Shyam Singha Roy: ಮುಗುಳು ನಗುವಲ್ಲೇ ನಾನಿಯ ಮನವ ಗೆದ್ದ ಸಾಯಿ ಪಲ್ಲವಿ

By Suvarna NewsFirst Published Dec 20, 2021, 4:54 PM IST
Highlights

ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ 'ಶ್ಯಾಮ್ ಸಿಂಗಾ ರಾಯ್' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಮುಗುಳು ನಗುವಲ್ಲೇ ಸಾಂಗ್ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದ ಹೆಸರಾಂತ ಗೀತ ರಚನೆಕಾರ ಕವಿರಾಜ್ ಈ ಹಾಡಿಗೆ ಸಾಹಿತ್ಯವನ್ನು ಬರೆದಿದ್ದಾರೆ.

ನ್ಯಾಚುರಲ್ ಸ್ಟಾರ್ ನಾನಿ (Nani) 'ಶ್ಯಾಮ್ ಸಿಂಗಾ ರಾಯ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಟ್ರೇಲರ್ (Trailer) ಈಗಾಗಲೇ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ನಾನಿ ಕಂಪ್ಲೀಟ್ ಲುಕ್ ಬದಲಾಯಿಸಿಕೊಂಡಿದ್ದು,  ಸಿನಿರಸಿಕರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಇದೀಗ ಚಿತ್ರದ ಮತ್ತೊಂದು ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. 'ಮುಗುಳು ನಗುವಲ್ಲೇ' (Mugulu Naguvalle) ಎಂಬ ಸಾಂಗ್ ಸರಿಗಮ ಕನ್ನಡ ಯೂಟ್ಯೂಬ್‌ (Youtube) ಚಾನೆಲ್‌ನಲ್ಲಿ ರಿಲೀಸ್ ಆಗಿದೆ. ಸ್ಯಾಂಡಲ್‌ವುಡ್‌ನ ಹೆಸರಾಂತ ಗೀತ ರಚನೆಕಾರ ಕವಿರಾಜ್ (Kaviraj) ಅವರು ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. 

'ಮುಗುಳು ನಗುವಲ್ಲೇ' ಹಾಡಿಗೆ ಮಿಕ್ಕಿ ಜೆ ಮೆಯರ್ (Mickey J Meyer) ಸಂಗೀತ ಸಂಯೋಜಿಸಿದ್ದು, ಗಾಯಕ ಅನುರಾಗ್ ಕುಲಕರ್ಣಿ (Anurag Kulkarni) ದನಿಯಾಗಿದ್ದಾರೆ. ಈ ಲಿರಿಕಲ್ ವಿಡಿಯೋದಲ್ಲಿ ಚಿತ್ರದ ನಾಯಕಿ ಸಾಯಿ ಪಲ್ಲವಿ ಅದ್ಭುತವಾಗಿ ನೃತ್ಯ ಮಾಡಿದ್ದು, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿದೆ. ಹಾಗೂ ಸಿನಿಮಂದಿಯಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿದೆ. ಈ ಹಿಂದೆ ಚಿತ್ರದ ಮೊದಲ ಲಿರಿಕಲ್ ಸಾಂಗ್ 'ತಿಳಿ ಗಾಳಿಯ ಪಿಸು ಮಾತಿನ' (Thili Gaaliya) ಎಂಬ ಲವ್ ಸಾಂಗ್ ರಿಲೀಸ್ ಆಗಿ ಮೆಚ್ಚುಗೆಯನ್ನು ಪಡೆದಿತ್ತು. ಮುಖ್ಯವಾಗಿ ಇತ್ತೀಚೆಗೆ ನಿಧನರಾದ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಗಳು (Sirivennela Seetharama Sastry) ಕೊನೆಯದಾಗಿ ಈ ಹಾಡಿನ ತೆಲುಗಿನ ವರ್ಷನ್‌ಗೆ ಸಾಹಿತ್ಯ ಬರೆದಿದ್ದರು.

Shyam Singha Roy: ನ್ಯಾಚುರಲ್ ಸ್ಟಾರ್ ನಾನಿ-ಸಾಯಿ ಪಲ್ಲವಿ ಕಾಂಬಿನೇಷನ್‌ನ ಲವ್ ಸಾಂಗ್ ರಿಲೀಸ್

'ಶ್ಯಾಮ್ ಸಿಂಗಾ ರಾಯ್' ಚಿತ್ರದಲ್ಲಿ ನಾನಿ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗ ಮಾಡುವ ವಾಸುಗೆ (ನಾನಿ)  ಸಿನಿಮಾ ಅಂದ್ರೆ ಇಷ್ಟ. ನಿರ್ದೇಶಕನಾಗಿ ಸಣ್ಣ ಬಜೆಟ್ ಚಿತ್ರಗಳನ್ನು ನಿರ್ಮಿಸಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾನೆ. ಆ ಸಮಯದಲ್ಲೇ ನಾಯಕಿ ಕೃತಿ ಶೆಟ್ಟಿಯ (Krithi Shetty) ಮೇಲೆ ಪ್ರೀತಿಯಾಗುತ್ತದೆ. ಅನಿರೀಕ್ಷಿತ ಘಟನೆಯಿಂದ ನಾನಿ ಜೈಲಿಗೆ ಹೋಗಬೇಕಾಗುತ್ತದೆ. ಅನಂತರ 1970 ರ ದಶಕದ ಕಥೆಯ ಶ್ಯಾಮ್ ಸಿಂಗಾ ರಾಯ್ ಪಾತ್ರ ಟ್ರೇಲರ್‌ನಲ್ಲಿ ಹೊರಬರುತ್ತದೆ. 



