
ತೆಲುಗು ಸ್ಟಾರ್ ನಟ ರಾಮ್ ಚರಣ್ ತೇಜ ಸದ್ಯ ಆರ್ ಆರ್ ಆರ್ ಸಿನಿಮಾಗೆ ಸಿಕ್ಕ ಸಕ್ಸಸ್ ನ ಸಂಭ್ರಮದಲ್ಲಿದ್ದಾರೆ. ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಂದ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗಿದ್ದು ಭರ್ಜರಿ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿರುವ ಆರ್ ಆರ್ ಆರ್ ಬಿಡುಗಡೆಯಾಗಿ 10 ದಿನಗಳ ಮೇಲು ಉತ್ತಮ ಪ್ರದರ್ಶನ ಕಾಣುತ್ತಿದೆ. ಇಡೀ ಸಿನಿಮಾತಂಡ ಸಕ್ಸಸ್ ಖುಷಿಯಲ್ಲಿ ತೇಲುತ್ತಿದೆ. ಈ ನಡುವೆ ರಾಮ್ ಚರಣ್ ತೇಜ ಸಿನಿಮಾದಲ್ಲಿ ಕೆಲಸ ಮಾಡಿದ ಇಡೀ ತಂಡಕ್ಕೆ ಚಿನ್ನದ ಉಡುಗೊರೆ ನೀಡಿದ್ದಾರೆ. ಈ ಮೂಲಕ ರಾಮ್ ಮತ್ತೊಮ್ಮೆ ಮ್ಯಾನ್ ಮಿಥ್ ಎ ಹಾರ್ಟ್ ಆಫ್ ಗೋಲ್ಡ್ ಎನ್ನುವುದನ್ನು ಸಾಬೀತುಮಾಡಿದ್ದಾರೆ.
ರಾಮ್ ಚರಣ್ ಆರ್ ಆರ್ ಆರ್ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಸುಮಾರು 50 ರಿಂದ 60 ಸಾವಿರ ಬೆಲೆ ಬಾಳುವ 11.6 ಗ್ರಾಂ ಚಿನ್ನದ ನಾಣ್ಯ ಗಿಫ್ಟ್ ಮಾಡಿದ್ದಾರೆ. ಒಟ್ಟು 18 ಲಕ್ಷ ಮೌಲ್ಯದ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಇಡೀ ತಂಡದ ಶ್ರಮ ಮತ್ತು ನಮ್ರತೆಗೆ ಮನಸೋತಿರುವ ರಾಮ್ ಚರಣ್ ಉಡುಗೊರೆ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ರಾಮ್ ಚರಣ್ ಮುಂಬೈನ ಪ್ರವಾಸದಲ್ಲಿದ್ದಾರೆ. ಸಿನಿಮಾ ಸಕ್ಸಸ್ ಗೆ ಕಾರಣರಾಗಿರುವ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ರಾಮ್ ಚರಣ್ ನೋಡಲು ಅಭಿಮಾನಿಗಳ ಸಾಗರವೇ ಸೇರಿದೆ. ಮುಂಬೈ ಪ್ರವಾಸಕ್ಕೂ ಮೊದಲು ರಾಮ್ ಚರಣ್ ಸಿನಿಮಾದಲ್ಲಿ ಕೆಲಸ ಮಾಡಿದ 35 ತಂತ್ರಜ್ಞರನ್ನು ತನ್ನ ಮನೆಗೆ ಆಹ್ವಾನಿಸಿದ್ದರು. ಅವರಿಗೆ ವಿಶೇಷ ಆತಿಥ್ಯ ನೀಡಿರುವ ರಾಮ್ ಚರಣ್ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
1000 ಕೋಟಿಯತ್ತ 'RRR'; ಇದುವರೆಗೂ ರಾಜಮೌಳಿ ಸಿನಿಮಾ ಗಳಿಸಿದೆಷ್ಟು?
ರಾಮ್ ಚರಣ್ ಗಿಫ್ಟ್ ಗೆ ಸಿನಿಮಾತಂಡ ಅಚ್ಚರಿ ವ್ಯಕ್ತಪಡಿಸಿದೆ. ರಾಮ್ ಚರಣ್ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ಪ್ರತಿ ನಾಣ್ಯದಲ್ಲೂ ಆರ್ ಆರ್ ಆರ್ ಎಂದು ಒಂದು ಕಡೆ ಬರೆದಿದ್ದರೆ ಮತ್ತೊಂದು ಕಡೆ ರಾಮ್ ಚರಣ್ ಎಂದು ಬರೆಯಲಾಗಿದೆ. ರಾಮ್ ಚರಣ್ ಗಿಫ್ಟ್ ನೀಡಿದ ನಾಣ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
'RRR' ಚಿತ್ರದ ಬಗ್ಗೆ ಅಲಿಯಾಗೆ ಅಸಮಾಧಾನ; ರಾಜಮೌಳಿಯನ್ನು Unfollow ಮಾಡಿದ ನಟಿ
ಅಂದಹಾಗೆ ಆರ್ ಆರ್ ಆರ್ ಸಿನಿಮಾ ಮಾರ್ಚ್ 25ರಂದು ವಿಶ್ವದಾದ್ಯಂತ ತೆರೆಗೆ ಬಂದಿದೆ. ಈಗಾಗಲೇ 800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಅನೇಕ ಸಿನಿಮಾಗಳ ದಾಖಲೆ ಬ್ರೇಕ್ ಮಾಡಿರುವ ಆರ್ ಆರ್ ಆರ್ ಭಾರತದ ಅತೀ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳಲ್ಲಿ 6ನೇ ಚಿತ್ರ ಇದಾಗಿದೆ. ಇನ್ನು ಸಿನಿಮಾದ ಬಗ್ಗೆ ಹೇಳುವುದಾದರೆ ಆರ್ ಆರ್ ಆರ್ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತರಾಮ ರಾಜು ಮತ್ತು ಕೋಮರಾಮ್ ಭೀಮ್ ಅವರ ಜೀವನದ ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕೋಮರಾಮ್ ಭೀಮ್ ಪಾತ್ರದಲ್ಲಿ ಜೂ.ಎನ್ ಟಿ ಆರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸುಮಾರು 450 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗಿದೆ. ಡಿವಿವಿ ದಾನಯ್ಯ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ಅಲಿಯಾ ಭಟ್, ಸಮುದ್ರ ಕಣಿ, ಅಜಯ್ ದೇವಗನ್, ಒಲಿವಿಯಾ ಮೋರಿಸ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.