B.Sarojadevi: ಅದ್ಭುತ ಕಲಾವಿದೆ ಎದುರಿಸಿದ ನೋವು ಒಂದೆರಡಲ್ಲ!

By Suvarna NewsFirst Published Jan 7, 2022, 5:48 PM IST
Highlights

ನಮ್ಮ ನಾಡು ಕಂಡು ಅಪ್ರತಿಮ ಸುಂದರಿ, ನಟಿ ಬಿ.ಸರೋಜಾದೇವಿ ಅವರ ಜನ್ಮದಿನ ಇಂದು. ಇವರು ತಮ್ಮ ಜೀವನದಲ್ಲಿ ಎದುರಿಸಿದ ಸಂಕಷ್ಟಗಳ ಸರಮಾಲೆ ಬಗ್ಗೆ ನಿಮಗೆ ಎಷ್ಟು ಗೊತ್ತು?

ಒಂದು ಕಾಲದ ಯಶಸ್ವಿ ನಟಿ ಬಿ.ಸರೋಜಾದೇವಿ (B.Sarojadevi). ಡಾ.ರಾಜ್‌ಕುಮಾರ್ (Dr.Rajkumar) ಅವರ ಜೊತೆ ಸಾಲು ಸಾಲು ಯಶಸ್ವಿ ಚಿತ್ರಗಳನ್ನು ಕೊಟ್ಟವರು. ಆದರೆ ಕೈತುಂಬಾ ಸಿನಿಮಾಗಳಿರುವಾಗಲೇ, ಚಿತ್ರರಂಗದಲ್ಲಿ ನಂಬರ್ 1 ನಟಿ ಅಂತ ಯಶಸ್ಸಿನ ಉತ್ತುಂಗದಲ್ಲಿ ಮೆರೆಯುತ್ತಿರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.'ಲವ್ ಮಾಡುವ ಹಾಗಿಲ್ಲ!' ಅಂತ ಅವರ ತಾಯಿ ಸರೋಜಾದೇವಿಗೆ ಮೊದಲೇ ಹೇಳಿಬಿಟ್ಟಿದ್ದರು. 'ನೀನು ಯಾರನ್ನೂ ಲವ್ ಮಾಡಬಾರದು. ನಮ್ಮ ಜಾತಿ ಹುಡುಗನ ಜೊತೆಗೆ ನಿನ್ನ ಮದುವೆ' ಅಂತ. ಮನೆಯವರ ಕೋಟೆ ದಾಟಿ ಲವ್ ಮಾಡುವುದು ಸಾಧ್ಯವೇ ಇರಲಿಲ್ಲ. ಆಕೆ ಅವಾಗ ಸೂಪರ್ ಸ್ಟಾರ್. ಟಾಪ್ ಒನ್ ಆಗಿರುವಾಗಲೇ, ಮದುವೆಯಾಯಿತು. ಕೈಯಲ್ಲಿ ಇನ್ನೂ ಎಷ್ಟೊಂದು ಸಿನಿಮಾ ಇದ್ದವು.

ಜರ್ಮನಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿದ್ದ ಶ್ರೀಹರ್ಷ ಹುಡುಗಿ ನೋಡೋಕೆ ಬಂದಿದ್ದರು. 'ನಾನು ಇಂಜಿನಿಯರ್, ನೀವು ಆಕ್ಟರ್. ಇಬ್ಬರೂ ಅಡ್ಜಸ್ಟ್ ಆಗುತ್ತಾ' ಅಂತ ಆಕೆಗೆ ಕೇಳಿದರು."ನಾನು 'ಹ್ಹೂಂ' ಅಂತ ತಲೆ ಅಲ್ಲಾಡಿಸಿದೆ. ಯಾಕಂದ್ರೆ 'ಏನೂ ಮಾತಾಡಬಾರದು' ಅಂತ ನನ್ನ ತಾಯಿ ಕಟ್ಟಪ್ಪಣೆ ಮಾಡಿದ್ದರು'' ಅಂತಾರೆ ಸರೋಜಾದೇವಿ.

