‘ಊ ಅಂಟಾವಾ ಮಾವ ಊಊ ಅಂಟಾವಾ ಮಾವ ’ ಎಂದು ಮೈ ಬಳುಕಿಸಿದ ಸಮಂತಾ ಇದೀಗ ಶಾಕುಂತಲೆಯ ಲುಕ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈಗಷ್ಟೇ ಐಟಂ ನಂಬರ್‌ನಲ್ಲಿ ಕಾಣಿಸಿಕೊಂಡ ಸಮಂತಾರನ್ನು ಶಾಕುಂತಲೆ ಲುಕ್ ನಲ್ಲಿ ಜನ ಒಪ್ಕೋತಾರಾ?
ಸಮಂತಾ ರುತ್ ಪ್ರಭು (Samantha Ruth Prabhu) ಅಂದರೆ ಅದ್ಭುತ ಪರ್ಫಾಮರ್ ಅನ್ನೋದು ಕೆಲವು ದಿನಗಳ ಹಿಂದಿದ್ದ ಮಾತು. ಆದರೆ ಈಕೆಯ ಮತ್ತೊಂದು ಲುಕ್ ಅನ್ನು ಪರಿಚಯಿಸಿದ್ದು ’ಪುಷ್ಪಾ’ (Pushpa) ಚಿತ್ರ. ದೇವಲೋಕದಿಂದ ಅಪ್ಸರೆಯೇ ಇಳಿದು ಬಂದರೂ ಈ ಲೆವೆಲ್‌ಗೆ ಮೈ ಬಳುಕಿಸೋದು ಕಷ್ಟ ಅನ್ನೋ ಥರ ಸಮಂತಾ ಡ್ಯಾನ್ಸ್ ಮಾಡಿದ್ರು. ಇಡೀ ವಿಶ್ವವೇ ಈ ಸುಂದರಿಯ ಮೈ ಮಾಟವನ್ನು ಕಣ್ ಮಿಟುಕಿಸದೇ ನೋಡಿತು. ಇದೀಗ ಈ ಸುಂದರಿಯ ಮತ್ತೊಂದು ಲುಕ್ ರಿವೀಲ್ ಆಗಿದೆ. ಯಾವ ಪಾತ್ರ ಸಿಕ್ಕರೂ ಅದನ್ನು ಜೀರ್ಣಿಸಿಕೊಂಡು ಲೀಲಾಜಾಲವಾಗಿ ಅಭಿನಯಿಸಲು ತಾನು ಸಿದ್ಧ ಅನ್ನೋದಕ್ಕೆ ಸಾಕ್ಷಿಯಾಗೋ ಥರ ಸಮಂತಾ ಶಕುಂತಲೆಯ ಲುಕ್ ನಲ್ಲಿ ಇದೀಗ ಮಿಂಚುತ್ತಿದ್ದಾರೆ, ಅವರೇನೋ ಭಿನ್ನ ಪಾತ್ರ ಮಾಡುತ್ತಾರೆ, ಆದರೆ ಇದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಮಾತ್ರ ವಿಶೇಷ ಅನಿಸೋ ಹಾಗಿದೆ.
ಸದ್ಯ ಸಮಂತಾ ಅವರ ಕೈಯಲ್ಲಿ ಬರೀ ಶಕುಂತಲಂ (Shakunthalam) ಮಾತ್ರ ಅಲ್ಲ, ಅನೇಕ ಸಿನಿಮಾಗಳಿವೆ. ಆದರೆ ಈ ಸಿನಿಮಾಗಳ ಪೈಕಿ ಹೆಚ್ಚಿನ ನಿರೀಕ್ಷೆ ಇರೋದು ‘ಶಾಕುಂತಲಂ’ ಚಿತ್ರದ ಮೇಲೆ. ಹೇಳಿಕೇಳಿ ಇದು ಪೌರಾಣಿಕ ಕಥಾಹಂದರದಲ್ಲಿ ಮೂಡಿಬಂದಿರುವ ಚಿತ್ರ. ಪುರಾಣದ ಹಿನ್ನೆಲೆಯ ಪಾತ್ರ ಅಂದ್ರೆ ಎಲ್ಲರಿಗೂ ಚಿತ್ರ ಕನೆಕ್ಟ್ ಆಗುತ್ತೆ ಅನ್ನೋದಂತೂ ಸತ್ಯ. ಜೊತೆಗೆ ಈ ಚಿತ್ರವನ್ನು ಸಮಂತಾ ಆಯ್ಕೆ ಮಾಡಿಕೊಂಡಾಗಲೇ ಅಭಿಮಾನಿಗಳು ಬಹುಪರಾಕ್ ಅಂದಿದ್ದರು. ಈಗ ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ಸಮಂತಾ ಶಕುಂತಲೆಯ ಲುಕ್‌ನಲ್ಲಿ ಮಿಂಚಿದ್ದಾರೆ.
