'ಸರ್ಕೆ ಚುನರ್' ಹಾಡಿನ ವಿವಾದದ ಬೆನ್ನಲ್ಲೇ ಗಾಯಕಿ ಮಂಗ್ಲಿ ವಿರುದ್ಧ ಮತ್ತೊಂದು ಸುದ್ದಿ ಸ್ಪೋಟ; ಗಾಯಕಿ ಹೇಳಿದ್ದೇನು?

Published : Mar 23, 2026, 07:44 PM IST
Singer Mangli

ಸಾರಾಂಶ

ಈ ಹಗರಣದಲ್ಲಿ ಮಂಗ್ಲಿ ಸಹೋದರ ಶಿವ ಭಾಗಿಯಾಗಿದ್ದಾರೆ, ಅವರ ಮನೆಯಲ್ಲಿ ನೋಟಿನ ಕಂತೆಗಳಿವೆ ಎಂಬ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಹರಿದಾಡುತ್ತಿದ್ದವು. ಆದರೆ, ಈ ವಿಡಿಯೋಗಳು ಸುಳ್ಳು ಎಂದು ಮಂಗ್ಲಿ ಈಗ ಸ್ಪಷ್ಟನೆ ನೀಡಿದ್ದಾರೆ. ಅಂದಹಾಗೆ, ಈ ಹಿಂದೆ ಮಂಗ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡ್ರಗ್ಸ್ ಬಳಸಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಹೀಗೆ ಸಾಲು ಸಾಲು ವಿವಾದಗಳಲ್ಲಿ ಮಂಗ್ಲಿ ಹೆಸರು ಪದೇಪದೇ ಕೇಳಿಬರುತ್ತಿದೆ ಯಾಕೆ?

ಗಾಯಕಿ ಮಂಗ್ಲಿ ಹೆಸರಿನಲ್ಲಿ 150 ಕೋಟಿ ವಂಚನೆ? ಮೌನ ಮುರಿದ ಗಾಯಕಿ ಮಂಗ್ಲಿ ಹೇಳಿದ್ದೇನು?

ದಕ್ಷಿಣ ಭಾರತದ ಖ್ಯಾತ ಜಾನಪದ ಗಾಯಕಿ ಮಂಗ್ಲಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ? ತಮ್ಮ ವಿಶಿಷ್ಟ ಕಂಠಸಿರಿಯಿಂದ ತೆಲುಗು ಮಾತ್ರವಲ್ಲದೆ ಕನ್ನಡದಲ್ಲೂ ಸಖತ್ ಫೇಮಸ್ ಆಗಿರುವ ಈ ಗಾಯಕಿ, ಇತ್ತೀಚಿನ ದಿನಗಳಲ್ಲಿ ಹಾಡುಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಈಗ ಅವರ ಹೆಸರಿನಲ್ಲಿ ಬರೋಬ್ಬರಿ 150 ಕೋಟಿ ರೂಪಾಯಿಗಳ ಬೃಹತ್ ಹಗರಣ ನಡೆದಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಗಂಭೀರ ಆರೋಪಕ್ಕೆ ಇದೀಗ ಸ್ವತಃ ಮಂಗ್ಲಿ ಅವರೇ ಉತ್ತರ ನೀಡಿದ್ದು, ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ.

ಏನಿದು 150 ಕೋಟಿ ವಂಚನೆ ಪ್ರಕರಣ?

ಕಳೆದ ಎರಡು ದಿನಗಳಿಂದ ಅಂತರ್ಜಾಲದಲ್ಲಿ ಮಂಗ್ಲಿ ಮತ್ತು ಅವರ ಸಹೋದರ ಶಿವ ಅವರ ಹೆಸರಿನಲ್ಲಿ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ. ಮಂಗ್ಲಿ ಅವರ ಹೆಸರನ್ನು ಬಳಸಿಕೊಂಡು ಮೈಕ್ರೋ ಫೈನಾನ್ಸ್ ವ್ಯವಹಾರ ನಡೆಸಿ, ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ ಎಂಬುದು ಈ ಸುದ್ದಿಯ ಸಾರಾಂಶ. ಅಷ್ಟೇ ಅಲ್ಲದೆ, ಯೂಟ್ಯೂಬ್ ಮತ್ತು ಇತರ ವೇದಿಕೆಗಳಲ್ಲಿ ನೋಟಿನ ಕಂತೆಗಳಿರುವ ವಿಡಿಯೋಗಳನ್ನು ಪ್ರಸಾರ ಮಾಡಿ, ಇದು ಮಂಗ್ಲಿ ಅವರ ಮನೆಯಲ್ಲಿ ಸಿಕ್ಕಿರುವ ಹಣ ಎಂದು ಬಿಂಬಿಸಲಾಗಿತ್ತು. ಈ ವದಂತಿಗಳು ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆಯೇ ಮಂಗ್ಲಿ ಅಭಿಮಾನಿಗಳು ಮತ್ತು ಸಾರ್ವಜನಿಕರು ಬೆಚ್ಚಿಬಿದ್ದಿದ್ದರು.