ಸಿನಿ ತಂತ್ರಜ್ಞರಿಗೆ ಹಿರಿಯ ನಟಿ ಬಿ ಸರೋಜದೇವಿ ನೆರವು

ಮನೆಯಲ್ಲಿ ನಿಶ್ಚಿತಾರ್ಥ ಮಾಡಲಾಯಿತು. ಬೆಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಿತು. ''ಹನಿಮೂನ್ (Honeymoon) ಗೆ ನನ್ನ ತಾಯಿ ಕೂಡ ನನ್ನ ಜೊತೆ ಬಂದಿದ್ದರು. ಮೂರು ಟಿಕೆಟ್ ಬುಕ್ ಮಾಡಿದ್ದರು. ಕಾಶ್ಮೀರಕ್ಕೆ ಹೋಗಿದ್ವಿ. ಅವರು ಬೇರೆ ರೂಮ್. ನಾವು ಬೇರೆ ರೂಮ್‌ನಲ್ಲಿ ಇದ್ವಿ. ಮದುವೆ ಆದ್ಮೇಲೆ ಸಿನಿಮಾ ಬೇಡ ಅಂತ ನನ್ನ ತಾಯಿ ಹೇಳಿದ್ರು. ಆದ್ರೆ, ಸಿನಿಮಾ ಮಾಡೋಕೆ ಶ್ರೀಹರ್ಷ ಸಪೋರ್ಟ್ ಮಾಡಿದರು. ಮದುವೆ ಆದ್ಮೇಲೆ ನನಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಸಿಕ್ಕಿದ್ದು. ನಮ್ಮ ಮಗಳು ಹುಟ್ಟಿದ್ದು ಗಣರಾಜ್ಯೋತ್ಸವದಂದು. ನಾನು ಇಂದಿರಾ ಗಾಂಧಿ (Indira Gandhi) ಅಭಿಮಾನಿ ಆಗಿದ್ರಿಂದ ಮಗಳಿಗೆ ಇಂದಿರಾ ಅಂತ ಹೆಸರಿಟ್ಟೆ. ಮಗನ ಹೆಸರು ಗೌತಮ್ ರಾಮಚಂದ್ರನ್ ಅಂತ. ಎಂಜಿಆರ್ (MGR) ಅವರು ಮಗುನ ಎತ್ತಿಕೊಂಡು ರಾಮಚಂದ್ರ ಅಂತಿದ್ರು. ಅದಕ್ಕೆ ಆ ಹೆಸರನ್ನಿಟ್ಟೆ'' ಅಂತಾರೆ ಸರೋಜಾದೇವಿ.

ಎಂಜಿನಿಯರ್ ಆಗಿದ್ದ ಶ್ರೀಹರ್ಷ ರವರೊಂದಿಗೆ ನಟಿ ಸರೋಜಾದೇವಿ ಮಾರ್ಚ್ 1, 1967ರಂದು ಸಪ್ತಪದಿ ತುಳಿದರು. ಮದುವೆ ನಂತರ ಪತಿಯ ಸಹಕಾರದೊಂದಿಗೆ ನಟನೆಯನ್ನೂ ಮುಂದುವರಿಸಿಕೊಂಡು ಖುಷಿ ಖುಷಿಯಿಂದ ಸಂಸಾರ ಸಾಗಿಸುತ್ತಿದ್ದ ನಟಿ ಸರೋಜಾದೇವಿ ಬದುಕಿನಲ್ಲಿ 1986ರಲ್ಲಿ ಬರಸಿಡಿಲು ಬಡಿಯಿತು. ಹೃದಯಾಘಾತದಿಂದ ಶ್ರೀಹರ್ಷ ಮೃತಪಟ್ಟರು. ಅಲ್ಲಿಂದಲೇ ಸರೋಜಾದೇವಿಯವರ ಕಷ್ಟದ ದಿನಗಳು ಆರಂಭವಾದವು. 'ಅಷ್ಟೆಲ್ಲಾ ಖುಷಿಯಿಂದ ನಾನು ಜೀವನ ಮಾಡಿಕೊಂಡು ಬಂದೆ. ನಾನು ಕಣ್ಣೀರು ಹಾಕ್ಲಿಲ್ಲ. ಅತ್ತುಬಿಡಿ, ಇಲ್ಲಾ ಅಂದ್ರೆ ಶಾಕ್ ಆಗುತ್ತೆ ಅಂತ ಎಲ್ಲರೂ ಹೇಳ್ತಿದ್ರು. ನಾನು ಹಾಗೇ ನಿಂತಿದ್ದೆ. ಡಾಕ್ಟರ್ ಬಂದು ಕಪಾಳಕ್ಕೆ ಹೊಡೆದರು. ಆಗ ನಾನು ಜೋರಾಗಿ ಕಿರುಚಿಕೊಂಡು, ಫಿಯೆಟ್ ಕಾರ್ ಜಜ್ಜಿ ಹಾಕ್ಬಿಟ್ಟೆ. ಆಗ MGR ಫೋನ್ ಮಾಡಿ ಸಮಾಧಾನ ಮಾಡಿದರು. ಅಲ್ಲಿವರೆಗೂ ಎಷ್ಟು ಸುಖದಲ್ಲಿ ಇದ್ದೆ. ಅಲ್ಲಿಂದ ನನಗೆ ಕಷ್ಟ ಶುರು ಆಯ್ತು. ಯಾರಾದರೂ ಕುಂಕುಮ ಕೊಡೋಕೆ ಬಂದ್ರೆ, ಮನೆಯಲ್ಲಿ ಇರುವವರಿಗೆಲ್ಲಾ ಕೊಟ್ಟರೆ, ನನಗೆ ಮಾತ್ರ ಕೊಡ್ತಿರ್ಲಿಲ್ಲ. ಯಾವ ಶುಭ ಕಾರ್ಯಕ್ಕೂ ನನ್ನ ಸೇರಿಸುತ್ತಿರಲಿಲ್ಲ. ಎಷ್ಟೋ ಬಾರಿ ಒಳಗೆ ಹೋಗಿ ಗೊಳೋ ಅಂತ ಅತ್ತಿದ್ದೇನೆ,' ಅಂತಾರೆ ಸರೋಜಾದೇವಿ.

