
ಶತ್ರುಗಳ ನಡುವೆ ಕೆಲಸ ಮಾಡಿದ ದೇಶಭಕ್ತ ಸ್ಪೈಗಳ, ಗೂಢಚಾರರ ತ್ಯಾಗವನ್ನು ಆಧರಿಸಿದ ಹಲವು ಸಿನಿಮಾಗಳು ತೆರೆಗೆ ಬಂದಿವೆ. ʼಧುರಂಧರ್ʼ ಒಂದು ಮತ್ತು ಎರಡನೇ ಭಾಗ ಇದೇ ಸಾಲಿಗೆ ಸೇರ್ಪಡೆ. ಶತ್ರು ದೇಶದಲ್ಲೇ ಗುಪ್ತಚರರಾಗಿ ಕೆಲಸ ಮಾಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹೀರೋ ಕಥೆಯನ್ನು ಇದು ಹೇಳುತ್ತದೆ. ಇದೇನೂ ಅತಿರಂಜನೆ ಅಲ್ಲ, ಸುಳ್ಳಲ್ಲ. ಹೀಗೆ ಪಾಕ್‌ನಲ್ಲಿ ಕೆಲಸ ಮಾಡಿದ ರಿಯಲ್ ಭಾರತೀಯ ಸ್ಪೈಗಳು ಇದ್ದಾರೆ. ಅಂಥವರಲ್ಲಿ ಒಬ್ಬರು ‘ಬ್ಲಾಕ್ ಟೈಗರ್’ ರವೀಂದ್ರ ಕೌಶಿಕ್. ಧುರಂಧರ್ ನೋಡಿ ಮೆಚ್ಚುವ ಜೊತೆಗೆ ರವೀಂದ್ರ ಕೌಶಿಕ್ ಕಥೆಯನ್ನೂ ಕೇಳೋಣ ಬನ್ನಿ.
1952ರ ಏಪ್ರಿಲ್ 11ರಂದು ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಜನಿಸಿದ ರವೀಂದ್ರ ಕೌಶಿಕ್, ದೇಶಭಕ್ತಿಯ ವಾತಾವರಣದಲ್ಲೇ ಬೆಳೆದವರು. ಅವರ ತಂದೆ ಭಾರತೀಯ ವಾಯುಪಡೆಯಲ್ಲಿದ್ದರು. ಕಾಲೇಜು ದಿನಗಳಲ್ಲಿ ರಂಗಭೂಮಿಯ ಮೇಲೆ ಆಸಕ್ತಿ ಹೊಂದಿದ್ದ ಕೌಶಿಕ್, ನಾಟಕ ಸ್ಪರ್ಧೆಯಲ್ಲಿ ನೀಡಿದ ಅಭಿನಯದ ಮೂಲಕ ರಾ (RAW) ಅಧಿಕಾರಿಗಳ ಗಮನ ಸೆಳೆದರು.
1973ರಲ್ಲಿ ಲಖ್ನೋದಲ್ಲಿ ನಡೆದ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಅವರ ಪ್ರದರ್ಶನವನ್ನು ನೋಡಿ ಮೆಚ್ಚಿದ ರಾ ಅಧಿಕಾರಿಗಳು, “ದೇಶಕ್ಕಾಗಿ ಕೆಲಸ ಮಾಡುತ್ತೀಯಾ?” ಎಂದು ಕೇಳಿದಾಗ, ಕೌಶಿಕ್ ಕ್ಷಣವೂ ಯೋಚಿಸದೆ ಒಪ್ಪಿಕೊಂಡರು. ಬಳಿಕ ದೆಹಲಿಯಲ್ಲಿ ಅವರಿಗೆ ಎರಡು ವರ್ಷಗಳ ಕಠಿಣ ತರಬೇತಿ ನೀಡಲಾಯಿತು.
ತರಬೇತಿ ಬಳಿಕ ಕೌಶಿಕ್ ತಮ್ಮ ಗುರುತನ್ನೇ ಸಂಪೂರ್ಣವಾಗಿ ಬದಲಿಸಿಕೊಂಡರು. ಅವರು ‘ನಬಿ ಅಹ್ಮದ್’ ಎಂಬ ಹೆಸರಿನಲ್ಲಿ ಇಸ್ಲಾಮಿಕ್ ಸಂಸ್ಕೃತಿ ಮತ್ತು ಉರ್ದು ಭಾಷೆಯನ್ನು ಕಲಿತು 1975ರಲ್ಲಿ ಪಾಕಿಸ್ತಾನ ಪ್ರವೇಶಿಸಿದರು. ಕರಾಚಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ಬಳಿಕ ಪಾಕಿಸ್ತಾನ ಸೇನೆಗೆ ಸೇರಿ, ಅಲ್ಲಿ ಗುಪ್ತಚರರಾಗಿ ಭಾರತದ ಪರ ಕೆಲಸ ಪ್ರಾರಂಭಿಸಿದರು. 1979ರಿಂದ 1983ರವರೆಗೆ ಅವರು ಪಾಕಿಸ್ತಾನ ಸೇನೆಯ ಮಹತ್ವದ ಮಾಹಿತಿಗಳನ್ನು ಭಾರತಕ್ಕೆ ರಹಸ್ಯವಾಗಿ ಕಳುಹಿಸುತ್ತಿದ್ದರು.
