
ಸ್ಯಾಂಡಲ್ ವುಡ್ ಹಿರಿಯ ನಟ ನವರಸನಾಯಕ ಜಗ್ಗೇಶ್(Jaggesh) ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸದಾ ಒಂದಲ್ಲೊಂದು ವಿಚಾರಗಳನ್ನು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳ ಪ್ರಶ್ನೆಗೆ ಅಲ್ಲೇ ನೇರ ಉತ್ತರ ನೀಡುತ್ತಿರುತ್ತಾರೆ. ನಟನೆಗೆ ಜೊತೆಗೆ ಜಗ್ಗೇಶ್ ಒಂದಿಷ್ಟು ಸಮಯವನ್ನು ಅಭಿಮಾನಿಗಳ ಜೊತೆಯೂ ಕಳೆಯುತ್ತಾರೆ. ಇತ್ತೀಚಿಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ವರ್ಕೌಟ್ ವಿಡಿಯೋ(Workout Video) ಶೇರ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಪುಶ್ ಅಪ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ಜಗ್ಗೇಶ್ ತನ್ನ ಅನೇಕ ಸ್ನೇಹಿತರು ನಿವೃತ್ತಿಯಾಗಿ ವರ್ಷದ ಮೇಲಾಗಿದೆ, ಇನ್ನು ಅನೇಕರು ಮರಣಹೊಂದಿದ್ದಾರೆ. ಇದು ಕೇಳಿದರೆ ತುಂಬಾ ದುಃಖವಾಗುತ್ತದೆ. ದೇಹದ ಆರೋಗ್ಯ ರಕ್ಷಿಸಿಕೊಂಡು ನಗುತ್ತಾ ಬದುಕಬೇಕು ಎಂದು ವಿಡಿಯೋ ಜೊತೆಗೆ ದೀರ್ಘವಾಗಿ ಬರೆದುಕೊಂಡಿದ್ದಾರೆ.
ಜಗ್ಗೇಶ್ ವರ್ಕೌಟ್ ವಿಡಿಯೋ ನೋಡಿ ಅಭಿಮಾನಿಗಳಿಂದ ತರಹೇವಾರಿ ಪ್ರಶ್ನೆಗಳು ಹರಿದುಬಂದಿವೆ. ಇದು ನಿಜಕ್ಕೂ ಈಗಿನ ವಿಡಿಯೋನಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅನೇಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಂಹದಾಗೆ ವಿಡಿಯೋ ಜೊತೆಗೆ ಜಗ್ಗೇಶ್ ಶೇರ್ ಮಾಡಿರುವ ಸಾಲುಗಳು ಹೀಗಿವೆ, 'ನನ್ನ ಅನೇಕ ಸ್ನೇಹಿತರು ಅವರ ಕಾರ್ಯಕ್ಷೇತ್ರದಿಂದ ನಿವೃತ್ತಿಯಾಗಿ 1ವರ್ಷ ಆಗಿದೆ. 59 ವರ್ಷಕ್ಕೆ ಅವರವರ ಮಕ್ಕಳು ಅವರವರ ಕಾರ್ಯ ಅವರವರ ಮಕ್ಕಳು ಸಂಸಾರ ಎಂದು ಪಕ್ಕ ಸರಿದು ಬದುಕುತ್ತಿದ್ದಾರೆ. ಅದು ಜಗತ್ತಿನ ನಿಯಮ ಇಷ್ಟಕ್ಕೆ ಜಗತ್ತು ಶೂನ್ಯವಾದಂತೆ, 59ನೆ ವಯಸ್ಸಿಗೆ ಮಾನಸಿಕ ಒತ್ತಡದಿಂದ ಬಳಲಿ bp, diabetes ಬರಮಾಡಿಕೊಂಡು ನರಳುತ್ತಿದ್ದಾರೆ. ಅನೇಕ ಸ್ನೇಹಿತರು ಬಂದುಗಳು ಮರಣಹೊಂದಿದ್ದಾರೆ. ಇದ ನೋಡಿದಾಗ ಕೇಳಿದಾಗ ದುಃಖವಾಗುತ್ತದೆ' ಎಂದಿದ್ದಾರೆ.
