
ಬಾಲಿವುಡ್ ಬಾದ್ಷಾ ಎಂದೇ ಫೇಮಸ್ ಆಗಿರೋ ನಟ ಶಾರುಖ್ ಖಾನ್ (Shah Rukh Khan) ಇಂದು ಅಂದರೆ ನವೆಂಬರ್ 2ರಂದು ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಯಸ್ಸಿನಲ್ಲಿಯೂ ಫಿಟ್ ಆ್ಯಂಡ್ ಫೈನ್ ಆಗಿರೋ ನಟ, 20ರ ಹರೆಯದ ನಟಿಯರ ಜೊತೆಯೂ ರೊಮಾನ್ಸ್ ಮಾಡುವಲ್ಲಿ ಮುಂದಿದ್ದಾರೆ. ಇವರ ಒಂದೇ ಒಂದು ನೋಟಕ್ಕೆ ಜೀವನಪೂರ್ತಿ ಕಾಯಲು ರೆಡಿ ಇರುವ ಫ್ಯಾನ್ಸ್ ಕೂಡ ಸಾಕಷ್ಟು ಮಂದಿ ಇದ್ದಾರೆ. ಇಂತಿಪ್ಪ ನಟ ತಮ್ಮ ಆರಂಭಿಕ ಪಯಣವನ್ನು 50 ರೂಪಾಯಿಯಿಂದ ಆರಂಭಿಸಿರುವುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ.
ಇಂದು ಅದೆಷ್ಟೋ ಯಶಸ್ವಿ ಪುರುಷರ ಹಿಂದೆ ನೋವುಗಳ ಸರಮಾಲೆಯೇ ಇರುತ್ತದೆ. ಬಹುತೇಕ ಸೆಲೆಬ್ರಿಟಿಗಳು ಕೂಡ ಬಡತನದಲ್ಲಿಯೇ ಬೆಳೆದು ಬಂದವರು. ಅಂಥವರಲ್ಲಿ ಒಬ್ಬರು ಶಾರುಖ್ ಖಾನ್. ಬಾಲಿವುಡ್‌ನ ಕಿಂಗ್ ಖಾನ್ ಎಂದೇ ಫೇಮಸ್ ಆಗಿರೋ ನಟನ ಅಭಿಮಾನಿ ಬಳಗವು ಭಾರತಕ್ಕೆ ಮಾತ್ರವಲ್ಲದೆ ವಿದೇಶಗಳಲ್ಲಿಯೂ ವಿಸ್ತರಿಸಿದೆ. ದುಬೈನ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ, ಮನ್ನತ್‌ನಲ್ಲಿ ನಡೆಯುತ್ತಿರುವ ಮನೆಯ ನವೀಕರಣಗಳಿಂದಾಗಿ, ಅವರ ಹುಟ್ಟುಹಬ್ಬವನ್ನು ಅಲಿಬಾಗ್‌ನಲ್ಲಿ ಆಚರಿಸಲಾಗುವುದು ಎಂದು ವರದಿಗಳು ಹೇಳುತ್ತವೆ. ಹುಟ್ಟುಹಬ್ಬದ ದಿನ ಅವರ ಹಿಂದಿನ ವಿಷಯಗಳ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ.
ಶಾರುಖ್ ಖಾನ್ ಇಂದು ತಾರಾಪಟ್ಟವನ್ನು ಆನಂದಿಸುತ್ತಿರಬಹುದು. ಅವರನ್ನು ಯಶಸ್ವಿ ನಟ ಎಂದು ನೋಡಲಾಗುತ್ತದೆ ಮತ್ತು ಚಿತ್ರವೊಂದಕ್ಕೆ ಅವರು ಕೋಟಿ ಕೋಟಿ ಶುಲ್ಕ ವಿಧಿಸುತ್ತಾರೆ. ಆದರೆ ಮೊದಲೇ ಹೇಳಿದ ಹಾಗೆ ಅವರ ಆರಂಭಿಕ ಜೀವನ 50 ರೂಪಾಯಿಗಳಿಂದ ಆರಂಭವಾಗಿತ್ತು. ಶಾರುಖ್ ಖಾನ್ ಅವರು, ಟಿಕೆಟ್ ಮಾರಾಟಗಾರರಾಗಿಯೂ ಕೆಲಸ ಮಾಡುತ್ತಿದ್ದ ಒಂದು ಕಾಲವಿತ್ತು. ಕಾರ್ಯಕ್ರಮಗಳಲ್ಲಿ ಬಂದ ಅತಿಥಿಗಳನ್ನು ಖುರ್ಚಿಯಲ್ಲಿ ಕುಳ್ಳರಿಸುವ ಕೆಲಸ ಮಾಡುತ್ತಿದ್ದ ಶಾರುಖ್ ಅವರು 50 ರೂಪಾಯಿ ಸಂಬಳ ಪಡೆಯುತ್ತಿದ್ದರು. ವೃತ್ತಿಜೀವನದ ಆರಂಭದಲ್ಲಿ ಮುಂಬೈಗೆ ಬಂದಾಗ, ಅವರು ತಮ್ಮನ್ನು ತಾವು ಪೋಷಿಸಿಕೊಳ್ಳಲು ತಮ್ಮ ಬಳಿ ಇದ್ದ ಚಿಕ್ಕ ಕ್ಯಾಮೆರಾವನ್ನು ಸಹ ಮಾರಿದರು.
