Ramayana: 'ನಮ್ಮ ಇತಿಹಾಸ, ನಮ್ಮ ಸತ್ಯ'.. ಶಾಲಾಮಕ್ಕಳ ಬಳಿಗೇ ಪ್ರಚಾರಕ್ಕೆ ತೆರಳಿದ 'ರಾಮಾಯಣ' ಚಿತ್ರತಂಡ!

Published : Jul 11, 2026, 11:46 AM IST
Ramayana

ಸಾರಾಂಶ

ಸಿನಿಮೀಯ ಮೆರುಗು ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಂಗಮವಾಗಿರುವ ಈ 'ರಾಮಾಯಣ' ಚಿತ್ರವು, ಪ್ರಚಾರದ ವಿಷಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿದೆ. ಸ್ಕೂಲ್ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಎದುರು ನೋಡುತ್ತಿರುವ ಈ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸವನ್ನು ಬದಲಿಸುವುದರಲ್ಲಿ ಸಂಶಯವಿಲ್ಲ!

ರಾಮಾಯಣ ಸಿನಿಮಾ: ಇದು ಬರೀ ಫಿಲ್ಮ್ ಅಲ್ಲ, ಫ್ಯೂಚರ್ ಜನರೇಶನ್ ಮೌಲ್ಯಗಳ ಹಬ್ಬ!

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 'ರಾಮಾಯಣ' (Ramayana) ಎನ್ನುವುದು ಕೇವಲ ಒಂದು ಕಥೆಯಲ್ಲ, ಅದೊಂದು ಭಾವನೆ. ಈಗ ಅದೇ ಮಹಾಕಾವ್ಯವನ್ನು ಬೆಳ್ಳಿತೆರೆಯ ಮೇಲೆ ಅದ್ದೂರಿಯಾಗಿ ತರಲು ಸಜ್ಜಾಗಿರುವ ನಿತೇಶ್ ತಿವಾರಿ (Nitesh Tiwari) ಮತ್ತು ತಂಡ, ಸಿನಿಮಾ ಬಿಡುಗಡೆಗೂ ಮುನ್ನವೇ ಒಂದು ದೊಡ್ಡ 'ಮಾರ್ಕೆಟಿಂಗ್ ಕ್ರಾಂತಿ'ಗೆ ಮುಂದಾಗಿದೆ. ವಿಶೇಷವೆಂದರೆ, ಈ ಬಾರಿ ಚಿತ್ರತಂಡದ ಫೋಕಸ್ ಇರುವುದು ಗ್ಲಾಮರ್ ಲೋಕದ ಮೇಲಲ್ಲ, ಬದಲಾಗಿ ದೇಶದ ಭವಿಷ್ಯವಾಗಿರುವ ಮಕ್ಕಳ ಮೇಲೆ. ಅಂದರೆ ಮಕ್ಕಳು ಓದುತ್ತಿರುವ ಸ್ಕೂಲ್‌ ಮೇಲೆ

ಶಾಲೆಗಳೇ ಈಗ ರಾಮಾಯಣ ಸಿನಿಮಾ ಪ್ರಚಾರದ ಅಖಾಡ!

ಜುಲೈ 9 ರಿಂದ ದೇಶಾದ್ಯಂತ ಒಂದು ವಿಶಿಷ್ಟ ಅಭಿಯಾನ ಶುರುವಾಗಿದೆ. ಕೇವಲ ಮಾಲ್‌ಗಳು ಅಥವಾ ಟಿವಿಗಳಲ್ಲಿ ಜಾಹೀರಾತು ನೀಡುವ ಬದಲು, ಚಿತ್ರತಂಡ ನೇರವಾಗಿ ಸ್ಕೂಲ್ ಬೆಲ್ ಬಾರಿಸಿದೆ. ಅಂದಹಾಗೆ, ಇದು ಸಣ್ಣ ಮಟ್ಟದ ಪ್ಲಾನ್ ಅಲ್ಲ! ಬರೋಬ್ಬರಿ 18 ನಗರಗಳ, 400ಕ್ಕೂ ಹೆಚ್ಚು ಶಾಲೆಗಳಲ್ಲಿ ಈ ಅಭಿಯಾನ ನಡೆಯಲಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವುದು ಈ 'ಮೆಗಾ ಪ್ಲಾನ್' ಹಿಂದಿನ ಉದ್ದೇಶ.

