ಬಿಷ್ಣೋಯಿ ಸಮುದಾಯದ ಭಾವನೆಗಳಿಗೆ ಕುಂದು ತಂದಿರುವ ನಟ ಸಲ್ಮಾನ್ ಖಾನ್, ಕೊಲೆ ಬೆದರಿಕೆ ಕುರಿತು ಬಾಯ್ಬಿಟ್ಟರೂ, ಕ್ಷಮೆ ಮಾತ್ರ ಕೋರುತ್ತಿಲ್ಲ. ಏನಿದು ವಿವಾದ?
ನಟ ಸಲ್ಮಾನ್ ಖಾನ್ ಮತ್ತು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಜಟಾಪಟಿ ಇಂದು, ನಿನ್ನೆಯದ್ದಲ್ಲ. ದಶಕಗಳಿಂದಲೂ ಲಾರೆನ್ಸ್ ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕುತ್ತಲೇ ಬಂದಿದ್ದಾನೆ. ಹಲವು ಸಲ ಇ-ಮೇಲ್ ಮೂಲಕ, ಇನ್ನು ಕೆಲವೊಮ್ಮೆ ಗುಂಡಿನ ದಾಳಿ ನಡೆಸುವ ಮೂಲಕ... ಹೀಗೆ ಕೊಲೆ ಬೆದರಿಕೆ ಹಾಕುತ್ತಿದ್ದು, ನಟನ ಭದ್ರತೆಯನ್ನು ಹೆಚ್ಚಿಸುತ್ತಲೇ ಇರಲಾಗಿದೆ. ಸಲ್ಮಾನ್ ಖಾನ್ (Salman Khan) ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗಡೆ ಕಳೆದ ಏಪ್ರಿಲ್ 14ರಂದು ಗುಂಡಿನ ದಾಳಿ ಸಂಭವಿಸಿತ್ತು. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ದಾಳಿ ಮಾಡಿದ್ದು ತಾವೇ ಎಂದು ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗುಂಪಿನವರು ಒಪ್ಪಿಕೊಂಡಿದ್ದಾರೆ. ಇದಾಗಲೇ ಓರ್ವ ಆರೋಪಿ ಜೈಲಿನಲ್ಲಿಯೇ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಇದಾಗಲೇ ಲಾರೆನ್ಸ್ ಸಾಕಷ್ಟು ಬಾರಿ ಬೆದರಿಕೆ ಪತ್ರ ಕಳುಹಿಸಿದ್ದ. ಕೆಲವು ಬಾರಿ ನೇರವಾಗಿ ನಾನೂ ಈ ಕೃತ್ಯ ಮಾಡಿರುವುದಾಗಿಯೂ ಹೇಳಿದ್ದ. ಇದಾಗಲೇ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ, ನಟನಿಗೆ ಟೈಟ್ ಸೆಕ್ಯುರಿಟಿ ನೀಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ಖಾನ್ ಅವರನ್ನು ಇದೀಗ 4 ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ಏಪ್ರಿಲ್ 14ರ ನಸುಕಿನಲ್ಲಿ ಪಟಾಕಿ ರೀತಿಯ ಸದ್ದು ಕೇಳಿಸಿತು. ಬೆಳಗ್ಗೆ 4.55 ಗಂಟೆ ಹೊತ್ತಿಗೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಬಾಲ್ಕನಿಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದೇ ಮೊದಲಲ್ಲ. ನನ್ನ ಮತ್ತು ಕುಟುಂಬದವರ ಮೇಲೆ ಹಲ್ಲೆ ಮಾಡುವ ಪ್ರಯತ್ನ ಹಲವು ಬಾರಿ ನಡೆದಿದೆ. ಲಾರೆನ್ಸ್ಬಿಷ್ಣೋಯ್ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ ಎಂಬುದು ಮೀಡಿಯಾಗಳಿಂದ ತಿಳಿದಿದೆ. ಲಾರೆನ್ಸ್ ಬಿಷ್ಣೋಯ್ ತನ್ನ ಗ್ಯಾಂಗ್ ಸದಸ್ಯರ ಸಹಾಯದಿಂದ ನನ್ನ ಕುಟುಂಬ ಸದಸ್ಯರು ಒಳಗೆ ಮಲಗಿದ್ದಾಗ ಗುಂಡಿನ ದಾಳಿ ನಡೆಸಿ ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ಕೊಲ್ಲಲು ಯೋಜಿಸಿ ದಾಳಿ ನಡೆಸಿದ್ದಾನೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ ಸಲ್ಮಾನ್ ಖಾನ್. ಗುಂಡಿನ ದಾಳಿ ನಡೆದರೆ ಅದು ಸಲ್ಮಾನ್ ಖಾನ್ ಬೆಚ್ಚಿಬೀಳಿಸುವಂತೆ ಇರಬೇಕು ಎಂದು ಲಾರೆನ್ಸ್ ತನ್ನ ಗುಂಪಿಗೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಮ್ ಜೊತೆ ರೊಮಾನ್ಸ್ ಮಾಡಿ ನಂತ್ರ ಮಾತಾಡು... ಭಾರತದ ಯುವಕರ ವಿರುದ್ಧ ಹೇಳಿದಾಕೆಗೆ ಓಪನ್ ಚಾಲೆಂಜ್!
