
- ರಿಷಬ್ ಶೆಟ್ಟಿ
ಅನಂತ್ ಸರ್ ಅವರಿಗೆ ಅತ್ಯುನ್ನತ ಗೌರವ ಸಂದಿರುವುದು ಅತೀವ ಸಂತೋಷ ತಂದಿದೆ. ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ನಿಜಕ್ಕೂ ಅವರು ನಮ್ಮ ಚಿತ್ರರಂಗದ ಲಿವಿಂಗ್ ಲೆಜೆಂಡ್. ಇಡೀ ಚಿತ್ರರಂಗವೇ ಅವರಿಂದ ಸ್ಫೂರ್ತಿ ಪಡೆದುಕೊಂಡು ಬೆಳೆದಿದೆ. ಅವರಿಗೆ ಈ ಪ್ರಶಸ್ತಿ ಸಿಕ್ಕಿರುವುದು ಇಡೀ ಕನ್ನಡ ನಾಡಿಗೆ ಮತ್ತು ಕನ್ನಡ ಚಿತ್ರರಂಗಕ್ಕೆ ಸಂದ ಗೌರವ.
ಅಣ್ಣಾವ್ರು, ವಿಷ್ಣು ಸರ್, ಅಂಬರೀಶಣ್ಣ ಅವರಂತಹ ದಿಗ್ಗಜರನ್ನು ಕಳೆದುಕೊಂಡ ಮೇಲೆ, ಚಿತ್ರರಂಗ ಯಾವ ದಾರಿಯಲ್ಲಿ ಸಾಗಬೇಕು, ಯಾವ ದಾರಿಯಲ್ಲಿ ಬಂದಿದ್ದೇವೆ ಎಂಬುದನ್ನು ನೆನಪಿಸಲು ನಮ್ಮ ನಡುವೆ ಇರುವ ದೊಡ್ಡ ಶಕ್ತಿ ಅನಂತ್ ಸರ್. ಕುಟುಂಬದಲ್ಲಿ ಒಬ್ಬ ಹಿರಿಯ ವ್ಯಕ್ತಿ ಇದ್ದರೆ ಸಿಗುವ ನೆಮ್ಮದಿ, ಧೈರ್ಯ ಅವರ ಉಪಸ್ಥಿತಿಯಿಂದ ನಮಗೆ ಸಿಗುತ್ತದೆ. ‘ನಾವೂ ಕನ್ನಡ ಚಿತ್ರರಂಗದವರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಅವರೇ ನಮಗೆ ದೊಡ್ಡ ಪ್ರೇರಣೆ.
15 ನಿಮಿಷ 20 ಸೆಕೆಂಡ್‌ಗಳ ದೃಶ್ಯ..!
‘ಸ.ಹಿ.ಪ್ರಾ ಶಾಲೆ ಕಾಸರಗೋಡು’ ಚಿತ್ರದ ಕ್ಲೈಮ್ಯಾಕ್ಸ್ ಕೋರ್ಟ್‌ರೂಮ್ ದೃಶ್ಯ ನನಗೆ ಸದಾ ವಿಶೇಷ. ಆ ದೃಶ್ಯ ಸುಮಾರು 15 ನಿಮಿಷ 20 ಸೆಕೆಂಡ್‌ಗಳ ಕಾಲ ನಿರಂತರವಾಗಿ ಸಾಗುವ ಸಿಂಗಲ್ ಶಾಟ್. ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದೆವು. ಸರ್ಕಾರದ ಗಮನ ಸೆಳೆಯುವ ಗಂಭೀರ ವಿಚಾರವನ್ನು ಪ್ರಸ್ತುತಪಡಿಸಬೇಕಿತ್ತು. ವೃತ್ತಿಪರ ವಕೀಲನಲ್ಲದಿದ್ದರೂ ಕಾನೂನು ತಿಳಿದಿರುವ, ತರ್ಲೆ ಮಾಡುತ್ತಲೇ ಅಲ್ಲಲ್ಲಿ ಧೈರ್ಯ ತೋರುವ ಅನಂತಪದ್ಮನಾಭ ಪಿ. (ಪಿ ಫಾರ್ ಪೀಕಾಕ್) ಪಾತ್ರವನ್ನು ಆ ಸಣ್ಣ ಕೋರ್ಟ್ ಹಾಲ್‌ನಲ್ಲಿ ಕಟ್ಟಿಕೊಡುವುದು ಸುಲಭವಾಗಿರಲಿಲ್ಲ.
