ಒಂದು ಪಾತ್ರಕ್ಕೆ ಜೀವ ತುಂಬುವಲ್ಲಿ ಕೇಶ ವಿನ್ಯಾಸ ಕೂಡ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ತಮ್ಮ ಪಾತ್ರಕ್ಕೆ ಜೀವ ತುಂಬಲು ಪ್ರಿಯಾಂಕಾ ಚೋಪ್ರಾ ಯಾವ ರೀತಿ ಕೇಶ ವಿನ್ಯಾಸ ಮಾಡಿಸಿಕೊಳ್ಳುತ್ತಾರೆ ಗೊತ್ತಾ?
ಚಿತ್ರನಟರಾಗುವುದು ಸುಲಭವಲ್ಲ. ಎಲ್ಲರಿಗೂ ಈ ಅದೃಷ್ಟ ಒಲಿದು ಬರುವುದಿಲ್ಲ. ಎಷ್ಟೋ ಮಂದಿಗೆ ಟ್ಯಾಲೆಂಟ್ ಇದ್ದರೂ, ಕಿರುತೆರೆ, ಹಿರಿತೆರೆಯ ಮೇಲೆ ಕಾಣಿಸಿಕೊಳ್ಳುವ ಆಸೆ ಇದ್ದರೂ ಅವರ ಆಸೆ ಕೈಗೂಡುವುದಿಲ್ಲ. ಇನ್ನು ಕೆಲವರಿಗೆ ಯಾವುದೇ ವಿಶೇಷ ಪ್ರತಿಭೆ ಇಲ್ಲದಿದ್ದರೂ ಎಲ್ಲವನ್ನೂ ಸುಲಭವಾಗಿ ಗಿಟ್ಟಿಸಿಕೊಂಡು ಬಿಡುತ್ತಾರೆ. ಬೆಳ್ಳಿಪರದೆಯ ಮೇಲೆ ನಟಿಸುವ ಅವಕಾಶಗಳು ಸುಲಭದಲ್ಲಿಯೇ ಸಿಕ್ಕಿರಲಿ ಅಥವಾ ತುಂಬಾ ಕಷ್ಟಪಟ್ಟೇ ದಕ್ಕಿರಲಿ... ಅಲ್ಲಿಯೇ ಬೇರೂರಬೇಕು ಎಂದರೆ ನಟ-ನಟಿಯರು ಪಡುವ ಕಷ್ಟಕ್ಕೆ ಲೆಕ್ಕವೇ ಇಲ್ಲ. ಸಹಸ್ರ, ಲಕ್ಷ, ಕೋಟಿ ಕೋಟಿ ಅಭಿಮಾನಿಗಳನ್ನು (Fans) ಪಡೆದಮೇಲಂತೂ ನಟ-ನಟಿಯರ ಬದುಕೇ ವಿಭಿನ್ನವಾಗಿ ಬಿಡುತ್ತವೆ. ಖಾಸಗಿ ಬದುಕು ಎನ್ನುವುದೇ ಇರುವುದಿಲ್ಲ, ಪ್ರೇಕ್ಷಕರನ್ನು ಸದಾ ಹಿಡಿದಿಟ್ಟುಕೊಳ್ಳುವ ಕೆಲಸದಲ್ಲಿ ಅವರು ಇರಬೇಕಾದುದು ಅನಿವಾರ್ಯ. ಇದೇ ಕಾರಣಕ್ಕೆ ಸೌಂದರ್ಯದ ಬಗ್ಗೆ ಸದಾ ಅವರು ಕಾಳಜಿ ವಹಿಸಬೇಕಾಗುತ್ತದೆ. ಸೌಂದರ್ಯ ಎಂದಾಕ್ಷಣ ತೆಳ್ಳಗೆ, ಬೆಳ್ಳಗೆ ಚಿತ್ರಣ ಬರುತ್ತದೆ. ಆದರೆ ಒಬ್ಬ ವ್ಯಕ್ತಿ ಸುಂದರವಾಗಿ ಕಾಣಿಸಬೇಕು ಎಂದರೆ ಅದರಲ್ಲಿಯೂ ತೆರೆಯ ಮೇಲೆ ಸುಂದರವಾಗಿ ಇರಬೇಕು ಎಂದರೆ, ಕೇಶದ ಸೌಂದರ್ಯವೂ ಅಷ್ಟೇ ಮುಖ್ಯ. ಪಾತ್ರಕ್ಕೆ ತಕ್ಕಂತೆ ಕೇಶವಿನ್ಯಾಸವೂ (Hair Style) ಬದಲಾಗಬೇಕು. ವಯಸ್ಸಾಗುತ್ತಿದ್ದಂತೆಯೇ ನಾಯಕಿಯಾಗಿ ಕಾಣಿಸಿಕೊಳ್ಳಬೇಕು ಎಂದರೆ ಆಗ ಒಂದು ರೀತಿಯ ಕೇಶವಿನ್ಯಾಸ ಬೇಕಿದ್ದರೆ, ಚಿಕ್ಕ ವಯಸ್ಸಿನ ನಟಿಯೊಬ್ಬಳು ಹಿರಿಯಳಂತೆ ಪಾತ್ರ ಮಾಡಬೇಕಾದರೆ ಅದಕ್ಕೆ ಬೇರೆಯದ್ದೇ ರೀತಿಯ ಕೇಶವಿನ್ಯಾಸ ಬೇಕು. ಇನ್ನು ಐತಿಹಾಸಿಕ ಪಾತ್ರಗಳಲ್ಲಿ ನಟಿಸಬೇಕಿದ್ದರೆ ಅಥವಾ ಯಾರದ್ದರೂ ಬಯೋಪಿಕ್ನಲ್ಲಿ ನಟಿಸಬೇಕಾಗಿದ್ದರೆ, ಅದೇ ರೀತಿಯ ಹೇರ್‌ಸ್ಟೈಲ್ ಮುಖ್ಯ. ಹಾಗೆಂದು ಎಲ್ಲಾ ಸಂದರ್ಭಗಳಲ್ಲಿ ನಾಯಕ-ನಾಯಕಿಯರು ವಿಗ್ ಧರಿಸುತ್ತಾರೆ ಎಂಬ ಕಲ್ಪನೆ ಸರಿಯಲ್ಲ. ಇರುವ ಒರಿಜಿನಲ್ ಕೂದಲಿನಲ್ಲಿಯೇ ಪಾತ್ರಕ್ಕೆ ತಕ್ಕಂತೆ ಸಾಧ್ಯವಾದಷ್ಟು ಹೇರ್‌ಸ್ಟೈಲ್ ಮಾಡಿಸಿಕೊಳ್ಳುತ್ತಾರೆ.
ಅಂಥ ಒಬ್ಬರು ನಟಿಯರಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಒಬ್ಬರು. ಇವರು ತಮ್ಮ ಬಹುತೇಕ ಚಿತ್ರಗಳಲ್ಲಿ ವಿಗ್ ಬಳಸಿದ್ದು ಕಡಿಮೆಯೇ. ವಿಗ್ ಬಳಸಿದ್ದರೂ, ಅದರ ಜೊತೆಗೆ ಮೂಲ ಕೇಶವನ್ನೂ ಬಳಸುತ್ತಾರೆ. ಈ ಕುರಿತು ಅವರು ತಮ್ಮ ಕೇಶವಿನ್ಯಾಸಕಿ ಪ್ರಿಯಾಂಕಾ ಬೋರ್ಕರ್ (Priyanka Borker) ಜೊತೆ ಕೆಲವೊಂದು ಮಾಹಿತಿ ಹಂಚಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಪ್ರಿಯಾಂಕಾ ಬೋರ್ಕರ್ ಅವರು ಪ್ರಿಯಾಂಕಾ ಚೋಪ್ರಾ ಅವರಿಗೆ ಕೇಶ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಚೋಪ್ರಾ ಅವರ 14 ಚಿತ್ರಗಳಲ್ಲಿ ಬೋರ್ಕರ್ ಅವರಿಗೆ ಕೇಶವಿನ್ಯಾಸ ಮಾಡಿದ್ದಾರೆ. ಪ್ಯಾರ್ ಇಂಪಾಸಿಬಲ್, ಅಂಜಾನಾ ಅಂಜಾನಿಯಿಂದ ಬರ್ಫಿ ಮತ್ತು ಬಾಜಿರಾವ್ ಮಸ್ತಾನಿಯವರೆಗೆ, PC ತಮ್ಮ ಫ್ಯಾಷನ್ ಮತ್ತು ಚಿಕ್ ಲುಕ್‌ಗಳ ಬಗ್ಗೆ ಆಸಕ್ತಿದಾಯಕ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ಆರಂಭದ ದಿನಗಳಲ್ಲಿ ಕರಿಬೆಕ್ಕು ಎನ್ನುತ್ತಿದ್ದರು: ಘಟನೆ ನೆನೆದು ಭಾವುಕರಾದ Priyanka Chopra
2010ರಲ್ಲಿ ಬಿಡುಗಡೆಯಾದ ಇಂಪಾಸಿಬಲ್, ಅಂಜಾನಾ ಅಂಜಾನಿಯ ಸಂದರ್ಭದಲ್ಲಿ ಇನ್ನೂ ಕೇಶವಿನ್ಯಾಸದಲ್ಲಿ ಅಷ್ಟೊಂದು ಪಳಗಿರದ ಪ್ರಿಯಾಂಕಾ ಬೋರ್ಕರ್ ಅವರು ತಮಗೆ ಹೇರ್‌ಸ್ಟೈಲ್ ಮಾಡಲು ಎಷ್ಟು ಕಷ್ಟಪಟ್ಟರು ಎಂಬುದನ್ನು ಪ್ರಿಯಾಂಕಾ ವಿವರಿಸಿದ್ದಾರೆ. ಪ್ರಿಯಾಂಕಾ ಬೋರ್ಕರ್ ಅವರು ಕೇಶವಿನ್ಯಾಸ ಮಾಡಲು ಕಷ್ಟಪಟ್ಟಿದ್ದರಿಂದ ತಾವು ಎರಡು ಹೇರ್ಸ್ಟೈಲಿಷ್ಗಳನ್ನು ನೇಮಕ ಮಾಡಿಕೊಂಡಿರುವುದಾಗಿ ಅವರು ಹೇಳಿದ್ದಾರೆ. ಈ ಚಿತ್ರಗಳಲ್ಲಿ ತಮ್ಮದೇ ಕೂದಲನ್ನು ಕಟ್ ಮಾಡಿ ವಿನ್ಯಾಸಗೊಳಿಸಲಾಗಿತ್ತು. ಉದ್ದದ ಕೂದಲನ್ನು ಕಟ್ ಮಾಡಿ ಚಿಕ್ಕ ಹುಡುಗಿಯ ಪಾತ್ರಕ್ಕೆ ಸರಿದೂಗಿಸಲಾಗಿತ್ತು ಎಂದಿದ್ದಾರೆ. ಕೆಲವರು ವಿಗ್ ಧರಿಸುವಂತೆ ಹೇಳಿದರೂ ತಾವು ಅದನ್ನು ಕೇಳದೇ ಒರಿಜಿನಲ್ ಕೂದಲನ್ನೇ ಇಟ್ಟುಕೊಳ್ಳಲು ಏನೆಲ್ಲಾ ಸರ್ಕಸ್ ಮಾಡಿದ್ದೆ ಎಂದು ತಿಳಿಸಿದ್ದಾರೆ.