ಕ್ಲಾಸ್‌ರೂಂನಲ್ಲಿ ಕ್ವಿಜ್, ಪೈಂಟಿಂಗ್ ಮತ್ತು ರಾಮಾಯಣದ ಕಂಪು!

ಮಕ್ಕಳಿಗೆ ರಾಮಾಯಣವನ್ನು ಕೇವಲ ಕಥೆಯಾಗಿ ಹೇಳಿಕೊಡುವ ಬದಲು, ಅವರನ್ನೇ ಆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಚಿತ್ರತಂಡದವರ ಪ್ಲಾನ್. ಚಿತ್ರಕಲಾ ಸ್ಪರ್ಧೆಗಳು, ಮೆದುಳಿಗೆ ಕೆಲಸ ಕೊಡುವ ರಸಪ್ರಶ್ನೆಗಳು ಮತ್ತು ಸಂವಾದಾತ್ಮಕ ಚರ್ಚೆಗಳ ಮೂಲಕ ಶ್ರೀರಾಮನ ಆದರ್ಶಗಳನ್ನು ಇಂದಿನ 'ಜೆನ್-ಝಿ' (Gen-Z) ಮಕ್ಕಳಿಗೆ ಅರ್ಥವಾಗುವಂತೆ ವಿವರಿಸಲಾಗುತ್ತಿದೆ. "ನಮ್ಮ ಇತಿಹಾಸ, ನಮ್ಮ ಸತ್ಯ" (Hamara Satya. Hamara Itihas) ಎಂಬ ಘೋಷವಾಕ್ಯದೊಂದಿಗೆ, ರಾಮಾಯಣದ ಧೈರ್ಯ, ಪ್ರೀತಿ ಮತ್ತು ಸತ್ಯದ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಲು ಚಿತ್ರತಂಡ ಯೋಜನೆ ರೂಪಿಸಿದೆ. ಅದರಂತೆ ಕಾರ್ಯಪ್ರವೃತ್ತವಾಗಿದೆ.

ನಿರ್ಮಾಪಕರ ಮಾತು: ಇದು ತಲೆಮಾರುಗಳ ಕೊಂಡಿ!

ಈ ಬಗ್ಗೆ ಮಾತನಾಡಿರುವ ನಿರ್ಮಾಪಕರು, "ರಾಮಾಯಣ ನಮ್ಮ ಪೂರ್ವಜರಿಂದ ನಮಗೆ ಹರಿದು ಬಂದಿರುವ ಸ್ಮೃತಿ. ಇದನ್ನು ಕೇವಲ ಸಿನಿಮಾ ಆಗಿ ನೋಡದೆ, ಇಂದಿನ ಮಕ್ಕಳು ತಮ್ಮ ಬದುಕಿಗೆ ಸ್ಪೂರ್ತಿ ನೀಡುವ ಧೈರ್ಯ ಮತ್ತು ಕರ್ತವ್ಯದ ಪಾಠವಾಗಿ ಸ್ವೀಕರಿಸಬೇಕು ಎನ್ನುವುದು ನಮ್ಮ ಆಶಯ" ಎಂದಿದ್ದಾರೆ. ಈ ಕಾರಣಕ್ಕೇ ಭವಿಷ್ಯದ ಭಾರತದ ಪ್ರಜೆಗಳಾದ ಮಕ್ಕಳ ಬಳಿಯೇ ಹೋಗಿ ನಮ್ಮ ಧರ್ಮ, ಸಂಸ್ಕೃತಿ ಅವರಿಗೆ ಅರ್ಥವಾಗುವಂತೆ ಮಾಡುತ್ತಿದೆ ಚಿತ್ರತಂಡ.

ಬಾಕ್ಸ್ ಆಫೀಸ್ ಧೂಳೆಬ್ಬಿಸಲು ಬರ್ತಿದ್ದಾರೆ ಬಿಗ್ ಸ್ಟಾರ್ಸ್!

