
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಬೆಳಗ್ಗೆ ಎದ್ದ ತಕ್ಷಣ ತಾವು ಕುಡಿಯುವ ನೀರಿನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆದರೆ ನಟಿ ಸಮಂತಾ ರುತ್ ಪ್ರಭು ತಮ್ಮ ಬೆಳಗಿನ ಒಂದು ವಿಶೇಷ ಅಭ್ಯಾಸದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಆ ಅಭ್ಯಾಸವನ್ನು ಎಷ್ಟೇ ಕೆಲಸದ ಒತ್ತಡವಿದ್ದರೂ, ಪ್ರತಿದಿನ 30 ನಿಮಿಷದಿಂದ ಒಂದು ಗಂಟೆಯವರೆಗೆ ಮಾಡಿಯೇ ಮಾಡುತ್ತಾರಂತೆ. ಹಾಗಿದ್ರೆ ಆ ಅಭ್ಯಾಸ ಯಾವುದು ಗೊತ್ತಾ? ಸಮಂತ ತಮ್ಮ ಬೆಳಗ್ಗಿನ ಸಮಯವನ್ನು ಗ್ರ್ಯಾಟಿಟ್ಯೂಡ್ ಜರ್ನಲಿಂಗ್ ಬರೆಯಲು ಮೀಸಲಿಡುತ್ತಾರೆ. ಈ ಅಭ್ಯಾಸವು ತಮ್ಮ ಜೀವನದ ಕಠಿಣ ಹಂತದಲ್ಲಿ ಆಲೋಚನಾ ವಿಧಾನವನ್ನು ಬದಲಿಸಿಕೊಳ್ಳಲು ಸಹಾಯ ಮಾಡಿತು ಎಂದು ಸಮಂತಾ ಹೇಳಿದ್ದಾರೆ.
ಇದು ಹೊಸ ಅಭ್ಯಾಸವೇನಲ್ಲ. ಭಾರತೀಯ ಮನೆಗಳಲ್ಲಿ ಶತಮಾನಗಳಿಂದಲೂ ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ನಮಸ್ಕರಿಸಿ, ಕೃತಜ್ಞತೆ ಸಲ್ಲಿಸುವ ಸಂಪ್ರದಾಯವಿದೆ. ಆದರೆ ಇಂದಿನ ಪೀಳಿಗೆ ಈ ಅಭ್ಯಾಸವನ್ನು ಬಹುತೇಕ ಮರೆತಿದೆ. ಹೆಚ್ಚಿನವರು ಬೆಳಗ್ಗೆ ಎದ್ದ ಕೂಡಲೇ ಮೊದಲು ಮೊಬೈಲ್ ಫೋನ್ ನೋಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯ ಹಿನ್ನೆಲೆಯಲ್ಲಿ, ದಿನವನ್ನು ಕೃತಜ್ಞತೆಯ ಭಾವನೆಯೊಂದಿಗೆ ಆರಂಭಿಸುವುದು ಏಕೆ ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಹಾಗಾದರೆ, ಈ ಅಭ್ಯಾಸದಿಂದ ಸಿಗುವ ಪ್ರಯೋಜನಗಳೇನು? ನೋಡೋಣ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಮಂತಾ ತಮ್ಮ ಬೆಳಗಿನ ದಿನಚರಿಯ ಬಗ್ಗೆ ಮಾತನಾಡಿ ಬೆಳಗ್ಗೆ ಎದ್ದ ತಕ್ಷಣ ಗ್ರ್ಯಾಟಿಟ್ಯೂಡ್ ಜರ್ನಲಿಂಗ್ ಒಂದು ಪುಟ ಬರೆಯುತ್ತೇನೆ. ಅದರಲ್ಲಿ ತಮಗೆ ಕೃತಜ್ಞತೆ ಮೂಡಿಸುವ ವಿಷಯಗಳನ್ನು ದಾಖಲಿಸುತ್ತೇನೆ ಎಂದು ಹೇಳಿದ್ದಾರೆ. ಜೀವನದ ಕಠಿಣ ಹಂತವನ್ನು ಎದುರಿಸುತ್ತಿದ್ದಾಗ ಗ್ರ್ಯಾಟಿಟ್ಯೂಡ್ ಜರ್ನಲಿಂಗ್ ಬರೆಯಲು ಆರಂಭಿಸಿದೆ, ಆರಂಭದಲ್ಲಿ ಪಾಸಿಟಿವ್ ವಿಷಯಗಳನ್ನು ಬರೆಯುವುದು ಸುಲಭವಾಗಿರಲಿಲ್ಲ. ಏಕೆಂದರೆ ಆ ಸಮಯದಲ್ಲಿ ಅವರ ಭಾವನಾತ್ಮಕ ಸ್ಥಿತಿ ಉತ್ತಮವಾಗಿರಲಿಲ್ಲ. ಆದರೆ ಕೆಲವು ಸಮಯದ ನಂತರ ಒಂದು ವಿಷಯ ಅರಿವಾಯಿತು. ತಮ್ಮ ಜೀವನದ ಪರಿಸ್ಥಿತಿಯಲ್ಲಿ ತಕ್ಷಣವೇ ದೊಡ್ಡ ಬದಲಾವಣೆ ಆಗದಿದ್ದರೂ, ಅದನ್ನು ನೋಡುವ ಮತ್ತು ಅರ್ಥಮಾಡಿಕೊಳ್ಳುವ ದೃಷ್ಟಿಕೋನ ಬದಲಾಗತೊಡಗಿತ್ತು. ಈ ಬದಲಾವಣೆಯು ಮಾನಸಿಕವಾಗಿ ಉತ್ತಮವಾಗಿರಲು ಸಹಾಯ ಮಾಡಿತು ಎಂದು ಅವರು ತಿಳಿಸಿದ್ದಾರೆ.