Raveena Tandon Sleepless Night: ತಮ್ಮನೊಂದಿಗೇ ಸಂಬಂಧ ಕಟ್ಟಿದ್ರು..! ರವೀನಾ ಟಂಡನ್ ಮಾತು

ಇನ್ನೊಂದು ಮದುವೆ ಆಗಿದ್ರೆ? ಈ ಪ್ರಶ್ನೆ ಅವರನ್ನು ಕಾಡದೇ ಇರಲಿಲ್ಲ. ಸಮಾಜದಿಂದ ಸದಾ ಚುಚ್ಚುವಿಕೆ ಇದ್ದೇ ಇತ್ತು. ಇನ್ನೊಂದು ಮದುವೆ ಆಗ್ಬೇಕು ಅಂತ ತಾಯಿ ಹಠ ಹಿಡಿದರು. ಆದ್ರೆ, ಹರ್ಷನ ಜಾಗಕ್ಕೆ ಮತ್ತೊಬ್ಬರನ್ನ ತರೋಕೆ ಸರೋಜಾದೇವಿ ಅವರ ಮನಸ್ಸು ಒಪ್ಪಿಕೊಳ್ಳಲಿಲ್ಲ. ಅಲ್ಲಿಂದ ಅವರು ಪಟ್ಟ ಕಷ್ಟ ಅವರಿಗೇ ಮರೆಯೋಕೆ ಸಾಧ್ಯವಿರಲಿಲ್ಲ. ಅತ್ತು-ಅತ್ತು ಅವರ ಕಣ್ಣು ಬತ್ತಿಹೋಗಿತ್ತು. ಆಗ ನೆರವಿಗೆ ಬಂದವರು ಡಾ.ರಾಜ್‌ಕುಮಾರ್‌. 'ನಮ್ಮ ರಾಜ್ ಕುಮಾರ್ ಅಷ್ಟು ಸರಳಜೀವಿ ಯಾರೂ ಇಲ್ಲ. ನನ್ನ ಕಷ್ಟ ಎಲ್ಲಾ ಅವರ ಹತ್ತಿರ ಹೇಳಿಕೊಳ್ಳುತ್ತಿದ್ದೆ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ತುಂಬಾ ಸಪೋರ್ಟ್ ಮಾಡಿದ್ದಾರೆ. ಅವರನ್ನ ನೆನಪಿಸಿಕೊಳ್ಳಬೇಕು' ಎಂದು ನೆನಪಿಸಿಕೊಳ್ತಾರೆ ಸರೋಜಾದೇವಿ.

ಬಿ.ಸರೋಜಾದೇವಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದವರು. ಇವರಲ್ಲಿದ್ದ ಪ್ರತಿಭೆಯನ್ನು ಮೊದಲು ಗುರುತಿಸಿದವರು ಹೊನ್ನಪ್ಪ ಭಾಗವತರು. ಬಿ.ಸರೋಜಾದೇವಿ ಅಂದರೆ ಕನ್ನಡಿಗರಿಗೆ ನೆನಪಾಗುವುದು ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರ. ಅರುವತ್ತರ ದಶಕದಲ್ಲಿ ಅವರು ನಟಿಸಿರುವ ಕಪ್ಪು-ಬಿಳುಪು ಚಿತ್ರಗಳು ಇಂದಿಗೂ ಪುಳಕ ಹುಟ್ಟಿಸುತ್ತವೆ. ಮಹಾಕವಿ ಕಾಳಿದಾಸ ಚಿತ್ರದ ಮೂಲಕ 1955ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಸರೋಜಾದೇವಿ ತಮ್ಮ ಅಭಿನಯ ಕೌಶಲದಿಂದ ಬಹುಬೇಗ ಚತುರ್ಭಾಷಾ ತಾರೆಯಾದವರು.

 

click me!