ಶ್ಯಾಮ್ ಸಿಂಗಾ ರಾಯ್ ದೇವದಾಸಿಯಾಗಿರುವ ಸಾಯಿ ಪಲ್ಲವಿಯನ್ನು (Sai Pallavi) ಪ್ರೀತಿಸುತ್ತಾರೆ. ಹಾಗೂ ಅವಳನ್ನು ಆ ಪದ್ದತಿಯಿಂದ ಹೊರತರಲು ಪ್ರಯತ್ನಿಸುತ್ತಾರೆ. ಆ ಸಮಯದಲ್ಲಿ ದೇವರನ್ನು ವಿರೋಧಿಸಲು ಸಾಯಿ ಪಲ್ಲವಿಗೆ ಸೂಚಿಸುವುದು ಟ್ರೇಲರ್‌ನಲ್ಲಿರುವ ಹೈಲೈಟ್ಸ್. ಎರಡು ವಿಭಿನ್ನ ಪಾತ್ರಗಳಲ್ಲಿ ನಾನಿ ಅದ್ಭುತವಾಗಿ ನಟಿಸಿದ್ದು, ಇದರಲ್ಲಿ ವಾಸುಗೂ ಶ್ಯಾಮ್ ಸಿಂಗಾ ರಾಯ್‌ಗೂ ಏನು ಸಂಬಂಧ ಎಂಬುದನ್ನು ನಿರ್ದೇಶಕ ರಾಹುಲ್ ಸಂಕ್ರಿತ್ಯಾನ್ (Rahul Sankrithyan) ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ನಟಿ ಮಡೋನಾ ಸೆಬಾಸ್ಟಿಯನ್ (Madonna Sebastian) ಈ ಚಿತ್ರದಲ್ಲಿ ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬೋಲ್ಡ್ ಲುಕ್‌ನಲ್ಲಿ ನಟಿ ಕೃತಿ ಶೆಟ್ಟಿ ಸಿನಿಮಂದಿಯ ಗಮನ ಸೆಳೆಯುತ್ತಾರೆ.

Shyam Singha Roy: ನ್ಯಾಚುರಲ್ ಸ್ಟಾರ್ ನಾನಿ ಚಿತ್ರದ ಸಸ್ಪೆನ್ಸ್ ಟ್ರೇಲರ್ ರಿಲೀಸ್

ಈ ಹಿಂದೆ 'ದಿ ಎಂಡ್' ಹಾಗೂ ವಿಜಯ್ ದೇವರಕೊಂಡ ಅಭಿನಯದ 'ಟ್ಯಾಕ್ಸಿವಾಲಾ' ಸಿನಿಮಾಗಳನ್ನು ನಿರ್ದೇಶಿಸಿದ್ದ ರಾಹುಲ್ ಸಂಕ್ರಿತ್ಯಾನ್ 'ಶ್ಯಾಮ್ ಸಿಂಗಾ ರಾಯ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವೆಂಕಟ್ ಬೋಯನಪಲ್ಲಿ (Venkat Boyanapalli) ಚಿತ್ರವನ್ನು ನಿರ್ಮಿಸಿದ್ದು, 2017ರಲ್ಲಿ ತೆರೆಕಂಡ 'ಮಿಡಲ್ ಕ್ಲಾಸ್ ಅಬ್ಬಾಯ್' ಚಿತ್ರದ ನಂತರ ಈ ಚಿತ್ರದಲ್ಲಿ ನಾನಿ ಜೊತೆಗೆ ಸಾಯಿ ಪಲ್ಲವಿ ನಟಿಸುತ್ತಿದ್ದು, ಜೊತೆಗೆ ಕೃತಿ ಶೆಟ್ಟಿ, ಮಡೋನ್ನಾ ಸೆಬಾಸ್ಟಿಯನ್, ಮುರಳಿ ಶರ್ಮಾ, ಅಭಿನವ್ ಗೋಮತಮ್, ರಾಹುಲ್ ರವೀಂದ್ರನ್ ಕೂಡ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 24 ಕ್ರಿಸ್‌ಮಸ್‌ ಹಬ್ಬದಂದು 'ಶ್ಯಾಮ್ ಸಿಂಗಾ ರಾಯ್' ಚಿತ್ರ ತೆರೆ ಕಾಣಲಿದೆ.
 

click me!