ಜಗ್ಗೇಶ್ ದಂಪತಿಯ ವಿವಾಹ ವಾರ್ಷಿಕೋತ್ಸವ; ವಿಶೇಷ ವಿಡಿಯೋ ಶೇರ್ ಮಾಡಿದ ನವರಸನಾಯಕ
'ನನ್ನ ಅನಿಸಿಕೆ ಒಪ್ಪುವರಿಗೆ ಪ್ರೀತಿಯಿಂದ ಒಂದು ಕಿವಿಮಾತು, ಬರುವಾಗ ಒಬ್ಬರೆ, ಹೋಗುವಾಗನು ಒಬ್ಬರೆ, ಮತ್ತೆ ಈ ಜಗತ್ತಿಗೆ ಬರುತ್ತೇವೋ ಇಲ್ಲವೊ ಗೊತ್ತಿಲ್ಲ, ಆದರೆ ಇರುವಾಗ ಇಲ್ಲದ್ದರ ಬಗ್ಗೆ ದುಃಖಿಸಿ ಕೊರಗಿ ರೋಗ ಆಹ್ವಾನಿಸಿ ಬದುಕುವ ಬದಲು ಕೆಲಸಕ್ಕೆ ಬರದ ಚಿಂತೆಗೆ ಜಾಗ ಕೊಡದೆ ಇದ್ದಿದ್ದರಲ್ಲಿ ಸುಖಿಸಿ ರಮಿಸಿ ಆನಂದಿಸಿ ದೇಹಾರೋಗ್ಯ ರಕ್ಷಿಸಿಕೊಂಡು ನಗುತ್ತ ನಗಿಸುತ್ತ ನಾಳೆಗಳಿಗೆ ನಾಳೆ ಬಾ ಎಂದು ಯಾಮಾರಿಸಿ ಸಂತೋಷದಿಂದ ಬದುಕು ಮುಗಿಸಬೇಕು, ಅಲ್ಲವೆ?' ಎಂದು ಹೇಳಿದ್ದಾರೆ.
ಜಗ್ಗೇಶ್ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ. ನಟ ರಘುರಾಮಪ್ಪ ಕಾಮೆಂಟ್ ಮಾಡಿ 'ಸೂಪರ್..' ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ 'ನೀವೆ ನನಗೆ ಸ್ಫೂರ್ತಿ' ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿಗೆ ಉತ್ತರ ನೀಡಿರುವ ಜಗ್ಗೇಶ್ 'ನಾವು ಗೆಲ್ಲಲು ಹುಟ್ಟಿದ್ದೇವೆ, ಸೋಲಲು ಅಲ್ಲ' ಎಂದು ಹೇಳಿದ್ದಾರೆ. ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿ, 'ಅಣ್ಣ ಇನ್ನೊಂದು ಮದುವೆಗೆ ರೆಡಿ ಆಗ್ತಾ ಇದ್ದೀರಾ' ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ 'ನಿಮ್ಮ ತಂದೆಗೆ ಹೀಗೆ ರೇಗಿಸಿ ನೋಡೋಣ' ಎಂದಿದ್ದಾರೆ.
Totapuri: ಹೊಸ ಮೈಲಿಗಲ್ಲು ಸೃಷ್ಟಿಸಿದ ನವರಸನಾಯಕ ಜಗ್ಗೇಶ್!
ಕೆಲವು ವರ್ಷಗಳ ಹಿಂದೆ ಜಗ್ಗೇಶ್ ದಪ್ಪ ಆಗಿದ್ದರು. ಬಳಿಕ ಮತ್ತೆ ವರ್ಕೌಟ್ ಮಾಡಿ ದೇಹ ದಂಡಿಸಿ ತೆಳ್ಳಗಾಗಿದ್ದಾರೆ. ಈ ವಯಸ್ಸಿನಲ್ಲೂ ಬಹುಬೇಡಿಕೆಯ ನಟನಾಗಿರುವ ಜಗ್ಗೇಶ್ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜಗ್ಗೇಶ್ ಕೊನೆಯದಾಗಿ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಜಗ್ಗೇಶ್ ಬಳಿ ತೊತಾಪುರಿ, ರಂಗನಾಯಕ ಮತ್ತು ರಾಘವೇಂದ್ರ ಸ್ಟೋರ್ ಸಿನಿಮಾಗಳಿವೆ. ಈಗಾಗಲೇ ತೋತಾಪುರಿ ಮುಗಿಸಿರುವ ಜಗ್ಗೇಶ್ ಸದ್ಯ ರಂಗನಾಯಕ ಮತ್ತು ರಾಘವೇಂದ್ರ ಸ್ಟೋರ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ತೋತಾಪುರಿ ಸಿನಿಮಾ 2 ಭಾಗಗಳಲ್ಲಿ ತಯಾರಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ಇನ್ನು ರಾಘವೇಂದ್ರ ಸ್ಟೋರ್ ಸಿನಿಮಾಗೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಜಗ್ಗೇಶ್, ಸಂತೋಷ ಆನಂದ್ ರಾಮ್ ಜೊತೆ ಸಿನಿಮಾ ಮಾಡಿದ್ದು ಅಭಿಮಾನಿಗಳಲ್ಲಿ ಈ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.