ಪಾಕಿಸ್ತಾನದಲ್ಲಿ ತಮ್ಮ ಗುರುತನ್ನು ಸಂಪೂರ್ಣವಾಗಿ ಮರೆಯಾಗಿಸಿಕೊಂಡ ಕೌಶಿಕ್, ಅಲ್ಲಿ ಒಬ್ಬ ಯುವತಿಯನ್ನು ಮದುವೆಯಾದರು. ಅವರ ಹೆಂಡತಿಗೂ ಅವರು ಗುಪ್ತಚರರಾಗಿದ್ದ ವಿಚಾರ ತಿಳಿದಿರಲಿಲ್ಲ. ಪಾಕಿಸ್ತಾನದ ಸೇನಾ ಚಲನವಲನಗಳು ಮತ್ತು ಪರಮಾಣು ಯೋಜನೆಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಅವರು ಭಾರತಕ್ಕೆ ಒದಗಿಸಿದರು. ಅವರ ಸೇವೆಯನ್ನು ಮೆಚ್ಚಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಅವರಿಗೆ ‘ಬ್ಲಾಕ್ ಟೈಗರ್’ ಎಂಬ ಬಿರುದು ನೀಡಿದರು.
1983ರಲ್ಲಿ, ಕೌಶಿಕ್ ಅವರ ಎಂಟು ವರ್ಷಗಳ ರಹಸ್ಯ ಕಾರ್ಯ ಒಂದು ತಪ್ಪಿನಿಂದ ಬಯಲಾಯಿತು. ಅವರನ್ನು ಸಂಪರ್ಕಿಸಲು ಕಳುಹಿಸಿದ ಏಜೆಂಟ್ ಇನ್ಯತ್ ಮಸೀಹ್ ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದಾಗ, ಕೌಶಿಕ್ ಹೆಸರು ಬಹಿರಂಗವಾಯಿತು. ಅವರನ್ನು ಬಂಧಿಸಿದ ಪಾಕಿಸ್ತಾನ ಅಧಿಕಾರಿಗಳು ಕಠಿಣ ಹಿಂಸೆ ನೀಡಿದರು. ಆದರೂ ಕೌಶಿಕ್ ತಮ್ಮ ನಿಜವಾದ ಗುರುತನ್ನು ಬಹಿರಂಗಪಡಿಸಲಿಲ್ಲ. 1985ರಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಯಿತು, ನಂತರ ಅದನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಯಿತು.
ಬಂಧನದ ನಂತರ ಭಾರತ ಸರ್ಕಾರದಿಂದ ಹೆಚ್ಚಿನ ಸಹಾಯ ದೊರೆಯಲಿಲ್ಲ. ರಾಜತಾಂತ್ರಿಕ ಕಾರಣಗಳಿಂದ ಮೌನ ಪಾಲಿಸಲಾಯಿತು. ಜೈಲಿನಿಂದ ಕುಟುಂಬಕ್ಕೆ ಬರೆದ ಪತ್ರಗಳಲ್ಲಿ ಕೌಶಿಕ್ ತಮ್ಮ ನೋವನ್ನು ಹಂಚಿಕೊಂಡಿದ್ದರು. “ಭಾರತದಂತಹ ಮಹಾನ್ ದೇಶಕ್ಕಾಗಿ ಜೀವ ತ್ಯಾಗ ಮಾಡುವವರಿಗೆ ಸಿಗುವುದು ಇದೇನಾ?” ಎಂದು ಅವರು ಪ್ರಶ್ನಿಸಿದ್ದರು. “ನಾನು ಅಮೆರಿಕಕ್ಕೆ ಕೆಲಸ ಮಾಡಿದ್ದರೆ ನಾಲ್ಕು ದಿನಗಳಲ್ಲಿ ಹೊರಬಂದಿರುತ್ತಿದ್ದೆ” ಎಂಬ ಮಾತು ಅವರ ನೋವನ್ನು ತೋರಿಸುತ್ತದೆ. ಸುಮಾರು 26 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸಿದ ರವೀಂದ್ರ ಕೌಶಿಕ್ ಅವರಿಗೆ ಜೀವಿತಾವಧಿಯಲ್ಲಿ ನ್ಯಾಯ ಸಿಗದಿದ್ದರೂ, ಅವರ ತ್ಯಾಗ ಮತ್ತು ಧೈರ್ಯ ಸದಾ ಸ್ಮರಣೀಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.