ನಂತರ ಮೇರಿಕಾಮ್ ಅವರ ಜೀವನ ಆಧಾರಿತ ಅದೇ ಹೆಸರಿನ ಚಿತ್ರದಲ್ಲಿ ಪ್ರಿಯಾಂಕಾ ಮೇರಿಕಾಮ್ (Merycom) ಆಗಿ ಕಾಣಿಸಿಕೊಂಡಿದ್ದರು. ಮೇರಿಕಾಮ್ ಅವರ ರೀತಿಯಲ್ಲಿಯೇ ಹೇರ್‌ಸ್ಟೈಲ್ ಮಾಡಿಸಿಕೊಳ್ಳಲು ತಾವು ಪಟ್ಟಿರುವ ಕಷ್ಟಗಳ ಬಗ್ಗೆ ಅವರು ವಿವರಿಸಿದ್ದಾರೆ. ಮೇರಿಕಾಮ್ ಅವರಂಥ ಮಹಿಳೆಯ ಕುರಿತು ಚಿತ್ರ ಮಾಡುವುದು ಸುಲಭವಲ್ಲ. ಮೇರಿಕಾಮ್ ಹೇರ್‌ಸ್ಟೈಲ್ ಪ್ರಿಯರು ಕೂಡ ಹೌದು. ಅವರು ಒಂದೊಂದು ಸಂದರ್ಭಗಳಲ್ಲಿ ಒಂದೊಂದು ರೀತಿಯ ಹೇರ್‌ಸ್ಟೈಲ್ ಮಾಡುತ್ತಾರೆ. ಅವರ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿದ ಬಳಿಕ ಅದೇ ರೀತಿಯ ಹೇರ್‌ಸ್ಟೈಲ್ ಮಾಡಿಕೊಂಡೆ. ಇದರಲ್ಲಿ ವಿಗ್ ಬಳಸಿದ್ದು ಬಹಳ ಕಡಿಮೆ ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ.
ಇನ್ಸ್ಟಾದಲ್ಲಿ ಕಂಡಿತು ಪ್ರಿಯಾಂಕಾ ಮಗಳ ಮುದ್ದು ಮೊಗ: ಕಾಲೆಳೆದ ನೆಟ್ಟಿಗರು!
ಅದೇ ರೀತಿ ಸೂಪರ್ ಡೂಪರ್ ಹಿಟ್ ಆಗಿರುವ ಚಿತ್ರ 2015ರಲ್ಲಿ ಬಿಡುಗಡೆಗೊಂಡ ಬಾಜಿರಾವ್ ಮಸ್ತಾನಿ (Bajirav Mastani). ಈ ಚಿತ್ರದಲ್ಲಿ 1800ನೇ ದಶಕದ ಮಹಾರಾಷ್ಟ್ರದ ಮಹಿಳೆಯ ಲುಕ್ ಬರಲು ಹೇರ್‌ಸ್ಟೈಲ್ ಹೇಗೆ ನೆರವಾಯಿತು ಎಂದು ಬಹಿರಂಗಪಡಿಸಿದ್ದಾರೆ. 'ಹೇರ್ಸ್ಟೈಲ್ಗಾಗಿಯೇ ಮೂರು ಗಂಟೆ ಕುಳಿತುಕೊಳ್ಳಲಾಗುತ್ತಿತ್ತು. ನನ್ನ ಹೇರ್ಸ್ಟೈಲಿಷ್ ಪ್ರಿಯಾಂಕಾ ಬೋರ್ಕರ್ ಅವರು ನಾನು ಹೋದಲ್ಲಿ, ಬಂದಲ್ಲಿ ಮುಂದಿನ ಕೂದಲನ್ನು ಕರ್ಲಿ ಮಾಡುವಲ್ಲಿ ತಲ್ಲೀನರಾಗಿರುತ್ತಿದ್ದರು. ಈ ಹೇರ್ಸ್ಟೈಲ್ನಲ್ಲಿ ಕೂಡ ನನ್ನದೇ ಒರಿಜಿನಲ್ ಕೂದಲು ಇದೆ. ಅಪರೂಪದ ದೃಶ್ಯಗಳಲ್ಲಿ ವಿಗ್ ಬಳಸಲಾಗಿದೆ. ಇದಕ್ಕಾಗಿ ಬಹಳ ಶ್ರಮ ಪಟ್ಟಿದ್ದೇವೆ' ಎಂದು ಇಬ್ಬರೂ ಪ್ರಿಯಾಂಕಾ ಬಣ್ಣಿಸಿದ್ದಾರೆ. ಇಷ್ಟಾದರೂ ಕೂಡ ಈ ಚಿತ್ರದ ನಾಯಕನಾಗಿರುವ ರಣಬೀರ್ ಅವರಿಗಿಂತಲೂ ತಾವೇ ಬೇಗ ಸೆಟ್ಗೆ ಹೋಗುತ್ತಿದ್ದೆವು ಎಂದೂ ತಮಾಷೆ ಮಾಡಿದ್ದಾರೆ.