ವಾಸ್ತವವಾಗಿ, ಶಾರುಖ್ ಖಾನ್ ಅವರ ವೀಡಿಯೊವನ್ನು ಸ್ರ್ಕ್‌ವರ್ಲ್ಡ್ ಎಂಬ ಇನ್‌ಸ್ಟಾಗ್ರಾಮ್ ಪುಟದಿಂದ ಹಂಚಿಕೊಳ್ಳಲಾಗಿದೆ, ಅದರಲ್ಲಿ ಅವರನ್ನು ನೃತ್ಯ ರಿಯಾಲಿಟಿ ಶೋನ ವೇದಿಕೆಯಲ್ಲಿ ಕಾಣಬಹುದು. ಅದರಲ್ಲಿ, ಅವರು ತಾಜ್ ಮಹಲ್‌ಗೆ ಭೇಟಿ ನೀಡಿದ್ದನ್ನು ವಿವರಿಸುತ್ತಾರೆ. ನಟ ತಮ್ಮ ಜೀವನದಲ್ಲಿ ಒಮ್ಮೆ ಮಾತ್ರ ತಾಜ್ ಮಹಲ್‌ಗೆ ಭೇಟಿ ನೀಡಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಸಂಗೀತ ಕಾರ್ಯಕ್ರಮದ ಸಮಯದಲ್ಲಿ ಜನರನ್ನು ಅವರ ಆಸನಗಳಿಗೆ ಕರೆದೊಯ್ಯಲು ಅವರು ಒಮ್ಮೆ ಬ್ಯಾಟರಿ ಬಳಸಬೇಕಾಗಿತ್ತು ಮತ್ತು ಹಾಗೆ ಮಾಡಿದ್ದಕ್ಕಾಗಿ ಅವರಿಗೆ 50 ರೂಪಾಯಿಗಳನ್ನು ನೀಡಲಾಯಿತು. ಈ ಹಣವನ್ನು ಪಡೆದ ನಂತರ, ಅವರು ತಕ್ಷಣವೇ ತಾಜ್ ಮಹಲ್ ನೋಡಲು ಹೊರಟರು ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.
ಬಂದ ಹಣದಿಂದ ತಾಜ್ ಮಹಲ್ ನೋಡಲು ಹೋದ ನಟ ಅಲ್ಲಿ ಗುಲಾಬಿ ಬಣ್ಣದ ಲಸ್ಸಿ ಕುಡಿದರಂತೆ. ಅದರಲ್ಲಿ ಒಂದು ನೊಣವಿತ್ತು. ನಂತರ, ಅವರು ರೈಲಿನಲ್ಲಿ ವಾಂತಿ ಮಾಡುತ್ತಾ ಆಗ್ರಾದಿಂದ ದೆಹಲಿಗೆ ಪ್ರಯಾಣಿಸಿದ್ದರು. ಅವರ ಆರೋಗ್ಯ ಹದಗೆಟ್ಟಿತ್ತು. ಇದೇ ಕಾರಣಕ್ಕೆ ತಾಜ್ ಮಹಲ್ ಮುಂದೆ ಅವರಿಗೆ ಫೋಟೋ ಕ್ಲಿಕ್ಕಿಸಲಾಗಲಿಲ್ಲ. ಆ ಸಮಯದಲ್ಲಿ, ಅವರು 50 ರೂಪಾಯಿಗಳನ್ನು ಸಹ ಉಳಿಸಲು ಸಾಧ್ಯವಾಗಲಿಲ್ಲವಂತೆ! ಇಂತಿಪ್ಪ ಶಾರುಖ್ ಖಾನ್ ಅವರಿಗೆ ಮೊದಲು ಸರ್ಕಸ್ ಎನ್ನುವ ಸೀರಿಯಲ್ನಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ಹಂತ ಹಂತವಾಗಿ ಬೆಳೆದು, ಸಾಕಷ್ಟು ಏರಿಳಿತಗಳನ್ನು ಕಂಡು ಇಂದು 12,490 ಕೋಟಿ ರೂಪಾಯಿಗಳ ಒಡೆಯರಾಗಿದ್ದಾರೆ. ಹುರುನ್ ಇತ್ತೀಚೆಗೆ ದೇಶದ ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳನ್ನು ಹೈಲೈಟ್ ಮಾಡುವ ವರದಿಯನ್ನು ಬಿಡುಗಡೆ ಮಾಡಿತು. ಈ ಪಟ್ಟಿಯ ಪ್ರಕಾರ, ಅವರ ಮೌಲ್ಯ 12,490 ಕೋಟಿ.
ಇದನ್ನೂ ಓದಿ: ಕನ್ನಡದ 'ಕಂದೀಲು' ಸೇರಿ National Film Award ಪ್ರದಾನ: 30 ವರ್ಷ ಬಳಿಕ Shahrukh Khanಗೆ ಒಲಿದ ಪ್ರಶಸ್ತಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.