
ಮುಂಬೈ: ಚೂರಿ ಇರಿತಕ್ಕೊಳಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಸೈಫ್ ಅಲಿ ಖಾನ್ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡು ಬಂದಿದ್ದು, 2-3 ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು’ ಎಂದು ಲೀಲಾವತಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸೈಫ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ನ್ಯೂರೋ ಸರ್ಜನ್ ನಿತಿನ್ ಡಾಂಗೆ, ‘ನಮ್ಮ ನಿರೀಕ್ಷೆಯಂತೆ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. . ಐಸಿಯುನಿಂದ ವಾರ್ಡ್‌ಗೆ ಶಿಫ್ಟ್ ಮಾಡಿದ್ದೇವೆ. ವಿಶ್ರಾಂತಿಗೆ ಸೂಚಿಸಿದ್ದೇವೆ. ಈ ಕಾರಣಕ್ಕಾಗಿಯೇ ಇತರರ ಭೇಟಿಗೆ ನಿರ್ಬಂಧಿಸಿದ್ದೇವೆ. ಅವರು ಗುಣಮುಖರಾಗಿದ್ದು 2-3 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಿದ್ದೇವೆ’ ಎಂದರು.
ರಕ್ತಸಿಕ್ತವಾಗಿದ್ದರೂ ಹುಲಿಯಂತೆ ಬಂದರು
ಆಸ್ಪತ್ರೆಗೆ ಗಾಯಗಳೊಂದಿಗೆ ನಟ ಬಂದಿದ್ದ ಸಂದರ್ಭವನ್ನು ವಿವರಿಸಿದ ವೈದ್ಯರು,‘ರಕ್ತಸಿಕ್ತವಾಗಿ ಗಾಯಗೊಂಡಿದ್ದರೂ ಸೈಫ್ ಹುಲಿಯಂತೆ ಆಸ್ಪತ್ರೆಗೆ ನಡೆದು ಬಂದರು. ಅವರು ನಿಜವಾದ ಹೀರೋ’ ಎಂದರು.
ಸೈಫ್ ದೇಹ ಹೊಕ್ಕಿದ್ದ 2.5 ಇಂಚು ಚಾಕು ಫೋಟೋ ಲಭ್ಯ!
‘ಸೈಫ್ ಬೆನ್ನಿಗೆ ದಾಳಿಕೋರ ಹಾಕಿದ್ದ ಚಾಕು 2.5 ಇಂಚಿನಷ್ಟು ಮುರಿದು ಒಳಹೊಕ್ಕಿತ್ತು. ಮುರಿದ ಚಾಕುವನ್ನು ಹೊರತೆಗೆಯಲಾಗಿದೆ. ಇನ್ನೂ 2 ಮಿ.ಮೀ. ಒಳಗೆ ಹೋಗಿದ್ದರೆ ಬೆನ್ನು ಮೂಳೆಗೆ ಏಟು ಆಗುತ್ತಿತ್ತು. ಸುದೈವವಶಾತ್ ಹೀಗಾಗದೇ ಅಪಾಯದಿಂದ ಪಾರಾಗಿದ್ದಾರೆ’ ಎಂದು ಲೀಲಾವತಿ ಆಸ್ಪತ್ರೆ ಹೇಳಿದ್ದಾರೆ. ಅವರು ತುಂಬಾ ಅದೃಷ್ಟವಂತರು. ಸೋರುತ್ತಿರುವ ಬೆನ್ನು ಮೂಳೆಯ ದ್ರವ ಮತ್ತು ಅಲ್ಲಿಂದ ಡ್ಯೂರಾವನ್ನು ಸರಿಪಡಿಸಿದ್ದೇವೆ. ಅವರನ್ನು ನಡೆಯುವಂತೆ ಮಾಡಿದಾಗ ಅವರು ನಡೆಯಲು ಸಂಪೂರ್ಣ ಶಕ್ತರಾಗಿದ್ದಾರೆ’ ಎಂದರು.
