಯನ್ನು ಚೆನ್ನಾಗಿ ರೂಢಿಸಿಕೊಂಡಳು. ಮುಂದೆ ಇದೇ ಈಕೆಗೆ ಒಂದು ಜನಪದ ಆವರಣವನ್ನು ಕಟ್ಟಿಕೊಟ್ಟಿತು. ಈಕೆಯ ವಾಯಿಸ್‌ನಲ್ಲಿ ಅಷ್ಟೊಂದು ರಾನೆಸ್- ಕಚ್ಚಾತನ ಇರುವುದಕ್ಕೂ ಅದೇ ಕಾರಣ. ಆಕೆಯ ಯಶಸ್ಸಿನಲ್ಲಿ ಆಕೆಯ ಧ್ವನಿ, ವಾಯಿಸ್ ಕಲ್ಚರ್ ಎಲ್ಲ ಕಾರಣವಾಗಿವೆ. 

ಕರೀನಾ - ಐಶ್ವರ್ಯಾ: ಪ್ರೆಗ್ನೆಂಸಿಯ ನಂತರ ಮತ್ತೆ ಫಿಟ್‌ ಆದ ನಟಿಯರು! ...

ಮೊದಲು ಈಕೆ ಕೆಲವು ಟಿವಿ ಶೋಗಳಲ್ಲಿ ಕಾಣಿಸಿಕೊಂಡಳು. ಟಿವಿಯಲ್ಲಿ ಈಕೆಯ ಪ್ರತಿಭೆಯನ್ನು ತೀರ್ಪುಗಾರರು ಥಟ್ಟನೆ ಹಿಡಿದರು. ಅಲ್ಲಿಂದ ಆಕೆ ಆಲ್ಬಮ್ ಸಾಂಗ್‌ಗಳಿಗೆ ಭಡ್ತಿ ಪಡೆದಳು. ಅಲ್ಲೂ ಹಿಟ್ ಆದಳು. ಈಗ ದೊಡ್ಡ ದೊಡ್ಡ ತಾರೆಯರ ಸಿನೆಮಾಗಳಿಗೆ ಹಾಡುತ್ತಿದ್ದಾಳೆ. ಆಸ್ಟ್ರೇಲಿಯಾದಿಂದ ಹಿಡಿದು ಅಮೆರಿಕದವರೆಗೂ ಸ್ಟೇಜ್ ಶೋಗಳಿಗೆ ಈಕೆಯನ್ನು ಕರೆಯುತ್ತಾರೆ. ಕನ್ನಡದ ರಾಬರ್ಟ್ ಸಿನೆಮಾದ ತೆಲುಗು ಆವೃತ್ತಿಯ ಕಣ್ಣೇ ಅಂದಿರಿಕಿ ಹಾಡು ಆಕೆಗೆ ಇನ್ನಷ್ಟು ಪಾಪ್ಯುಲಾರಿಟಿ ತಂದುಕೊಟ್ಟಿದೆ. ಬಂಜಾರಾ ತಾಂಡಾದಿಂದ ಬಂದ ಈಕೆ ಈಗ ದೊಡ್ಡ ಮನೆ ಕಟ್ಟಿಸಿದ್ದು, ಅಲ್ಲಿ ಮೂರು ಬಾತ್‌ರೂಮುಗಳಿವೆ. ಬಂಜಾರಾ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವನ್ನು ಆಕೆ ಪ್ರತಿಪಾದಿಸುತ್ತಿದ್ದಾಳೆ. 

ಪ್ರಿಯಾಂಕಾರ ಜೊತೆ ರೊಮ್ಯಾನ್ಸ್‌ ಮಾಡಲು ಬಯಸಿ ರಿಜೆಕ್ಟ್‌ ಆದ ದೀಪಿಕಾರ ಎಕ್ಸ್! ...

 

click me!