Hijab Row: ಹಿಜಾಬ್ ಆಯ್ಕೆಯಲ್ಲ, ಕಟ್ಟುಪಾಡು: ದಂಗಲ್ ಖ್ಯಾತಿಯ ಝೈರಾ
ಪುರಾಣಗಳಲ್ಲಿ ವರ್ಣಿಸಿರುವ ಹಾಗೆ ಹಂಸ ಪಕ್ಷಿಗಳ ನಡುವೆ, ಹಂಸದಂಥಾ ಉಡುಗೆಯಲ್ಲಿ ಸಮಂತಾ ಯಾವ ಪುರಾಣ ಸುಂದರಿಗೂ ಕಡಿಮೆ ಇಲ್ಲದಂತೆ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟರ್ ರಿಲೀಸ್ ಮಾಡುವಾಗ ಚಿತ್ರತಂಡಕ್ಕೂ ಸಣ್ಣ ಟೆನ್ಶನ್ ಇತ್ತು. ಪುಷ್ಪದ ಐಟಂ ಡ್ಯಾನ್ಸ್ ಗೆ ಆ ಪಾಟಿ ಜನಪ್ರಿಯತೆ ಪಡೆದ ಸಮಂತಾ ಅವರನ್ನು ಈ ಪೌರಾಣಿಕ ಗೆಟಪ್ ನಲ್ಲಿ ಜನ ಹೇಗೆ ಸ್ವಾಗತಿಸುತ್ತಾರೆ ಅಂತ. ಸಮಂತಾ ಅವರು ಮಾತ್ರ ಎಂದಿನ ನಿರ್ಭಿಡೆಯಲ್ಲಿ ಈ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಶಾಕುಂತಲೆಯಾಗಿ ಸಮಂತಾ ಲುಕ್ ರಿವೀಲ್ ಆದ ಕ್ಷಣದಲ್ಲೇ ಎಲ್ಲೆಡೆ ಹೖಪ್ ಕ್ರಿಯೇಟ್ ಆಗಿದೆ. ಅವರ ಅಭಿಮಾನಿಗಳಲ್ಲದೇ ಸಾಮಾನ್ಯ ಜನರೂ ಸಮಂತಾ ಅವರ ಹೊಸ ಲುಕ್‌ಗೆ ಮನಸೋತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಸಮಂತಾ ಲುಕ್ ವೈರಲ್ ಆಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಪೋಸ್ಟರ್ ಅನ್ನು ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ. ಆ ಮೂಲಕ ಚಿತ್ರದ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಎಂಥದ್ದು ಎಂಬುದು ಗೊತ್ತಾಗಿದೆ. ‘ಶಾಕುಂತಲಂ’ ಪೋಸ್ಟರ್ ನಲ್ಲಿರೋ ಸಮಂತಾ ಅವರ ಲುಕ್ ಕಂಡು ಸೆಲೆಬ್ರಿಟಿಗಳೂ ಕಣ್ಣರಳಿಸುತ್ತಿದ್ದಾರೆ. ಇನ್ನೊಂದೆಡೆ ಸಮಂತಾ ಅಭಿಮಾನಿಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ.
ಜನರೊಂದಿಗೆ ಬೆರೆಯಲು ಕಷ್ಟ, ಥೆರಪಿ ತೆಗೆದುಕೊಳ್ಳುತ್ತಿರುವೆ: Shamita Shetty
ಶಾಕುಂತಲಾ ಚಿತ್ರ ತೆಲುಗಿನಲ್ಲಿ ಮೂಡಿಬರುತ್ತಿದೆ. ಇದರಲ್ಲಿ ಸಮಂತಾ ಅವರ ಜೊತೆಗೆ ಪುಷ್ಪ ನಟ ಅಲ್ಲು ಅರ್ಜುನ್ (Allu Arjun) ಮಗಳು ಅಲ್ಲು ಅರ್ಹಾ ಸಹ ನಟಿಸುತ್ತಿದ್ದಾಳೆ. ಅದ್ಯ ಈ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದರೆ ಸಮಂತಾ ಮತ್ತೆ ಶಾಕುಂತಲೆಯಾಗಿ ಜನರನ್ನು ಮೋಡಿ ಮಾಡೋದು ಖಂಡಿತಾ. ಖ್ಯಾತ ನಿರ್ದೇಶಕ ಗುಣಶೇಖರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ನೀಲಿಮಾ ಗುಣ ಅವರ ನಿರ್ಮಾಣದಲ್ಲಿ ‘ಶಾಕುಂತಲಂ’ ಮೂಡಿಬರುತ್ತಿದೆ. ತೆಲುಗಿನ ಜೊತೆಗೆ ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ.
ಪುರಾಣಗಳ ಪ್ರಕಾರ, ಶಾಕುಂತಲೆ ಕಣ್ವ ಋಷಿಗಳ ಸಾಕುಪುತ್ರಿ. ವಿಶ್ವಾಮಿತ್ರ- ಮೇನಕೆಗೆ ಜನಿಸಿದ ಈಕೆಯನ್ನು ಕಣ್ವ ಮಹರ್ಷಿಗಳೇ ಮುದ್ದಾಗಿ ಬೆಳೆಸುತ್ತಾರೆ. ಪ್ರಾಣಿಗಳು, ನಿಸರ್ಗವನ್ನು ಅತಿಯಾಗಿ ಪ್ರೀತಿಸುವ ಜೊತೆಗೆ ರಾಜ ದುಶ್ಯಂತನ ಪ್ರೇಮದಲ್ಲಿ ಶಾಕುಂತಲೆ ಬೀಳುತ್ತಾಳೆ. ದುಷ್ಯಂತ ಶಾಕುಂತಲೆಯರ ಪ್ರೇಮ ಕಥೆ ಪ್ರತೀ ಭಾರತೀಯನ ಬಾಯಲ್ಲಿದೆ. ಈ ಸಿನಿಮಾ ಬಂದ ಮೇಲೆ ಈ ಕತೆ ಮತ್ತಷ್ಟು ಜನಪ್ರಿಯವಾಗಲಿದೆ ಎಂಬುದು ಸಮಂತಾ ಅಭಿಮಾನಿಗಳ ದೃಢ ವಿಶ್ವಾಸ.