ಇನ್ನೂ ಸಿಗದ ಸೈಫ್ ದಾಳಿಕೋರ
ಸೈಫ್ ಅಲಿ ಖಾನ್ ಅವರ ಮೇಲೆ ದಾಳಿ ಮಾಡಿದ ಆರೋಪಿ 2 ದಿನವಾದರೂ ಪೊಲೀಸರ ಕೈಗೆ ಸಿಗದೇ ತಲೆನೋವಾಗಿ ಪರಿಣಮಿಸಿದ್ದಾನೆ. ಶುಕ್ರವಾರ ಬೆಳಗ್ಗೆ ಸೈಫ್ ಮೇಲಿನ ದಾಳಿಕೋರನನ್ನೇ ಹೋಲುತ್ತಾನೆ ಎಂಬ ಕಾರಣಕ್ಕೆ 2 ದಿನ ಹಿಂದೆಯಷ್ಟೇ, ಅವರ ಮನೆಯಲ್ಲಿ ಕೆಲಸ ಮಾಡಿದ್ದ ಬಡಗಿ ವಾರಿಸ್ ಅಲಿ ಸಲ್ಮಾನಿ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಆತನ ಪಾತ್ರ ಇಲ್ಲ ಎಂದು ಅರಿತು ಬಿಡುಗಡೆ ಮಾಡಿದ್ದಾರೆ. ಬಳಿಕ, ‘ಸೈಫ್ ಕೇಸಿನಲ್ಲಿ ಯಾರನ್ನೂ ವಶಕ್ಕೆ ಪಡೆದಿಲ್ಲ’ ಎಂದು ಪೊಲೀಸರು ಸಂಜೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸೈಫ್ ರ ಹಿಂಭಾಗ & ಕುತ್ತಿಗೆಯಿಂದ ರಕ್ತ ಸೋರುತ್ತಿತ್ತು, ಆಸ್ಪತ್ರೆಗೆ ದಾಖಲಿಸಿದ ಆಟೋ ಚಾಲಕ ಬಿಚ್ಚಿಟ್ಟ ಸತ್ಯ
ಆರೋಪಿಯ ಬಂಧಿಸಲು 20 ತಂಡ ರಚನೆ
ದಾಳಿಕೋರನನ್ನು ಬಂಧಿಸುವ ಸಲುವಾಗಿ ಮುಂಬೈ ನಗರ ಪೊಲೀಸರ 20 ತಂಡಗಳನ್ನು ರಚಿಸಲಾಗಿದೆ. ಕ್ರೈಂ ಬ್ರಾಂಚ್ ಹಾಗೂ ಸ್ಥಳೀಯ ಪೊಲೀಸರು, ದಾಳಿ ವೇಳೆ ಸಕ್ರಿಯವಾಗಿದ್ದ ಮೊಬೈಲ್‌ಗಳು ಸೇರಿದಂತೆ ಹಲವು ತಾಂತ್ರಿಕ ಅಂಕಿಅಂಶಗಳನ್ನು ಕಲೆಹಾಕುತ್ತಿದ್ದಾರೆ. ಜತೆಗೆ, ನಟ ಸೈಫ್‌ರ ಮನೆಯಲ್ಲಿ ಶ್ವಾನ ಪಡೆಯ ಸಹಾಯದೊಂದಿಗೆ ವಿಧಿವಿಜ್ಞಾನ ತಂಡ ಕೆಲ ಸಾಕ್ಷಿಗಳನ್ನು ಸಂಗ್ರಹಿಸಿದ್ದು, ನಗರದ ಹಲವು ಕಡೆಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಬಾಂದ್ರಾದಲ್ಲಿರುವ ನಟ ಸೈಫ್‌ರ ಮನೆಯೊಳಗೆ ನುಸುಳಿದ್ದ ಆಗಂತುಕ, ಗುರುವಾರ ರಾತ್ರಿ 2:30 ಸುಮಾರಿಗೆ ಅವರ ಮೇಲೆ ಚಾಕುವಿನಿಂದ 6 ಬಾರಿ ದಾಳಿ ನಡೆಸಿದ್ದ. ಕೂಡಲೇ ಸೈಫ್‌ರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಸೈಫ್ ಅಲಿ ಖಾನ್, ಸಲ್ಮಾನ್, ಶಾರುಖ್ ತಮ್ಮ ಸೆಕ್ಯೂರಿಟಿಗೆ ವರ್ಷಕ್ಕೆ ಎಷ್ಟು ಹಣ ಖರ್ಚು ಮಾಡ್ತಾರೆ ಗೊತ್ತಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.