ಭಾಷೆಯ ಸೂಕ್ಷ್ಮತೆ, ಕಾಸರಗೋಡಿನ ಸಂಕೀರ್ಣತೆ, ಸರ್ಕಾರಿ ಶಾಲೆಗಳ ಕಷ್ಟ ಮುಂತಾದ ಗಂಭೀರ ವಿಚಾರಗಳನ್ನು ಕೇವಲ ಒಂದೇ ಶಾಟ್‌ನಲ್ಲಿ ದಾಟಿಸುವುದು ಸಾಮಾನ್ಯ ನಟನಿಗೆ ಸಾಧ್ಯವಿಲ್ಲ. ಆ ಎಲ್ಲಾ ವಿಚಾರ ಗ್ರಹಿಸುವುದೂ ಆಗಲ್ಲ. ಆದರೆ ಈ ಸವಾಲನ್ನು ಕೇಳಿದ ತಕ್ಷಣ ಅನಂತ್ ಸರ್ ಎಕ್ಸೈಟ್ ಆದರು. ಒಬ್ಬ ಮಹಾನ್ ಕಲಾವಿದನಲ್ಲಿ ನಟನೆಯ ಹಸಿವು ಯಾವತ್ತೂ ಇರುತ್ತದೆ ಎಂಬುದಕ್ಕೆ ಅವರೇ ಸಾಕ್ಷಿ. ಈ ಹಿಂದೆ ಶಂಕರ್ ನಾಗ್ ಅವರ ಜೊತೆ ನಾಟಕಗಳಲ್ಲಿ 18, 26, 28 ಪುಟಗಳ ಏಕಪಾತ್ರಾಭಿನಯ ಮಾಡಿದ್ದ ಅನುಭವವನ್ನು ನೆನಪಿಸಿಕೊಂಡು ಈ ಸಿಂಗಲ್ ಶಾಟ್‌ಗೆ ಸಂಪೂರ್ಣ ಜೀವ ತುಂಬಿದರು.
ಆ ಶಾಟ್ ಮುಗಿದ ತಕ್ಷಣ ಸೆಟ್‌ನಲ್ಲಿದ್ದವರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದ ಆ ಕ್ಷಣ ಅವಿಸ್ಮರಣೀಯ. ಚಿತ್ರಮಂದಿರಗಳಲ್ಲೂ ಆ ದೃಶ್ಯಕ್ಕೆ ಬೆಚ್ಚಗಿನ ಅಪ್ಪುಗೆ ಸಿಕ್ಕಿತು. ಒಬ್ಬ ಸಿನಿಮಾ ಮೇಕರ್ ಆಗಿ ನನ್ನ ವೃತ್ತಿಜೀವನದ ಅತಿಮುಖ್ಯ ಸಿನಿಮಾ ಸಹಿಪ್ರಾ ಶಾಲೆ ಕಾಸರಗೋಡು. ಆ ಸಿನಿಮಾ ಹಾಗೆ ರೂಪುಗೊಳ್ಳಲು ಅನಂತ್ ಸರ್ ಅವರ ಆ ಅಭಿನಯವೇ ಮುಖ್ಯ ಕಾರಣ. ಹಾಗಾಗಿ ಅನಂತ್ ಸರ್ ನನ್ನ ಪಾಲಿಗೆ ಎಂದಿಗೂ ಅತ್ಯಂತ ಸ್ಪೆಷಲ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.