ಆದರೆ, ಇಷ್ಟೆಲ್ಲಾ ಬಾರಿ ಕೊಲೆ ಬೆದರಿಕೆ ಬರುತ್ತಿದ್ದರೂ, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಒಂದೇ ಒಂದು ಕೋರಿಕೆಯಾಗಿರುವ ಕ್ಷಮೆಯನ್ನು ಇದುವರೆಗೆ ಸಲ್ಮಾನ್ ಖಾನ್ ಕೇಳಲಿಲ್ಲ. ಸಲ್ಮಾನ್ ಖಾನ್ನನ್ನು ಕೊಲೆ ಮಾಡಲು ನಮಗೆ ಹೆಚ್ಚು ಹೊತ್ತು ಬೇಡ. ಆದರೆ ನಮ್ಮ ಧಾರ್ಮಿಕ ಭಾವನೆಗೆ ಕುಂದು ತಂದ ಆತ ಕ್ಷಮೆ ಕೋರಬೇಕು ಎನ್ನುವುದು ನಮ್ಮ ಇಚ್ಛೆ. ಕ್ಷಮೆ ಕೋರಿದರೆ ಅಲ್ಲಿಗೆ ಈ ವಿವಾದವನ್ನು, ಕೊಲೆ ಬೆದರಿಕೆಯನ್ನು ನಿಲ್ಲಿಸುತ್ತೇವೆ ಎಂದು ಲಾರೆನ್ಸ್ ಇದಾಗಲೇ ಹಲವು ಬಾರಿ ಹೇಳಿದ್ದಾನೆ. ಬಿಷ್ಣೋಯಿ ಜನಾಂಗಕ್ಕೆ ಸಲ್ಮಾನ್ ಖಾನ್ ವಿರುದ್ಧ ಯಾಕಿಷ್ಟು ಕೋಪ ಎಂದರೆ ಅದಕ್ಕೆ ಕಾರಣ, ಕೃಷ್ಣಮೃಗ ಬೇಟೆ. ಲಾರೆನ್ಸ್ ಬಿಷ್ಣೋಯ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಇದಾಗಲೇ ಹಲವಾರು ಬಾರಿ ಬೆದರಿಕೆ ಹಾಕಿದ್ದಾನೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ (Blackbuck poaching case) ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದೇ ಈ ಬೆದರಿಕೆಗೆ ಕಾರಣ. ಈ ಪ್ರಕರಣದಲ್ಲಿ ಸಲ್ಮಾನ್ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾನೆ. ಏಕೆಂದರೆ, ಕೃಷ್ಣಮೃಗಗಳನ್ನು ಬಿಷ್ಣೋಯ್ ಸಮುದಾಯವು ಪವಿತ್ರವೆಂದು ಪರಿಗಣಿಸುತ್ತದೆ. ಅದಕ್ಕಾಗಿಯೇ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿದ್ದಾನೆ. ಕೃಷ್ಣಮೃಗವನ್ನು ತಾವು ಬೇಟೆಯಾಡಿದ್ದಲ್ಲ ಎಂದು ಸಲ್ಮಾನ್ ಖಾನ್ ಹೇಳಿಕೆ ನೀಡಿದ್ದಾರೆ. ಆದರೆ ತಪ್ಪಿತಸ್ಥರು ಯಾರು ಎನ್ನುವುದು ನಮಗೆ ಗೊತ್ತಿದೆ. ಆದ್ದರಿಂದ ಸಲ್ಮಾನ್ ಬಂದು ಕ್ಷಮೆ ಕೋರಬೇಕು ಎನ್ನುವುದು ಅವರ ಬೇಡಿಕೆ.
ಕೊಲೆ ಬೆದರಿಕೆ ಒಡ್ಡಿರುವ ಆರೋಪ ಹೊತ್ತ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿ ಇದ್ದು, ಈಗ ಪದೇ ಪದೇ ಮತ್ತೆ ಬೆದರಿಕೆ ಹಾಕುತ್ತಲೇ ಇದ್ದಾನೆ. ಅಷ್ಟಕ್ಕೂ ಆತನ ಬೇಡಿಕೆ ಎಂದರೆ ಕೃಷ್ಣಮೃಗವನ್ನು ಕೊಂದಿರುವುದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎನ್ನುವುದು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಇದಾಗಲೇ ಹೇಳಿದ್ದಾನೆ. ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದ. ಇದರ ಹೊರತಾಗಿಯೂ ಸಲ್ಮಾನ್ ಖಾನ್ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್ ಎಚ್ಚರಿಕೆ ನೀಡುತ್ತಲೇ ಇದೆ. ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದ. ಈಗಲೂ ಅದನ್ನೇ ಈ ಗುಂಪಿನವರು ಕೇಳುತ್ತಿದ್ದಾರೆ. ಆದರೆ ಸಲ್ಲು ಭಾಯಿ ಇದಕ್ಕೆ ಇದುವರೆಗೆ ಒಪ್ಪಲಿಲ್ಲ. ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ವಿಕ್ಕಿ ಗುಪ್ತಾ (24), ಸಾಗರ್ ಪಾಲ್ (21) ಸುಭಾಷ್ ಚಂದರ್ (37)ಮತ್ತು ಅನುಜ್ ಥಾಪನ್ (32) ಅವರನ್ನು ಪೊಲೀಸರು ಬಂಧಿಸಿದ್ದಾರೆ.