ಆರೋಪಕ್ಕೆ ಮಂಗ್ಲಿ ಕೊಟ್ಟ ಖಡಕ್ ಉತ್ತರ:

ಈ ವಿಚಾರವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಂಗ್ಲಿ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. "ನನಗೂ ಅಥವಾ ನನ್ನ ಕುಟುಂಬಕ್ಕೂ ಈ ಮೈಕ್ರೋ ಫೈನಾನ್ಸ್ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ನನ್ನ ವೃತ್ತಿಪರ ಕಾರ್ಯಕ್ರಮಗಳಿಗಾಗಿ ಪ್ರತಿದಿನ ಅನೇಕರು ನನ್ನನ್ನು ಮತ್ತು ನನ್ನ ತಮ್ಮನನ್ನು ಸಂಪರ್ಕಿಸುತ್ತಾರೆ. ಅದು ಕೇವಲ ಕಾರ್ಯಕ್ರಮದ ಆಹ್ವಾನ ಮತ್ತು ವಿವರಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅಂತಹ ವ್ಯಕ್ತಿಗಳ ವೈಯಕ್ತಿಕ ಅಥವಾ ಆರ್ಥಿಕ ವ್ಯವಹಾರಗಳ ಬಗ್ಗೆ ನನಗಾಗಲಿ ಅಥವಾ ನನ್ನ ಕುಟುಂಬದವರಿಗಾಗಲಿ ಯಾವುದೇ ಮಾಹಿತಿ ಇರುವುದಿಲ್ಲ" ಎಂದು ಅವರು ಬರೆದುಕೊಂಡಿದ್ದಾರೆ.

ಪೊಲೀಸ್ ಇಲಾಖೆಗೆ ಮಂಗ್ಲಿ ಮನವಿ:

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ನೋಟಿನ ಕಂತೆಗಳ ವಿಡಿಯೋಗಳು ಸುಳ್ಳು ಎಂದು ಹೇಳಿರುವ ಅವರು, "ಕೆಲವರು ಬೇಕೆಂದೇ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಸಂಗೀತ ಕಾರ್ಯಕ್ರಮಗಳನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ವ್ಯವಹಾರಗಳಿಲ್ಲ. ದಯವಿಟ್ಟು ಯಾರಾದರೂ ನನ್ನ ಹೆಸರು ಹೇಳಿ ದುಡ್ಡು ಕೇಳಿದರೆ ಕೊಡಬೇಡಿ, ಅವರನ್ನು ನಂಬಬೇಡಿ. ಈ ರೀತಿ ಮೋಸ ಹೋದವರಿಗೆ ನ್ಯಾಯ ಒದಗಿಸಬೇಕೆಂದು ನಾನು ಪೊಲೀಸ್ ಇಲಾಖೆಯನ್ನು ವಿನಂತಿಸುತ್ತೇನೆ" ಎಂದು ಮನವಿ ಮಾಡಿದ್ದಾರೆ.

ಸಾಲು ಸಾಲು ವಿವಾದಗಳಲ್ಲಿ ಮಂಗ್ಲಿ:

ಮಂಗ್ಲಿ ಇತ್ತೀಚೆಗೆ ಸಾಲು ಸಾಲು ವಿವಾದಗಳಲ್ಲಿ ಸಿಲುಕುತ್ತಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಮೊನ್ನೆಯಷ್ಟೇ 'ಕೆಡಿ' ಚಿತ್ರದ ಹಿಂದಿ ಹಾಡಿನ ವಿಚಾರದಲ್ಲಿ ವಿವಾದ ಎದ್ದಿತ್ತು. ಅದಕ್ಕೂ ಮುನ್ನ ಹೈದರಾಬಾದ್‌ನಲ್ಲಿ ನಡೆದ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡ್ರಗ್ಸ್ ಬಳಸಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಈಗ ಈ 150 ಕೋಟಿ ರೂಪಾಯಿ ಹಗರಣದ ಸುದ್ದಿ ಅವರ ಬೆನ್ನುಬಿದ್ದಿದೆ.

ಒಟ್ಟಿನಲ್ಲಿ, ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಮಂಗ್ಲಿ ಸಮರ ಸಾರಿದ್ದಾರೆ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಬೇಕು ಎಂದು ಅವರು ಎಚ್ಚರಿಸಿದ್ದಾರೆ. ಈ ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ಎಲ್ಲಿಗೆ ತಲುಪಲಿದೆ ಎಂದು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Dhurandhar 2 ನೋಡಿ ತಲೆ ಕೆಟ್ಟುಹೋಯ್ತು: ರಣವೀರ್ ಸಿನಿಮಾ ನೋಡಿ ನಾಗಾರ್ಜುನ ಹೀಗಾ ಹೇಳೋದು!
ಪಾಕಿಗಳ ನಿದ್ದೆಗೆಡಿಸಿದ ದುರಂಧರ್​-2! ಕನಸಲ್ಲೂ ಭಾರತದ ರಾ ಏಜೆಂಟ್ಸ್​- ಈ ವಿಡಿಯೋ ನೋಡಿ