ಗ್ರ್ಯಾಟಿಟ್ಯೂಡ್ ಜರ್ನಲಿಂಗ್ ಬರೆಯುವುದರಿಂದ ಏನು ಪ್ರಯೋಜನ?
ಗ್ರ್ಯಾಟಿಟ್ಯೂಡ್ ಜರ್ನಲಿಂಗ್ ಬರೆಯುವುದರಿಂದ ದೈನಂದಿನ ಜೀವನದಲ್ಲಿರುವ ಒಳ್ಳೆಯ ಸಂಗತಿಗಳು ಮತ್ತು ನಮಗೆ ಮುಖ್ಯವಾದ ವಿಷಯಗಳ ಕಡೆಗೆ ಗಮನ ಹರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಜೀವನದಲ್ಲಿ ದೊಡ್ಡ ಸಾಧನೆಗಳೇ ಆಗಿರಬೇಕೆಂದಿಲ್ಲ. ನಮ್ಮೊಂದಿಗೆ ಪ್ರೀತಿಯಿಂದ ಇರುವ ವ್ಯಕ್ತಿಗಳು, ರುಚಿಯಾದ ಊಟ, ಕುಟುಂಬದವರ ಪ್ರೀತಿ ಅಥವಾ ಕಷ್ಟದ ದಿನವೊಂದನ್ನು ಯಶಸ್ವಿಯಾಗಿ ಕಳೆದುಬಂದಿರುವುದೂ ಕೃತಜ್ಞತೆ ಸಲ್ಲಿಸಲು ಕಾರಣವಾಗಬಹುದು. ಆದರೆ ನೀವು ಬೇಸರದಲ್ಲಿದ್ದರೆ ಅಥವಾ ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ, ಮೊದಲು ನಿಮ್ಮ ಭಾವನೆಗಳನ್ನು ಒಪ್ಪಿಕೊಳ್ಳಿ. ನಂತರ ನೀವು ಕೃತಜ್ಞರಾಗಿರಬಹುದಾದ ಸಣ್ಣಪುಟ್ಟ ವಿಷಯಗಳನ್ನು ದಿನಚರಿಯಲ್ಲಿ ಬರೆಯಿರಿ. ಈ ಅಭ್ಯಾಸವು ನಿಮ್ಮ ಆಲೋಚನೆಗಳನ್ನು ಹೆಚ್ಚು ಸಮತೋಲನದಿಂದ ನೋಡುವುದಕ್ಕೆ ಸಹಾಯ ಮಾಡುತ್ತದೆ.
ಈ ಬೆಳಗಿನ ದಿನಚರಿಯನ್ನು ಹೇಗೆ ಆರಂಭಿಸಬಹುದು?
ಈ ಅಭ್ಯಾಸವನ್ನು ರೂಢಿಸಿಕೊಳ್ಳಲು ಆರಂಭದಲ್ಲಿ ಪ್ರತಿದಿನ ಕೇವಲ ಐದು ನಿಮಿಷ ಮೀಸಲಿಡಿ. ನಿಮ್ಮ ಜರ್ನಲಿಂಗ್ ಪುಸ್ತಕದಲ್ಲಿ ನೀವು ಕೃತಜ್ಞರಾಗಿರುವ ಮೂರು ವಿಷಯಗಳನ್ನು ಬರೆಯಿರಿ. ನಂತರ ಬೆಳಗಿನ ನೈಸರ್ಗಿಕ ಬೆಳಕಿನಲ್ಲಿ ಸ್ವಲ್ಪ ಸಮಯ ಕಳೆಯಿರಿ. ಐದರಿಂದ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಿ. ಈ ಅಭ್ಯಾಸಗಳಿಗೆ ನೀವು ಹೊಂದಿಕೊಂಡಂತೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಮಯವನ್ನು ನಿಧಾನವಾಗಿ ಹೆಚ್ಚಿಸಿಕೊಳ್ಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.