ಈ ಸಿನಿಮಾದ ಸ್ಟಾರ್ ಕಾಸ್ಟ್ ಕೇಳಿದರೆ ಯಾರಿಗಾದರೂ ಮೈ ನಡುಗುತ್ತದೆ! ಶ್ರೀರಾಮನಾಗಿ ಚಾಕೊಲೇಟ್ ಹೀರೊ ರಣಬೀರ್ ಕಪೂರ್ ಮಿಂಚಲಿದ್ದರೆ, ಸೀತೆಯಾಗಿ ಅದ್ಭುತ ನಟಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇನ್ನು ಲಂಕೇಶ್ವರ ರಾವಣನಾಗಿ ನಮ್ಮ 'ರಾಕಿಂಗ್ ಸ್ಟಾರ್' ಯಶ್ ಅಬ್ಬರಿಸಲಿದ್ದಾರೆ. ಹನುಮಂತನಾಗಿ ಸನ್ನಿ ಡಿಯೋಲ್ ಅವರ ಗರ್ಜನೆ ಮತ್ತು ಲಕ್ಷ್ಮಣನಾಗಿ ರವಿ ದುಬೆ ಅವರ ಅಭಿನಯ ಈ ಚಿತ್ರದ ದೊಡ್ಡ ಶಕ್ತಿ. ಇನ್ನುಳಿದ ಕಲಾವಿದರ ಬಳಗ ಕೂಡ ಘಟಾನುಘಟಿಗಳೇ ಆಗಿದ್ದಾರೆ.

ದಿವಾಳಿ ಹಬ್ಬಕ್ಕೆ ಡಬಲ್ ಧಮಾಕಾ!

ಈ ದೃಶ್ಯ ವೈಭವ ಎರಡು ಭಾಗಗಳಲ್ಲಿ ಮೂಡಿಬರಲಿದೆ. ಮೊದಲ ಭಾಗವು 2026ರ ದೀಪಾವಳಿಗೆ ಜಗತ್ತಿನಾದ್ಯಂತ ಐಮ್ಯಾಕ್ಸ್ (IMAX) ಪರದೆಗಳ ಮೇಲೆ ಅಪ್ಪಳಿಸಲಿದೆ. ಎರಡನೇ ಭಾಗಕ್ಕಾಗಿ ಅಭಿಮಾನಿಗಳು 2027ರ ದೀಪಾವಳಿವರೆಗೆ ಕಾಯಬೇಕಾಗುತ್ತದೆ. ಈ ಚಿತ್ರದ ಬಗ್ಗೆ ಭಾರತ ಮಾತ್ರ ಅಲ್ಲ, ಇಡೀ ಪ್ರಪಂಚದ ತುಂಬಾ ನಿರೀಕ್ಷೆ ಹಾಗೂ ಕ್ರೇಜ್ ಮನೆಮಾಡಿದೆ. ಇನ್ನೇನು ದೀಪಾವಳಿಗೆ ಬರಲಿದೆ ತೆರೆಯ ಮೇಲೆ ರಾಮಾಯಣ!

ಒಟ್ಟಿನಲ್ಲಿ, ಸಿನಿಮೀಯ ಮೆರುಗು ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಂಗಮವಾಗಿರುವ ಈ 'ರಾಮಾಯಣ' ಚಿತ್ರವು, ಪ್ರಚಾರದ ವಿಷಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿದೆ. ಸ್ಕೂಲ್ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಎದುರು ನೋಡುತ್ತಿರುವ ಈ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸವನ್ನು ಬದಲಿಸುವುದರಲ್ಲಿ ಸಂಶಯವಿಲ್ಲ! ಚಿತ್ರರಂಗದ ಇತಿಹಾಸ ಬದಲಾವಣೆ ಜೊತೆಗೆ ಸಮಾಜದಲ್ಲಿ ಕೂಡ ಉತ್ತಮ ಮೌಲ್ಯಗಳು ಮತ್ತೆ ಹೆಚ್ಚಾಗಿ ಸುಶೀಕ್ಷಿತ ಸಮಾಜ ನಿರ್ಮಾಣಕ್ಕೂ ಕೊಡುಗೆ ಆಗಲಿದೆ ಎನ್ನಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karavali Trailer row: ಪೊಲೀಸ್ ಠಾಣೆ ಮೆಟ್ಟಿಲೇರಿದ 'ಕರಾವಳಿ' ಗಲಾಟೆ, ಆ ನಟನ ಪ್ರಚೋದನೆಯಿಂದಲೇ ನಡೀತಾ ಕೃತ್ಯ?
ನನ್ನ ಶಾಪದಿಂದ ಆ ಹೀರೋ, ದೊಡ್ಡ ನಿರ್ದೇಶಕ ಇನ್ನೂ ಚೇತರಿಸಿಕೊಂಡಿಲ್ಲ: ಆ್ಯಂಕರ್ ಝಾನ್ಸಿ ಸ್ಫೋಟಕ ಹೇಳಿಕೆ