ಹಿಂದಿ, ತಮಿಳು, ತೆಲುಗಲ್ಲೂ ‘ಕಾಂತಾರ’ ಸಂಚಲನ: ಅಭಿಮಾನಿಗಳು ಫಿದಾ

By Govindaraj S  |  First Published Oct 16, 2022, 2:45 AM IST

ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ರಿಷಬ್‌ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ಬಹುಬೇಡಿಕೆ ಬಂದ ಹಿನ್ನೆಲೆಯಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗೆ ಡಬ್‌ ಮಾಡಿ ಸಿನಿಮಾ ಬಿಡುಗಡೆ ಮಾಡಲಾಗಿದ್ದು, ಮೂರು ಭಾಷೆಯಲ್ಲಿಯೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 


ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ರಿಷಬ್‌ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ಬಹುಬೇಡಿಕೆ ಬಂದ ಹಿನ್ನೆಲೆಯಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗೆ ಡಬ್‌ ಮಾಡಿ ಸಿನಿಮಾ ಬಿಡುಗಡೆ ಮಾಡಲಾಗಿದ್ದು, ಮೂರು ಭಾಷೆಯಲ್ಲಿಯೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತಮಿಳಿನಲ್ಲಿ ಸಿನಿಮಾ ನೋಡಿದ ನಟ ಕಾರ್ತಿ ಅವರು ರಿಷಬ್‌ ಶೆಟ್ಟಿಯವರನ್ನು ಅಪ್ಪಿಕೊಂಡು ಮೆಚ್ಚುಗೆ ಸೂಚಿಸಿದ್ದಾರೆ. ಈ ಮೊದಲು ಕನ್ನಡದಲ್ಲಿ ಕಾಂತಾರ ನೋಡಿ ಮೆಚ್ಚಿದ್ದ ‘ಬಾಹುಬಲಿ’ ಖ್ಯಾತಿಯ ಪ್ರಭಾಸ್‌, ತೆಲುಗಿನಲ್ಲೂ ಸಿನಿಮಾ ನೋಡಿ ಕೊಂಡಾಡಿದ್ದಾರೆ.

ಹಿಂದಿಯಲ್ಲಿ ಸುಮಾರು 2500 ಸ್ಕ್ರೀನ್‌ಗಳಲ್ಲಿ ಕಾಂತಾರ ಬಿಡುಗಡೆಯಾಗಿತ್ತು. ಆಯುಷ್ಮಾನ್‌ ಖುರಾನ ನಟನೆಯ ‘ಡಾಕ್ಟರ್‌ ಜಿ’ ಕೂಡ ಅದೇ ದಿನ ಬಿಡುಗಡೆಯಾಗಿದ್ದು, ಕಾಂತಾರ ಆ ಸಿನಿಮಾವನ್ನು ಹಿಂದಿಕ್ಕುವ ಸಾಧ್ಯತೆ ದಟ್ಟವಾಗಿದೆ. ಮೂರು ಭಾಷೆಯ ಪ್ರೇಕ್ಷಕರು ಕೂಡ ಉತ್ತಮ ವಿಮರ್ಶೆಗಳನ್ನು ನೀಡಿದ್ದು, ಈ ವಾರ ಕಾಂತಾರಕ್ಕೆ ಭಾರಿ ಜನಪ್ರವಾಹವನ್ನು ನಿರೀಕ್ಷಿಸಲಾಗಿದೆ. ಬೇರೆ ಭಾಷೆಯ ಪ್ರಮುಖ ನಟರು, ನಿರ್ಮಾಪಕರು ರಿಷಬ್‌ ಶೆಟ್ಟಿಯವರನ್ನು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ. ಬಹುತೇಕ ಮಾಧ್ಯಮಗಳು ಚಿತ್ರಕ್ಕೆ 5ರಲ್ಲಿ 4 ಸ್ಟಾರ್‌ ನೀಡಿವೆ. ಧನುಷ್‌ ಕೂಡ ಸಿನಿಮಾ ಮೆಚ್ಚಿ ಟ್ವೀಟ್‌ ಮಾಡಿದ್ದರು.

Tap to resize

Latest Videos

ಹಿಂದಿ ಮಂದಿಗೆ ಭಯ ಹುಟ್ಟಿಸಿದ ರಿಷಬ್; ಚಿರು-ಸಲ್ಮಾನ್ 'ಗಾಡ್‌ಫಾದರ್'ಗಿಂತ ಹೆಚ್ಚಿದ 'ಕಾಂತಾರ' ಗಳಿಕೆ

‘ಕಾಂತಾರ ವಿಶಿಷ್ಟಅನುಭವ. ನಾನು ಎರಡನೇ ಸಲ ಸಿನಿಮಾ ನೋಡಿದೆ. ಅದ್ಭುತ ಕಾನ್ಸೆಪ್ಟ್‌ ಮತ್ತು ರೋಮಾಂಚಕ ಕ್ಲೈಮ್ಯಾಕ್ಸ್‌. ಥಿಯೇಟರ್‌ನಲ್ಲಿಯೇ ನೋಡಬೇಕಾದ ಸಿನಿಮಾ’ ಎಂದು ಪ್ರಭಾಸ್‌ ಹೇಳಿದ್ದಾರೆ. ಕಾರ್ತಿ, ‘ಮೈ ನಡುಗಿಸುವಂತಹ ಅನುಭವ’ ಎಂದು ಹೇಳಿದ್ದಾರೆ. ಬೇರೆ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾದ ಹಿನ್ನೆಲೆಯಲ್ಲಿ ರಿಷಬ್‌ ಶೆಟ್ಟಿಆಯಾಯ ಭಾಷೆಯ ಮಾಧ್ಯಮಗಳಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ರಿಷಬ್‌ ಹಿಂದಿ ಮತ್ತು ತಮಿಳಿನಲ್ಲಿ ನಿರರ್ಗಳವಾಗಿ ಸಂದರ್ಶನ ನೀಡಿದ್ದಾರೆ. ಅವರ ಭಾಷಾ ಪ್ರೌಢಿಮೆಗೆ ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾ ಪ್ರೇಮಿಗಳು ಮರುಳಾಗಿದ್ದಾರೆ. ಅನೇಕರು ರಿಷಬ್‌ರಿಂದ ಇಂಥಾ ಭಾಷಾ ಪ್ರೌಢಿಮೆ ನಿರೀಕ್ಷೆ ಮಾಡಿರಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

2ನೇ ಬಾರಿ ಕಾಂತಾರ ವೀಕ್ಷಿಸಿ ಪ್ರಭಾಸ್; ಎಲ್ಲರೂ ನೋಡಲೇ ಬೇಕಾದ ಸಿನಿಮಾ ಎಂದ 'ಸಲಾರ್' ಸ್ಟಾರ್

ಈ ಕುರಿತು ರಿಷಬ್‌ ಶೆಟ್ಟಿ, ‘ನಾನು ಮಾತನಾಡುವುದು, ಯೋಚನೆ ಮಾಡುವುದು, ಉಸಿರಾಡುವುದು ಕನ್ನಡದಲ್ಲೇ. ಈಗ ಅನಿರೀಕ್ಷಿತವಾಗಿ ಬೇರೆ ಭಾಷೆಗಳಲ್ಲಿ ಮಾತನಾಡುವ ಅವಶ್ಯಕತೆ ಬಂದಿದೆ. ಇದಕ್ಕೆಲ್ಲಾ ನಾನು ಸಿದ್ಧನಾಗಿರಲಿಲ್ಲ. ಬೇರೆ ಭಾಗದ ಜನರ ಸಿನಿಮಾ ಪ್ರೀತಿಯಿಂದ ಇದೆಲ್ಲಾ ಸಾಧ್ಯವಾಗಿದೆ. ಪತ್ನಿ ಪ್ರಗತಿ ವಿಶ್ವಾಸದಿಂದ ಹೋಗಿ ಮಾತನಾಡು ಎಂದು ಧೈರ್ಯ ತುಂಬಿದ ಕಾರಣಕ್ಕೆ ನಾನು ಮಾತನಾಡುತ್ತಿದ್ದೇನೆ. ಎಲ್ಲಾ ಭಾಗದ ಪ್ರೇಕ್ಷಕರ ಪ್ರತಿಕ್ರಿಯೆಯಿಂದ ಮನಸ್ಸು ತುಂಬಿ ಬಂದಿದೆ’ ಎಂದು ಹೇಳುತ್ತಾರೆ. ವಿಜಯ್‌ ಕಿರಗಂದೂರು ನಿರ್ಮಾಣದ ಈ ಸಿನಿಮಾ ಅ.20ರಂದು ಮಲಯಾಳಂನಲ್ಲಿಯೂ ಬಿಡುಗಡೆಯಾಗುತ್ತಿದೆ. ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್‌ ಸುಕುಮಾರನ್‌ ಕೇರಳದಲ್ಲಿ ಸಿನಿಮಾ ವಿತರಣೆ ಮಾಡುತ್ತಿದ್ದಾರೆ.

click me!